ವೃತ್ತಿಪರ ಶ್ರೇಷ್ಠತೆ ಉತ್ತೇಜಿಸಲು ಐಬಿಸಿಸಿಐ ಶ್ರಮಿಸುತ್ತಿದೆ : ಕೆ.ಸಿ.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ನ.23: ಉದ್ಯಮವನ್ನು ಪ್ರಾರಂಭಿಸುವ ಮೊದಲು ಕೆಲವು ವ್ಯವಹಾರ ಅನುಭವ ಪಡೆದು ಉದ್ಯಮದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದ್ಯೆ. ಉದ್ಯಮಶೀಲತೆ ಮತ್ತು ವೃತ್ತಿಪರ ಶ್ರೇಷ್ಠತೆಯನ್ನು ಉತ್ತೇಜಿಸಲು ಐಬಿಸಿಸಿಐ ಗಮನಾರ್ಹ ಪಾತ್ರ ವಹಿಸುತ್ತದೆ. ನಮ್ಮಲ್ಲಿನ ಉದ್ಯಮಶೀಲರ ಸಮಸ್ಯೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸ್ವಂತಕ್ಕೆ ಲಾಭೋದ್ದೇಶವಿಲ್ಲದ ಐಬಿಸಿಸಿಐ ಉದ್ಯಮಶೀಲರ ಸರ್ಕಾರೇತರ ಸಂಸ್ಥೆ ಇದಾಗಿದೆ. ಉದ್ಯಮಿಗಳು ಮತ್ತು ಉದ್ಯಮ, ವ್ಯಾಪಾರ, ವ್ಯವಹಾರಗಳ ಸಮನ್ವಯಕವಾಗಿ ಇದು ಶ್ರಮಿಸುತ್ತಿದ್ದು, ಯುವ ಉದ್ಯಮಿಗಳಲ್ಲಿ ವ್ಯವಹಾರ ಸಾಮರ್ಥ್ಯ ನಿರ್ಮಾಣ ಮತ್ತು ಉದ್ಯಮಗಳ ವೇಗವರ್ಧಕಗಳೊಂದಿಗೆ ಅವಕಾಶ ಸಂಪರ್ಕಿಸಲು ಮಾರ್ಗದರ್ಶನ ನೀಡುತ್ತದೆ ಎಂದು ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ (ಐಬಿಸಿಸಿಐ) ಸಂಸ್ಥೆಯ ಕಾರ್ಯಾಧ್ಯಕ್ಷ ಕೆ.ಸಿ.ಶೆಟ್ಟಿ (ಕುತ್ಪಾಡಿ ಚಂದ್ರ ಶೆಟ್ಟಿ) ತಿಳಿಸಿದರು.
ಕಳೆದ ಬುಧವಾರ ಸಂಜೆ ಅಂಧೇರಿ ಪೂರ್ವದಲ್ಲಿನ ಸಾಕಿನಾಕಾದ ಹೋಟೆಲ್ ಪೆನಿನ್ಸುಲಾ ಗ್ರ್ಯಾಂಡ್ನ ಸಭಾಗೃಹದಲ್ಲಿ ಐಬಿಸಿಸಿಐ ಸಂಸ್ಥೆ ಆಯೋಜಿಸಿದ್ದ ಜ್ಞಾನ ಶೃಂಗಸಭೆ-2ರ ಅಧ್ಯಕ್ಷತೆ ವಹಿಸಿ ಪದಾಧಿಕಾರಿಗಳನ್ನೊಳ ಗೊಂಡು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಕೆ.ಸಿ.ಶೆಟ್ಟಿ ಮಾತನಾಡಿದರು.
ಐಬಿಸಿಸಿಐ ಪೊವಾಯಿ ಚಾಂದಿವಲಿಯಲ್ಲಿ ದೊಡ್ಡ ಕಚೇರಿಯನ್ನು ಹೊಂದಿದ್ದು ನಮ್ಮಲ್ಲಿನ ಉದ್ಯಮಿಗಳು ನಿಯಮ ಮತ್ತು ಷರತ್ತುಗಳೊಂದಿಗೆ ಈ ಕಚೇರಿಯನ್ನು ಬಳಸಬಹುದಾಗಿದೆ. ಬಂಟ ಸಾಧಕ ಉದ್ಯಮಿಗಳಿಗಾಗಿ ಕೈಗಾರಿಕಾ ವಿದೇಶ ಭೇಟಿ, ಮಾರ್ಚ್ನಲ್ಲಿ ಸ್ಟಾರ್ ಅಚೀವರ್ಸ್ ಅವಾರ್ಡ್ 2023, ಕೈಗೊಂಡಿದ್ದೇವೆ. ಶೀಘ್ರದಲ್ಲೇ ಬೆಂಗಳೂರು ಮತ್ತು ಪುಣೆಯಲ್ಲೂ ಐಬಿಸಿಸಿಐ ಶಾಖೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿವೆ ಎಂದು ಕೆ.ಸಿ ಶೆಟ್ಟಿ ತಮ್ಮ ಉದ್ಯಮಶೀಲ ಅನುಭವ ಹಂಚಿಕೊಂಡರು. ಅಂತೆಯೇ ಕೆನಡಾ (ಯುಕೆ), ಅಮೇರಿಕಾ (ಯುಎಸ್ಎ) ಇಲ್ಲೂ ಐಬಿಸಿಸಿಐ ಕಚೇರಿಯನ್ನು ಆರಂಭಿಸುವ ಉದ್ದೇಶ ಹೊಂದಿದ್ದೇವೆ. ಆದುದರಿಂದ ಐಬಿಸಿಸಿಐ ಬಂಟ ಉದ್ಯಮಿಗಳೆಲ್ಲರೂ ಸದಸ್ಯರಾಗಲು ಆಹ್ವಾನಿಸುವೆ ಎಂದೂ ಕೆ.ಸಿ.ಶೆಟ್ಟಿ ತಿಳಿಸಿದರು.
ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಅಭ್ಯಾಗತರಾಗಿದ್ದು ನಾಡಿನ ಹೆಸರಾಂತ ಸಂಪನ್ಮೂಲ ವ್ಯಕ್ತಿ, ಕೋಟಕ್ ಎಎಂಸಿ ಇದರ ವ್ಯವಸ್ಥಾಪಕ ನಿರ್ದೇಶಕ ನಿಲೇಶ್ ಶ್ಹಾ ಅವರು `ಭಾರತೀಯ ಆಥಿರ್ಕತೆ ಮತ್ತು ಇಕ್ವಿಟಿ ಮಾರುಕಟ್ಟೆಗಳ ಮೇಲಿನ ದೃಷ್ಟಿಕೋನ’ ವಿಷಯದಲ್ಲಿ ಹಾಗೂ ಸಿಂಘಿ ಸಲಹಾ ಸಂಸ್ಥೆಯ ಸಂಸ್ಥಾಪಕ, ಆಡಳಿತ ನಿರ್ದೇಶಕ ಮಹೇಶ್ ಸಿಂಘಿ ಅವರು `ತಡೆರಹಿತ ಬೆಳವಣಿಗೆಗಾಗಿ ವ್ಯಾಪಾರ ನಿರ್ಮಿಸುವುದು-ಬೆಳೆಸಿರಿ ಅಥವಾ ನಿರ್ಗಮಿಸಿರಿ’ ವಿಷಯದಲ್ಲಿ ಮಾಹಿತಿ ಕಾರ್ಯಗಾರ ನಡೆಸಿದರು. ಬಳಿಕ ಐಬಿಸಿಸಿಐ ಸದಸ್ಯರು, ಸಭಿಕ ಮಹಾನೀಯರು ಸಂಪನ್ಮೂಲ ಮೇಧಾವಿಗಳೊಂದಿಗೆ ಚರ್ಚೆ ನಡೆಸಿದ್ದು ತಜ್ಞರು ಪ್ರಶ್ನೋತ್ತರಗಳಿಗೆ ಉತ್ತರಿಸಿ ಸಲಹೆಗಳನ್ನಿತ್ತರು.
ನಿಲೇಶ್ ಶ್ಹಾ ಕಾರ್ಯಗಾರ ನಡೆಸಿ ವಿಶ್ವದಲ್ಲಿ ಭಾರತ ಮಾತ್ರ ನೈಸರ್ಗಿಕ ಆಥಿರ್ಕತೆಯನ್ನು ಹೊಂದಿದ್ದು, ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ಜಿಡಿಪಿ ಅನುಪಾತವನ್ನು ಸುಧಾರಿಸಿದೆ. ಬೇರೆ ಯಾವ ದೇಶವೂ ಈ ಸಾಧನೆ ಮಾಡಿಲ್ಲ. 2014ರಲ್ಲಿ ಭಾರತವು 10ನೇ ಸ್ಥಾನದಲ್ಲಿದ್ದು 2022ರಲ್ಲಿ ಭಾರತವು ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ. ಭಾರತವು ಸರಕುಗಳನ್ನು ರಫ್ತು ಮಾಡುತ್ತಿದ್ದು ಇದರಿಂದ ನಮ್ಮ ಆಥಿರ್ಕತೆಯಲ್ಲಿ ಸುಧಾರಣೆ ತಂದಿದೆ. 2030ರಲ್ಲಿ ನಮ್ಮ ರಾಷ್ಟ್ರವು ವಿಶ್ವದಲ್ಲೇ 3ನೇ ಸ್ಥಾನವನ್ನು ಗಳಿಸುವುದು ಖಚಿತ ಎಂದರು.
