ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಚನಿಲ ತಿಮ್ಮಪ್ಪ ಶೆಟ್ಟಿಯವರು ನ.10ರಂದು ಮಂಗಳೂರು ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಬೂಡಿಯಾರ್ ರಾಧಾಕೃಷ್ಣ ರೈ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಡಾ. ಎಂ.ಕೆ.ಪ್ರಸಾದ್, ದಿಶಾ ನಾಮನಿರ್ದೇಶಿತ ಸದಸ್ಯ ರಾಮದಾಸ್ ಹಾರಾಡಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಚನಿಲ ತಿಮ್ಮಪ್ಪ ಶೆಟ್ಟಿಯವರು ಬಿಜೆಪಿಯ ಸಕ್ರಿಯ ನಾಯಕರಾಗಿದ್ದು ಗ್ರಾಮ ಸಮಿತಿಯಿಂದ ಜಿಲ್ಲಾ ಸಮಿತಿಯ ತನಕ ಪಕ್ಷದಲ್ಲಿ ಅನ್ಯಾನ್ಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು. ಡಿ.ವಿ.ಸದಾನಂದ ಗೌಡ ಅವರು ವಿಧಾನ ಸಭೆಗೆ ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಂದರ್ಭದಲ್ಲಿಯೇ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾಗಿ ಬಿಜೆಪಿ ಗೆಲುವಿಗೆ ಕಾರಣಕರ್ತರಾಗಿದ್ದ ತಿಮ್ಮಪ್ಪ ಶೆಟ್ಟಿಯವರು ಒಟ್ಟು ಮೂರು ಬಾರಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರಸ್ತುತ ಶಾಸಕರಾಗಿರುವ ಸಂಜೀವ ಮಠಂದೂರು ಅವರು ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿರುವ ಸಂದರ್ಭದಲ್ಲೂ ಆರಂಭದಲ್ಲಿ ಚನಿಲ ತಿಮ್ಮಪ್ಪ ಶೆಟ್ಟಿಯವರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾಗಿದ್ದರು. ತಾ.ಪಂ ಅಧ್ಯಕ್ಷರಾಗಿ, ಅಂತರ್ರಾಜ್ಯ ಸಹಕಾರಿ ಸಂಸ್ಥೆಯಾಗಿರುವ ಕ್ಯಾಂಪ್ಕೋ ನಿರ್ದೇಶಕರಾಗಿ, ಎಸ್ಕೆಎಸಿಎಮ್ಎಸ್ ನಿರ್ದೇಶಕಾಗಿ, ಬಲ್ನಾಡು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಧಾರ್ಮಿಕ ಕ್ಷೇತ್ರದಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು ಸುಮಾರು 26 ವರ್ಷಗಳ ಕಾಲ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿಯೂ ಸೇವೆಗೈದ ಅವರು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿಯೂ ಚನಿಲ ಸೇವೆ ಸಲ್ಲಿಸಿದ್ದರು.
ಶೈಕ್ಷಣಿಕ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ತಿಮ್ಮಪ್ಪ ಶೆಟ್ಟಿಯವರು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿ, ಪರ್ಲಡ್ಕ ಸರಕಾರಿ ಶಾಲೆಯ ಪುನರ್ನಿರ್ಮಾಣ ಸಮಿತಿ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇವರು ಪತ್ನಿ ಪ್ರೇಮಲತಾ ಟಿ ಶೆಟ್ಟಿ, ಪುತ್ರಿ ತೃಪ್ತಿ ಎಸ್ ಚೌಟ, ಅಳಿಯ ಸುಧೀಶ್ ಚೌಟ, ಪುತ್ರ ಪ್ರತೀಕ್ ಶೆಟ್ಟಿ ಅವರೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ. ಪುತ್ರ ಪ್ರತೀಕ್ ಶೆಟ್ಟಿ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದಾರೆ.