ಸಣ್ಣದಿರುವಾಗ ಅಜ್ಜಿ ಹೇಳಿದ ಕಾಗಕ್ಕ ಗುಬ್ಬಕ್ಕ ಕಥೆ ನಿಮಗೂ ನೆನಪಿರಬಹುದು. ಅದೊಂದೂರಲ್ಲಿ ಕಾಗಕ್ಕ ಮತ್ತು ಗುಬ್ಬಕ್ಕ ಅನ್ಯೋನ್ಯತೆಯಿಂದ ವಾಸವಾಗಿದ್ದರು. ಕಾಗಕ್ಕನನ್ನು ಕಂಡರೆ ಗುಬ್ಬಕ್ಕನಿಗೆ ಇಷ್ಟ, ಗುಬ್ಬಕ್ಕನನ್ನು ಕಂಡರೆ ಕಾಗಕ್ಕನಿಗೆ ಇಷ್ಟ. ತಿಂಡಿಗಳನ್ನು ಹಂಚಿಕೊಂಡೇ ತಿನ್ನುತ್ತಿದ್ದರು. ಒಂದು ದಿನ ಪಟ್ಟಣದ ಕಡೆ ಹೋಗಿ ಬರೋಣವೇ ಎಂದು ಕಾಗಕ್ಕ ಅಂದಾಗ ಗುಬ್ಬಕ್ಕ ‘ಎಸ್’ ಅಂದು ಒಟ್ಟಿಗೆ ಹೋಗಿದ್ದವು. ತಿರುಗಿ ಮನೆಗೆ ಬರೋ ಹೊತ್ತಲ್ಲಿ ರಣಚಂಡಿ ಗಾಳಿ ಮಳೆ. ಹಾಗೋ ಹೇಗೋ ಸಾವರಿಸಿಕೊಂಡು ಬಂದು ನೋಡಿದಾಗ ಗುಬ್ಬಚ್ಚಿಯ ಗೂಡು ಗಾಳಿ ಮಳೆಗೆ ನಾಶವಾಗಿ ಹೋಗಿತ್ತು. ನೇರ ಕಾಗಕ್ಕನ ಮನೆಗೆ ಹೋಗಿ ” ಕಾಗಕ್ಕ ಕಾಗಕ್ಕ ನಾಲ್ಕು ದಿನಕ್ಕೆ ನನಗೆ ನಿನ್ನ ಮನೆಯಲ್ಲಿ ವಾಸ ಮಾಡಲು ಅವಕಾಶ ಕೊಡುವೆಯಾ” ಎಂದು ಕೇಳಿಕೊಂಡಿತು. ಕಾಗಕ್ಕನ ಇನ್ನೊಂದು ಮುಖ ಗುಬ್ಬಕ್ಕನಿಗೆ ಗೊತ್ತಿರಲಿಲ್ಲ. ನನ್ನ ಮನೆಯಲ್ಲಿ ನನಗೇ ಸರಿಯಾಗಿ ಜಾಗವಿಲ್ಲ. ನಿನ್ನನ್ನು ಹೇಗೆ ಕೂಡಿಸಿಕೊಳ್ಳಲಿ ಎಂದು ಜಾಣ್ಮೆಯಿಂದ ಜಾರಿ ಕೊಂಡಿತು. ಆದರೂ ಬೇಸರಿಸದ ಗುಬ್ಬಕ್ಕ ತನ್ನಪಾಡಿಗೆ ತಾನೆ ಕಷ್ಟಪಟ್ಟು ಗೂಡನ್ನು ಕಟ್ಟಿಕೊಂಡಿತು. ಒಂದು ವಾರ ಅಂತರದಲ್ಲಿ ಮರಗಳನ್ನು ಕಡಿಯುತ್ತಾ ಪಟ್ಟಣವನ್ನು ವಿಸ್ತರಿಸುವ ಕೆಲಸವನ್ನು ಮನುಷ್ಯರು ಮಾಡುತ್ತಾ ಬಂದರು. ಈ ಸಮಯದಲ್ಲಿ ಕಾಗಕ್ಕನ ಗೂಡು ಮರದಡಿಯಲ್ಲಿ ಬಿದ್ದು ನುಚ್ಚುನೂರಾಗಿ ಹೋಯಿತು. ಇದನ್ನು ಕಂಡ ಗುಬ್ಬಕ್ಕನಿಗೆ ಕನಿಕರವಾಗಿ ಕಾಗಕ್ಕನನ್ನು ಕರೆದು ತನ್ನ ಗೂಡಲ್ಲಿ ಆಸರೆ ನೀಡಿತು.ಗುಬ್ಬಕ್ಕನ ದೊಡ್ಡಗುಣವನ್ನ ಸಾರುವ ಸಣ್ಣಕಥೆ.
