ತುಳುನಾಡಿನ ಭಾಷಿಕ , ಸಾಂಸ್ಕೃತಿಕ, ಹಾಗೂ ಧಾರ್ಮಿಕ ಆಸ್ಮಿತೆಗಳನ್ನು ಜಾಗೃತ ಗೊಳಿಸಿ ತುಳುನಾಡಿನ ಮೂಲ ಧರ್ಮ ಮಾತೃಮೂಲೀಯ ಅವೈದಿಕ ತೌಳವ ಧರ್ಮದ ಮೂರು ಮೂಲ ಧಾರ್ಮಿಕ ಆಚರಣೆಗಳಾದ ಬೆರ್ಮೆರಾಧನೆ , ಬೂತಾರಾಧನೆ ಹಾಗೂ ನಾಗಾರಾಧನೆಗಳನ್ನು ಅವುಗಳ ಮೂಲ ಸ್ವರೂಪದಲ್ಲಿ ಉಳಿಸಿಕೊಳ್ಳಲು ಆ ಆರಾಧನೆಗಳ ಹಿಂದಿರುವ ಮೂಲ ಧಾರ್ಮಿಕ ನಂಬಿಕೆಗಳ ಬಗ್ಗೆ ತಿಳುವಳಿಕೆ ಹಾಗೂ ಜಾಗೃತಿಯನ್ನು ಮೂಡಿಸುವುದು ಅನಿವಾರ್ಯ ಎಂದಾದಾಗ “ತುಳುನಾಡು ಬೆರ್ಮೆರ್ ನ ಸೃಷ್ಟಿ” ಎಂಬ ತುಳುನಾಡಿನ ಅನಾದಿಕಾಲದ ಮೂಲ ಧಾರ್ಮಿಕ ನಂಬಿಕೆಯ ಬಗ್ಗೆ ಹಾಗೂ “ಬೆರ್ಮೆರ್” ಎಂಬ ತುಳುವರ ಮೂಲ ದೈವದ ಪರಿಕಲ್ಪನೆ ಹಾಗೂ ಸ್ವರೂಪದ ಬಗ್ಗೆ ಸಹಜವಾಗಿಯೇ ತೌಳವರ ಗಮನ ಕೇಂದ್ರೀಕರಿಸಲ್ಪಟ್ಟಿತ್ತು.
ತುಳುನಾಡಿನ “ಮೂಲ ಧರ್ಮ” ಅಂದರೆ ತುಳುನಾಡಿನ ಮೂಲನಿವಾಸಿಗಳ ಧರ್ಮದ ಈ ಮೂಲ ಧಾರ್ಮಿಕ ನಂಬಿಕೆಗೆ ಗ್ರಹಣ ಹಿಡಿಸಿದ
“ತುಳುನಾಡು ಪರಶುರಾಮ ಸೃಷ್ಟಿ” ಎಂಬ ವಾದದ ಹಿಂದಿರುವ ತಾರ್ಕಿಕ ಅಂಶ ಹಾಗೂ ಆಧಾರಗಳ ಶೋಧನೆಗೆ ಈ ವಿಚಾರವನ್ನು ಸಹಜವಾಗಿಯೇ ಸಂವಾದದ ವಿಷಯನ್ನಾಗಿ ಮಾಡುವ ಅನಿವಾರ್ಯತೆ ಎದುರಾಯಿತು .
ಆದರೆ ನಂತರದ ಬೆಳವಣಿಗೆಗಳು ಯಾರೂ ಊಹಿಸದ ತಿರುವುಗಳನ್ನು ಪಡೆದುಕೊಂಡಿತು . ಸಾಧಾರ ಹಾಗೂ ತಾರ್ಕಿಕ ವಾದಕ್ಕಿಂತಲೂ ಬೌದ್ಧಿಕ ಭೀತಿವಾದದ ( Intellectual Terrorism ) ಪರಿಭಾಷೆಗಳಾದ ದೋಷ , ಶಾಪಗಳ ಕೈಯೇ ಮೇಲಾಗುವ ಎಲ್ಲಾ ಲಕ್ಷಣಗಳು ಕಂಡು ಬಂದವು .
ಇಂತಹ ಬೌದ್ಧಿಕ ಭೀತಿವಾದದ ಮಂಡನೆಯನ್ನು ಮಾಡಿದವರ ಪ್ರಕಾರ ತುಳುವರ ಮೂಲ ಧಾರ್ಮಿಕ ನಂಬಿಕೆಯ ಬಗ್ಗೆ ಜಾಗೃತಿ ಮೂಡಿಸಿ ತುಳುನಾಡಿನ ಮೂಲ ಧರ್ಮ ಮಾತೃಮೂಲೀಯ ಅವೈದಿಕ ತೌಳವ ಧರ್ಮದ ಪುನರುತ್ಥಾನ ಕಾರ್ಯ ಅಕ್ಷಮ್ಯ . ಅದು ಹಿಂದೂ ವಿರೋಧಿ ಹಾಗೂ ದೇಶ ವಿರೋಧಿ . ತೌಳವ ಧರ್ಮದ ಪುನರುತ್ಥಾನ ಕಾರ್ಯದಿಂದ ಜೆಹಾದಿಗಳು ಹಾಗೂ ಮಿಶನರಿಗಳು ತುಳುನಾಡಿನಾದ್ಯಂತ ವಿಜೃಂಭಿಸಿ ತುಳುನಾಡಿನಲ್ಲಿ ಹಿಂದೂ ಧರ್ಮವೇ ಸರ್ವನಾಶ ಆಗುತ್ತದೆ – ಮಾತ್ರವಲ್ಲ “ತುಳುನಾಡು ಪರಶುರಾಮ ಸೃಷ್ಟಿ ” ಎಂಬ ವಾದವನ್ನು ಅಲ್ಲಗಳೆದರೆ ಪರಶುರಾಮ ದೇವರ ಅವಕೃಪೆಗೆ ಕಾರಣವಾಗಿ ಸ್ವತಃ ಪರಶುರಾಮ ದೇವರೇ ಅಂತವರನ್ನು ಕೊಲ್ಲಲೂ ಬಹುದು. ….. ಇತ್ಯಾದಿ , ಇತ್ಯಾದಿ .
ಕಳೆದ ಹಲವು ದಿನಗಳಿಂದ “ತುಳುನಾಡು ಪರಶುರಾಮ ಸೃಷ್ಟಿ” ಎಂದು ಸಾಧಿಸಲು ಹೊರಟವರಿಂದ ಸಾಮಾಜಿಕ ಜಾಲತಾಣಗಳಲ್ಲಿ ಪುಂಖಾನುಪುಂಖವಾಗಿ ಬಂದ ಕಾಮೆಂಟ್ಸ್ , ಬರಹ ಹಾಗೂ ವಿಡಿಯೋ ಕ್ಲಿಪ್ಪಿಂಗ್ ಗಳಲ್ಲಿ ಸಮಾಜದ ಗಣ್ಯರು , ಮಠಾಧೀಶರುಗಳು ಹಾಗೂ ವಿದ್ಯಾವಂತರೆನ್ನಿಸಿಕೊಂಡವರೂ ಕೂಡಾ ಇದ್ದಾರೆ !
ಆದರೆ ವಾಸ್ತವಿಕವಾಗಿ “ತುಳುನಾಡು ಪರಶುರಾಮ ಸೃಷ್ಟಿ” ಎಂಬುದು ಸುಳ್ಳು ಎಂದು ಸಾಧಿಸಿದ್ದು ” ತುಳುನಾಡು ಬೆರ್ಮೆರ್ ನ ಸೃಷ್ಟಿ ” ಎಂಬ ವಾದವಲ್ಲ !
ತುಳುನಾಡು ಪರಶುರಾಮ ಸೃಷ್ಟಿ ಎಂಬುದು ಶುದ್ಧ ಸುಳ್ಳು ಎಂದು ಸಂಶಯಾತೀತವಾಗಿ ಸಾಧಿಸಿದ್ದು ತುಳುನಾಡಿನ ಮೂಲ ಧರ್ಮ ಮಾತೃಮೂಲೀಯ ಅವೈದಿಕ ತೌಳವ ಧರ್ಮದ ಮೂಲ ಧಾರ್ಮಿಕ ನಂಬಿಕೆ ಯಾದ ” ತುಳುನಾಡು ಬಲೀಂದ್ರನ ರಾಜ್ಯ” ಎಂಬ ಪ್ರಾಚೀನ ನಂಬಿಕೆ ಹಾಗೂ ಸ್ವಯಂ ವೇದವ್ಯಾಸ ಮಹರ್ಷಿಗಳೇ ಬರೆದಿರುವ ದಶಾವತಾರ ಪುರಾಣ !
ಹೌದು ! “ತುಳುನಾಡು ಬಲಿಯಂದ್ರ ಚಕ್ರವರ್ತಿಯ ರಾಜ್ಯ” ಎಂಬುದು ತುಳುನಾಡಿನ ಮೂಲ ಧರ್ಮ ಮಾತೃಮೂಲೀಯ ಅವೈದಿಕ ತೌಳವ ಧರ್ಮದ ಪ್ರಾಚೀನ ಮೂಲ ಧಾರ್ಮಿಕ ನಂಬಿಕೆ . ಈ ನಂಬಿಕೆಯಂತೆ ಇಂದಿಗೂ ಕೂಡಾ ವರ್ಷಂಪ್ರತಿ ಪ್ರತಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತುಳುನಾಡಿನಾದ್ಯಂತ ಹೊಲಗದ್ದೆಗಳಲ್ಲಿ ನೆನೆಕೋಲು ಹಚ್ಚಿಟ್ಟು ಬಲೀಂದ್ರನನ್ನು ಕೂಗಿ ಕರೆದು ಪ್ರಾರ್ಥಿಸುವ ಹಾಗೂ ಪೂಜಿಸುವ ಪದ್ಧತಿ – ಸೋಣ ಸಂಕ್ರಮಣದ ದಿನದಿಂದ ಹದಿನೈದು ದಿನಗಳ ಪರ್ಯಂತ ಬಲೀಂದ್ರ ಚಕ್ರವರ್ತಿಯ ತಾಯಿಯನ್ನು ಹೊಸ್ತಿಲಲ್ಲಿ ಮನೆಯ ಹೆಣ್ಣುಮಕ್ಕಳು ದೀಪ ಹಚ್ಚಿ ಹೂ ಅರ್ಪಿಸಿ ಪೂಜಿಸುವ ಪದ್ಧತಿ – ಆಟಿ ಸಂಕ್ರಮಣದ ದಿನ ಬಲೀಂದ್ರ ಚಕ್ರವರ್ತಿಯ ಆಳುವನ್ನು ಎದುರುಗೊಳ್ಳುವ ಕ್ರಮ ಇವೆಲ್ಲಾ ಧಾರ್ಮಿಕ ಕ್ರಿಯೆಗಳು “ತುಳುನಾಡು ಬಲೀಂದ್ರನ ರಾಜ್ಯ” ವಾಗಿತ್ತು ಎಂಬ ನಮ್ಮ ಹಿರಿಯರ ಪ್ರಾಚೀನ ನಂಬಿಕೆಯನ್ನು ಪುನರಪಿ ದೃಢ ಪಡಿಸುವ ಧಾರ್ಮಿಕ ಆಚರಣೆಗಳು !
ಪ್ರತೀವರ್ಷ ತುಳುನಾಡಿನ ಮೂಲ ಧರ್ಮ ಮಾತೃಮೂಲೀಯ ಅವೈದಿಕ ತೌಳವ ಧರ್ಮದ ಈ ಪ್ರಾಚೀನ ಧಾರ್ಮಿಕ ನಂಬಿಕೆ ವರ್ಷಂಪ್ರತಿ ಆಚರಣೆಗಳ ಮೂಲಕ ದೃಢ ವಾಗುತ್ತಿರುವುದರಿಂದ ಇವುಗಳನ್ನು ಬದಲಾಯಿಸಲು ತುಳುನಾಡಿನ ಹಿಂದೂ ಸಮಾಜದ ಶೇಕಡಾ ತೊಂಭತ್ತಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿರುವ ತುಳುನಾಡಿನ ಮೂಲ ಧರ್ಮ ಮಾತೃಮೂಲೀಯ ಅವೈದಿಕ ತೌಳವ ಧರ್ಮೀಯರು ತುಳುನಾಡಿನ ವಲಸೆ ಧರ್ಮೀಯರಿಗೆ ಆಸ್ಪದವನ್ನಾಗಲೀ , ಅವಕಾಶವನ್ನಾಗಲೀ ಕೊಡುವುದೇ ಇಲ್ಲ ! ಅದು ಸಾಧ್ಯವೂ ಅಲ್ಲ !!
ಈ ಹಿನ್ನೆಲೆಯಲ್ಲಿ “ತುಳುನಾಡು ಪರಶುರಾಮ ಸೃಷ್ಟಿ” ಎಂಬ ಕಥೆಯನ್ನು ಸಂಪೂರ್ಣವಾಗಿ ತಾರ್ಕಿಕ ಹಾಗೂ ಸುಸಂಬದ್ಧಗೊಳಿಸಲು ಈಗಿರುವ ಏಕೈಕ ಮಾರ್ಗವೆಂದರೆ ಶ್ರೀ ವೇದವ್ಯಾಸ ಮಹರ್ಷಿಗಳು ಬರೆದಿರುವ ದಶಾವತಾರ ಪುರಾಣವನ್ನು ಪುನರಚಿಸುವುದು !
