ಮುಂಬಯಿ:- ಚಿಣ್ಣರಬಿಂಬದ ಇಪ್ಪತ್ತನೆಯ ವರ್ಷದ ಮಕ್ಕಳ ಉತ್ಸವವು ದಿನಾಂಕ 19/2/2023ರ ಭಾನುವಾರದಂದು ಬೆಳಿಗ್ಗೆ 10ರಿಂದ ಕುರ್ಲಾ ಪೂರ್ವದ ಬಂಟರ ಭವನದ ರಾಧಾಬಾಯಿ.ಟಿ.ಭಂಡಾರಿ ಸಭಾಂಗಣದಲ್ಲಿ ದಿನಪೂರ್ತಿ ನಡೆಯಲಿದ್ದು ಚಿಣ್ಣರ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅಂದು 3 ಗಂಟೆಯಿಂದ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು ಆಲ್ ಕಾರ್ಗೋ ಲಾಜಿಸ್ಟಿಕ್ಸ್ನ ಆಡಳಿತ ನಿರ್ದೇಶಕರಾಗಿರುವ ಶ್ರೀ ಶಶಿಕಿರಣ್ ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ. ವಿ. ಸುನಿಲ್ ಕುಮಾರ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೇರಂಬ ಇಂಡಸ್ಟ್ರೀಸ್ನ ಆಡಳಿತ ನಿರ್ದೇಶಕರಾದ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಅವರು ಆಗಮಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಬಂಟರ ಸಂಘದ ಅಧ್ಯಕ್ಷರಾಗಿರುವ ಶ್ರೀ ಚಂದ್ರಹಾಸ.ಕೆ.ಶೆಟ್ಟಿ, ಬಂಟರ ಸಂಘದ ಗೌ.ಪ್ರಧಾನ ಕಾರ್ಯದರ್ಶಿಗಳಾಗಿರುವ ಡಾ.ಆರ್.ಕೆ.ಶೆಟ್ಟಿ, ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ, ಬಾಬಾಸ್ ಗ್ರೂಪ್ ಆಫ್ ಕಂಪನೀಸ್ ನ ಆಡಳಿತ ನಿರ್ದೇಶಕರಾಗಿರುವ ಶ್ರಿ ಮಹೇಶ್ ಎಸ್.ಶೆಟ್ಟಿ ಇವರು ಪಾಲ್ಗೊಳ್ಳಲಿದ್ದಾರೆ. ವಿಶೇಷ ಅತಿಥಿಗಳಾಗಿ ಸಿನೆಮಾ ತಾರೆಯರಾದ ಶ್ರೀ ಅಹನ್ ಶೆಟ್ಟಿ, ಭಾರತೀಯ ಕ್ರಿಕೆಟಿಗ ಶ್ರೀ ಧವಲ್ ಕುಲಕರ್ಣಿ, ಸಂಗೀತ ನಿರ್ದೇಶಕ ಗುರುಕಿರಣ್ ಮೊದಲಾದವರು ಆಗಮಿಸಲಿದ್ದಾರೆ.
ಅಂದು ಚಿಣ್ಣರಿಗಾಗಿ ವಿವಿಧ ಸ್ಪರ್ಧೆಗಳು, ಪಾಲಕರ ಸಮೂಹಗಾಯನ ಹಾಗೂ ವೈವಿಧ್ಯಮಯ ಮನೋರಂಜನ ಕಾರ್ಯಕ್ರಮಗಳು ನಡೆಯಲಿವೆ. ಅದ್ದೂರಿಯಾಗಿ ನಡೆಯಲಿರುವ ಚಿಣ್ಣರ ಈ ಸಂಭ್ರಮದ ಕಾರ್ಯಕ್ರಮಕ್ಕೆ ತುಳು ಕನ್ನಡಿಗರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರೋತ್ಸಾಹಿಸಬೇಕಾಗಿ ಚಿಣ್ಣರಬಿಂಬದ ರೂವಾರಿ ಶ್ರೀ ಪ್ರಕಾಶ್ ಭಂಡಾರಿ, ಸ್ಥಾಪಕಾಧ್ಯಕ್ಷೆ ಪೂಜಾ ಪ್ರಕಾಶ್ ಭಂಡಾರಿ, ಕಾರ್ಯಾಧ್ಯಕ್ಷೆ ನಯನಾ ಪ್ರಕಾಶ್ ಭಂಡಾರಿ, ಚಿಣ್ಣರಬಿಂಬದ ಟ್ರಸ್ಟಿಗಳು, ಚಿಣ್ಣರಬಿಂಬದ ಸಮಿತಿಯ ಸದಸ್ಯರು ವಿನಂತಿಸಿಕೊಂಡಿದ್ದಾರೆ.
ವಿಶೇಷ ಆಕರ್ಷಣೆ:- ಚಿಣ್ಣರಬಿಂಬದ ವಿಂಶತಿ ಉತ್ಸವದಲ್ಲಿ ವಿಶೇಷ ಅಹ್ವಾನಿತರಾಗಿ ಬಾಲಿವುಡ್ ತಾರೆಯರಾದ ಜಾಕ್ಲಿನ್ ಫೆರ್ನಾಂಡೀಸ್, ಅರ್ಜುನ್ ರಾಮಪಾಲ್, ಅಹನ್ ಶೆಟ್ಟಿ, ಭಾರತೀಯ ಕ್ರಿಕೆಟಿಗ ಧವಲ್ ಕುಲಕರ್ಣಿ, ಸಂಗೀತ ನಿರ್ದೇಶಕ ಗುರುಕಿರಣ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಚಿಣ್ಣರಬಿಂಬದ ಪ್ರತಿಭಾ ಸ್ಪರ್ಧೆ:- ಚಿಣ್ಣರಬಿಂಬ ಸಂಸ್ಥೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದು ಮಕ್ಕಳಲ್ಲಿ ಸಭಾಕಂಪನವನ್ನು ಹೋಗಲಾಡಿಸಿ ಆತ್ಮವಿಶ್ವಾಸ, ದೃಢತೆಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತಿದೆ. ಸುಮಾರು 25ಕ್ಕೂ ಹೆಚ್ಚು ಶಿಬಿರದಲ್ಲಿ ಪ್ರತಿವರ್ಷ ಶಿಬಿರ ಮಟ್ಟದ, ವಲಯ ಮಟ್ಟದ, ಅಂತರ್ವಲಯ ಮಟ್ಟದ ಸ್ಪರ್ಧೆಗಳು ಏರ್ಪಟ್ಟು ಅದರಲ್ಲಿ ವಿಜೇತರಾದವರು ಅಂತಿಮ ಸ್ಪರ್ಧೆಯನ್ನು ವಾರ್ಷಿಕೋತ್ಸವದ ಭವ್ಯ ವೇದಿಕೆಯಲ್ಲಿ ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ಕಲ್ಪಿಸಿಲಾಗುತ್ತದೆ. ವಿಜೇತರಾದವರಿಗೆ ಅತ್ಯುತ್ತಮವಾದ ಬಹುಮಾನಗಳನ್ನು ನೀಡಿ ಸತ್ಕರಿಸಲಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಉದಾರ ದಾನಿಗಳು ಕೂಡಾ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹದ ನೀರೆರೆದು ಪೋಷಿಸುತ್ತಿದ್ದಾರೆ. ಪಾಲಕರಿಗೂ ವಿಶೇಷವಾದ ವೇದಿಕೆಯನ್ನು ಕಲ್ಪಿಸಿಕೊಡುವ ಈ ಸಂಸ್ಥೆ ಸಮೂಹಗಾಯನ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬರುತ್ತಿದೆ.