ಗುಬ್ಬಕ್ಕ ನಮ್ಮ ಮನೆಯಲ್ಲೂ ಒಂದೊಮ್ಮೆ ಗೂಡನ್ನು ಕಟ್ಟಿತ್ತು. ನಾಯಿ,ಬೆಕ್ಕು,ದನ.. ಮನುಷ್ಯನನ್ನು ಹೊಂದಿಕೊಂಡು ಹೋದಹಾಗೆ ಗುಬ್ಬಚ್ಚಿಗೂ ಮಾನವನ ಒಡನಾಟ ಇಷ್ಟ. ನಾವಾವಾಗ ಒಂದು ಬಾರ್ ಸೋಪ್ ನ ರಟ್ಟಿನ ಪೆಟ್ಟಿಗೆ ತಂದು ಅದರಲ್ಲಿ ಬಾಗಿಲನ್ನು ಮಾಡಿ ಮನೆಯ ಪಕ್ಕಾಸಿಗೆ ಗಟ್ಟಿಯಾಗಿ ಕಟ್ಟಿ ಗುಬ್ಬಕ್ಕ ನಿಗೆ ಅಪಾರ್ಟ್ ಮೆಂಟ್ ಮಾಡಿಕೊಟ್ಟಿದ್ದೆವು. ಅದರಲ್ಲಿ ಸಣ್ಣ ಕಪ್ಪು ಕೊಕ್ಕಿನ ಫ್ರೆಂಚ್ ಗಡ್ಡ ಇಟ್ಟಿರುವ ಕಪ್ಪು ಕುತ್ತಿಗೆಯ ಗಂಡು ಗುಬ್ಬಣ್ಣ ನೂ ಸಣ್ಣ ಕಂದು ಕೊಕ್ಕಿನ ಮೈಯೆಲ್ಲಾ ಬೂದು ಬಣ್ಣದ ಗುಬ್ಬಕ್ಕನೂ ಸಂಸಾರ ಮಾಡುತ್ತಿದ್ದುದು ಇಂದಿಗೂ ಕಣ್ಣಿಗೆ ಕಟ್ಟುವಂತಿದೆ. ಚುರುಕು ತನದ ಹಾರಾಟ, ಮೊಟ್ಟೆಯೊಡೆದು ಮರಿಗಳು ಬಂದಾಗ ಗುಬ್ಬಕ್ಕ ನಿಗಾಗುವ ಸಂಭ್ರಮ, ಬೆಕ್ಕಿನ ನಡೆ ಗೂಡಿನ ಕಡೆ ಇದ್ದಾಗ ತನ್ನವರಿಗೆ ಕೊಡುವ ಅಲರಾಂ, ಹೊಸ ಗೂಡಿನ ನಿರ್ಮಾಣದ ದುಡಿತದ ಸಂಭ್ರಮ, ಮರಿಗುಬ್ಬಚ್ಚು ಗಳಿಗೆ ಆಹಾರ ತಂದಾಗ ನಡೆಯುವ ಸೆಲೆಬರೇಶನ್… ಇತ್ಯಾದಿ ಇತ್ಯಾದಿ.
ಹೀಗೇ ಒಂದು ದಿನ ಒಂದನೇ ಕ್ಲಾಸ್ ನ ಅಹನ್ ನಲ್ಲಿ ಕಾಗೆಯನ್ನು ತೋರಿಸಿ ನೋಡು ಅದಲ್ಲವೇ ಪಿಕಾಕ್ ಅಂದೆ. ಅದಕ್ಕವ ಅದು ಪಿಕಾಕ್ ಅಲ್ಲ ಕ್ರೋ ಅಂದ. ಸಬ್ಬಾಸ್ ಅಂದೆ. ಗುಬ್ಬಿ ಹಕ್ಕಿ ನೋಡಿದ್ದಿಯಾ ಅಂದೆ ‘ ಇಲ್ಲ ‘ ಅಂದ. ಅದು ಎಲ್ಲಿರುತ್ತವೆ, ಹೇಗಿರುತ್ತದೆ ನಾಲ್ಕಾರು ಪ್ರಶ್ನೆ ಗಳನ್ನು ಕೇಳಿಯೇ ಬಿಟ್ಟ.
ಎಷ್ಟೋ ವರ್ಷಗಳಿಂದ ನಮ್ಮೊಂದಿಗೆ ಒಡನಾಡಿಯಂತಿದ್ದ ಆ ಒಂದು ಮುಗ್ಧ ಪಕ್ಷಿ ಯ ತಳಿಯನ್ನು ನಾವು ಕಳೆದುಕೊಂಡುಬಿಟ್ಟೆವೇ ಎಂಬಿತ್ಯಾದಿ ಪ್ರಶ್ನೆಗಳು ಮೂಡತೊಡಗಿದುವು.
