ಜೀವನದಲ್ಲಿ ಉನ್ನತ ಧ್ಯೇಯ, ಕಠಿಣ ಪರಿಶ್ರಮ, ಸಾಧನೆಯ ಛಲ, ನಡೆ ನುಡಿಯಲ್ಲಿ ಪ್ರಾಮಾಣಿಕತೆ ಇವುಗಳು ಜೀವನದ ಯಶಸ್ಸಿನ ಗುಟ್ಟು ಎನ್ನುವುದು ಸರ್ವೇಸಾಮಾನ್ಯವಾದ ಮಾತು. ಆದರೆ ಇದೆಲ್ಲವನ್ನೂ ಜೀವನದಲ್ಲಿ ಅನುಸಂಧಾನ ಮಾಡಿಕೊಂಡು ಮುನ್ನಡೆದು ಸಾಧಕರಾಗಿ ಕಾಣಸಿಗುವವರು ವಿರಳ. ಇಂತಹ ಸಾಲಿನಲ್ಲಿ ವಿಶೇಷವಾಗಿ ಕಂಡುಬರುವ ಡೊಂಬಿವಲಿ, ಥಾಣೆ, ಮುಂಬಯಿ ಪರಿಸರದಲ್ಲಿ ಸಮಾಜಸೇವಕರಾಗಿ, ಜನಾನುರಾಗಿಯಾಗಿ ತುಳು ಕನ್ನಡಿಗರಲ್ಲಿ ಅನ್ಯೋನ್ಯತೆಯೊಂದಿಗೆ ಬೆರೆತು ಬಾಳುವ, ಯಾವುದೇ ಪ್ರಚಾರವನ್ನು ಬಯಸದೇ, ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿರುವ ವ್ಯಕ್ತಿತ್ವವೆಂದರೇ ಅದು ಅಡ್ವೋಕೇಟ್ ಸುರೇಶ್ ಶ್ಯಾಮ ಶೆಟ್ಟಿಯವರು. ಎಡಗೈಯ್ಯಲ್ಲಿ ನೀಡಿದ್ದು ಬಲಗೈಗೆ ಗೊತ್ತಾಗಬಾರದು ಎನ್ನುವ ಮನೋಧರ್ಮವನ್ನು ರೂಡಿಸಿಕೊಂಡು ಯಾರೇ ನೆರವಿಗೆ ಬಂದರೂ ತನ್ನಿಂದಾದ ಸಹಾಯ ಮಾಡಿ ಪರೋಪಕಾರ ಧರ್ಮದಲ್ಲಿ ಧನ್ಯತೆಯನ್ನು ಕಾಣುವ ಇವರ ಮುಖದಲ್ಲಿ ಸದಾ ಮಂದಹಾಸ, ಮೃದು ಮಾತು ಎಲ್ಲರನ್ನೂ ಸ್ನೇಹಭಾವದಿಂದ ಕಾಣುವ ಇವರ ಸ್ವಭಾವ ಎಂತಹವರನ್ನೂ ಆಕರ್ಷಿಸದೆ ಇರದು.
ಸಾಂತೂರ್ ಬಾಳಿಕೆ ಶ್ಯಾಮ ಶೆಟ್ಟಿಯವರ ಸುಪುತ್ರರಾಗಿ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರು ಉಡುಪಿ ಜಿಲ್ಲೆಯಲ್ಲಿ ಮುಗಿಸಿ ಡಿಗ್ರೀ ಹಾಗೂ ಎಲ್ ಎಲ್ ಬಿ ವಿದ್ಯಾಭ್ಯಾಸವನ್ನು ಮುಂಬಯಿ ಯೂನಿವರ್ಸಿಟಿಯಲ್ಲಿ ಮುಗಿಸಿದರು.
