ಬಂಟ್ವಾಳದ ಕರೋಪಾಡಿ ಗ್ರಾಮದ ಒಡಿಯೂರು ಕ್ಷೇತ್ರದ ಹೆಸರು ಕೇಳದೆ ಇರುವವರು ಕಡಿಮೆ. ಒಡಿಯೂರು ಶ್ರೀ ಕ್ಷೇತ್ರದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಪರಮ ಶಿಷ್ಯ ಭಕ್ತರಾದ ಶ್ರೀ ಸುಬ್ರಹ್ಮಣ್ಯ ಉಷಾ ದಂಪತಿಗಳ ಸುಪುತ್ರನಾಗಿ 24.03.2000 ದಲ್ಲಿ ಜನಿಸಿದ ಗುರುತೇಜ ಬಾಲ್ಯದಲ್ಲೇ ಭರತನಾಟ್ಯ ಹಾಗೂ ಯಕ್ಷಗಾನ ನಾಟ್ಯಾಭ್ಯಾಸ ಪ್ರಾರಂಭ ಮಾಡಿದರು. ಯಕ್ಷಗಾನವನ್ನು ಸ್ವತಃ ಕಲಾವಿದೆಯಾದ ನಾಟ್ಯ ಗುರು ಸಂಘಟಕಿಯೂ ಆದ ಹೆತ್ತಮ್ಮ ಶ್ರೀಮತಿ ಉಷಾ ಶೆಟ್ಟಿ ಒಡಿಯೂರು ಹಾಗೂ ತಂದೆಯವರಿಂದ ಕಲಿತರು. ಆಮೇಲೆ ಶಾಲಾ ದಿನಗಳಲ್ಲಿ ಶ್ರೀ ಶೇಖರ ಶೆಟ್ಟಿ ಬಾಯಾರು ಕುಳ್ಯಾರು, ಶ್ರೀ ಉಂಡೆಮನೆ ಕೃಷ್ಣ ಭಟ್ ಮತ್ತು ಶ್ರೀ ಸಬ್ಬಣಕೋಡಿ ರಾಮ ಭಟ್ ಅವರೆಲ್ಲರಿಂದ ಶಾಸ್ತ್ರೀಯವಾಗಿ ನಾಟ್ಯಾಭ್ಯಾಸ ಮಾಡಿ ತಾಯಿಯ ತಂಡದಲ್ಲಿ, ಶಾಲಾ ಕಾಲೇಜುಗಳಲ್ಲಿ ಒಡಿಯೂರು ಕ್ಷೇತ್ರದಲ್ಲೇ ವೇಷ ಮಾಡುತ್ತಿದ್ದ ತೇಜುವಿಗೆ ತನ್ನ ವಿದ್ಯಾಭ್ಯಾಸದ ಜೊತೆಗೆ ಭರತನಾಟ್ಯ ಮತ್ತು ಕನ್ನಡ ಯಕ್ಷಗಾನದಲ್ಲಿ ಆಸಕ್ತಿ ಹೆಚ್ಚಾಯಿತು. ಅಮ್ಮನ ಸ್ಪೂರ್ತಿ ಹಾಗೂ ಒತ್ತಾಯದ ಮೇರೆಗೆ ಕಾಲೇಜು ದಿನಗಳಲ್ಲೇ ಎಡನೀರಿನ ಶ್ರೀ ಶ್ರೀ ಕೇಶವಾನಂದ ಸ್ವಾಮೀಜಿಯವರ ಕೃಪಾಶೀರ್ವಾದದಿಂದ ಆಗಿನ ಶ್ರೀ ಎಡನೀರು ಮೇಳದಲ್ಲಿ ಸ್ತ್ರೀ ವೇಷಕ್ಕೆ ಸೇರಿಕೊಂಡರು. ಅಲ್ಲಿ ಭಾಗವತ ಶ್ರೇಷ್ಠ ಶ್ರೀ ದಿನೇಶ ಅಮ್ಮಣ್ಣಾಯರ ನಿರ್ದೇಶನ, ಹಿರಿಯರಾದ ಪುತ್ತೂರು ಶ್ರೀಧರ ಭಂಡಾರಿ, ಭಾಗವತ ಪುತ್ತೂರು ರಮೇಶ್ ಭಟ್ ಹಾಗೂ ಹಿರಿಯ ಕಲಾವಿದರ ಮಾರ್ಗದರ್ಶನದಿಂದ 3 ವರ್ಷಗಳ ಮೇಳದ ತಿರುಗಾಟ ನಡೆಸಿದ ಗುರುತೇಜ ಆಗ ಪಿ ಯು ಸಿ ವಿದ್ಯಾರ್ಥಿ ಆಗಿದ್ದರು.
