ಮುಂಬಯಿ (ಆರ್ ಬಿ ಐ), ಜ.08: ಮಾತಾಪಿತರು, ಪ್ರಾಜ್ಞರು ಮತ್ತು ಗುರುಹಿರಿಯರು ಹಿರಿಯರು ಹಾಕಿ ಕೊಟ್ಟಿರುವ ಪರಂಪರೆ ಅಕ್ಷರಶಃ ಪಾಲಿಸುತ್ತ, ದೇವರು ಮತ್ತು ದೈವಗಳ ಚಿತ್ತದಂತೆ ಮುಂದಡಿ ಇಟ್ಟು, ಕಳೆದ 12 ವರ್ಷಗಳಲ್ಲಿ ತುಳುನಾಡ ಸಂಸ್ಕøತಿಯ ಪಡಿಯಚ್ಚಿನಲ್ಲಿ ಗುತ್ತು-ಮನೆತನಗಳ ಹಿರಿತನ ಎತ್ತಿಹಿಡಿದ ಗತ್ತಿನ ಗುತ್ತೇ ಗುರುಪುರ ಗೋಳಿದಡಿ ಗುತ್ತು. ಗುರುಪುರ ಫಲ್ಗುಣಿ ನದಿ ತಟದಲ್ಲಿರುವ ಸಂಸ್ಕøತಿಯ ನೆಲೆವೀಡಾಗಿರುವ ಗೋಳಿದಡಿ ಗುತ್ತು 2009ರಲ್ಲಿ ಪುನರ್ನಿರ್ಮಾಣಗೊಂಡಿತ್ತು. 2010ರಲ್ಲಿ ಗುತ್ತಿನಮನೆಯ ದುರ್ಗಾಪ್ರಸಾದ ಶೆಟ್ಟಿ ಅವರು `ಶ್ರೀ ವರ್ಧಮಾನ’ ಎಂಬ ಅಭಿದಾನದೊಂದಿಗೆ ಗುತ್ತಿನ ಮನೆಯ ಗಡಿಪಟ್ಟ ಸ್ವೀಕರಿಸಿದ್ದರು. ಚಿಕ್ಕಮಗಳೂರುನ ವೇದವಿಜ್ಞಾನ ಮಂದಿರದ ಬ್ರಹ್ಮಋಷಿ ಶ್ರೀ ಕೆ.ಎಸ್ ನಿತ್ಯಾನಂದ ಅವರು ಇಲ್ಲಿನ ಈವರೆಗಿನ ಎಲ್ಲ ಶಿಷ್ಟ ಹಾಗೂ ವಿಶಿಷ್ಟ ಪರಂಪರೆಯ ಹಿಂದಿನ ಶಕ್ತಿ, ಮಾರ್ಗದರ್ಶಕರಾಗಿದ್ದಾರೆ.
ಗೋಳಿದಡಿ ಗುತ್ತಿನ ಮನೆಯಲ್ಲಿ ಶ್ರೀ ವೈದ್ಯನಾಥ (ಶ್ರೀ ಮುಂಡಿತ್ತಾಯ), ಪಂಚದೇವತೆಗಳು ಮೇಲ್ಪಂಕ್ತಿಯಲ್ಲಿ ದ್ದು, ಕಷ್ಟ ಭಿನ್ನವಿಸಿಕೊಂಡು ಬರುವವರಿಗೆ ಇಷ್ಟಾರ್ಥ ಸಿದ್ಧಿ ಸಾನಿಧ್ಯವಾಗಿದೆ. ತಮ್ಮೆಲ್ಲ ಸತ್ಕಾರ್ಯಕ್ಕೆ ದೈವ ಪ್ರೇರಣೆಯೇ ದಿಕ್ಸೂಚಿ ಎನ್ನುವ ಶ್ರೀ ದುರ್ಗಾಪ್ರಸಾದ ವರ್ಧಮಾನ ಶೆಟ್ಟಿ ಹಾಗೂ ಅವರ ಮಡದಿ, ಮಕ್ಕಳು ಅತ್ಯಂತ ಸೌಮ್ಯವಾಗಿ ನಡೆದುಕೊಳ್ಳುತ್ತ, ನುಡಿದಂತೆ ನಡೆದು ತೋರಿಸುವ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದಾರೆ. ಶ್ರೀ ವರ್ಧಮಾನರು ಗಡಿಪಟ್ಟ ಸ್ವೀಕರಿಸಿ 12 ವರ್ಷಗಳು ಸಂದಿವೆ. ಈ ನಿಟ್ಟಿನಲ್ಲಿ ಈ ವರ್ಷ ಜನವರಿ 17 ರಿಂದ 19ರ ದಿನಗಳಲ್ಲಿ ಗೋಳಿದಡಿ ಗುತ್ತಿನ ಮನೆಯಲ್ಲಿ ಗಡಿಪಟ್ಟ ಸ್ವೀಕಾರದ 12ನೇ ವರ್ಷದ ಸಂಭ್ರಮಾಚರಣೆ ನಡೆಯಲಿದೆ. ಕಳೆದ 12 ವರ್ಷಗಳ ಅವಧಿಯಲ್ಲಿ ಇಲ್ಲಿ ನಡೆದಿರುವ ಪ್ರತಿಯೊಂದು ಕಾರ್ಯವೂ ಕೆ.ಎಸ್ ನಿತ್ಯಾನಂದರ ಮಾರ್ಗದರ್ಶನದಲ್ಲಿ ನಡೆದಿವೆ. ಈ ಬಾರಿ, 12ನೇ ವರ್ಷದ `ಪವೋತ್ಸವ, ಗಡಿಪಟ್ಟ ಸ್ವೀಕಾರದ ಸಂಭ್ರಮಾಚರಣೆ’ಯೂ ಅವರ ನಿರ್ದೇಶನದಂತೆ ನಡೆಯಲಿದೆ.
