“ಸೋಲೆಂಬ ರೋಗವನ್ನು ಕೊಲ್ಲಲು ಆತ್ಮವಿಶ್ವಾಸ ಮತ್ತು ಶ್ರಮವೇ ಮದ್ದು” ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರವರ ಮಾತಿದು. ತೀರ ಕಿರಿಯ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿರುವ ಶ್ರೀಯುತ ಹಾಲಾಡಿ ಆದರ್ಶ್ ಶೆಟ್ಟಿಯವರ ಬದುಕಿನಲ್ಲಿ ಈ ಮಾತು ನೂರಕ್ಕೆ ನೂರು ಸತ್ಯ.
“ತಾಳ್ಮೆ ಕಹಿ ಎನ್ನುವುದು ನಿಜ ಆದರೆ ಅದರ ಫಲ ಸಿಹಿಯಾಗುತ್ತದೆ” ಶ್ರೀಯುತ ಹಾಲಾಡಿ ಆದರ್ಶ್ ಶೆಟ್ಟಿ ನಂಬಿದ ಜೀವನ ಮೌಲ್ಯವಿದು.
ಹೋಟೆಲು ಉದ್ಯಮದಲ್ಲಿ 18 ವರ್ಷದ ಸುದೀರ್ಘ ಅನುಭವವಿರುವ ಶ್ರೀಯುತ ಹಾಲಾಡಿ ಆದರ್ಶ್ ಶೆಟ್ಟಿಯವರು ಈ ಎತ್ತರಕ್ಕೆ ಬೆಳೆದು ನಿಲ್ಲಲು ಕಾರಣವಾದದ್ದು ವೃತ್ತಿಯುದ್ಧ ಅವರು ನಡೆಸಿಕೊಂಡು ಬಂದ ಆತ್ಮಾವಲೋಕನ ಮತ್ತು ತಾಳ್ಮೆ. ಸ್ನೇಹ ಜೀವಿಯಾಗಿ, ಸಂಘಟನಾ ಶಕ್ತಿಯಾಗಿ ಈ ಉದ್ಯಮದಲ್ಲಿ ಅವರು ಬೆಳೆದು ನಿಂತ ಕಥೆ ಇತರರಿಗೆ ಮಾದರಿಯಾಗುವಂತಹದ್ದು.
ಸ್ವಭಾವತಃ ಆದರ್ಶ್ ಶೆಟ್ಟಿ ಆಹಾರ ಪ್ರಿಯ, ಭೋಜನ ಪ್ರಿಯರು. ಯಾವುದೇ ಆಹಾರವಿರಲಿ ಅದರ ಸ್ವಾದದಲ್ಲಿರುವ ವಿಶೇಷತೆಯನ್ನು ಗುರುತಿಸಿ ಅದು ಬಹುಜನಪ್ರಿಯವಾಗುವಂತೆ ರೂಪಿಸುವಲ್ಲಿ ಇವರು ನಿಸ್ಸೀಮರು. ತನ್ನಲ್ಲಿರುವ ಈ ವಿಶೇಷತೆಯನ್ನು ವೃತ್ತಿಯಾಗಿಸಿಕೊಂಡು ಓರ್ವ ಯಶಸ್ವಿ ವಾಣಿಜ್ಯೋದ್ಯಮಿಯಾಗಿ ಅವರು ರೂಪುಗೊಂಡ ಪರಿ ವಿಶೇಷವಾದದ್ದು. ಆಹಾರದಲ್ಲಿ ಶಿಸ್ತು, ಸಂಯಮ, ಕಲಾತ್ಮಕತೆಯಿದ್ದರೆ ಅದು ಎಂತಹವರನ್ನು ಸೆಳೆಯುತ್ತದೆ. ಸದಭಿರುಚಿ ಇರುವ ಭೋಜನದಲ್ಲಿ ಒಂದು ಜೀವನ ಸಂಸ್ಕೃತಿ ಇರುತ್ತದೆ ಎಂದು ಮನಗಂಡಿರುವ ಹಾಲಾಡಿ ಆದರ್ಶ್ ಶೆಟ್ಟಿಯವರು ತಮ್ಮದೇ ವಿನೂತನ ಮಾದರಿಯಲ್ಲಿ ಖ್ಯಾತನಾಮರನ್ನು, ತಾರೆಗಳನ್ನು ಸೆಳೆದಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಮತ್ತು ಇವರ ಅತಿಥಿಗೃಹಗಳಲ್ಲಿ ಸಿದ್ಧವಾಗುವ ಆರೋಗ್ಯ ಶಾಸ್ತ್ರದ ನಿಯಮಗಳಿಗೆ ತಕ್ಕಂತೆ ಇರುತ್ತದೆ ಎನ್ನುವುದು ಗಮನಾರ್ಹ.
ಅತಿಥೇಯರಾಗಿ ತಮ್ಮದೇ ಸಜ್ಜನಿಕೆ ಸದಭಿರುಚಿ, ತಾಳ್ಮೆ ವಿನಯವಂತಿಕೆಯ ಸಹ ಉದ್ಯೋಗಿಗಳನ್ನು ಮುನ್ನಡೆಸುತ್ತಿರುವ ಹಾಲಾಡಿ ಆದರ್ಶ್ ಶೆಟ್ಟಿಯವರು ದೇಶದ ಉದ್ದಗಲ “ಗೋಲ್ಡನ್ ಫೋರ್ಕ್” ಎಂಬ ಹೆಸರಿನ ಸಂಸ್ಥೆಯನ್ನು ತನ್ನ ಬ್ರಾಂಡ್ ಆಗಿ ಇಟ್ಟುಕೊಂಡು ಇದರ ಮೊದಲ ಶಾಖೆಯನ್ನು ಮುಂಬೈ ಮಹಾನಗರದಲ್ಲಿ ಪ್ರಾರಂಭಿಸಿದ ಮಲ್ವನ್ ತಡ್ಕ (Malvan Tadka) ಸಮುದ್ರ ಆಹಾರದ ಶಾಖಾಹಾರಿಗಳಿಗಾಗಿರುವ ವಿಶೇಷ ಹೋಟೆಲು ಮುಂಬಾಯಿಯ ಕಾಮೋಟೆ, ಲೂಯಿಸ್ವಾಡಿ (ಥಾಣೆ), ಉಲ್ವೆ, ಪುಣೆ, ಚೆಂಬೂರು, ಪನ್ವೇಲ್, ವಿತಾವ, ಪಲಾವ, ಬೆಂಗಳೂರು, ಬೇಲಾಪುರ್, ಕಲಂಬೋಲಿ, ವಾಶಿ, ಹೀಗೆ ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳ ಬೇರೆ ಬೇರೆ ಭಾಗಗಳಲ್ಲಿ ಹೋಟೆಲ್ ಉದ್ಯಮವನ್ನು ವಿಸ್ತರಿಸುವುದಕ್ಕೆ ಕಾರಣವಾದದ್ದು ತಮ್ಮ ಜೀವನ ಪ್ರಾರಂಭದಲ್ಲಿ ಈ ಉದ್ಯಮದಲ್ಲಿ ಆದ ಸೋಲಿನಿಂದ ಕಲಿತ ಪಾಠ. ಸೋಲೇ ಗೆಲುವಿನ ಮೆಟ್ಟಿಲು ಎನ್ನುವ ಮಾತು ಹಾಲಾಡಿ ಆದರ್ಶ್ ಶೆಟ್ಟಿಯವರ ಜೀವನದಲ್ಲಿ ನೂರಕ್ಕೆ ನೂರು ಸತ್ಯ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾಸಾಡಿ ಸಬ್ಬಾಗಿಲು ಎಂಬ ಗ್ರಾಮದಲ್ಲಿ 1982 ರಲ್ಲಿ ಅಲ್ತಾರು ಶರತ್ ಶೆಟ್ಟಿ ಮತ್ತು ಶ್ರೀಮತಿ ರತಿ ಶೆಡ್ತಿ ದಂಪತಿಗಳ ಪುತ್ರನಾಗಿ ಹಾಲಾಡಿ ಆದರ್ಶ್ ಶೆಟ್ಟಿ ಜನಿಸಿದರು. ಜೀವ ವಿಮಾ ನಿಗಮದ ಏಜೆಂಟ್ರಾಗಿದ್ದ ತಂದೆಯವರು ಗ್ರಾಮದ ಶಾಲೆಯೊಂದರಲ್ಲಿ ಅಧ್ಯಾಪಕಿಯಾಗಿದ್ದ ತಾಯಿಯವರು ಸಹಜವಾಗಿಯೇ ಮದ್ಯಮ ವರ್ಗದ ಎಲ್ಲಾ ಹೆತ್ತವರಂತೆ ಮಕ್ಕಳು ಉನ್ನತ ಶಿಕ್ಷಣ ಪಡೆದು ಬದುಕಿನಲ್ಲಿ ನೆಲೆ ಕಾಣಬೇಕೆಂದು ಬಯಸಿದ್ದರು. ಹೈಕಾಡಿ ಮತ್ತು ಕಾಸಾಡಿ ಶಾಲೆಗಳಲ್ಲಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಆದರ್ಶ್ ಮುಂದಿನ ವಿದ್ಯಾಭ್ಯಾಸಕ್ಕೆ ಬೆಳಗಾವಿಗೆ ತೆರಳಿ ಅಲ್ಲಿ ತನ್ನ ಚಿಕ್ಕಪ್ಪ ಚಿಕ್ಕಮ್ಮನ ಆಶ್ರಯ ಪಡೆದರು. ಅಲ್ಲಿ ಹೋಟೆಲಿನಲ್ಲಿ ಬಿಡುವಿನ ವೇಳೆಯಲ್ಲಿ ದುಡಿಯುತ್ತ ಜಿ.ಎ. ಕಾಲೇಜಿನಲ್ಲಿ ವಾಣಿಜ್ಯದಲ್ಲಿ ಪದವಿ ಪಡೆದರು. ಬಾಲ್ಯದಲ್ಲೇ ಹೋಟೆಲ್ ಉದ್ಯಮದ ಬಗ್ಗೆ ತುಸು ತಿಳಿದಿದ್ದ ಆದರ್ಶ್ನಿಗೆ ಪದವಿ ಶಿಕ್ಷಣದ ನಂತರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಾನು ಹೋಟೆಲ್ ತೆರೆಯಬೇಕು ಎಂದು ಬಯಸಿದರು. ಅದರಂತೆ ಬೆಂಗಳೂರಿನ ಯಶವಂತಪುರದಲ್ಲಿ ಸಣ್ಣ ಹೋಟೆಲು ತೆರೆದರು. ಆದರೆ ಈ ವ್ಯಾಪಾರದಲ್ಲಿ ಅವರು ಸೋಲು ಅನುಭವಿಸಿದರು. ಈ ಸೋಲು ಅವರಿಗೆ ಕಲಿಸಿದ ಪಾಠ ದೊಡ್ಡದು. ಸೋತೆನೆಂದು ಕೈಚೆಲ್ಲಿ ಕೂರದೆ ತಮ್ಮ ಸೋದರ ಸಂಬಂಧಿ, ಸ್ನೇಹಿತರೂ ಆಗಿದ್ದ ಜಯ ಶೆಟ್ಟಿಯವರ ಸಹಕಾರ ಪಡೆದು ಮುಂಬೈಯ ಕಲ್ಯಾಣ್ ಗೆ ಬಂದರು. ಇದು 2003 ನೇ ಇಸವಿ ಮಾಯನಗರಿ ಮುಂಬಾಯಿ. ಭಾಷೆ ಬೇರೆ ಇವರಿಗೆ ತೊಡಕಾಗಿತ್ತು. ಅಪರಿಚಿತರ ಈ ನಾಡಿನಲ್ಲಿ ಇವರು ಕಂಗೆಡಲಿಲ್ಲ. ನಿಧಾನವಾಗಿ ಈ ಜನರ ನಾಡಿಮಿಡಿತ ಅರಿತರು. ದಾದರ್ ನ ಸುರೇಶ್ ಶೆಟ್ಟಿ ಮರಾಠರ ಸಹಕಾರದಿಂದ ರ್ಯಾಮಿ ಹೋಟೆಲ್ನಲ್ಲಿ ಉದ್ಯೋಗ ಪ್ರಾರಂಭಿಸಿದರು. ನಂತರ ಕಲ್ಯಾಣ್ ನ ಸಂತೋಷ ಶೆಟ್ಟಿಯವರ ಸಹಕಾರದಿಂದ ಸುರೇಂದ್ರ ಶೆಟ್ಟಿಯವರ ‘ಹೋಟೆಲ್ ಸಂಗಮ್’ ನಲ್ಲಿ ಬಿಲ್ ಮೇಕರ್ ಆಗಿ ತಿಂಗಳಿಗೆ ರೂಪಾಯಿ 3000/- ಕ್ಕೆ ಕೆಲಸಕ್ಕೆ ಸೇರಿಕೊಂಡರು. ನಂತರ ಇವರು ಹೋಟೆಲ್ ಕನ್ಸಲ್ಟನ್ಸಿ ಮ್ಯಾನೇಜ್ಮೆಂಟ್ ಕೋರ್ಸ್ಗೆ ಸೇರಿಕೊಂಡರು. 2004 ನೇ ಇಸವಿಗೆ ‘ಸಾಯಿ ಕನ್ಸಲ್ಟನ್ಸಿ ಆ್ಯಂಡ್ ಮ್ಯಾನೇಜ್ಮೆಂಟ್’ ಎಂಬ ಸಂಸ್ಥೆ ತೆರೆದು, ಹೋಟೆಲು ಉದ್ಯಮವನ್ನು ಶಿಕ್ಷಣದ ಪರಿಧಿಯೊಳಗೆ ತಂದು ಉದ್ಯಮವನ್ನು ಕೌಶಲ್ಯವಾಗಿ ವೃದ್ಧಿಸುವಲ್ಲಿ ಹಲವಾರು ಉದ್ಯೋಗಾಕಾಂಕ್ಷಿಗಳಿಗೆ ಸಮರ್ಥ ಜ್ಞಾನ ಮಾರ್ಗದರ್ಶನ ನೀಡುತ್ತಿದ್ದ ಈ ಸಂಸ್ಥೆ ಹೋಟೆಲು ಮಾಲೀಕರಿಗೆ ಅಂತೆಯೇ ಉದ್ಯೋಗಾಕಾಂಕ್ಷಿಗಳಿಗೆ ಏಕಕಾಲಕ್ಕೆ ಬೇಡಿಕೆಗಳನ್ನು ಪೂರೈಸುವ ಸಂಸ್ಥೆಯಾಗಿ ಬೆಳೆಯಿತು.
ಜೀವನದಲ್ಲಿ ಅನುಭವಿಸಿದ ಸೋಲು, ಅವಮಾನಗಳನ್ನು ಮೆಟ್ಟಿನಿಂತು ಬದುಕಿನ ಒಂದೊಂದೇ ಮೆಟ್ಟಿಲುಗಳನ್ನು ಏರತೊಡಗಿದ ಹಾಲಾಡಿ ಆದರ್ಶ್ ಶೆಟ್ಟಿಯವರು ‘ಸಾಯಿ ಕನ್ಸಲ್ಟೆನ್ಸಿ ಆ್ಯಂಡ್ ಹೋಟೆಲ್ ಮ್ಯಾನೇಜ್ಮೆಂಟ್’ ಸಂಸ್ಥೆಯಲ್ಲಿ ಹೋಟೆಲು ಉದ್ಯಮದಲ್ಲಿ ವೃತ್ತಿ ಪರಿಣಿತರನ್ನು ಸಿದ್ದಗೊಳಿಸುವುದರ ಜೊತೆಗೆ ತಾವು ಒಬ್ಬ ಯಶಸ್ವೀ ಉದ್ಯಮಿಯಾಗಿ ಬೆಳೆದು ನಿಲ್ಲಲು ಅಗತ್ಯವಾದ ಕಾರ್ಯದಕ್ಷತೆ, ಸಂಘಟನಾ ಚಾತುರ್ಯ, ವಿನಯವಂತಿಕೆಯನ್ನು ಮೈಗೂಡಿಸಿಕೊಂಡರು. ಇಲ್ಲಿ ಹೋಟೆಲು ಮಾಲಿಕರ ಜೊತೆ ಬೆಳೆದ ನಂಟು ಇವರಿಗೆ ನವ ನವೀನ ಅವಕಾಶಗಳು ಒದಗಿ ಬರಲು ಸಹಕಾರಿಯಾಯಿತು. ಆದರ್ಶ್ ಶೆಟ್ಟಿಯವರು ಆರ್ಥಿಕವಾಗಿಯೂ ಸಬಲರಾದರು.
