ಶ್ರೀ ಕೃಷ್ಣನಗರಿ ಉಡುಪಿಯ ರಥಬಿದಿಯಲ್ಲಿ ತಿಂಗಳ ಹಿಂದೆ ಸಾಗುತ್ತಾ ಇದ್ದೆ. ತಾಳೆ ಹಣ್ಣು ತುಂಬಿದ ಕೈಗಾಡಿಯೆದುರು ಹಿರಿಯ ಕಿರಿಯರು ತಾಳೆ ಸೊಳೆ ತಿನ್ನುವುದಕ್ಕೆ ಸೇರಿದ್ದರು. ಆರೋಗ್ಯದಾಯಕ ನೈಸರ್ಗಿಕ ಆಹಾರದ ಮಹತ್ವಕ್ಕೆ ಕೊಡಬೇಕಾದ ಕಾಲ ಘಟ್ಟವಿದು. ದೇಹದಲ್ಲಿ ರೋಗ ನೀರೊಧಕ ಶಕ್ತಿ ಹೆಚ್ಚಿಸಿಕೊಳ್ಳವುದರ ಮಹತ್ವದ ಅರಿವು ಇಂದು ಜನಸಾಮಾನ್ಯರಿಗೆ ಆಗಿದ್ದು, ತಾಳೆಹಣ್ಣು ತಿನ್ನುವುದರಲ್ಲಿ ಮುಗಿಬಿದ್ದರೊ ಎನಿಸಿತು. ಸರಿ ನಾನು ಹೋಗಿ ತಿಂದೆ. ಬಿಸಿಲ ಬೇಗೆಯಿಂದ ಧಣಿವಾರಿಸಿಕೊಳ್ಳಲು ಜನ ತಂಪು ಪದಾರ್ಥಗಳನ್ನೇ ಬಯಸುತ್ತಿದ್ದು ಅದರಲ್ಲಿ ಆರೋಗ್ಯಕ್ಕೆ ಹಿತಕರ ತಾಟಿನಿಂಗು ಪ್ರಮುಖ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಎಪ್ರಿಲ್ ಆರಂಭದಲ್ಲಿ ಕೊಯ್ಲಿಗೆ ಬಂದರೆ ಜೂನ್ ಜುಲೈವರೆಗೂ ಲಭ್ಯವಿರುತ್ತದೆ. ಸಾಕಷ್ಟು ಔಷಧೀಯ ಗುಣಗಳ ಪೋಷಕಾಂಶಗಳ ಆಗರವಾಗಿದ್ದು ದೇಹಕ್ಕೆ ಚೈತನ್ಯ ನೀಡುತ್ತದೆ. ಮಾರುಕಟ್ಟೆಯಲ್ಲಿ ಅಷ್ಟೊಂದು ಬೇಡಿಕೆ ಇಲ್ಲದೆ ಇದ್ದ ಈ ಹಣ್ಣು ಇತ್ತೀಚೆಗೆ ಕೆಲ ವರ್ಷಗಳಿಂದ ಜನ ಮುಂಚಿತವಾಗಿ ನಿಗದಿಗೊಳಿಸಿ ತರಿಸಿಕೊಂಡು ತಿನ್ನುತ್ತಾರೆ. ದಾಹ ತಣಿಸುವ ತಾಟಿಹಣ್ಣು ಬೇಸಿಗೆಯಲ್ಲಿ ಮಾತ್ರವಲ್ಲ ವರ್ಷದ 12 ತಿಂಗಳಲ್ಲಿ ಬೇಡಿಕೆ ಇದ್ದು ಕೇವಲ ನೀರಡಿಕೆ ಇಂಗಿಸುವುದಕ್ಕಷ್ಟೆ ಅಲ್ಲ ಸಾಕಷ್ಟು ಔಷಧೀಯ ಗುಣ ಹೊಂದಿರುವುದು ಜನಪ್ರಿಯತೆಗೆ ಕಾರಣವಾಗಿದೆ. ಕರಾವಳಿ ದಕ್ಷಿಣ ಕನ್ನಡ ಉಡುಪಿ ವ್ಯಾಪ್ತಿಯಲ್ಲಿ ಬರುವ ಊರುಗಳಲ್ಲಿ ಹಣೆ ಹಣ್ಣು ಅಥವಾ ಕಣ್ಣು ಎಂದು ಕರೆಯುತ್ತಾರೆ. ತುಳುವಿನಲ್ಲಿ ಈರೊಳು, ಕನ್ನಡದಲ್ಲಿ ತಾಳೆ ಮರಾಠಿಯಲ್ಲಿ ತಾಡಗೊಲಾ, ತಮಿಳಿನಲ್ಲಿ ನಂಗು ತೆಲುಗಿನಲ್ಲಿ ತಾಟಿ ಮತ್ತು ಮಂಜುಳ, ಹಿಂದಿಯಲ್ಲಿ ತಾರಿ ಎಂದು ಬೊರಾಸನ್ ಪ್ಲಬಲಿಫರ್ ಎಂಬ ವೈಜ್ಞಾನಿಕ ಹೆಸರು ಟಾಟಾಪಾಮ್, ಟೆಡ್ಡಿಪಾಮ್, ಮೈನ್ಪಾಮ್ಹಾ ಹಾಗೂ ಮಂಜುಗಡ್ಡೆಯನ್ನು ಹೋಲುವುದರಿಂದ ಇದನ್ನು ಐಸ್ ಆ್ಯಪಲ್ ಎಂದು ಕರೆಯುತ್ತಾರೆ.