12ನೇ ವರ್ಷದ ಪರ್ವೋತ್ಸವ :
ಭಾರತಾದ್ಯಂತ ವ್ಯಾಪಿಸಿರುವ ಗುತ್ತು, ಗಡಿ, ಬಾವ, ಬಾರಿಕೆ (ಬರ್ಕೆ), ಬೀಡು, ಅರಸು ಮನೆತನಗಳು ಆಚರಿಸ ಲೇ ಬೇಕಾದ 12 ವರ್ಷದ ಹಬ್ಬವೇ ನಡಾವಳಿ. ಪ್ರತಿ 12 ವರ್ಷಕ್ಕೊಮ್ಮೆ ಗುತ್ತಿನವರು ಆಚರಿಸಿ ತಮ್ಮ ಗುತ್ತಿನ ನಿರ್ಣಯಗಳ ಪುನರಾವರ್ತನೆ ಮತ್ತು ದೈವಗಳ ಕಲಾವೃದ್ಧಿ ಪುನರ್ ಸಂಧಾನ ಗಳ ಪೂರ್ವಕ ಆಶೀರ್ವಾದ ಪಡೆದು ಮುನ್ನಡೆಯುವ ವಿಧಾನವಾಗಿದೆ.
ಕಷ್ಟ-ಇಷ್ಟಗಳಿಗೆ ಸ್ಪಂದನೆ :
ಗೋಳಿದಡಿ ಗುತ್ತು ಮನೆಯಿಂದ ನಿರಂತರ ಸಮಾಜಮುಖಿ ಕಾರ್ಯಗಳು ನಡೆಯುತ್ತಿರುತ್ತವೆ. ಇಲ್ಲಿನ ಕೆಲವು ಕಾರ್ಯಗಳು ಇತರಿಗೆ ಮಾದರಿಯಾಗಿರುತ್ತವೆ. ಆಚಾರ-ವಿಚಾರ, ನೀತಿ-ನಿಯಮಗಳಿಗೆ ಬದ್ಧವಾಗಿ ನಡೆಯುವ ಇಲ್ಲಿನ ಪ್ರತಿಯೊಂದು ಸತ್ಕಾರ್ಯದ ಹಿಂದೆ ಗಡಿಕಾರರ ಸಮಯಪ್ರಜ್ಞೆ ಪಾದರಸದಂತೆ ಕೆಲಸ ಮಾಡುತ್ತಿರುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು. ಹಸಿದವರಿಗೆ ಅನ್ನ ನೀಡುವ ಮತ್ತು ಕಷ್ಟ-ಸಂಕಷ್ಟದಲ್ಲಿದ್ದವರ ಕಣ್ಣೀರೊರೆಸುವ ಕೆಲಸ ಇಲ್ಲಿ ನಡೆಯುತ್ತದೆ. ಗುತ್ತಿನ ಮನೆಯಲ್ಲಿ ಈಗಾಗಲೇ ಹಲವು ವ್ಯಕ್ತಿ, ಕುಟುಂಬ, ಸಂಸ್ಥೆಗಳ ವ್ಯಾಜ್ಯಕ್ಕೆ `ಇತ್ಯರ್ಥ’ ಎಂಬ ಸಮಾಧಾನಕರ ಪೂರ್ಣ ವಿರಾಮ ಸಿಕ್ಕಿದೆ.
ಈ ವರ್ಷದ ಕಾರ್ಯಕ್ರಮ :
ಗುತ್ತಿನ ಮನೆಯಲ್ಲಿ ಗುತ್ತುದ ವರ್ಷದ ಪರ್ಬ, ಜಾತ್ರೆಯ ವಾತಾವರಣ. ತುಳುನಾಡಿನ ಸಂಸ್ಕøತಿ ಅನಾವರಣಗೊಳ್ಳಲಿದೆ. ಮೂರೂ ದಿನ ದೇವತಾ ಕಾರ್ಯಗಳು ನಡೆಯಲಿವೆ. ಜ.17-19ರವರೆಗೆ ಶ್ರೀ ವೈದ್ಯನಾಥೇಶ್ವರ ಪ್ರಾಂಗಣದಲ್ಲಿ ಮರೆಯಾಗುತ್ತಿರುವ ಗ್ರಾಮೀಣ ಬದುಕಿನ ಸೊಬಗು `ಪರ್ಬೊದ ಸಿರಿ’ ಸಂಭ್ರಮಾಚರಣೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶಕ್ತಿ ಕಲ್ಲು ಎತ್ತುವ ಸ್ಪರ್ಧೆ, ವಿವಿಧ ರೀತಿಯ ಸರಕು ಮಳಿಗೆಗಳ ಪ್ರದರ್ಶನ ಮತ್ತು ಮಾರಾಟ. ಎಲ್ಲರಿಗೂ ಊಟೋಪಚಾರ ನಡೆಯಲಿದೆ. ನಿಜಾರ್ಥದಲ್ಲಿ, ಗುತ್ತಿನ ಮನೆಯ ಕಾರ್ಯಕ್ರಮಗಳಿಂದ ಜಾತ್ರೆ, ಉತ್ಸವ, ಸಂತೆಯ ಅನುಭವವಾಗಲಿದೆ.
ಜ. 17ರಂದು ಮಧ್ಯಾಹ್ನ 2ರಿಂದ ಶ್ರೀ ದೇವರಾಯ ಕಿಣಿ ಬಳಗದಿಂದ ದಾಸರವಾಣಿ, ಸಂಜೆ 6ಕ್ಕೆ ಬ್ರಹ್ಮಋಷಿ ಶ್ರೀ ಕೆ. ಎಸ್. ನಿತ್ಯಾನಂದ ಅವರ ಗುರು ಸಾನಿಧ್ಯದಲ್ಲಿ `ಗುತ್ತಿನ ವರ್ಷದ ಒಡ್ಡೋಲಗ’ ಸಭಾ ಕಾರ್ಯಕ್ರಮ ಜರುಗಲಿದೆ. ಸಂಜೆ 8.00ಕ್ಕೆ ಮೂಲ್ಕಿ ನವವೈಭವದ ತುಳುನಾಡ ವೈಭವ ಕಲಾವಿದರಿಂದ ತುಳುನಾಡ ತುಡರ್, ಜ.18ರಂದು ಮಧ್ಯಾಹ್ನ 1:30ಕ್ಕೆ ಗೋಳಿದಡಿ ಚಾವಡಿ ಮಿತ್ರರಿಂದ ಭಜನಾ ಸತ್ಸಂಗ, ಸಂಜೆ 6:30ಕ್ಕೆ ಉಡುಪಿಯ ಹೇರಾಡಿ ಗ್ರಾಮದ ಹುಭಾಶಿಕ ಕೊರಗರ ಯುವಕಲಾ ವೇದಿಕೆ (ರಿ.) ಇವರಿಂದ ಕೊರಗರ ಸಾಂಸ್ಕøತಿಕ ವೈಭವ, ಶುಭಮಣಿ ಚಂದ್ರಶೇಖರ್ ಅವರಿಂದ ಭರತ್ ನ್ಯಾಟ್, ಮಂಗಳೂರಿನ ಸನಾತನ ನಾಟ್ಯಾಲಯದವರಿಂದ ಸನಾತನ ನೃತ್ಯಾಂಜಲಿ ಸಾದರಗೊಳ್ಳಲಿದೆ. ಜ. 19ರಂದು ಮೂಡುಶೆಡ್ಡೆಯ ಶ್ರೀ ದೇವಿ ಭಜನಾ ಮಂಡಳಿಯವರಿಂದ ಭಜನಾ ಸತ್ಸಂಗ. ಸಂಜೆ 6:30ರಿಂದ ಶ್ರೀ ಜ್ಞಾನಶಕ್ತಿ ಪಾವಂಜೆ ಮೇಳದವರಿಂದ `ನಾಗ ಸಂಜೀವನ’ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
”ಇವೆಲ್ಲವೂ ದೈವೇಚ್ಛೆಯಂತೆ ನಡೆಯುವ ಹಾಗೂ ಬಡವರು, ನೊಂದವರ ಬಾಳಿಗೆ ಆಸರೆಯಾಗುವ ದೇವತಾಕಾರ್ಯ. ಇದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಗುತ್ತು ಮನೆತನ ಮತ್ತು ಗಡಿ ಸಂಪ್ರದಾಯದಂ ತೆ ನಡೆಯುವ ಕಾರ್ಯಕ್ರಮ ಇದಾಗಿದೆ. ದೇವ-ದೈವ ಸಾನಿಧ್ಯದಲ್ಲಿ ನಡೆಯುವ ಸಮಾಜ ಸೇವೆ ಇದಾಗಿದೆ” ಎಂದು ಗೋಳಿದಡಿ ಗುತ್ತಿನ ಗಡಿಕಾರ ದುರ್ಗಾಪ್ರಸಾದ ವರ್ಧಮಾನ ಶೆಟ್ಟಿ ಹೇಳಿದರು.