ತುಳುನಾಡಿನಲ್ಲಿ ಬೇಸಾಯ ಕಣ್ಮರೆಯಾಗುತ್ತಿದ್ದಂತೆ ಇದರ ಹಿನ್ನಲೆಯಲ್ಲಿ ಆರಾಧಿಸಲ್ಪಡುತ್ತಿದ್ದ ದೈವಗಳೂ ಕಣ್ಮರೆಯಾಗುತ್ತಿವೆ. ಕಳೆದ 20 ವರ್ಷಗಳ ಹಿಂದೆ ಬೇಸಾಯದ ಗದ್ದೆ ಬದುಗಳಲ್ಲಿ ಕುಣಿಯುತ್ತಿದ್ದ ಈ ದೈವಗಳು ಇಂದು ಕುಣಿಯುತ್ತಿಲ್ಲ. ಅಭಯದ ಮಾತುಗಳನ್ನು ಆಡುತ್ತಿಲ್ಲ, ಅನೇಕ ದೈವಗಳು ಇದ್ದ ಕುರುಹುಗಳೇ ಇಲ್ಲ. ಸಾವಿರದೊಂದು ಭೂತಗಳನ್ನು ನಂಬುತ್ತಿದ್ದ ತುಳುವರ ಪಾಲಿಗೆ ಇಂದು ಕೆಲವು ಮಾತ್ರ ಉಳಿದಿವೆ. ಹಲವು ದೈವಗಳು ರೂಪಾಂತರಗೊಂಡಿವೆ. ಇನ್ನು ಕೆಲವು ಹೆಸರು ಬದಲಾಯಿಸಿಕೊಂಡಿವೆ. ಅನೇಕ ದೈವಗಳ ಭೂತ ಚರಿತ್ರೆ, ಹುಟ್ಟು, ಬೆಳವಣಿಗೆ ಅದಲುಬದಲಾಗಿದೆ. ಪಾಡ್ದನಗಳು ತಮ್ಮ ಮೂಲ ರೂಪಕ್ಕಿಂತ ಭಿನ್ನವಾಗಿವೆ. ದೈವಗಳ ಚರಿತ್ರೆಯಿಂದ ಹಿಡಿದು ಮುಖವರ್ಣಿಕೆ, ಕುಣಿತ, ಮದಿಪು, ಪಾಡ್ದನ, ಎಲ್ಲ ಬಿಟ್ಟು ಬಾರಣೆ(ಆಹಾರ ಸೇವನೆ)ಯ ಸ್ವರೂಪವೂ ಬದಲಾಗಿದೆ. ತುಳುನಾಡಿನ ದೈವಗಳ ಮೇಲೆ ಇತರೆ ಆಚರಣೆಗಳ ಹಿಡಿತ ತೀವ್ರವಾಗುತ್ತಿದೆ. ಇಲ್ಲಿನ ಯಕ್ಷಗಾನ ಮತ್ತು ಕೇರಳದ ‘ತೆಯ್ಯಂ’ಗಳ ಪ್ರಭಾವ ಇನ್ನೂ ಗಾಢವಾಗುತ್ತಿದೆ. ಕೆಲವು ದೈವಗಳಿಗೆ ಅಗತ್ಯಕ್ಕಿಂತ ಹೆಚ್ಚು ಮಾನ್ಯತೆ ಸಿಗುತ್ತಿದ್ದರೆ, ಹಲವು ದೈವಗಳ ಆರಾಧನೆ ಇಲ್ಲವಾಗಿವೆ. ಇದರಲ್ಲಿ ತುಳುನಾಡಿನ ಬೇಸಾಯ ಸಂಬಂಧೀ ದೈವಗಳೇ ಮುಖ್ಯವಾದುವುಗಳು. ಒಂದು ಕಾಲದಲ್ಲಿ ಸುಗ್ಗಿ ‘ಪೂಕರೆ’(ಹೂವಿನ ಗೇಣೆ ಹಾಕುವ ಆಚರಣೆ) ಗದ್ದೆಯ ಬದುವಿನಲ್ಲಿ ಕುಣಿಯುತ್ತಿದ್ದ ಬಹುತೇಕ ದೈವಗಳು ಇಂದು ಆಚರಣೆಗೊಳ್ಳುತ್ತಿಲ್ಲ. ಇದಕ್ಕೆ ಸುಗ್ಗಿ ಬೇಸಾಯ ಇಲ್ಲದಿರುವುದೂ ಒಂದು ಕಾರಣ.
ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ತುಳುನಾಡಿನಾದ್ಯಂತ ಅಲ್ಲಲ್ಲಿ ಪೂಕರೆ ಗದ್ದೆಗಳಿದ್ದವು. ಈ ಗದ್ದೆಗಳಲ್ಲಿ ಸುಗ್ಗಿ ಬಿತ್ತನೆ ಸಂದರ್ಭದಲ್ಲಿ ಪೂಕರೆ ದೈವಗಳ ಆರಾಧನೆಯನ್ನು ಕೋಲ ರೂಪದಲ್ಲಿ ನಡೆಸುತ್ತಿದ್ದರು. ತುಳುನಾಡಿನಲ್ಲಿ ಇಂದು ಭಿನ್ನವಾಗಿ ಆರಾಧಿಸುತ್ತಿರುವ ನಾಗ, ಬ್ರಹ್ಮ, ಬಿರ್ಮೆರ್, ಬಿರಣ, ಉರವೆ, ಮೂವೆ, ಎರುಕೋಲ, ಕುದುರೆ ಕೋಲ ಇತ್ಯಾದಿ ದೈವಗಳನ್ನು ಕೋಲರೂಪದಲ್ಲಿ ಆರಾಧಿಸುತ್ತಿದ್ದರು. ಈ ಎಲ್ಲ ದೈವಗಳಿಗೂ ಪ್ರತ್ಯೇಕ ಭೂತ ಚರಿತ್ರೆ ಇದೆ. ಪಾಡ್ದನವಿದೆ, ಮುಖವರ್ಣಿಕೆ, ವೇಷಭೂಷಣಗಳಿವೆ (ವಿವರಗಳಿಗೆ ನೋಡಿ: ಬತ್ತದಲೋಕ, ಡಾ.ಸುಂದರ ಕೇನಾಜೆ) ಆದರೆ ಇವುಗಳನ್ನು ಪೂಕರೆ ಆಚರಣೆಯ ಹೊರತಾಗಿ ನಡೆಸುತ್ತಿದ್ದುದು ಕಡಿಮೆ.
ನಾಗಕೋಲ ಅಥವಾ ಸರ್ಪಕೋಲ ಎನ್ನುವ ಆರಾಧನೆ ಶುದ್ಧ ಜಾನಪದ ರೂಪದ್ದು. ಇದು ತುಳುನಾಡಿನ ಅನೇಕ ಕಡೆಗಳಲ್ಲಿ ನಡೆಯುತ್ತಿತ್ತು. ಕಾಸರಗೋಡು ಭಾಗದಲ್ಲಿ ಬೈಲ ಬಾಕುಡರು ಇದನ್ನು ಆರಾಧಿಸುತ್ತಿದ್ದರು (ವಿವರಗಳಿಗೆ ನೋಡಿ: ತುಳು ನಡೆನುಡಿ, ವೆಂಕಟರಾಜ ಪುಣಿಂಚಿತ್ತಾಯ) ನಲಿಕೆ ಜನಾಂಗದವರು ನಡೆಸುತ್ತಿದ್ದ ಈ ಕೋಲ ಇತರ ಕಡೆಗಳಲ್ಲಿ ಪೂಕರೆಯ ಸಂದರ್ಭದಲ್ಲೇ ಹೆಚ್ಚಾಗಿ ನಡೆಯುತ್ತಿತ್ತು. ಮೈಗೆ ಪೂರ್ಣ ಅರಸಿನ ಹಚ್ಚಿಕೊಂಡು ತಲೆಗೆ ಹಾಗೂ ಕೈಗೆ ಹೆಡೆಯಾಕಾರದ ನಾಗನರೂಪ ಧರಿಸಿ ಗದ್ದೆ ಬದುವಿನಲ್ಲಿ ಸುತ್ತು ಬರುತ್ತಿತ್ತು. ಹೆಚ್ಚಿನ ವೇಷಭೂಷಣವಾಗಲಿ, ಮಾತಾಗಲಿ ಇರಲಿಲ್ಲ. ಸರ್ಪಗಳಂತೆ ಹರಿದಾಡುತ್ತಲೂ ಬುಸುಗಟ್ಟುತ್ತಲೂ ಇದ್ದ ಸರ್ಪಕೋಲಗಳು ಇಂದು ವಿರಳವಾಗಿವೆ.