ಎಡನೀರು ಮೇಳ ನಿಂತ ಮೇಲೆ ತನ್ನ ಬಿ ಕಾಂ ಪದವಿ ಮುಗಿಸಿದ ಈತನಿಗೆ ಯಕ್ಷಗಾನದ ವ್ಯಾಮೋಹ ಬತ್ತಲಿಲ್ಲ. ಬದಲಾಗಿ ಅದು ಹೆಚ್ಚಾಗಿ 2020ರಲ್ಲಿ ಪುತ್ತೂರು ವಿವೇಕಾನಂದ ಲಾ ಕಾಲೇಜಿನಲ್ಲಿ ಕಾನೂನು ಪದವಿ ಯ ಮೊದಲ ವರ್ಷ ಜೊತೆಯಲ್ಲಿ ಕಟೀಲು ಮೇಳದ 1ನೆಯ ಸೆಟ್ಟಿಗೆ ಸೇರಿ ಮಾಲಿನಿ ಹಾಗೂ ಇತರೆ ವೇಷಗಳ ಜತೆ ಹಿರಿಯ ಸ್ತ್ರೀ ವೇಷಧಾರಿಗಳ ಅನುಪಸ್ಥಿತಿಗೆ ಅಷ್ಟಭುಜೆ ಶ್ರೀದೇವಿಯ ಪಾತ್ರವನ್ನೂ ನಿರ್ವಹಿಸಿದರು. ಅಲ್ಲಿ ಭಾಗವತ ಅಂಡಾಲರು, ವಿಷ್ಣು ಶರ್ಮ, ಮರಕಡ ಲಕ್ಷ್ಮಣರ ಮಾರ್ಗದರ್ಶನವನ್ನು ನೆನಪಿಸುತ್ತಾರೆ. ಮರುವರ್ಷ 2021ರಲ್ಲಿ 5ನೇ ಸೆಟ್ನಲ್ಲಿ 2ನೇ ಸ್ತ್ರೀ ವೇಷಧಾರಿಯಾಗಿ (ಮಾಲಿನಿ) ತಯಾರಾದ ಇವರು ಆ ವರ್ಷ ಹಿರಿಯ ಕಲಾವಿದರೂ ಮೇಳದ ಪ್ರಬಂಧಕರೂ ಆದ ಸುಣ್ಣಂಬಳ ವಿಶ್ವೇಶ್ವರ ಭಟ್ಟರ ಮಾರ್ಗದರ್ಶನವನ್ನು ನೆನಪಿಸಿಕೊಳ್ಳುತ್ತಾರೆ. ಅಲ್ಲದೇ ಭಾಗವತರಾದ ಪದ್ಯಾಣ ಗೋವಿಂದ ಭಟ್ಟರು, ಪ್ರದೀಪ್ ಗಟ್ಟಿ, ಕಲಾವಿದ ಪ್ರಮುಖರಾದ ಪನೆಯಾಲ, ಸಾಣೂರು, ರವಿ ಮುಂಡಾಜೆ, ಹಾಸ್ಯಗಾರ ಮುವ್ವಾರರ ಅನುಭವದ ಧಾರೆಗೆ ಕೃತಜ್ಞತಾಸ್ತುತಿ ಮಾಡುವ ಗುರುತೇಜ ಈ ಬಾರಿ 2022 ರಲ್ಲಿ ತನ್ನ ಎಲ್. ಎಲ್. ಬಿ (ಕಾನೂನು) ಪದವಿಯ ಕೊನೆಯ ವರುಷದಲ್ಲಿ ಕಲಿಯುವುದರ ಜೊತೆಗೆ ಶ್ರೀ ಕಟೀಲು ಮೇಳದ 2ನೇ ಸೆಟ್ಟಿನಲ್ಲಿ ಶ್ರೀ ರಮೇಶ ಭಟ್ಟರ ತೆರವಾದ ಮುಖ್ಯ ಸ್ತ್ರೀವೇಷದ ಆ ಸ್ಥಾನಕ್ಕೆ ಕೇವಲ 22 ವಸಂತಗಳನ್ನೂ ದಾಟದ ಈಗಷ್ಟೇ 6 ನೇ ವರ್ಷದ ತಿರುಗಾಟಕ್ಕೇ ಪಾದಾರ್ಪಣೆ ಮಾಡಿದ ಚಿರಯುವಕ ಗುರುತೇಜರಿಗೆ ಊಹಿಸಲಾಗದ ಕಲ್ಪನೆಗೂ ನಿಲುಕದ ಭಡ್ತಿ ಎಂದರೆ ಶ್ರೀ ಕಟೀಲು ದುರ್ಗಾಪರಮೆಶ್ವರೀ ಅಮ್ಮನವರ ಅನುಗ್ರಹ ವಿಶೇಷ ಅಲ್ಲದೇ ಮತ್ತಿನ್ನೇನು???
ಇವರ ನಾಟ್ಯ, ಅಭಿನಯ, ಅರ್ಥಗಾರಿಕೆ, ಹಾವಭಾವ, ರೂಪ, ಗುಣಸ್ವಭಾವ ಹೀಗೆ ಎಲ್ಲವನ್ನೂ ಅಳೆದು ತೂಗಿ ಈ ಹಾಲು ಗಲ್ಲದ ಯುವಕನಿಗೆ ಅತಿ ದೊಡ್ಡ ಜವಾಬ್ದಾರಿಯನ್ನು ಹೆಗಲ ಮೇಲೆ ಹಾಕಿದ್ದಾರೆ ಶ್ರೀ ಕಟೀಲಿನ ಆಸ್ರಣ್ಣ ಬಂಧುಗಳು, ಮೇಳದ ಯಜಮಾನರು, ಹಾಗೂ ಆರೂ ಮೇಳಗಳ ಪ್ರಬಂಧಕ ಮುಖ್ಯರಾದ ಶ್ರೀ ಸುಣ್ಣಂಬಳ ವಿಶ್ವಣ್ಣ. ಈ ಬಹಳ ದೊಡ್ಡ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿಕೊಂಡು ತನ್ನನ್ನು ತಾನರಿತು ಮೆರೆಯಬೇಕಾದರೆ ಈ ಬಾರಿ ಭಾಗವತದ್ವಯರಾದ ಬಲಿಪ ಶಿವಶಂಕರ ಭಟ್, ರಮೇಶ ಭಟ್ ಪುತ್ತೂರು, ಮುರಾರಿ ಕಡಂಬಳಿತ್ತಾಯರು, ಹಿರಿಯ ಕಲಾವಿದರಾದ ದಿನಕರ ಗೋಖಲೆ, ವಿಷ್ಣು ಶರ್ಮ ವಾಟೆಪಡ್ಪು, ಗಣೇಶ್ ಚಂದ್ರಮಂಡಲ ಇವರೆಲ್ಲರ ಮಾರ್ಗದರ್ಶನದಲ್ಲಿ
ಕಲಾತಪಸ್ಸು ಮಾಡುವ ಅನಿವಾರ್ಯತೆ ಇವರ ಮೇಲಿದೆ ಎಂದರೆ ತಪ್ಪಾಗದು ತಾನೇ? ???
ಇದಕ್ಕೆಲ್ಲ ಮೂಲಕಾರಣ ಏನೆಂದು ಬಲ್ಲಿರಾ? ಭರತನಾಟ್ಯದಲ್ಲಿ ವಿದ್ವತ್ ಪಡೆದ ಈ ಯುವಕ ಗುರುಗಳಾದ ಬಾಲಕೃಷ್ಣ ಮಂಜೇಶ್ವರ, ದೀಪಕ್ ಕುಮಾರ್, ಸವಿತಾ ಜೀವನ್ ಹಾಗೂ ಚಂದ್ರಶೇಖರ ನಾವಡರಿಂದ ಕಲಿತ ತೇಜು ನ್ಯಾಷನಲ್ ಲೆವೆಲ್ನಲ್ಲಿ ಅಖಿಲ ಭಾರತ ಸಾಂಸ್ಕೃತಿಕ ಉತ್ಸವದಲ್ಲಿ ಭಾರತನಾಟ್ಯ ಮತ್ತು ಕೂಚುಪುಡಿ ವಿಭಾಗದಲ್ಲಿ ವಡೋದರ, ನಾಗಪುರ್ ಹಾಗೂ ಡೆಹರಾಡೂನ್ ನಲ್ಲಿ ಸತತ ಗೋಲ್ಡ್ ಮೆಡಲ್ ಪಡೆದ ಹೆಮ್ಮೆಯ ಕಲಾವಿದ ತೇಜು ಮುಂದೆ ಭರತನಾಟ್ಯ ತರಗತಿ ನಡೆಸುವ ಯೋಚನೆ ಯೋಜನೆಯಲ್ಲಿದ್ದಾರೆ.
ಗುರುತೇಜ ಶೆಟ್ಟಿ ಒಡಿಯೂರು ಇವರ ಮುಂದಿನ ಕಲಾಯಾನಕ್ಕೆ ತಾಯಿ ಶ್ರೀ ಭ್ರಾಮರಿ ಅನುಗ್ರಹಿಸಲಿ. ಗುರುಗಳ ಆಶೀರ್ವಾದ ಮಂತ್ರಾಕ್ಷತೆ ಶಿರದ ಮೇಲಿರಲಿ ಹಿರಿ ಕಿರಿಯ ಕಲಾವಿದರ ಸಹಕಾರ ದೊರಕಲಿ ಎನ್ನುವ ಹಾರೈಕೆಯೂ ನಮ್ಮ ನಿಮ್ಮೆಲ್ಲರ ಅಭಿಮಾನದ ಚಪ್ಪಾಳೆ ಇವರ ಮೇಲೆ ಇರಲಿ.