ದಾನಶೀಲತೆಯಿಂದ ಸದೃಢ, ಸಮರ್ಥ, ನೆಮ್ಮದಿಯ ರಾಷ್ಟ್ರ ನಿರ್ಮಾಣ ಸಾಧ್ಯವೆಂದು ಲೈಫ್ ಲೈನ್ ಫೀಡ್ಸ್ ನ ಆಡಳಿತ ನಿರ್ದೇಶಕ ಕೆ. ಕಿಶೋರ್ ಕುಮಾರ್ ಹೆಗ್ಡೆ ತಿಳಿಸಿದರು. ಚಿಕ್ಕಮಗಳೂರಿನ ಐಡಿಎಸ್ ಜಿ ಸರ್ಕಾರ ಕಾಲೇಜಿಗೆ ಲೈಫ್ ಲೈನ್ ಸಂಸ್ಥೆ ವತಿಯಿಂದ 50 ಲಕ್ಷ ರೂ. ಗಳ ಪೀಟೋಪಕರಣ ಕೊಡುಗೆ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ದಾನ ನೀಡುವಲ್ಲಿ, ಜನಸೇವೆಯಲ್ಲಿ ಸಿಗುವ ಖುಷಿ ಬೇರೆ ಯಾವುದರಿಂದಲೂ ಸಿಗುವುದಿಲ್ಲ. ವಿದ್ಯಾಭ್ಯಾಸದ ನಂತರ ದುಡಿಮೆಯ ಸಂದರ್ಭದಲ್ಲಿ ಲಾಭದ ಸ್ವಲ್ಪ ಭಾಗವನ್ನಾದರೂ ದೇಶಕ್ಕಾಗಿ ಕೊಡುವುದರ ಮೂಲಕ ದೇಶವನ್ನು ಉಳಿಸಿಕೊಳ್ಳಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ತಿಳಿಸಿದರು.
ಈ ಕಾಲೇಜಿನ ಮುಂಭಾಗದಲ್ಲಿ ಓಡಾಡುವಾಗ ಕಾಂಪೌಂಡ್ ಒಳಗಿರುವುದಕ್ಕಿಂತ ರಸ್ತೆಯಲ್ಲಿ ಹೆಚ್ಚು ವಿದ್ಯಾರ್ಥಿಗಳಿರುವುದನ್ನು ಗಮನಿಸಿದ್ದು, ಕೊಠಡಿ ಹಾಗೂ ಪೀಟೋಪಕರಣಗಳ ಕೊರತೆಯಿಂದ ಎರಡು ಪಾಳಿಯಲ್ಲಿ ಕಾಲೇಜು ಕಾರ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂತು. ಇಲ್ಲಿ ಬಂದು ನೋಡಿದಾಗ ಒಟ್ಟು 380 ಡೆಸ್ಕ್ ಗಳ ಅವಶ್ಯಕತೆ ಕಂಡು ಬಂತು. 30 ಲಕ್ಷ ರೂ. ಅಂದಾಜಿನಲ್ಲಿ ಡೆಸ್ಕ್ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಲಾಯಿತು. ಆ ನಂತರ ಮರದಲ್ಲೇ ಗುಣಮಟ್ಟದೊಂದಿಗೆ ಪೀಟೋಪಕರಣ ಸಿದ್ಧಪಡಿಸಿದಾಗ 50 ಲಕ್ಷ ರೂ. ವೆಚ್ಚವಾಯಿತು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್. ಡಿ. ತಮ್ಮಯ್ಯ ಮಾತನಾಡಿ, ಉದ್ಯಮದ ಲಾಭಂಶದಲ್ಲಿ ಒಂದಷ್ಟು ಭಾಗವನ್ನು ಸಾಮಾಜಿಕ ಸೇವಾ ಕಾರ್ಯಗಳಿಗೆ ದೇಣಿಗೆ ನೀಡುವ ಮೂಲಕ ಲೈಫ್ ಲೈನ್ ಸಂಸ್ಥೆ ಆದರ್ಶ ಪ್ರಾಯವಾಗಿದೆ. ಸಂಸ್ಕಾರವಂತ ಕುಟುಂಬದಿಂದ ಬಂದ ಕಿಶೋರ್, ತಮ್ಮ ಮಕ್ಕಳಿಗೂ ಸೇವೆಯನ್ನು ಪರಿಚಯಿಸುತ್ತಿರುವುದು ಮಾದರಿ ಎಂದು ಹೇಳಿದರು.
ಹಣ, ಅಧಿಕಾರ ಯಾರಿಗೂ ಶಾಶ್ವತವಲ್ಲ, ಒಳ್ಳೆತನ ಉಳಿಯುತ್ತದೆ. ಮತ ಕೊಟ್ಟವರಿಗಷ್ಟೇ ಅಲ್ಲ, ಕ್ಷೇತ್ರದ 2.19 ಲಕ್ಷ ಜನರಿಗೂ ಶಾಸಕ ಎಂಬ ಅರಿವು ತಮಗಿದೆ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಮೂಲಕ ಕ್ಷೇತ್ರದ ಅಭಿವೃದ್ಧಿಯ ಕನಸು ಪ್ರಯತ್ನ ತಮ್ಮದು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಕೆ. ಎನ್. ರಮೇಶ್ ಮಾತನಾಡಿ, ಶಿಕ್ಷಣ ಮತ್ತು ಶಿಕ್ಷಣ ವ್ಯವಸ್ಥೆಗೆ ಪ್ರತಿಯೊಬ್ಬರೂ ಗೌರವ ಕೊಡುತ್ತಾರೆ. ನಮ್ಮೆಲ್ಲರ ಅಸ್ಥಿತ್ವ ಮತ್ತು ವ್ಯಕ್ತಿತ್ವ ರೂಪಿಸುವ ಜ್ಞಾನ ದೇಗುಲಗಳೇ ಶಾಲಾ – ಕಾಲೇಜುಗಳು. ಇಲ್ಲಿ ಕಲಿಸುವವರಿಗೆ ಸದಾ ಸಮಾಜ ಕೃತಜ್ಞತಾಭಾವದಿಂದ ಗೌರವಿಸುತ್ತಾರೆ. ಲೈಫ್ ಲೈನ್ ಫೀಡ್ಸ್ ಸಂಸ್ಥೆಯ ನಿರ್ದೇಶಕರುಗಳಾದ ಅರ್ಜುನ್ ಹೆಗ್ಡೆ ಮತ್ತು ನಂದನ್ ಹೆಗ್ಡೆ ಡೆಸ್ಕ್ ಗಳ ಹಸ್ತಾಂತರ ಪತ್ರವನ್ನು ವಿದ್ಯಾರ್ಥಿಗಳಿಗೆ ನೀಡಿದರು. ಸುಂದರೇಶ್ ಸ್ವಾಗತಿಸಿ, ಪುಷ್ಪಭಾರತಿ ನಿರೂಪಿಸಿ, ಲೈಫ್ ಲೈನ್ ಹಿರಿಯ ಲೆಕ್ಕಾಧಿಕಾರಿ ವಿದ್ಯಾಧರ್ ವಂದಿಸಿದರು.