ಮೋಹನ್ ದಾಸ್ ಶೆಟ್ಟಿ ಹಾಗೂ ಶಾಂತರಾಮ್ ಶೆಟ್ಟಿ ಪಾಲುದಾರಿಕೆಯ ನವಿ ಮುಂಬಯಿ ಕಾಮೋಟೆಯ ವೆಂಕಟ್ ಪ್ರೆಸಿಡೆನ್ಸಿ ಹೋಟೆಲಿನಲ್ಲಿ ರೆಸ್ಟೋರೆಂಟ್ ಮಾಡಲು ಅವಕಾಶ ಆದರ್ಶ್ ಶೆಟ್ಟರಿಗೆ ದೊರೆಯಿತು.
ಗುರಿಯ ಬಗ್ಗೆ ಸ್ಪಷ್ಟತೆಯಿದ್ದರೆ ಆಕಾಶದೆತ್ತರ ಕನಸು ಕಾಣಬಹುದು ಮತ್ತು ಸಾಧನೆಯ ಪಥದಲ್ಲಿ ಚಲಿಸಬಹುದು ಎನ್ನುವುದಕ್ಕೆ ಸಾಕ್ಷಿಯೆನ್ನುವಂತೆ ಹಾಲಾಡಿ ಆದರ್ಶ್ ಶೆಟ್ಟಿಯವರು ಹಿಂತಿರುಗಿ ನೋಡದೆ ಯಶಸ್ಸಿನ ಒಂದೊಂದೇ ಮೆಟ್ಟಿಲು ಏರಿ ಸಮಾಜ ಗುರುತಿಸುವಂತಹ ವಾಣಿಜ್ಯ ಉದ್ಯಮಿಯಾಗಿ ಮೂಡಿ ಬಂದಿದ್ದಾರೆ. “ತುಕ್ಕು ಹಿಡಿದು ಹೋಗಬೇಡ, ತೇದು ಹೋಗು” ಎನ್ನುತ್ತಾರೆ ಸರ್.ಎಂ. ವಿಶ್ವೇಶ್ವರಯ್ಯ.
ಶ್ರೀಯುತ ಹಾಲಾಡಿ ಆದರ್ಶ್ ಶೆಟ್ಟಿಯವರದು ಎಲೆಮರೆ ಕಾಯಿಯಂತಹ ವಿಶೇಷ ವ್ಯಕ್ತಿತ್ವ, ಛಲ, ಅವಿರತ ಶ್ರಮ, ಸಜ್ಜನಿಕೆಯನ್ನೇ ನಂಬಿ ಬದುಕಿದ ಇವರು ತಮ್ಮ ಹೆಸರಿಗೆ ತಕ್ಕಂತೆ ಜೀವನ ಮೌಲ್ಯಗಳನ್ನು ಇಟ್ಟುಕೊಂಡು ಬದುಕಿದವರು. ‘ಎಡಕ್ಕೆ ಕೊಟ್ಟದ್ದು ಬಲ ಕೈಗೆ ತಿಳಿಯಬಾರದು ಎನ್ನುವ ನಾಣ್ಣುಡಿಯಂತೆ ತನ್ನ ಸಂಪಾದನೆಯ ಒಂದು ಭಾಗವನ್ನು ಸಾಮಾಜಿಕ ಕಾರ್ಯಗಳಿಗಾಗಿ, ನೊಂದವರಿಗೆ, ದೀನ ದಲಿತರಿಗೆ, ಶಿಕ್ಷಣಕ್ಕೆ ವಿನಿಯೋಗಿಸುತ್ತ ಬಂದಿದ್ದರೂ ಇದು ಇತರರಿಗೆ ತಿಳಿಯಬಾರದೆಂದು ಎಚ್ಚರ ವಹಿಸುತ್ತಿರುತ್ತಾರೆ. ದೇಶದ ಯುವ ಜನತೆಯ ಬಗ್ಗೆ ವಿಶ್ವಾಸವಿರುವ ಶ್ರೀಯುತರು ಯುವ ಶಕ್ತಿಯನ್ನು ಉತ್ತಮ ನಾಗರೀಕರಾಗಿ ರೂಪಿಸುವ ಸಮಾಜಮುಖಿ ಚಿಂತನೆ ಇರುವವರು.
ತನ್ನೆಲ್ಲಾ ಕೆಲಸ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತ ಧರ್ಮಪತ್ನಿ ಶ್ರೀಮತಿ ನಯನ್ ಆದರ್ಶ್ ಶೆಟ್ಟಿ ಹಾಗೂ ಮಕ್ಕಳಾದ ಮಾಸ್ಟರ್ ಅಂಗದ್ ಎ ಶೆಟ್ಟಿ ಮತ್ತು ಅನಯ್ ಎ ಶೆಟ್ಟಿ ಅವರೊಂದಿಗೆ ಆದರ್ಶ್ ಶೆಟ್ಟರು ಸುಖಿ ಸಂಸಾರ ಹೊಂದಿದ್ದು, ಸಹೋದರಿ ಅವಶ್ಯ ಶೆಟ್ಟಿ ವಿವಾಹಿತೆಯಾಗಿದ್ದು, ಸಹೋದರ ಸಂದರ್ಶ್ ಶೆಟ್ಟಿ ಅಣ್ಣ ಆದರ್ಶ್ ಶೆಟ್ಟರೊಂದಿಗೆ ಹೋಟೆಲ್ ಉದ್ಯಮದಲ್ಲಿ ಭಾಗಿಯಾಗಿದ್ದಾರೆ.
ಸಿನಿಮಾ ನಿರ್ಮಾಣದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಸಲ್ಮಾನ್ ಖಾನ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಶ್ರೀಯುತ ಹಾಲಾಡಿ ಆದರ್ಶ್ ಶೆಟ್ಟಿಯವರ “ಗೋಲ್ಡನ್ ಫೋರ್ಕ್” ಎಂಬ ಸಂಸ್ಥೆಯಡಿಯಲ್ಲಿ ‘ಮಲ್ವನ್ ತಡ್ಕ’ ಹೆಸರಿನ ಹೋಟೆಲ್ ಉದ್ಯಮ ದೇಶ ವಿದೇಶಗಳಲ್ಲಿ ತನ್ನ ಶಾಖೆ ವಿಸ್ತರಿಸಿಕೊಂಡು ಕರಾವಳಿಯ ಈ ಮಣ್ಣಿನ ಪರಿಮಳ ಬೀರುತ್ತಿರಲಿ. ಆ ಮೂಲಕ ನೆಲದ ಸಂಸ್ಕೃತಿಯ ವಿಶೇಷತೆ, ಆಹಾರ ವಿಹಾರಗಳ ಸಮೃತದ್ಧತೆ, ಪ್ರೀತಿ, ನೀತಿಯೊಳಗಿನ ಸಾಮರಸ್ಯದ ಬಹುಮುಖವನ್ನು ನಾಡಿನುದ್ದಗಲ ಪಸರಿಸಲಿ ಅವರ ಈ ಕಾರ್ಯದಲ್ಲಿ ಯಶಸ್ಸು ಅವರದಾಗಲಿ ಕುಟುಂಬ ಜೀವನ, ಸಾಮಾಜಿಕ ಜೀವನವೂ ಈ ಮೂಲಕ ವಿಸ್ತರಿಸಿಕೊಂಡು ಕರಾವಳಿಯ ಮಣ್ಣಿನ ಮಗನಾಗಿ ಅವರ ಕೀರ್ತಿ ಸದಾ ಬೆಳಗುತ್ತಿರಲಿ ಎಂಬ ಆಶಯ, ಶುಭಾಶಯ ನಮ್ಮದು.