ಅಪಾರ ಭಕ್ತರ ಸಮ್ಮುಖದಲ್ಲಿ ಶ್ರೀ ಮೂಕಾಂಬಿಕಾ ದೇಗುಲದ ನೂತನ ರಥದಲ್ಲಿ ರಥೋತ್ಸವ ಸಂಭ್ರಮದಿಂದ ಮಾ. 15ರಂದು ಜರಗಿತು. ಅರ್ಚಕ ಡಾ| ರಾಮಚಂದ್ರ ಅಡಿಗರ ನೇತೃತ್ವದಲ್ಲಿ ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥಬಲಿ ನಡೆದು, ಮಧ್ಯಾಹ್ನ 12.30ಕ್ಕೆ ರಥಾರೋಹಣ ನಡೆಯಿತು.
ಕೆಳದಿ ಅರಸರ ಕಾಲದಲ್ಲಿ ನಿರ್ಮಿಸಲಾಗಿತ್ತೆನ್ನಲಾದ 400 ವರ್ಷಗಳ ಪುರಾತನ ರಥವನ್ನು ಬದಲಾಯಿಸಿ ದಾನಿ ಸುನಿಲ್ ಶೆಟ್ಟಿಯವರು ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ನೂತನ ರಥವನ್ನು ಸಮರ್ಪಿಸಿದ್ದಾರೆ. ಈ ರಥದಲ್ಲಿ ವಿರಾಜಮಾನಳಾದ ಶ್ರೀದೇವಿಯನ್ನು ವೀಕ್ಷಿ ಸಲು 20 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸಿದ್ದರು. ರಥೋತ್ಸವದ ಸಂದರ್ಭ ಅರ್ಚಕರು ಎಸೆಯುವ ನಾಣ್ಯವನ್ನು ಹಿಡಿಯಲು ಭಕ್ತರು ಮುಗಿಬಿದ್ದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹಾಗೂ ಎಡಿಸಿ ವೀಣಾ ಬಿ.ಎನ್. ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ರಥ ಸಮರ್ಪಿಸಿದ ಉದ್ಯಮಿ ಸುನಿಲ್ ಶೆಟ್ಟಿ ಹಾಗೂ ಕುಟುಂಬ, ವೀರಭದ್ರ ದೇಗುಲದ ಶಿಲಾಮಯ ಗರ್ಭಗುಡಿ ನಿರ್ಮಾಣ ಸೇವಾಕರ್ತ ಉದ್ಯಮಿ ಮಾರಣ ಕಟ್ಟೆ ಕೃಷ್ಣಮೂರ್ತಿ ಮಂಜ, ಉಪ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ನಾಯ್ಕ, ಸಮಿತಿ ಸದಸ್ಯರಾದ ಡಾ| ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ, ಗೋಪಾಲಕೃಷ್ಣ ನಾಡ, ಗಣೇಶ ಕಿಣಿ ಬೆಳ್ವೆ, ಶೇಖರ ಪೂಜಾರಿ, ರತ್ನ ಆರ್. ಕುಂದರ್, ಸಂಧ್ಯಾ ರಮೇಶ, ಗ್ರಾ.ಪಂ. ಅಧ್ಯಕ್ಷ ಶಿವರಾಮಕೃಷ್ಣ ಭಟ್, ಮಾಜಿ ಧರ್ಮದರ್ಶಿಗಳಾದ ವಂಡಬಳ್ಳಿ ಜಯರಾಮ ಶೆಟ್ಟಿ, ರಮೇಶ ಗಾಣಿಗ ಕೊಲ್ಲೂರು, ರಥಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ, ರಾಜಗೋಪಾಲ ಆಚಾರ್ಯ ಉಪಸ್ಥಿತರಿದ್ದರು.