ಕೆಲ ಅಂಗಡಿಗಳಲ್ಲೂ ಕೇಳಿನೋಡಿದೆ. ನಿಮ್ಮಲ್ಲಿ ಗುಬ್ಬಿಹಕ್ಕಿಗಳ ಅಸ್ತಿತ್ವ ಇದೆಯೇ ಎಂದು. ಅದು ಯಾವಾಗ ಮೊಬೈಲ್ ಟವರ್ ಬಂತೋ ಆಗಿಂದಲೇ ಸರ್ವನಾಶ ವಾಗಿದೆ ಅಂದರು.
ಗಂಭೀರವಾಗಿಯೇ ಚಿಂತಿಸಬೇಕಾದ ವಿಷಯ ಅಂತ ಅನ್ನಿಸಿತು. ಕಣ್ಣೆದುರಿಗೆ ಕಾಣದ ಎಷ್ಟೊಂದು ಜೀವಸಂಕುಲಗಳು ನಾಶವಾಗಿರಬಹುದೆಂದುಕೊಂಡೆ. ಎಷ್ಟೋ ಲೇಖನಗಳು, ಡಾಕ್ಯುಮೆಂಟರಿಗಳು, ಸಿನೆಮಾಗಳು ಈ ಮೊಬೈಲ್ ಟವರ್ ಹೊರಡಿಸುವ ಅಪಾಯಕಾರೀ ರೇಡಿಯೇಶನ್ ಗಳ ಬಗ್ಗೆ ಬಂದಿರಬಹುದು. ನಮಗೆ ಗೊತ್ತಿದ್ದೂ ಚಕ್ರವ್ಯೂಹದಲ್ಲಿ ಸಿಲುಕಿದ ಅನುಭವ. ಹೊರಬರಲಾದೆ ಚಡಪಡಿಸುವ ಅನಿವಾರ್ಯತೆ. ಹಾಗಂತ ಸಿಡಿಲು ಬಡಿದು ಒಮ್ಮಿಂದೊಮ್ಮೆಗೆ ಸರ್ವನಾಶ ಮಾಡುವ ಕೆಲಸ ಇದರದ್ದಲ್ಲ. ಇದರ ಕೆಲಸ ಯಾರಿಗೂ ಕಾಣುವುದಿಲ್ಲ, ಸದ್ದು ಗದ್ದಲಗಳಿಲ್ಲ. ಕಣ್ಣಿಗೆ ಕಾಣುವ ಮಾಲಿನ್ಯದ ಲಿಸ್ಟ್ ನಲ್ಲೇ ಇಲ್ಲ. ಆದರೆ ನಾವೆಲ್ಲಾ ಅದರ ಪರಿಣಾಮದ ಬಳಕೆದಾರರೂ ಹೌದು, ಬಳಲುತ್ತಿರುವವರೂ ಹೌದು.
ಗರ್ಭಿಣಿಯರು, ಚಿಕ್ಕ ಮಕ್ಕಳು, ಶಸ್ತ್ರ ಚಿಕಿತ್ಸೆಯಿಂದ ಪರಕೀಯ ಲೋಹದ ವಸ್ತುಗಳನ್ನು ತನ್ನ ದೇಹದಲ್ಲಿ ಸೇರಿಸಿಕೊಂಡವರು, ಅಶಕ್ತರು, ಒದ್ದೆ ಕೂದಲು ಇದ್ದುಕೊಂಡು ಮೊಬೈಲ್ ಬಳಸುವವರು( ನೀರು ಮತ್ತು ಲೋಹ ವಿಕಿರಣವನ್ನು ಬೇಗನೆ ಸೆಳೆಯುತ್ತದೆ) ಕಾರಿನ ಗಾಜನ್ನು ಕ್ಲೋಸ್ ಮಾಡಿ ಮೊಬೈಲನ್ನು ಕಿವಿಗಂಟಿಸಿ ಗಂಟೆಗಟ್ಟಲೆ ಮಾತನಾಡುವವರು,
ಟವರ್ ಸಿಗ್ನಲ್ ಕಡಿಮೆ ಇದ್ದು ಮೊಬೈಲ್ ಬಳಸುವವರು, ಸದಾ ಮೊಬೈಲನ್ನು ನಿದ್ದೆಯ ಸಮಯದಲ್ಲೂ ದಿಂಬಿನ ಹತ್ತಿರ ಇಟ್ಟುಕೊಳ್ಳುವವರು, ಮನೆಯ ಬೆಡ್ ರೂಂ ನಲ್ಲೇ ವೈ ಫೈ ಉಪಯೋಗಿಸುವವರು. ಹೀಗೇ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮೇಲೆ ತಿಳಿಸಿದವರೆಲ್ಲರೂ ಅತೀ ಹೆಚ್ಚು ಆತಂಕಕ್ಕೆ ಒಳಪಡುವವರು ಮತ್ತು ಈ ವಿಷಯಗಳನ್ನು ಕ್ಷುಲ್ಲಕವಾಗಿ ತೆಗೆದುಕೊಳ್ಳಬೇಡಿ ಎಂದು ತಜ್ಞರೂ ಹೇಳುತ್ತಾರೆ. ಮೆದುಳಿನಲ್ಲಿ ಗಡ್ಡೆ, ನಿದ್ರಾಹೀನತೆ, ಆತಂಕ, ದೃಷ್ಟಿ ದೋಷ, ಬಂಜೆತನ, ಇತ್ಯಾದಿ ಸಮಸ್ಯೆಗಳು ನಮ್ಮನ್ನು ಕಾಡಬಹುದು ಅನ್ನುತ್ತದೆ ಇತ್ತೀಚೆಗಿನ ಸಂಶೋಧನೆಗಳು.