ಭಾರತವು ವಾಣಿಜ್ಯೋದ್ಯಮಿಗಳ ನಾಡು ಆಗಿದ್ದು ರೈತ, ಚಾಯ್ವಾಲಾ, ಪಾನ್ವಾಲಾ ಕೂಡ ಇಲ್ಲಿ ಉದ್ಯಮಿಗಳಾಗಿ ಮೆರೆಯುತ್ತಿದ್ದಾರೆ. ಎಲ್ಲರೂ ಕಷ್ಟನಷ್ಟಗಳನ್ನು ಎದುರಿಸಿ ಮಾರುಕಟ್ಟೆಯಿಂದ ವಸ್ತುಗಳನ್ನು ತಂದು ಬೆಳೆ ಉತ್ಪಾದಿಸಿ ಮಾರಾಟ ಮಾಡುತ್ತಾರೆ. ವ್ಯವಹಾರದಲ್ಲಿ ಒಬ್ಬರು ರಿಸ್ಕ್ ತೆಗೆದುಕೊಂಡಾಗ ಮಾತ್ರ ಭವಿಷ್ಯದಲ್ಲಿ ಪ್ರತಿಫಲ ಪಡೆಯಲು ಸಾಧ್ಯವಾಗುವುದು. ಆದುದರಿಂದಲೇ ವ್ಯಾಪಾರವು ದೈನಂದಿನ ಆಧಾರದ ಮೇಲೆ ನಿರಂತರ ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯವಾಗಿದೆ. ನೀವು ಅಪಾಯವನ್ನು ತೆಗೆದುಕೊಳ್ಳದೆ, ಉದ್ಯಮ ಬೆಳೆಸಲು ಬಯಸಿದರೆ ಉದ್ಯಮದ ಕನಸು ನನಸಾಗದು ಎಂದು ಮಹೇಶ್ ಸಿಂಘಿ ತಿಳಿಸಿದರು.
ಬಂಟರಲ್ಲಿನ ವಿವಿಧ ಕ್ಷೇತ್ರಗಳ ಉದ್ಯಮಿಗಳು, ವ್ಯವಹಾರ ಪರಿಣತರು ಜೊತೆಗೂಡಿ ತಮ್ಮೊಳಗಿನ ಉದ್ಯಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಸ್ತುತ ಬಂಟ್ಸ್ ಚೇಂಬರ್ ನಂತಹ ಉದ್ಯಮಶೀಲತಾ ಸಂಸ್ಥೆಗಳ ಅಗತ್ಯವಿದೆ. ಉದ್ಯಮಗಳ ಪರಿಹಾರಗಳನ್ನು ಹುಡುಕಲು ಮತ್ತು ಸವಾಲುಗಳನ್ನು ಜಯಿಸಲು ಉದ್ಯಮಿಗಳ ಮುಂದಿರುವ ಅಸಾಧ್ಯವಾದ ವಿಷಯಗಳನ್ನು ಸಾಧ್ಯವಾಗಿಸುವ ಸೂಕ್ತ ವೇದಿಕೆಯೇ ಐಬಿಸಿಸಿಐ. ಉದ್ಯಮವನ್ನು ಸವಾಲುಗಳನ್ನಾಗಿ ಸ್ವೀಕರಿಸಿ ಯಶಸ್ಸು ಸಾಧಿಸಲು ಒಕ್ಕೂಟ ಇದಾಗಿದ್ದು ಬಂಟರಲ್ಲಿನ ಯುವ ಉದ್ಯಮಿಗಳು ಇದರ ಸದುಪಯೋಗ ಪಡೆಯಬೇಕು. ತಮ್ಮ ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಆಧುನಿಕ ವ್ಯವಹಾರಜ್ಞಾನ ತಿಳಿಯುವ ಅಗತ್ಯವಿದೆ. ಅಂತೆಯೇ ಪ್ರಸಕ್ತ ಪದವಿಗಳು ಮತ್ತು ವಿದ್ಯಾರ್ಹತೆಗಳು ಸದ್ಯ ವ್ಯಾಪಾರ, ವ್ಯವಹಾರದ ಹಿಂದೆ ಪ್ರಾಯೋಗಿಕವಾಗಿ ತಿಳಿಯುವಲ್ಲಿ ಬಂಟ್ಸ್ ಚೇಂಬರ್ ಸಹಕಾರಿಯಾಗಿದೆ. ಐಬಿಸಿಸಿಐ ಹೇಗೆ ಸ್ಥಾಪಿಸಿತು ಮತ್ತು ಮುನ್ನಡೆಯುತ್ತಿದೆ ಹಾಗೂ ಯಶಸ್ವಿ ಉದ್ಯಮಿ ಮತ್ತು ವ್ಯಾಪಾರಕ್ಕಾಗಿ ಸ್ಪಂದಿಸುವುದಕ್ಕೆ ಅನ್ನುವುದಕ್ಕೆ ಇಂತಹ ಕಾರ್ಯಗಾರಗಳು ಸಾಕ್ಷಿಯಾಗಿವೆ ಎಂದು ಚಂದ್ರಹಾಸ ಕೆ.