ಬ್ರಹ್ಮಕೋಲ ವಿಶಿಷ್ಟವಾದುದು. ವಾಸ್ತವಿಕವಾಗಿ ತುಳುನಾಡಿನ ಭೂತಾರಾಧನೆ ಅಥವಾ ಬಿಂಬಾರಾಧನೆಯಲ್ಲಿ ಬ್ರಹ್ಮನ ಆರಾಧನೆ ಕಾಣಸಿಗುವುದಿಲ್ಲ. ಆದರೆ ಪೂಕರೆ ಆಚರಣೆಯಲ್ಲಿ ಬ್ರಹ್ಮಕೋಲವಿತ್ತು. ಬಿಳಿಬಟ್ಟೆಯ ಕಚ್ಚೆ, ಗಂಧಲೇಪ, ಜನಿವಾರ, ಕೈಯಲ್ಲಿ ‘ಪನೆ’(ತೆಂಗಿನ ಗರಿಯ ಕೊಡೆ), ಗಗ್ಗರ ಕಟ್ಟಿಕೊಂಡು ಪೂಕರೆ ಗದ್ದೆ ಬದುವಿನಲ್ಲಿ ಸಂಚರಿಸುತ್ತಿದ್ದ ಈ ದೈವವನ್ನು ‘ಬ್ರಹ್ಮಕೋಲ’ವೆಂದು ಕರೆದಿದ್ದಾರೆ. ಆದರೆ ಇಂದು ಈ ದೈವದ ಆರಾಧನೆ ಕಣ್ಮರೆಯಾಗಿದೆ. ಬ್ರಹ್ಮನನ್ನು ಕೋಲರೂಪದಲ್ಲಿ ಆರಾಧಿಸುತ್ತಿದ್ದರೆನ್ನುವ ಮಾಹಿತಿಯೇ ಬಹುತೇಕರಿಗೆ ಗೊತ್ತಿಲ್ಲ.
ಬಿರ್ಮೆರ್ ಇದು ಇಂದಿಗೂ ಕೆಲವು ಕಡೆ ಆಚರಣೆ, ಆರಾಧನೆಗೊಳ್ಳುತ್ತಿರುವ ದೈವ. ಸಮೃದ್ಧಿ ಮತ್ತು ಸಂತಾನ ಪ್ರಾಪ್ತಿಯ ಆದಿ ಮೂಲದ ದೇವತೆ. ಕೋಟಿಚೆನ್ನಯ ಆರಾಧನೆಯಲ್ಲಿ ಬಿರ್ಮೆರ್ ಸ್ಥಾನ ಮಹತ್ವದ್ದಾಗಿದೆ. ಆದರೆ ಪೂಕರೆಯ ಹಿನ್ನಲೆಯಲ್ಲಿ ನಡೆಯುತ್ತಿದ್ದ ಬಿರ್ಮೆರ್ ಆರಾಧನೆ ಬಹುತೇಕ ಕಡೆ ನಿಂತುಹೋಗಿದೆ. ಪೂಕರೆ ಗದ್ದೆಯ ಬದುವಿನಲ್ಲಿ ಆರಾಧನೆಗೊಳ್ಳುವ ಬಿರ್ಮೆರ್ಗೆ ಸಂಧಿ, ಪಾಡ್ದನ, ನುಡಿಕಟ್ಟುಗಳಿಲ್ಲ, ಮುಖವರ್ಣಿಕೆ ಮತ್ತು ವೇಷಭೂಷಣಗಳಲ್ಲಿ ಒಂದಷ್ಟು ವ್ಯತ್ಯಾಸವಿದೆ. ಆದರೆ ಈ ಆರಾಧನೆ ಇಂದು ಕಣ್ಮರೆಯಾಗಿದೆ.