ಯಾಕೆಂದರೆ ವೇದವ್ಯಾಸರು ರಚಿಸಿದ ದಶಾವತಾರ ಪುರಾಣದ ಪ್ರಕಾರ ಪರಶುರಾಮರು ವಿಷ್ಣುವಿನ 6 ನೇ
ಅವತಾರ ಹಾಗೂ ವಾಮನ ವಿಷ್ಣುವಿನ
5 ನೇ ಅವತಾರ . ಆದುದರಿಂದಲೇ
ಪರಶುರಾಮರು ಹುಟ್ಟುವುದಕ್ಕಿಂತ ಸಾವಿರಾರು ವರ್ಷಗಳ ಹಿಂದೆಯೇ ಘಟಿಸಿದ್ದ ವಾಮನ ಅವತಾರದ ಕಾಲದಲ್ಲಿ ಬಲಿಚಕ್ರವರ್ತಿಯಿಂದ ಆಳಲ್ಪಡುತ್ತಿದ್ದ ಈ ನಮ್ಮ ತುಳುನಾಡನ್ನು ಪರಶುರಾಮರು ಸೃಷ್ಟಿಸಿದ್ದಾದರೂ ಹೇಗೆ ಎಂಬ ಪ್ರಶ್ನೆ ಉತ್ತರವಿಲ್ಲದ ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ !
ಆದುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಕ್ಲಿಪ್ಪಿಂಗ್ ಗಳ ಮೂಲಕ ಪ್ರತ್ಯಕ್ಷರಾಗಿ “ತುಳುನಾಡು ಬೆರ್ಮೆರ್ ನ ಸೃಷ್ಟಿ” ಎಂದು ತಮ್ಮ ಧರ್ಮದ ಮೂಲ ಧಾರ್ಮಿಕ ನಂಬಿಕೆಯನ್ನು ಪ್ರತಿಪಾದಿಸುವ ಅಮಾಯಕ ತುಳುವರಿಗೆ ಶಾಪ , ದೋಷ , ಮರಣ ಎಂಬ ಭಯವನ್ನು ಉಂಟು ಮಾಡುವ ಬದಲು ಈ ಮಹಾನುಭಾವರೆಲ್ಲಾ ಸ್ವಯಂ ಶ್ರೀವೇದವ್ಯಾಸ ಮಹರ್ಷೀಗಳನ್ನು ಮುಖತಃ ಭೇಟಿಯಾಗಿ ಅವರಿಂದ ಆಗಿರುವ ಪ್ರಮಾದವನ್ನು ಅವರಿಗೆ ಮನವರಿಕೆ ಮಾಡಿ ಪರಶುರಾಮರು ಬಲಿ ಚಕ್ರವರ್ತಿ ಹಾಗೂ ವಾಮನ ಅವತಾರಕ್ಕಿಂತ ಮೊದಲು ಹುಟ್ಟಿದವರೆಂದು ಹೊಸ ದಶಾವತಾರ ಪುರಾಣವನ್ನು ಬರೆಸಿದರೆ ಎಲ್ಲಾ ಗೊಂದಲಗಳೂ ಮಾಯವಾಗುತ್ತವೆ !! ಜೊತೆಗೆ ಅವರ ಪ್ರಕಾರ ತುಳುನಾಡಿನಲ್ಲಿ ಹಿಂದೂ ಸಮಾಜ ಕೂಡಾ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ !!
ಒಟ್ಟಾರೆ ಬೆರ್ಮೆರೇ ಕಾಪಾಡ ಬೇಕು ಈ ನಮ್ಮತುಳುನಾಡನ್ನುಜೆಹಾದಿಗಳಿಗಿಂತಲೂ ಸಾವಿರ ಪಟ್ಟುಅಪಾಯಕಾರಿಗಳಾದ ಇಂತಹ ಬೌದ್ಧಿಕ ಭೀತಿವಾದಿಗಳ ಕೈಯಿಂದ !!
One can fool all the people for sometime
Some people for all the time
But none can fool all the people for all the time .
ಎಂಬುದನ್ನು ತಮ್ಮ ಬೌದ್ಧಿಕ ಭೀತಿವಾದದ ಮೂಲಕ ಸಮಾಜವನ್ನು ಮಾನಸಿಕ ಹಾಗೂ ಬೌದ್ಧಿಕ ಗುಲಾಮಗಿರಿಗೆ ಒಳಪಡಿಸಲು ಪ್ರಯತ್ನಿಸುವ ಇಂತಹ ಬೌದ್ಧಿಕ ಭೀತಿವಾದಿಗಳು ತಿಳಿದುಕೊಂಡರೆ ಅದು ಅವರಿಗೂ ಒಳ್ಳೆಯದು – ಇಡೀ ಸಮಾಜಕ್ಕೂ ಒಳ್ಳೆಯದು .
ಜೈ ತುಳುನಾಡು !!
ಜೈ ಹಿಂದೂ ರಾಷ್ಟ್ರ !!
– ಶಶಿಕಾಂತ ಆರ್ ಶೆಟ್ಟಿ , ಕಟಪಾಡಿ .