ಒಮ್ಮೆ ನೋಡ ಬನ್ನಿ ,ರಾಷ್ಟ್ರಕವಿಯ ತವರೂರು….! ಹಚ್ಚ ಹಸಿರಿನ ಮಧ್ಯೆ ನಿಸರ್ಗ ರಮಣೀಯ ತಾಣ – ಕುಪ್ಪಳ್ಳಿ….! ಮಲೆನಾಡಿನ ಸೌಂದರ್ಯದ ಸೊಬಗು ಕುವೆಂಪು ಹುಟ್ಟೂರು ಕುಪ್ಪಳ್ಳಿಯ ರಮಣೀಯ ಸೊಬಗು….! ಸಾಹಿತಿಗಳ ಕಣ್ಣಂಚಿನಲ್ಲಿ ಮನಮೋಹಕವಾದ ಪ್ರವಾಸೋದ್ಯಮದ ಬೆರಗು….! ಭವ್ಯ ಮಲೆನಾಡು -ಕುಪ್ಪಳ್ಳಿ…!
✍ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ಉಡುಪಿ ಜಿಲ್ಲೆ (ಪತ್ರಕರ್ತರು &ಅಂಕಣಕಾರರು) Mob:9632581508
ಸುದ್ದಿ@ ಶಿವಮೊಗ್ಗ :-
ಸುಂದರ ಹಚ್ಚ ಹಸಿರಿನ ವಾತಾವರಣ ಅದುವೇ ಮಲೆನಾಡು ,ಮಲೆನಾಡಿಗೆ ಹೊಂದಿಕೊಂಡಂತೆ ಇರುವ ತೀರ್ಥಹಳ್ಳಿ ಸಮೀಪದ ಹೊಸಳ್ಳಿ ಇಡೀ ಜಗತ್ತಿಗೆ ಪ್ರಸಿದ್ಧಿ .ರಾಷ್ಟ್ರಕವಿ ಕುವೆಂಪು ಅವರ ನೀಡಿದ ಧೀಮಂತ ಕ್ಷೇತ್ರವೇ ಈ ಕುಪ್ಪಳ್ಳಿ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ನೂರಾರು ಜನರು ದಿನಲೂ ಭೇಟಿಕೊಡುತ್ತಿರುವ ಶೈಕ್ಷಣಿಕ ಪ್ರವಾಸೋದ್ಯಮ ಕ್ಷೇತ್ರವಾಗಿ ಮಾರ್ಪಟ್ಟಿದೆ.ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎನ್ನುವ ಶಿರೋನಾಮೆಯೊಂದಿಗೆ ಕುಪ್ಪಳ್ಳಿ ಜಗದಗಲ ಪ್ರಸಿದ್ಧಿ ಆಗುವುದರೊಂದಿಗೆ ಐತಿಹಾಸಿಕ ತಾಣವಾಗಿ ಮಾರ್ಪಟ್ಟಿರುವುದು ನಮ್ಮ ಹೆಮ್ಮೆಯ ಸಂಗತಿ.
ಕುಪ್ಪಳಿ – ಕರ್ನಾಟಕ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಒಂದು ಹಳ್ಳಿ. ರಾಷ್ಟ್ರಕವಿ ಕುವೆಂಪು ಅವರು ಜನಿಸಿದ ಊರು. ಇಲ್ಲಿ ಕುವೆಂಪು ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಲಾಗಿದೆ. ಹಲವು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ತಾಣವಾಗಿದ್ದು ಒಂದು ಪ್ರವಾಸಿ ಸ್ಥಳವಾಗಿಯೂ ರೂಪುಗೊಂಡಿದೆ.