ಪುತ್ತೂರಿನ ಡಿ ನೆಟ್ ನ ಆಶ್ವಥ್ ಅವರು ನಗರದ ಹೊರಗಡೆ ಒಂದು ಏರಿಯಾದ ಟವರ್ ಗಳ ಅತಿವಿಕಿರಣಗಳ ಸೂಸುವಿಕೆಯಿಂದ ಸಣ್ಣ ಮಕ್ಕಳಿಗೆ ನಿರಂತರವಾಗಿ ಪಾರ್ಶ್ವ ತಲೆನೋವು, ಅಸ್ವಸ್ಥತೆ ಗಳು ಬಂದು ತಾವಿರುವ ವಾಸಸ್ಥಳವನ್ನೇ ಬದಲಿಸುವ ನಿರ್ಧಾರ ಕ್ಕೆ ಪೋಷಕರು ಬಂದಿದ್ದಾರೆ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ. ಮನೆಯಲ್ಲಿ ಉಪಯೋಗಿಸುವ ವೈ ಫೈ ಯನ್ನು ರಾತ್ರಿ ಹೊತ್ತಲ್ಲಿ ಕಡ್ಡಾಯವಾಗಿ ಸ್ವಿಚ್ ಆಫ್ ಮಾಡಲೇ ಬೇಕು. ಇಲ್ಲದೇ ಹೋದರೆ ನಮ್ಮ ಮುಂದಿನ ಪೀಳಿಗೆ ಇನ್ನಿಲ್ಲದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಅನ್ನುತ್ತಾರೆ.
ಎಲ್ಲವೂ ನಿಜ. ಹಾಗಂತ ಮೊಬೈಲ್ ಬಿಟ್ಟು ಬದುಕು ಹೇಗೆ ಎಂಬಲ್ಲಿಯವರೆಗೆ ನಾವಂತೂ ಮುಟ್ಟಿದ್ದೇವೆ ನಿಜ. ಗುಬ್ಬಕ್ಕನ ಸಂಸಾರಕ್ಕೆ ವಿಕಿರಣವನ್ನು ತಾಳಿಕೊಳ್ಳುವ ಶಕ್ತಿ ಇಲ್ಲ. ಸಂಸಾರವೇ ನಾಶವಾಯಿತು.
ನಾವು ದೊಡ್ಡವರು ನಮಗೆ ತಾಳಬಹುದಾದರೂ ಸಣ್ಣ ಮಕ್ಕಳು ಪ್ರಬಲ ವಿಕಿರಣವನ್ನು ತಾಳಿಕೊಳ್ಳುವ ಶಕ್ತಿ ಇರಲಾರದು. ಹಾಗಂತ ಚಟ ಹಿಡಿದ ಮಕ್ಕಳಿಂದ ಮೊಬೈಲ್ ದೂರವಿರಿಸುವುದು ನಮ್ಮೆಲ್ಲರ ಜವಾಬ್ದಾರಿ. ಇಲ್ಲದಿದ್ದರೆ ನಮ್ಮ ಕಥೆಯೂ ಗುಬ್ಬಕ್ಕನ ಕಥೆಯಂತೆಯೇ ಆಗಬಹುದು.
ಲೇಖನ: ವಿವೇಕ್ ಆಳ್ವ ಪುತ್ತೂರು.