ಶೆಟ್ಟಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಕಂದಾಯ ಸೇವೆ, ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ ಹಿರಿಯ ಅಧಿಕಾರಿ, ಭಾರತದ ಸಚಿವಾಲಯದ ಶಿಪ್ಪಿಂಗ್ ಮಾಜಿ ಮಹಾನಿರ್ದೇಶಕ ದೀಪಕ್ ಶೆಟ್ಟಿ, ಸಿಎ| ಎನ್.ಬಿ ಶೆಟ್ಟಿ, ಸಿಎ| ಶಂಕರ್ ಬಿ.ಶೆಟ್ಟಿ, ಸಿಎ| ಸಂಜೀವ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಉಪಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಮತ್ತಿತರ ಗಣ್ಯರು ವಿಶೇಷವಾಗಿ ಉಪಸ್ಥಿತರಿದ್ದರು.
ಲುಮೆನ್ಸ್ ಗ್ರೂಪ್ ಆಫ್ ಕಂಪನಿ (ಕೆ.ಸಿ. ಶೆಟ್ಟಿ), ಕೆನರಾ ಟ್ರಾವೆಲ್ಸ್ (ಎಸ್.ಬಿ.ಶೆಟ್ಟಿ), ವಸುಧಾ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ (ಶ್ರೀನಾಥ್ ಶೆಟ್ಟಿ), ಗ್ರೋಮೋರ್ ಫೈನಾನ್ಶಿಯಲ್ ಸರ್ವಿಸಸ್ (ಪ್ರಸಾದ್ ಶೆಟ್ಟಿ), ಆಧಿತಿ ಎಸೆನ್ಷಿಯಲ್ಸ್ (ಭರತ್ ಶೆಟ್ಟಿ) ನಿಸರ್ಗ (ಶ್ರೀನಿವಾಸ ಶೆಟ್ಟಿ) ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಸಂಸ್ಥೆಗಳ ಮುಖ್ಯಸ್ಥರನ್ನು ಪದಾಧಿಕಾರಿಗಳು ಗೌರವಿಸಿದರು.
ಐಬಿಸಿಸಿಐ ನಿರ್ದೇಶಕರಾದ ಅನಿಲ್ ಶೆಟ್ಟಿ, ಬಿ.ಬಿ ಶೆಟ್ಟಿ, ದಿನೇಶ್ಚಂದ್ರ ಹೆಗ್ಡೆ, ಜಯ ಸೂಡಾ, ಕಿಶನ್ ಜೆ.ಶೆಟ್ಟಿ, ಪ್ರದೀಪ್ ಶೆಟ್ಟಿ, ಆರ್.ಕೆ ಶೆಟ್ಟಿ, ಹಾಗೂ ಐಬಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಸದಸ್ಯರನೇಕರು ಸೇರಿದಂತೆ ಹಾಜರಿದ್ದು ಐಬಿಸಿಸಿಐ ಕೆ.ಸಿ.ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಎಸ್.ಬಿ.ಶೆಟ್ಟಿ, ಕೋಶಾಧಿಕಾರಿ ಪ್ರಸಾದ್ ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀನಿವಾಸ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳು, ಗಣ್ಯರಿಗೆ ಪುಷ್ಪಗುಪ್ಛಗಳನ್ನಿತ್ತು ಗೌರವಿಸಿದರು. ಕಾರ್ಯದರ್ಶಿ ಶ್ರೀನಾಥ್ ಶೆಟ್ಟಿ ಪ್ರಸ್ತಾವನೆಗೈದು, ಅತಿಥಿsಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಜೊತೆ ಕೋಶಾಧಿಕಾರಿ ನಿಶಿತ್ ಶೆಟ್ಟಿ ಧನ್ಯವದಿಸಿದರು.