ಈ ಕುಪ್ಪಳಿಯ ಹತ್ತಿರ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರ ಕುವೆಂಪು ಕನ್ನಡ ಅಧ್ಯಯನ ಕೇಂದ್ರ ಇದೆ. ದೇಶಿ ವಸ್ತು ಸಂಗ್ರಹಾಲಯ ಕೂಡ ಇದೆ. ಇದು ಕುಪ್ಪಳಿಯಿಂದ ಗಡಿಕಲ್ ನಡುವೆ ಮುಖ್ಯ ರಸ್ತೆಯಲ್ಲಿದೆ. ೧೫೦ ವರ್ಷಗಳಷ್ಟು ಹಳೆಯದಾದ ಕುವೆಂಪು ಅವರು ಬೆಳೆದ ಮನೆಯನ್ನು ೨೦೦೧ ರಲ್ಲಿ ಪುನರ್ ನಿರ್ಮಿಸಲಾಯಿತು. ಮಲೆನಾಡಿನ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿರುವ ಮನೆಗೆ ಎಳ್ಳಷ್ಟು ಕುಂದು ಬರದೆ ಕಣ್ಮನ ಸೆಳೆಯುತ್ತಿದೆ. ಮನೆಯ ಎದುರಿನ ಹೂದೋಟ ಹುಲ್ಲುಹಾಸು ಮೊದಲಿಗೆ ನಮ್ಮನ್ನು ಸ್ವಾಗತಿಸುತ್ತದೆ. ಮುಖ್ಯದ್ವಾರದ ಮೂಲಕ ಮನೆಯನ್ನು ಪ್ರವೇಶಿಸುತ್ತಿದ್ದಂತೆ ಮೂರು ದಿಕ್ಕಿಗೂ ಚೌಕಿಗಳುಳ್ಳ ಮೂರು ಅಂತಸ್ತಿನ ಹೆಮ್ಮನೆಯ ಒಳಾಂಗಣದ ದರ್ಶನವಾಗುತ್ತದೆ. ಅಂಗಳದ ನಡುವಿನ ತುಳಸಿ ಕಟ್ಟೆ ಗಮನ ಸೆಳೆಯುತ್ತದೆ. ಮನೆಯಲ್ಲಿ ದೊಡ್ಡ ಕಲಬಿಗಲು, ಕವಿ ಮದುವೆಯಾದ ಮಂಟಪ, ದಂಡಿಗೆ, ಕವಿಮನೆಯ ಹಳೆಯಬಾಗಿಲು ಮುಂತಾದ ದೊಡ್ಡ ವಸ್ತುಗಳನ್ನು ಇಡಲಾಗಿದೆ. ಇವುಗಳನ್ನು ನೋಡುತ್ತಾ ಮುಂದೆ ಸಾಗಿ ಎಡಕ್ಕಿರುವ ಬಾಗಿಲಿನಿಂದ ಆಚೆ ದಾಟಿದರೆ ಕವಿಯ ಅಜ್ಜಯ್ಯ ಅಭ್ಯಂಜನ ಮಾಡಿದಂಥ ಮಲೆನಾಡ ಬಚ್ಚಲು ಮನೆಯ ಮಾದರಿಯನ್ನು ನೋಡಬಹುದು. ಆಚೆ ಕಣ್ಣಾಡಿಸಿದರೆ ಕೆರೆ, ತೋಟ, ಕಾಡು, ನೀರಿನ ಝರಿ. ಮುಖ್ಯ ಮನೆಗೆ ಮುಂತುದಿಯಲ್ಲಿ ಮೂರು ಹಂತದ ಜಗುಲಿ ಇದೆ. ಇಲ್ಲಿರುವ ಮುಂಡಿಗೆಗಳು ಸುಂದರವಾದ ಕೆತ್ತನೆಯ ಕುಸುರಿ ಕೆಲಸದಿಂದ ಅಲಂಕೃತವಾಗಿವೆ. ಮೇಲ್ಛಾವಣಿಗೂ ವಿಶಿಷ್ಟ ವಾಸ್ತು ವಿನ್ಯಾಸದ ಪಕ್ಕಸಿಗಳನ್ನು ಬಳಸಲಾಗಿದೆ. ಮನೆಯ ತುಂಬೆಲ್ಲ ನೂರಾರು ಮರದ ಕಂಬಗಳದ್ದೆ ಕಾರುಬಾರು. ಹೊರ ಆವರಣದಲ್ಲೇ 4 ಕಂಬಗಳಿವೆ. ಮನೆಯ ಎಲ್ಲಾ ಭಾಗಗಳಲ್ಲಿ ದಪ್ಪ ಹಲಗೆಗಳ ನಾಗೊಂದಿಗೆಗಳಿವೆ. ಜಗುಲಿಯ ಬಲಭಾಗದಲ್ಲಿ ಮೇಜಿನ ಮೇಲೆ ಕವಿಯ ಅರ್ಧಾಕೃತಿಯ ಪ್ರತಿಮೆ ಇದೆ. ಹಿಂಭಾಗದ ಗೋಡೆಯಲ್ಲಿ ಕವಿ ಕಾಲನಕರೆಗೆ ಓಗೊಟ್ಟ ಕಾಲವನ್ನು ಸೂಚಿಸುವ ಸ್ತಬ್ಧವಾಗಿರುವ ಗಡಿಯಾರವಿದೆ. ಜಗುಲಿಯ ಎಡ ಭಾಗದಲ್ಲಿ ಮಂಚ, ಕುರ್ಚಿಗಳಿದ್ದು ಗೊದೆಗಳುನ್ತ ಕರಿಕೋಟು, ಕರಿಟೋಪಿ, ಕಂಬಳಿ ಮುಂತಾದವನ್ನು ನೇಲಿಸಲಾಗಿದೆ. ತಲೆ ತಗ್ಗಿಸಿ ಹೆಬ್ಬಾಗಿಲು ದಾಟಿ ಒಳನಡೆದರೆ ನಡುಮನೆ, ಅದರ ಬಲಕ್ಕೊಂದು ಚಿಕ್ಕ ಕೋಣೆ, ಎಡಕ್ಕೆ ಬಾಣಂತಿ ಕೋಣೆ, ಅದರಾಚೆ ಕದಿಮಾಡುಗಳಿವೆ. ನಡುಮನೆಯ ಗೋಡೆಗುಂಟ ವಿವಿಧ ನಿತ್ಯ ಉಪಯೋಗಿಸುತ್ತಿದ್ದ ವಸ್ತುಗಳನ್ನು ಜೋಡಿಸಲಾಗಿದೆ. ಬಾಣಂತಿಕೋಣೆ ತಾಯಿಯ ಹಾಸಿಗೆ ಮಗುವಿನ ತೊಟ್ಟಿಲುಗಳಿಂದ ಸಜ್ಜಾಗಿದೆ. ಮುಂದಿನ ಕಡಿಮಾಡಿನ ಗೋಡೆಗಳ ಮೇಲೆ ಕವಿ ಕುವೆಂಪುರವರ ಕುಟುಂಬದ ಸದಸ್ಯರ ಮತ್ತು ಅವರ ಹತ್ತಿರದ ಬಂಧುಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. ನಡುಮನೆಯಿಂದ ನೇರ ಒಳನಡೆದರೆ ಅಡುಗೆಮನೆ, ಎಡಭಾಗದಲ್ಲಿ ಒಲೆಸರ, ಹೊಗೆ ಕಂಡಿ , ಗೋಡೆಗಳ ಪಕ್ಕ ಜೋಡಿಸಿಟ್ಟ ಕವಿಮನೆಯ ಪಾತ್ರೆಗಳು, ಮಡಿಕೆ, ಮಣ್ಣಿನ ಸರಗೋಲು, ಕಡಗೋಲು ಕಂಬ, ಅನ್ನ ಬಸಿಯುವ ಬಾಗುಮರಿಗೆ, ಕೊಚ್ಚು ಕೊರಡಾದಿಯಾದ ಹಲವು ಹತ್ತು ಸಲಕರಣೆಗಳನ್ನು ನೋಡಬಹುದು. ಇಲ್ಲಿಂದಲೇ ಉಪ್ಪರಿಗೆಗೆ ಮರದ ಏಣಿ ಏರಿ ಹೋದರೆ ಅಲ್ಲಿ ಸುತ್ತುವರಿದ ಪ್ರಾಂಗಣ. ಅದರಲ್ಲೂ ಹಲವು ಅಪರೂಪದ ವಸ್ತುಗಳ ಜೋಡಣೆ. ಗೋಡೆಗಳ ಮೇಲೆ ಕವಿಶೈಲದ, ಕುಪ್ಪಳ್ಳಿ ಸುತ್ತಲ ಪ್ರಕೃತಿ ಚಿತ್ರಗಳ ಪ್ರದರ್ಶನ. ಇವನ್ನ ನೋಡುತ್ತ ನಡುವಿನ ಕೋಣೆಯನ್ನು ಹೊಕ್ಕರೆ ಅಲ್ಲಿ ಗಾಜಿನ ಪೆಟ್ಟಿಗೆಗಳಲ್ಲಿ ಕವಿ ಬಳಸುತ್ತಿದ್ದ ಪೆನ್ನು, ಬಟ್ಟೆ, ಕನ್ನಡಕ, ಊರುಗೋಲು, ಚಪ್ಪಲಿ,ಅವರ ತಲೆಗೂದಲು ಮುಂತಾದವು, ಕವಿ ಪಡೆದ ಪ್ರಶಸ್ತಿ ಪತ್ರಗಳು, ಪಳಕಗಳು, ಸ್ಮರಣಿಕೆಗಳು ಪೂಜಾ ಸಾಮಾಗ್ರಿಗಳು ಇವನ್ನೆಲ್ಲ ಸುರಕ್ಷಿತವಾಗಿ ಇದಲಾಗಿದೆ. ನಡುವಿನ ಕೊಣೆಯಿಂದ ಮತ್ತೊಂದು ಮಹಡಿಗೆ ಏಣಿಯ ಮೆಟ್ಟಿಲೇರಿ ಬಂದರೆ ಅಲ್ಲಿಯೂ ಗಾಜಿನ ಪೆಟ್ಟಿಗೆಗಳೊಳಗೆ ಕುವೆಂಪು ಅವರ ಸಾಹಿತ್ಯ ಕೃತಿಗಳ ಮೊದಲ ಆವೃತ್ತಿ, ಪರಿಷ್ಕೃತ ಆಧುನಿಕ ಆವೃತ್ತಿಗಳು, ಕವಿಯ ಬಗ್ಗೆ ಇತರ ಲೇಖಕರು ಬರೆದ ಸಾಹಿತ್ಯ ಕೃತಿಗಳನ್ನು ಪ್ರದರ್ಶಿಸಲಾಗಿದೆ. ಸುತ್ತ ಗೋಡೆಗಳಲ್ಲಿ ಕವಿ ಅನೇಕ ಪ್ರಶಸ್ತಿಗಳನ್ನು ಪಡೆದ, ವಿವಿಧ ಗಣ್ಯರು ಅವುಗಳನ್ನು ನೀಡುತ್ತಿರುವ ಸಂದರ್ಭದ ಛಾಯಾಚಿತ್ರಗಳನ್ನು ಇಡಲಾಗಿದೆ. ಕೆಳಗಿಳಿದು ನಿಜಮನೆಯ ಎಡಭಾಗದ ಮತ್ತು ಹಿಂಭಾಗದ ಕಡಿಮಾದುಗಳಲ್ಲಿ ವ್ಯವಸ್ಠೆಗೊಳಿಸಿರುವ ಛಾಯಾಚಿತ್ರಗಳ ಪ್ರದರ್ಶನಕ್ಕೆ ಭೇಟಿ ನೀಡಬಹುದು. ಇಲ್ಲಿ ಕವಿಯ ಮತ್ತು ಅವರ ಒಡನಾಡಿಗಳ ಸ್ಮರಣೀಯ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಇಡೀ ಮನೆಯನ್ನು ನಾವು ಸುತ್ತುವಾಗ ಕಲ್ಲಿನಲ್ಲಿ ಕೆತ್ತಿ ಗೋಡೆಗಳಿಗೆ ಲಗತ್ತಿಸಿರುವ ಕವಿ ಸಂದೇಶಗಳನ್ನು ಸಾರುವ ಸೂಕ್ತಿಗಳನ್ನು ನೋಡುತ್ತೇವೆ. ನಮ್ಮ ಕಿವಿಯ ಮೇಲೆ ಕುವೆಂಪು ಕವಿತೆಗಳ ಸುಮಧುರ ಸಂಗೀತ ಬೀಳುತ್ತಿರುತ್ತದೆ. ವೀಕ್ಷಕ ಮನೆಯ ಯಾವ ಭಾಗದಲ್ಲಿದ್ದರೂ ಇದು ಅವನಿಗೆ ಕೇಳಿಬರುವಂತೆ ಧ್ವನಿವರ್ಧಕ ವ್ಯವಸ್ಥೆ ಮಾಡಲಾಗಿದೆ. ಕುವೆಂಪು ಅಭಿಮಾನಿಗಳಿಗಾಗಿ ಎಡಚೌಕಿಯ ತುದಿಯ ಚಿಕ್ಕಕೋಣೆಯಲ್ಲಿ ಕುವೆಂಪು ಕೃತಿಗಳು, ಅವರ ಕುರಿತ ಪುಸ್ತಕ, ಧ್ವನಿ ಮುದ್ರಿಕೆ, ದೃಶ್ಯಮುದ್ರಿಕೆ, ಛಾಯಾಚಿತ್ರ ಮುಂತಾದವುಗಳ ಸೌಕರ್ಯವಿದೆ. ಕವಿ ಮನೆಯ ಹಿಮ್ಮಗ್ಗುಲಲ್ಲಿರುವ ಬೆಟ್ಟಕ್ಕೆ ಹೋಗುವ ದಾರಿಯುದ್ದಕ್ಕೂ ಅಲ್ಲಲ್ಲಿ ಕಲ್ಲು