ಬಿರು ಬೇಸಿಗೆಯಲ್ಲಿ ತಂಪನ್ನು ನೀಡುವ ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಆಹಾರ ಪದಾರ್ಥಗಳ ಲ್ಲಿ ತಾಟಿ ನಿಂಗು ಒಂದು ಈ ಹಣ್ಣಿನ ಒಳಗೆ 2-3 ತಿರುಳಿನ ಕೋಶವನ್ನು ಹೊಂದಿದ್ದು ಬಿಳಿಯ ಬಣ್ಣದ ಒಂದೊಂದು ತಿರುಳುಗಳಿರುತ್ತದೆ. ಎಳೆಯ ಹಣ್ಣಿನ ಹೊರಕವಚ ಮತ್ತು ತಿರುಳು ವೃದುವಾಗಿದ್ದು ಒಳಭಾಗದಲ್ಲಿ ನೀರಿರುತ್ತದೆ. ಸಿಹಿ ತಿರುಳಿನ ಹಣ್ಣು ಬಹು ಉಪಯೋಗಿ. ನಿರ್ಜಲಿಕರಣ ಸೇರಿದಂತೆ ಶಾಖ ಸಂಬಂಧಿತ ಕಾಯಿಲೆಯಲ್ಲಿ ಇದು ಬಹುಪಯೋಗಿ ದೇಹವನ್ನು ಜಲಯುಕ್ತವಾಗಿ ಪೋಷಿಸಿಕೊಳ್ಳಲು ಈ ಹಣ್ಣು ಸಾಕಷ್ಟು ನೀರಿನಿಂದ ಹೊಂದಿದ್ದು ಪೋಷಣೆಯನ್ನು ಒದಗಿಸುತ್ತದೆ.
ಹಳ್ಳಿ ನಗರ ಪ್ರದೇಶವೆಂಬ ಬೇದವಿಲ್ಲದೆ ಬಡವ ಶ್ರೀಮಂತರೆನ್ನದೇ ಎಲ್ಲರೂ ಹೊಟ್ಟೆಗಿಳಿಸಿಕೊಳ್ಳುವ ತಾಳೆ ಹಣ್ಣಿನ ರುಚಿ ಬಲ್ಲವರೆ ಬಲ್ಲರು. ಒಮ್ಮೆ ಸವಿದರೆ ಪದೆ ಪದೆ ಸವಿಯುವ ಮನಸ್ಸಾಗುತ್ತದೆ. ಕೇರಳ, ಆಂದ್ರ, ತಮಿಳುನಾಡಿನಿಂದ ಹೇರಳವಾಗಿ ಮುಂಬಯಿ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲಾಗುತ್ತದೆ. ಮುಂಬಯಿ ಮಹಾನಗರದಲ್ಲಿ ಎಳೆ ತಳೆ ಗೊಂಚಲು ತಂದು ಕತ್ತರಿಸಿ ಮಾರಾಟ ಮಾಡುವವರು ಹೆಚ್ಚಾಗಿ ಕೋಲಿಜನಾಂಗದವರು ಇವರಿಂದಲೂ ಖರೀದಿಸಿ ತಿಂದು ರುಚಿ ನೋಡಿದ್ದೆ.