ಬಿರಣಕೋಲ ಪೂಕರೆ ಸಂದರ್ಭದಲ್ಲಿ ನಡೆಯುವ ಆರಾಧನೆ. ಇದು ನಾಗಕೋಲದ ಜೊತೆಗೆ ಹೆಚ್ಚು ನಡೆಯುತ್ತಿತ್ತು. ಹೆಚ್ಚು ಅಲಂಕಾರವಿಲ್ಲದೇ ಬಿಳಿ ಬಟ್ಟೆ ಉಟ್ಟು, ತೆಂಗಿನ ಒಲಿಯನ್ನು ಜನಿವಾರವಾಗಿ ಹಾಕಿ, ಮೈಗೆ ಗಂಧ ಲೇಪಿಸಿ ಗಗ್ಗರವಿಲ್ಲದೇ ತೆಂಬರೆಯ ಬಡಿತದೊಂದಿಗೆ ನಡೆಯುತ್ತದೆ. ಊಟಕ್ಕೆ ಸಂಬಂಧಿಸಿದ ನುಡಿಕಟ್ಟುಗಳನ್ನು ವಿಡಂಬನೆಯ ರೂಪದಲ್ಲಿ ಹೇಳುತ್ತಾ ಗದ್ದೆಯ ಬದುವಿನಲ್ಲಿ ಸುತ್ತುತ್ತದೆ. ಈ ಭೂತದ ಹಿನ್ನಲೆಯ ಬಗ್ಗೆ ತುಳುನಾಡಿನಲ್ಲಿ ಕೆಲವೊಂದು ಐತಿಹ್ಯಗಳಿವೆ. ಬಿರಣಕೋಲ ಕೆಲವು ಪ್ರದೇಶಗಳಲ್ಲಿ ಪ್ರಧಾನ ದೈವಗಳೊಂದಿಗೆ ಉಪದೈವವಾಗಿಯೂ ನಡೆಯುತ್ತಿತ್ತು. ಆದರೆ ಇಂದು ಬಿರಣಕೋಲ ಕಾಣಸಿಗುವುದು ಅಪೂರ್ವ.
ಉರವೆಯನ್ನು ‘ಉಚ್ಚು’(ಸರ್ಪ) ಎಂದೂ ಆರಾಧಿಸುತ್ತಿದ್ದರು. ‘ಗದ್ದೆಯ ಬದುವಿನ ಮಣ್ಣಿನ ಒಳಗಿರುವ ಹುಳು’ ಎಂದೂ ಉರವೆಗೆ ಅರ್ಥವಿದೆ(ನೋಡಿ: ತುಳು ನಿಘಂಟು, ಡಾ.ಯು.ಪಿ. ಉಪಾಧ್ಯಾಯ) ನಲಿಕೆ ಜನಾಂಗದ ಅಪ್ರಾಪ್ತ ಬಾಲಕರೂ ಉರವೆಕೋಲ ಕಟ್ಟುತ್ತಿದ್ದರು. ಉರವೆಯ ವೇಷಭೂಷಣ ಮುಖವರ್ಣಿಕೆ ಆಕರ್ಪಕವಾಗಿತ್ತು. ಬಿರಣಕೋಲದ ಜೊತೆ ಹೋಗುತ್ತಿದ್ದ ಈ ಭೂತದೊಂದಿಗೆ ‘ಕಾಪಡ’(ಮೊಗೇರ ಜನಾಂಗದ ಮುಖ್ಯಸ್ಥ) ‘ಎರು ಬಡು’(ಎತ್ತುಗಳನ್ನು ಬೆದರಿಸುವ ಕೋಲು) ಹಿಡಿದು ಸಾಗಬೇಕಾಗಿತ್ತು.
ಈ ಮೇಲಿನ ದೈವಗಳು ಜನಪದ ನಾಗಾರಾಧನೆಯ ‘ನಾಗಚಕ್ರ’ದಲ್ಲಿ ಸೇರಿದ ದೈವಗಳೆಂದು ಕರೆಯಬಹುದು. ಆದರೆ ಈ ನಾಗ ಚಕ್ರದ ಬಹುತೇಕ ದೈವಾರಾಧನೆಗಳು ಇಂದು ಕಣ್ಮರೆಯಾಗಿವೆ. ಎರುಕೋಲ ಫಲವಂತಿಕೆಯ ಹಿನ್ನಲೆಯಲ್ಲಿ ನಡೆಯುವ ದೈವಾರಾಧನೆ. ಇದು ಕೂಡ ಸುಗ್ಗಿ ಪೂಕರೆಯಲ್ಲಿ ನಡೆಯುತ್ತಿದ್ದ ಮುಖ್ಯ ಆರಾಧನೆ. ಕರ್ನಾಟಕದ ಜಾನಪದ ಕುಣಿತಗಳಲ್ಲಿ ಎರುಕೋಲವನ್ನು ಆರಾಧನೆಯ ಬದಲು ಪ್ರಾಣಿ ಸಂಬಂಧೀ ಕುಣಿತಗಳ ಸಾಲಿಗೆ ಸೇರಿಸಲಾಗಿದೆ(ವಿವರಗಳಿಗೆ ನೋಡಿ: ಕರ್ನಾಟಕ ಜನಪದ ಕಲೆಗಳ ಕೋಶ, ಡಾ.ಹಿ.ಚಿ ಬೋರಲಿಂಗಯ್ಯ) ಆದರೆ ‘ಎರು ಕನಡ’‘ಎರು ಬೇಡವ’ ಇತ್ಯಾದಿ ಹೆಸರುಗಳಿಂದ ಕರೆಯುವ ಎರುಕೋಲ ತುಳುನಾಡಿನ ಇತರ ದೈವಗಳ ಆರಾಧನೆಯ ನೆಲೆಯಲ್ಲೇ ನಡೆಯುತ್ತಿತ್ತು(ವಿವರಗಳಿಗೆ ನೋಡಿ: ಭೂತಾರಾಧನೆ ಒಂದು ಜನಪದೀಯ ಅಧ್ಯಯನ, ಡಾ.ಕೆ ಚಿನ್ನಪ್ಪ ಗೌಡ)
ಗದ್ದೆಕೋರಿ ಸಂದರ್ಭದಲ್ಲಿ ನಡೆಯುತ್ತಿದ್ದ ಈ ಆರಾಧನೆ ಇಂದು ಕಂಡುಬರುತ್ತಿಲ್ಲ.
ಇದೇ ಸ್ಥಿತಿ ಕುದ್ರೆಕೋಲದ್ದೂ ಆಗಿದೆ. ತೆಂಗಿನ ಒಲಿ ಮತ್ತು ಹಾಳೆಯನ್ನು ಬಳಸಿ ಕೀಲು ಕದುರೆಯನ್ನು ಹೋಲುವ ವೇಷಭೂಷಣದೊಂದಿಗೆ ನಡೆಯುತ್ತಿದ್ದ ಈ ಕುದ್ರೆಕೋಲುವು ಪೂಕರೆಯಲ್ಲಿ ಮಹತ್ವ ಪಡೆದಿತ್ತು. ಅಲ್ಲದೇ ಕೆಲವು ಪ್ರಧಾನ ದೈವಗಳ ಜೊತೆಗೂ ಆರಾಧನೆಗೊಳ್ಳುತ್ತಿತ್ತು. ಆದರೆ ಇಂದು ಕುದ್ರೆಕೋಲ ಕೂಡ ಕಂಡು ಬರುವುದು ಕಡಿಮೆ.
ಹೀಗೆ ಬೇಸಾಯದ ನಾನಾ ಸಂದರ್ಭದಲ್ಲಿ ಆರಾಧನೆಗೊಳ್ಳುತ್ತಿದ್ದ ನೆಲಮೂಲದ ಅನೇಕ ದೈವಗಳು ಇಂದು ಕಣ್ಮರೆಯಾಗಿವೆ. ಈ ದೈವಗಳು ಫಲವಂತಿಕೆ ಅಥವಾ ರಕ್ಷಣೆಯ ನೆಲೆಯಲ್ಲಿ ಆರಾಧನೆಗೊಳ್ಳುತ್ತಿದ್ದುವು. ಆದರೆ ಇಂದು ಆರಾಧನಾ ಸ್ವರೂಪದಲ್ಲಿ ಮಾಡುತ್ತಿರುವ ತೀವೃ ಬದಲಾವಣೆಯಿಂದ ಸಹಜ ಅಥವಾ ಜಾನಪದ ನಂಬಿಕೆ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿದೆ. ಜೊತೆಗೆ ಶಿಷ್ಟ ನಂಬಿಕೆ ಆ ಜಾಗವನ್ನು ತುಂಬಿಕೊಳ್ಳುತ್ತಿದೆ. ಇದು ತುಳುನಾಡಿನ ಭೂತಾರಾಧನೆಯ ಪರಿಕಲ್ಪನೆಯನ್ನು ಆಮೂಲಾಗ್ರವಾಗಿ ಬದಲಾಯಿಸಿದರೂ ಆಶ್ಚರ್ಯಪಡಬೇಕಾಗಿಲ್ಲ.
✍️ ಸುಂದರ ಕೇನಾಜೆ