ಮನುಷ್ಯನ ಜೀವನ ಹರಿಯುವ ನೀರಾಗಬೇಕು. ಅದು ಮನುಷ್ಯನ ಮೂಲ ನಂಬಿಕೆಯಿಂದ ಸಾಧ್ಯ ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ಕಲಶಾಭಿಷೇಕದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ನಂಬಿಕೆ, ವಿಶ್ವಾಸದಿಂದ ಬದುಕು ಪಾವನವಾಗಲು ಸಾಧ್ಯ, ಹತ್ತು ವರ್ಷದ ಹಿಂದಿನ ಅತ್ತೂರು ಇದೀಗ ಸಾಕಷ್ಟು ಅಭಿವೃದ್ಧಿಗೊಂಡಿದೆ. ಇಲ್ಲಿನ ಜನರ ಪ್ರೀತಿ, ವಿಶ್ವಾಸ ಮತ್ತು ಧಾನ ಧರ್ಮದಿಂದ ಅತ್ತೂರು ಬೆಳೆಯಲು ಸಾಧ್ಯ, ಕ್ರಿಯಾಶೀಲ ಬದುಕು ತುಳುವರದ್ದು, ಮೂರು ಗ್ರಾಮಗಳ ಐಕ್ಯತೆಯಿಂದ ಮತ್ತಷ್ಟು ಪ್ರಸಿದ್ಧಿ ಕಂಡಿದೆ. ಮಾನವೀಯ ಮೌಲ್ಯ ಅತ್ತೂರಿನಲ್ಲಿ ತುಂಬಿದೆ ಎಂದರು.
ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ದೈವ ದೇವರು ಎಂಬುದು ನಂಬಿಕೆ, ಅರಸು ಕುಂಜಿರಾಯ ದೈವದ ಮೇಲಿನ ಭಕ್ತಿ ಅಪಾರವಾಗಿದ್ದ ಕಾರಣ ದೈವಸ್ಥಾನ ಇಷ್ಟೊಂದು ಅಭಿವೃದ್ಧಿ ಕಾಣಲು ಸಾಧ್ಯವಾಯಿತು ಎಂದರು.
ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿ, ದೈವಗಳಿಗೆ ಸಿರಿ ಸಿಂಗಾರದ ನೇಮ ಕೊಡಬೇಕು, ಬೆಳ್ಳಿ ಬಂಗಾರದ ನೇಮ ಅಲ್ಲ ಅದರ ಬಗ್ಗೆಮುಖ್ಯವಾಗಿ ಗಮನಹರಿಸಬೇಕು. ಜೀವನದಲ್ಲಿ ಉತ್ತಮ ತತ್ವ, ಧಾರ್ಮಿಕ ಪ್ರಜ್ಞೆ ಅಗತ್ಯವಾಗಿದ್ದು ಜೀವನದಲ್ಲಿ ನಿರಂತರವಾಗಿರಲಿ ಎಂದರು.
ಈ ಸಂದರ್ಭ ದೈವಸ್ಥಾನಕ್ಕೆ ಸರಕಾರದ ಅನುದಾನದಲ್ಲಿ 75 ಲಕ್ಷ ರೂ.ಯನ್ನು ನೀಡಿದ ಶಾಸಕ ಉಮಾನಾಥ ಕೋಟ್ಯಾನ್ ದಾನಿಗಳಾದ ಅತ್ತೂರು ಭಂಡಾರ ಮನೆ ರಾಜೇಶ್ ಶೆಟ್ಟಿ, ಕುಳಾಯಿಗುತ್ತು ಚರಣ್ ಶೆಟ್ಟಿ ಕೊಜಪಾಡಿ ಬಾಳಿಕೆ ಅವರನ್ನು ಸಮ್ಮಾನಿಸಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿಯವರು ಕ್ಷೇತ್ರಕ್ಕೆ 5 ಲಕ್ಷ ನೀಡಿದ್ದು ಅದರ ಹಸ್ತಾಂತರವನ್ನು ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರು ಹಸ್ತಾಂತರಿಸಿದರು.
ನೂತನ ಸ್ವಾಗತ ಗೋಪುರವನ್ನು ಶಾಸಕ ಉಮಾನಾಥ ಕೋಟ್ಯಾನ್, ನೂತನ ಸಭಾಂಗಣವನ್ನು ಒಡಿಯೂರು ಸ್ವಾಮೀಜಿ ಉದ್ಘಾಟಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ ಶುಭಾಶಂಸನೆಗೈದರು.
ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ಧರ್ಮಗುರು ಮೆಲ್ವಿನ್ ನೋರೋನ್ಹ, ಪಕ್ಷಿಕೆರೆ ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಎಂ.ಎ. ಆಶ್ರಪ್ ರಝಾ ಅಂಜದಿ, ಮಾಜಿ ಸಚಿವ ಅಭಯಚಂದ್ರ, ಜಾಗತಿಕ ಬಂಟರ ಸಂಘದ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮೂಲ್ಕಿ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಅರವಿಂದ ಪೂಂಜಾ, ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸತೀಶ್ ಶೆಟ್ಟಿ, ಮುಂಡ್ಕೂರು ಕಜೆ ಮಾರಿಗುಡಿ ದೈವಸ್ಥಾನದ ಮೊಕ್ತೇಸರ ಎಂ.ಜಿ.ಕರ್ಕೇರ, ದೈವಸ್ಥಾನದ ಟ್ರಸ್ಟ್ ನ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಕುಡ್ತಿಮಾರುಗುತ್ತು, ದೈವಸ್ಥಾನದ ಗೌರವಾಧ್ಯಕ್ಷ ಗಣೇಶ್ ಶೆಟ್ಟಿ ಐಕಳ ಮತ್ತಿತರರು ಉಪಸ್ಥಿತರಿದ್ದರು.
ಆಡಳಿತ ಮಂಡಳಿ ಅಧ್ಯಕ್ಷ ಚರಣ್ ಜೆ ಶೆಟ್ಟಿ ಪ್ರಸ್ತಾವನೆಗೈದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎಲ್. ಶೆಟ್ಟಿ ಅತ್ತೂರುಗುತ್ತು ಸ್ವಾಗತಿಸಿದರು. ರಾಜೇಶ್ ಶೆಟ್ಟಿ ಕೊಡೆತ್ತೂರು ವಂದಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು.