ಡಾ. ಆರ್. ಎನ್. ಶೆಟ್ಟಿ ಅವರ ಪುತ್ರ ಸುನೀಲ್ ಶೆಟ್ಟಿ ಅವರ ಕುಟುಂಬದವರು ಈ ಕಂಚಿನ ಪ್ರತಿಮೆಯನ್ನು ದೇವಸ್ಥಾನದ ಪ್ರಮುಖರು, ಊರಿನ ಪ್ರಮುಖರು ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಿದ್ದಾರೆ. ಈ ಪ್ರತಿಮೆ ಸುಮಾರು 1,560 ಕೆ. ಜಿ. ತೂಕದ ಕಂಚಿನಲ್ಲಿ ನಿರ್ಮಾಣಗೊಂಡ ಪ್ರತಿಮೆಯಾಗಿದ್ದು, 15 ಅಡಿ ಎತ್ತರವಿದೆ. ವಿಶೇಷವೆಂದರೆ, ಕಂದುಕ ಗಿರಿಯಲ್ಲಿರುವ ಮುಡೇಶ್ವರದ ಬೃಹತ್ ಶಿವನ ಮೂರ್ತಿಯನ್ನ ತಯಾರಿಸಿದ್ದ ಕಾಶೀನಾಥ ಅವರ ಪುತ್ರರಾದ ಶ್ರೀಧರ್ ಅವರೇ ಡಾ. ಆರ್. ಎನ್. ಶೆಟ್ಟಿಯವರ ಪ್ರತಿಮೆಯನ್ನ ನಿರ್ಮಾಣ ಮಾಡಿದ್ದಾರೆ.


ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪುಣ್ಯ ಕ್ಷೇತ್ರವೂ ಆಗಿರುವ ಮುರುಡೇಶ್ವರ ಅಂದಾಕ್ಷಣ ನೆನಪಿಗೆ ಬರುವುದು ಉದ್ಯಮಿ ಡಾ. ಆರ್. ಎನ್. ಶೆಟ್ಟಿ. ನವ ಮುರುಡೇಶ್ವರದ ನಿರ್ಮಾತೃ ಅಂತಲೇ ಕರೆಯಿಸಿಕೊಳ್ಳುತ್ತಿದ್ದ ಡಾ. ಆರ್. ಎನ್. ಶೆಟ್ಟಿ ಅವರು ಎಲ್ಲರನ್ನ ಅಗಲಿ ಒಂದೂವರೆ ವರ್ಷ ಕಳೆಯುತ್ತಾ ಬಂದಿದೆ. ಇದೀಗ ಅವರ ನೆನಪನ್ನ ಚಿರ ಸ್ಥಾಯಿಯಾಗಿಸಲು ಮುರುಡೇಶ್ವರದ ಬೃಹತ್ ಶಿವನ ಪ್ರತಿಮೆಯ ಎದುರು ಡಾ. ಆರ್. ಎನ್. ಶೆಟ್ಟಿ ಅವರ ಕಂಚಿನ ಪ್ರತಿಮೆಯನ್ನ ಅನಾವರಣ ಮಾಡಲಾಗಿದೆ.

ಡಾ. ಆರ್. ಎನ್. ಶೆಟ್ಟಿ ಅವರ ಪುತ್ರ ಸುನೀಲ್ ಶೆಟ್ಟಿ ಅವರ ಕುಟುಂಬದವರು ಈ ಕಂಚಿನ ಪ್ರತಿಮೆಯನ್ನು ದೇವಸ್ಥಾನದ ಪ್ರಮುಖರು, ಊರಿನ ಪ್ರಮುಖರು ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಿದ್ದಾರೆ. ಈ ಪ್ರತಿಮೆ ಸುಮಾರು 1,560 ಕೆ. ಜಿ. ತೂಕದ ಕಂಚಿನಲ್ಲಿ ನಿರ್ಮಾಣಗೊಂಡ ಪ್ರತಿಮೆಯಾಗಿದ್ದು, 15 ಅಡಿ ಎತ್ತರವಿದೆ.