ತಾಳೆ ಹಣ್ಣುಸಣ್ಣ ಗಾತ್ರದ ಎಳನೀರಿನಂತೆ ಕಂಡರು ಸ್ವಾದಿಷ್ಟ ತೊಳೆಗಳಿರುತ್ತವೆ. ಅದರೊಳಗೆ ಸಿಹಿಯಾದ ಸ್ವಲ್ಪ ನೀರಿನಂಶವೂ ಇದ್ದು ರುಚಿ ಹೆಚ್ಚಿಸುತ್ತದೆ. ಹೊಟ್ಟೆಯುರಿ, ಆಮ್ಲೀಯತೆ ಹುಳಿತೇಗು, ನಿರ್ಜಲೀಕರಣದಿಂದ ರಕ್ಷಣೆಗೂ ಸಹಾಯಕ. ಸೋಡಿಯಂ, ಪೊಟ್ಯಾಸಿಯಂ, ವಿಟಮಿನ್ ಬಿ 12 ಸೇರಿದಂತೆ ದೇಹದಲ್ಲಿ ನೀರಿನಂಶ ಸಮತೋಲನಕ್ಕೆ ಇದು ಸಹಕಾರಿ. ದೇಹದ ತಾಪಮಾನ ನಿಯಂತ್ರಕ ಎಂಬ ಕಾರಣದಿಂದ ಬೇಸಿಗೆಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಕಾಂಬೋಡಿಯಾ ದೇಶದ ರಾಷ್ಟ್ರೀಯ ಮರವಿದು .ಮರಳು ಮಿಶ್ರಿತ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತದೆ. ಗೊಂಚಲೊಂದರಲ್ಲಿ 70 ರಿಂದ 80 ಎಳೆ ಕಾಯಿ ಬೆಳೆಯಾಗಿ ತೆಂಗಿನ ಮರದಂತೆ ತಾಳೆ ಮರದ ಪ್ರತಿಯೊಂದು ಭಾಗವೂ ಉಪಯೋಗವಿದೆ. 50 ರಿಂದ 60 ಅಡಿವರೆಗೆ ಬೃಹತ್ ಗಾತ್ರದಲ್ಲಿ ನೇರವಾಗಿ ಬೆಳೆಯುತ್ತವೆ. ಮಧ್ಯದ ದಿಂಡು ವೃದುವಾಗಿರುತ್ತದೆ. ಇದರ ವೃಂಶಾಭಿವೃದ್ದಿ ಬೀಜಗಳ ಮೂಲಕ ನಡೆಯುತ್ತದೆ. ಇದರ ಹೂಗಳಲ್ಲಿ ಹೆಣ್ಣು ಮತ್ತು ಗಂಡು ಹೂಗಳೆ ಎರಡು ವಿಧಗಳಿವೆ. ಕಾಂಡದಿಂದ ಬುಟ್ಟಿ, ಪೊರಕೆ,ಹಗ್ಗ, ಚಾಪೆ, ಬಿಸಣಿಗೆ ವಿವಿಧ ಪೀಠೊಪಕರಣಗಳ ತಯಾರಿಸುತ್ತಾರೆ.
ತಾಳೆಮರದ ಹೂವಿನಿಂದ ನೀರಾ ಸಂಗ್ರಹಿಸಲಾಗು ತ್ತದೆ .ತಾಳೆ ಮರದ ಅರೆ ಬರಿತ ಅರೆ ಮೊಗ್ಗಿನಿಂದ ಒಸರುವ ಸಿಹಿಯಾದ ಸ್ವಾದಿಷ್ಟ ಪೌಷ್ಟಿಕ ರಸ, ಇದರಲ್ಲಿ ಅನೇಕ ವಿಟಮಿನ್ ಮತ್ತು ಕಬ್ಬಿಣದ ಅಂಶಗಳಿಂದ ಕೂಡಿದ ಸತ್ವವಿದೆ. ಹೂಗೊಂಚಲುಗಳಿಂದ ಇಳಿಸಲಾಗಿರುವ ಆರೋಗ್ಯಕರ ಪ್ರಕೃತಿದತ್ತ ನೈಸರ್ಗಿಕ ಪಾನೀಯ ಮನುಷ್ಯ ದೇಹಕ್ಕೆ ಅಗತ್ಯ ವಿರುವ ಈ ನೀರಾಕ್ಕೆ ದಶಕಗಳಿಂದ ಬೇಡಿಕೆ ಇದೆ. ನೀರಾ ಅತ್ಯಂತ ಶಕ್ತಿಯುತ ಆಹಾರ. ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ತಾಳೆಮರದ ನೀರಾದಿಂದ ಬಗೆ ಬಗೆಯ ಮಿಠಾಯಿ, ಬೆಲ್ಲ, ಸಕ್ಕರೆ, ಸಿರಫ್, ಚಾಕಲೇಟ್, ಕೇಕ್, ಕ್ಯಾಂಡಿ, ನೀರಾಪ್ರೂಟ್ ಜಾಂ, ನೀರಾ ಕಾಫಿ ಹೀಗೆ ಇನ್ನೂ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.
ತಾಳೆ ಹಣ್ಣಿನಿಂದ ಬೆಲ್ಲ ತಯಾರಿಸಲಾಗುತ್ತದೆ. ಇದನ್ನು ತಮಿಳುನಾಡಿನಲ್ಲಿ ಕರುಪಟ್ಟಿ ಎಂದು ಕರೆಯುತ್ತಾರೆ. ತಾಳೆ ಬೆಲ್ಲ 150 ರಿಂದ 200 ರೂಪಾಯಿ ಕೆ.ಜಿ ಒಂದಕ್ಕೆ ಇದ್ದು ಅನೇಕ ಔಷಧೀಯ ಗುಣ ಹೊಂದಿದ್ದು ಆಯುರ್ವೇದದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈ ತಾಳೆ ಬೆಲ್ಲ ಕ್ಕೆ ಭಾರಿ ಬೇಡಿಕೆ ಇದೆ. ತಾಳೆ ಬೆಲ್ಲ ಔಷಧೀಯ ಆಗರ. ವಾತ, ಪಿತ್ತ ನಿವಾರಣೆ ಹಾಗೂ ಉಬ್ಬಸ ಶಮನಕ್ಕೆ ಅತಿ ಉತ್ತಮ. ತಾಳೆ ಬೆಲ್ಲ ಊಟದ ನಂತರ ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