ಕಡಲ ತೀರ ಸ್ವಚ್ಛತೆಯನ್ನು ಮಾಡುವ ಮೂಲಕ ನಾವು ಮುಂದಿನ ಯುವ ಪೀಳಿಗೆಗೆ ಮಾದರಿಯಾದಂತಹ ಕಾರ್ಯವನ್ನು ಮಾಡುತ್ತಿದ್ದೇವೆ. ನಾವೆಲ್ಲರೂ ಸಹ ದೇವರು ಕೊಟ್ಟಂತಹ ಪ್ರಕೃತಿಯೆಂಬ ಪವಿತ್ರ ಸ್ವತ್ತಿನ ಪಾಲಕರು. ಇದರ ರಕ್ಷಣೆಯ ಹೊಣೆ ನಮ್ಮದು ಎಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಹೇಳಿದರು.
ಅವರು ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾಪುರ ವಕೀಲರ ಸಂಘ, ಅರಣ್ಯ ಇಲಾಖೆ ಕುಂದಾಪುರ ವಲಯ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ, ಎಫ್ಎಸ್ಎಲ್ ಇಂಡಿಯಾ, ಭಂಡಾರ್ಕಾರ್ಸ್ ಕಾಲೇಜಿನ ಎನ್ಸಿಸಿ ಬೆಟಾಲಿಯನ್ ಹಾಗೂ ರೆಡ್ಕ್ರಾಸ್ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೋಡಿ ಬೀಚ್ನಲ್ಲಿ ರವಿವಾರ ಆಯೋಜಿಸಿದ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ತಾ| ಕಾನೂನು ಸೇವಾ ಸಮಿತಿ ಅಧ್ಯಕ್ಷ, ಹಿರಿಯ ಸಿವಿಲ್ ನ್ಯಾಯಾಧೀಶ ರಾಜು ಎನ್. ಮಾತನಾಡಿ, ಪರಿಸರ ದಿನಾಚರಣೆ ಹಾಗೂ ತಂಬಾಕು ನಿಷೇಧ ಒಂದಕ್ಕೊಂದು ಪೂರಕವಾದಂತಹ ಕಾರ್ಯಕ್ರಮ. ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ತಪ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ರಾಜ್ಯದ ಇತರೆಲ್ಲ ಕಡೆಗಳಿಗಿಂತಲೂ ಕರಾವಳಿ ಭಾಗದಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಸಹಭಾಗಿತ್ವ, ಸ್ವಹಿತಾಸಕ್ತಿ, ಸ್ವಪ್ರೇರಣೆಯಿಂದ ಭಾಗಿಯಾಗುತ್ತಿರುವುದು ಎಲ್ಲರಿಗೂ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪರಿಸರ ದಿನದ ಅಂಗವಾಗಿ ಕುಂದಾಪುರ ವಿಭಾಗ ವ್ಯಾಪ್ತಿಯ 50 ಕಡೆಗಳಲ್ಲಿ ಒಂದು ವಾರಗಳ ಕಾಲ 1,200 ಕೆ.ಜಿ. ಸಸಿಗಳ ಬೀಜವನ್ನು ಬಿತ್ತನೆ ಹಾಗೂ ಸಾರ್ವಜನಿಕರಿಗೆ ವಿತರಿಸಲಾಗುವುದು. ಈ ಕಾರ್ಯಕ್ಕೆ ವಿವಿಧ ಕಾಲೇಜುಗಳ ಎನ್ಸಿಸಿ, ಸ್ಕೌಟ್- ಗೈಡ್ಸ್ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಗ್ರಾ.ಪಂ.ಗಳು, ಸ್ಥಳೀಯ ಸಂಘ-ಸಂಸ್ಥೆಗಳು ಸಹಕರಿಸಲಿದ್ದಾರೆ ಎಂದ ಅವರು, ಪರಿಸರ ಸಂರಕ್ಷಣೆಯ ಮೂಲಕ ನಾವು ಅದನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುತ್ತಿದ್ದೇವೆ. ನಮ್ಮ ಜವಾಬ್ದಾರಿಯನ್ನು ಸಹ ಸರಿಯಾಗಿ ನಿರ್ವಹಿಸುತ್ತೇವೆ ಎನ್ನುವ ಪ್ರತಿಜ್ಞೆಯನ್ನು ಈ ದಿನ ತೆಗೆದುