ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ಐಕಳ ಹರೀಶ್ ಶೆಟ್ಟಿಯವರು ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಿದ್ದು, ಆ ಮೂಲಕ ಬೇರೆಲ್ಲಾ ಜಾತಿ ಸಂಘಟನೆಗಳಿಗೆ ನಿಗಮ ಮಾಡಿ ಸ್ಥಾನಮಾನ ನೀಡುವುದಾದರೆ ಬಂಟ ಸಮಾಜವನ್ನು ಕಡೆಗಣಿಸುವ ಉದ್ದೇಶವಾದರೂ ಏನು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಂಟ ಸಮಾಜಕ್ಕೂ ನಿಗಮದ ಅಗತ್ಯತೆ ಇದ್ದು ಸಮಾಜಕ್ಕೆ ಮನ್ನಣೆ ನೀಡದಿದ್ದಲ್ಲಿ ಪೂರ ಬಂಟ ಸಮಾಜ ಒಂದಾಗಿ ಮುಂಬರುವ ಚುನಾವಣೆಯಲ್ಲಿ ಸಮಾಜದ ಶಕ್ತಿಯನ್ನು ತೋರಿಸಿ ಕೊಡುತ್ತೇವೆ ಎಂದು ಐಕಳ ಹರೀಶ್ ಶೆಟ್ಟಿಯವರು ನೀಡಿದ ಹೇಳಿಕೆಗೆ ಇಡೀ ಬಂಟ ಸಮಾಜ ಬದ್ಧವಾಗಿದೆ ಎಂದು ಹೇಳ ಬಯಸುತ್ತೇನೆ. ಸರಕಾರಿ ನೌಕರಿ, ವಿದ್ಯಾಭ್ಯಾಸ ಮತ್ತು ಉನ್ನತ ಶಿಕ್ಷಣದಲ್ಲಿ ಬಂಟ ಸಮಾಜ ಹಿಂದುಳಿಯಲು ಸರಕಾರದ ಈ ನೀತಿಯೇ ಕಾರಣವಾಗಿದೆ. ಬಂಟ ಸಮಾಜದಲ್ಲಿ ಉಳ್ಳವರು ಬಹಳಷ್ಟು ಜನರು ಇದ್ದಾರೆ, ಆದರೆ ಒಪ್ಪತ್ತಿನ ಊಟಕ್ಕೂ ಪರಿತಪಿಸುವ ಬಹಳಷ್ಟು ಜನ ಬಂಟ ಬಾಂಧವರೂ ಇದ್ದಾರೆ.
ನಮ್ಮ ಸಮಾಜದಲ್ಲಿ ಶಾಸಕ ಸಂಸದರಾದವರು ತಮ್ಮ ಜಾತೀಯ ಸಂಘಟನೆಯನ್ನು ಬಲಪಡಿಸುವತ್ತ, ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡು ಹೋಗುವಲ್ಲಿ ಪ್ರಯತ್ನವನ್ನು ಮಾಡದಿರುವುದು ನಮ್ಮ ದುರಾದೃಷ್ಟ.
“ಬಿಸಿ ಮುಟ್ಟದೆ ಬೆಣ್ಣೆ ಕರಗದು” ಎಂಬ ಮಾತಿನಂತೆ ಮುಂದಿನ ಚುನಾವಣೆಯಲ್ಲಿ ಸಮಾಜವು ಒಂದಾಗಿ ಸಂಘಟನಾತ್ಮಕವಾಗಿ ಹೋರಾಟ ಮಾಡಿದಾಗಲೇ ನಮಗೆ ಜಯ ಸಿಗಲು ಸಾಧ್ಯವಿದೆ. ಪ್ರತೀ ಬಂಟರ ಸಂಘಗಳು ತಮ್ಮ ತಮ್ಮ ವಲಯ ಕ್ಷೇತ್ರಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಿ ಆ ಮೂಲಕ ತಮ್ಮ ಸಮಾಜದ ಮುಂಬರುವ ಪೀಳಿಗೆಗೆ ಒಳಿತನ್ನು ಮಾಡುವ ಕಾರ್ಯವನ್ನು ಮಾಡುವ. ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್, ಪುಣೆ ಮಹಾರಾಷ್ಟ್ರ ಇದರ ಅಧ್ಯಕ್ಷತೆಯ ನೆಲೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ಐಕಳ ಹರೀಶ್ ಶೆಟ್ಟಿಯವರನ್ನು ಸಮರ್ಥಿಸುತ್ತಿದ್ದೇನೆ.
ಇತೀ
ರಾಕೇಶ್ ಶೆಟ್ಟಿ ಬೆಳ್ಳಾರೆ
ಅಧ್ಯಕ್ಷರು