ವಿಶೇಷವೆಂದರೆ, ಕಂದುಕ ಗಿರಿಯಲ್ಲಿರುವ ಮುಡೇಶ್ವರದ ಬೃಹತ್ ಶಿವನ ಮೂರ್ತಿಯನ್ನ ತಯಾರಿಸಿದ್ದ ಕಾಶೀನಾಥ ಅವರ ಪುತ್ರರಾದ ಶ್ರೀಧರ್ ಅವರೇ ಡಾ. ಆರ್. ಎನ್. ಶೆಟ್ಟಿಯವರ ಪ್ರತಿಮೆಯನ್ನ ನಿರ್ಮಾಣ ಮಾಡಿದ್ದಾರೆ. ಶ್ರೀಧರ್ ಮುಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಡಾ. ಆರ್. ಎನ್. ಶೆಟ್ಟಿ ಅವರ ಜೀವನ ಸಾಧನೆ :
ಆಗಸ್ಟ್ 15, 1928ರಲ್ಲಿ ಮುರುಡೇಶ್ವರದಲ್ಲಿ ಜನಿಸಿದ ರಾಮ ನಾಗಪ್ಪ ಶೆಟ್ಟಿ ಅವರು ಡಾ. ಆರ್. ಎನ್. ಶೆಟ್ಟಿ ಎಂದೇ ಜನಪ್ರಿಯ. ಉದ್ಯಮಿಯಾಗಿದ್ದ ಡಾ. ಆರ್. ಎನ್. ಶೆಟ್ಟಿ ಅವರು ತಮ್ಮ ಹುಟ್ಟೂರಾದ ಮುರುಡೇಶ್ವರದ ಅಭಿವೃದ್ಧಿಗೆ ಶ್ರಮಿಸಿದ್ದರು.
ಗೌರವ ಡಾಕ್ಟರೇಟ್ ಹಾಗೂ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿಗೆ ಭಾಜನರಾಗಿರುವ ಡಾ. ಆರ್. ಎನ್. ಶೆಟ್ಟಿ, ಶಿಕ್ಷಣ ತಜ್ಞರೂ ಆಗಿದ್ದರು. ಕೃಷಿಕ ಕುಟುಂಬದಲ್ಲಿ ಜನಿಸಿದ ಡಾ. ಆರ್. ಎನ್. ಶೆಟ್ಟಿ ಅವರ ತಂದೆ ಮುರುಡೇಶ್ವರ ದೇಗುಲದಲ್ಲಿ ಆಡಳಿತಾಧಿಕಾರಿಯಾಗಿದ್ದರು. ಮುರುಡೇಶ್ವರದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ ಡಾ. ಆರ್. ಎನ್. ಶೆಟ್ಟಿ, ಶಿರಸಿಯಲ್ಲಿ ಗುತ್ತಿಗೆದಾರನಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಆ ಕಾಲದಲ್ಲಿ ಶಿರಸಿಯಲ್ಲಿ ಕಾಲೇಜುಗಳು ಇಲ್ಲವಾಗಿದ್ದ ಕಾರಣ, ಗುತ್ತಿಗೆದಾರ ವೃತ್ತಿಯನ್ನೇ ಮಾಡುತ್ತಾ, ಅದರಲ್ಲಿ ಯಶಸ್ವಿಯೂ ಆದರು. ಡಾ. ಆರ್. ಎನ್. ಶೆಟ್ಟಿ ಅವರಿಗೆ 24ನೇ ವಯಸ್ಸಿನಲ್ಲಿ ವಿವಾಹವಾಯ್ತು. ಮೂರು ಗಂಡು ಹಾಗೂ ನಾಲ್ವರು ಪುತ್ರಿಯರು ಇದ್ದಾರೆ.
ಮುರುಡೇಶ್ವರ ಕ್ಷೇತ್ರದ ಅಭಿವೃದ್ಧಿ :
ಇಂದು ಪ್ರಮುಖ ಪ್ರವಾಸಿ ತಾಣ ಆಗಿರುವ ಮುರುಡೇಶ್ವರದ ಅಭಿವೃದ್ಧಿಯಲ್ಲಿ ಶಿವನ ಭಕ್ತರಾದ ಡಾ. ಆರ್. ಎನ್. ಶೆಟ್ಟಿ ಅವರ ಪಾತ್ರ ಅಪಾರ. ಮುರುಡೇಶ್ವರ ದೇಗುಲದ 249 ಅಡಿ ಎತ್ತರದ ರಾಜಗೋಪುರ ವಿಶ್ವದ ಅತಿ ಎತ್ತರದ ಗೋಪುರವಾಗಿದ್ದು, ಇದರ ನಿರ್ಮಾಣದಲ್ಲಿ ಡಾ. ಆರ್. ಎನ್. ಶೆಟ್ಟಿ ಅವರು ಸಂಪೂರ್ಣ ಆಸಕ್ತಿ ತೋರಿದ್ದರು. ಅಷ್ಟೇ ಅಲ್ಲ, 123 ಅಡಿ ಎತ್ತರದ ಶಿವನ ಪ್ರತಿಮೆ ನಿರ್ಮಾಣದಲ್ಲೂ ಡಾ. ಆರ್. ಎನ್. ಶೆಟ್ಟಿ ಅವರ ಪಾತ್ರವಿದೆ.
ಉದ್ಯಮಿಯಾಗಿಯೂ ಯಶಸ್ವಿಯಾಗಿದ್ದ ಡಾ. ಆರ್. ಎನ್. ಶೆಟ್ಟಿ ಅವರು ಬರೋಬ್ಬರಿ 2 ಸಾವಿರ ಕೋಟಿ ರೂ. ಮೊತ್ತದ ವಾರ್ಷಿಕ ವಹಿವಾಟು ನಡೆಸುತ್ತಿದ್ದರು. ಆರ್ ಎನ್ ಶೆಟ್ಟಿ & ಕಂಪನಿ ಪ್ರಾರಂಭಿಸಿ, ಹೊನ್ನಾವರ – ಬೆಂಗಳೂರು ರಸ್ತೆಯಲ್ಲಿ ಸೇತುವೆ ನಿರ್ಮಿಸಿದ್ದರು. ಹುಬ್ಬಳ್ಳಿಯಲ್ಲೂ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸಿದ್ದರು. ಹೋಟೆಲ್, ಶಿಕ್ಷಣ ಸಂಸ್ಥೆ, ಟೈಲ್ಸ್, ಸೆರಾಮಿಕ್ಸ್, ವಿದ್ಯುತ್ ಉತ್ಪಾದನೆ, ಮಾರುತಿ ಕಾರ್ ಶೋ ರೂಂ ಸೇರಿದಂತೆ ಹಲವು ಉದ್ಯಮಿಗಳನ್ನು ಆರ್. ಎನ್. ಶೆಟ್ಟಿ & ಕಂಪನಿ ನಡೆಸುತ್ತಿದೆ.





































































