ಕೇವಲ ಹೈಕೋರ್ಟ್ ವಕೀಲರಾಗಿ ಯಶಸ್ಸನ್ನು ಪಡೆದುಕೊಂಡು ತಮ್ಮಷ್ಟಕ್ಕೆ ತಾವಿರದೆ ತಾನು ಬಂದ ಸಮಾಜವನ್ನೂ ಪ್ರೀತಿಸಿಕೊಂಡು ತಾನಾರ್ಜಿಸಿದ ಸಂಪತ್ತಿನ ಒಂದಂಶವನ್ನು ಸಮಾಜದ ಏಳಿಗೆಗೂ ವ್ಯಯಿಸುತ್ತಾ ಕೇವಲ ಬಂಟ ಸಮಾಜವಲ್ಲದೇ ಎಲ್ಲಾ ಸಮಾಜ ಬಾಂಧವರ ಪ್ರೀತಿ ವಿಶ್ವಾಸಗಳಿಗೂ ಕಾರಣರಾಗಿದ್ದಾರೆ. ಮುಂಬಯಿ ಬಂಟರ ಸಂಘದ ಆಜೀವ ಸದಸ್ಯರಾಗಿ, ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಸದಸ್ಯರಾಗಿ, ಘಾಟ್ ಕೋಪರ್ ಕನ್ನಡ ವೆಲ್ಫೇರ್ ಸೊಸೈಟಿ ಆಜೀವ ಸದಸ್ಯರಾಗಿ, ಡೊಂಬಿವಲಿ ಕರ್ನಾಟಕ ಸಂಘದ ಆಜೀವ ಸದಸ್ಯರಾಗಿದ್ದುಕೊಂಡು ಸೇವೆ ಸಲ್ಲಿಸಿ ಸಂಸ್ಥೆಯ ಯಶಸ್ಸಿನಲ್ಲಿ ಪಾತ್ರವಹಿಸಿದ್ದಾರೆ. ಕಳೆದೆರಡು ದಶಕಗಳಿಂದಲೂ ಥಾಣೆ ಡಿಸ್ಟ್ರಿಕ್ಟ್ ಲೀಗಲ್ ಸರ್ವಿಸಸ್ ಆತೋರಿಟಿಯ ಸದಸ್ಯರಾಗಿ, ಥಾಣೆ ಡಿಸ್ಟ್ರಿಕ್ಟ್ ಕೋರ್ಟ್ ನ ಆಜೀವ ಸದಸ್ಯರಾಗಿ, ದಿ ಬೋಂಬೆ ಮೆಟ್ರೋಪೋಲೀಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಬಾರ್ ಅಸೋಸಿಯೇಷನ್ ನ ಆಜೀವ ಸದಸ್ಯರಾಗಿ ತನ್ನ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಾ ಬರುತ್ತಿದ್ದಾರೆ.
ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುತ್ತಾ ಸಮಾಜದ ಆಶಕ್ತರಿಗೆ ವೈದ್ಯಕೀಯ, ಶೈಕ್ಷಣಿಕ ಸೇವೆಗಳನ್ನು ನೀಡುತ್ತಾ ಬಂದಿರುತ್ತಾರಲ್ಲದೆ ಮಹಾರಾಷ್ಟದ ಹತ್ತಾರು ಸಂಘ ಸಂಸ್ಥೆಗಳಿಗೆ ನೆರವಿನ ಹಸ್ತವನ್ನು ನೀಡುತ್ತಾ ಪ್ರೋತ್ಸಾಹಿಸುವ ಕಾರ್ಯವನ್ನು ಕೂಡಾ ಮಾಡುತ್ತಾ ಬಂದಿದ್ದಾರೆ.
ಧರ್ಮಪತ್ನಿ ಸುಜಾತ ಶೆಟ್ಟಿ ಶೆಟ್ಟಿ, ಪುತ್ರ ಸರ್ವೇಶ್ ಶೆಟ್ಟಿ (ಬಿ.ಇ)ಯವರೊಂದಿಗಿನ ಸಂತೃಪ್ತ ಬದುಕು ಅವರದಾಗಿದ್ದು ಭವಿಷ್ಯದಲ್ಲಿ ದೇವರು ದೀರ್ಘಾಯುಷ್ಯ, ಆರೋಗ್ಯ ಭಾಗ್ಯ, ಸುಖ ಸಂಪತ್ತುಗಳನ್ನು ನೀಡಿ ದಯಪಾಲಿಸಲಿ ಎಂದು ಶುಭವನ್ನು ಹಾರೈಸೋಣ.