ಮಂಟಪಗಳಿವೆ. ಗುಡ್ಡವನ್ನು ತಲುಪುತ್ತಿದ್ದಂತೆ ಕವಿ ಸಮಾಧಿ ಕಾಣಸಿಗುತ್ತದೆ. ಈ ತಾಣದ ಸುತ್ತಲೂ ಹಸಿರು ಹಾಸನ್ನು ಬೆಳೆಸಲಾಗಿದೆ. ಇಲ್ಲಿ ದೊಡ್ಡ ವೃತ್ತಾಕಾರದಲ್ಲಿ ವಿಶಿಷ್ಟ ವಿನ್ಯಾಸದಲ್ಲಿ ಜೋಡಿಸಿ ನಿಲ್ಲಿಸಿರುವ ಶಿಲಾಸ್ಮಾರಕಗಳಿವೆ. ಇವು ಈ ಪರಿಸರವನ್ನು ಕಲಾತ್ಮಕಗೊಳಿಸಿವೆ. ಇದನ್ನು ದಾಟಿ ನಡೆದರೆ ಗುಡ್ಡದ ನೆತ್ತಿಯಲ್ಲಿ ಚಿಕ್ಕದೊಂದು ಹಾಸುಬಂಡೆ. ಅದರ ಮೇಲೆ ಟಿ.ಎಸ್.ವಿ, ಬಿ.ಎಮ್.ಶ್ರಿ , ಕುವೆಂಪು, ಪೊ.ಚ.ತೆ ಎಂಬ ಅಕ್ಷರಗಳು ಕೆತ್ತಲ್ಪಟ್ಟಿವೆ. ಆ ಮಹನೀಯರೆಲ್ಲ ಇಲ್ಲಿ ಬಂದಿದ್ದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ನಿಂತು ಪೂರ್ವ ದಿಸೆಯನ್ನು ವೀಕ್ಷಿಸಿದರೆ ಗುಡ್ಡಗಳ ಸಾಲು ಸಾಲು, ಹಸಿರುವನರಾಜಿ, ದಿಗಂತ ವಿಸ್ತಾರ ನೀಲಾಕಾಶ, ನೋಡಿ ಕನ್ಮಣಿಯದಂಥ ರಮಣೀಯ ದೃಶ್ಯ ಕಾಣುತ್ತದೆ. ಕವಿ ಇಲ್ಲಿ ಕುಳಿತು ರಚಿಸಿದ ಸ್ಫೂರ್ತಿ ತಾಣವಿದು. ಇದಕ್ಕೆ ಅವರೇ ಕೊಟ್ಟ ಹೆಸರು ಕವಿಶೈಲ. ಇಲ್ಲಿಂದ ಸೂರ್ಯಾಸ್ತವನ್ನು ನೋಡಬಹುದು. ದೂರದ ಕುಂದಾದ್ರಿ, ಕೊಡಚಾದ್ರಿ ಬೆಟ್ಡಗಳನ್ನೂ ಕಾಣಬಹುದು. ಒಮ್ಮೆ ಬನ್ನಿ ಮಲೆನಾಡಿನ ತಪ್ಪಲಿನ ಕುಪ್ಪಳ್ಳಿ ಹುಟ್ಟೂರಿಗೆ .ದಾಸ ಶ್ರೇಷ್ಠರ ಕವಿಶ್ರೇಷ್ಠರ ಮನಸೂರೆಗೊಳ್ಳುವ ವಿಶಿಷ್ಟ ಪರಿಕಲ್ಪನೆಯ ಮಲೆನಾಡಿನ ಕುಪ್ಪಳ್ಳಿಯ ಜಗದಗಲ ಪ್ರಸಿದ್ಧಿ ಪ್ರವಾಸೋದ್ಯಮದಲ್ಲಿ ತನ್ನದೇ ಆದಂತ ಛಾಪು ಮೂಡಿಸಿದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ ಬದುಕಿನ ಮನೆ.ಒಮ್ಮೆ ಬನ್ನಿ ಪ್ರವಾಸೋದ್ಯಮದ ದಾಪುಗಾಲಲ್ಲಿ ರಾಷ್ಟ್ರಕವಿಯ ನೆನಪು ಮಾಡೋಣ.ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಇವರ ವಿಶೇಷವಾದಂತಹ ಮನೆಯ ವಾತಾವರಣವನ್ನು ಸವಿಯೋಣ ಬನ್ನಿ….!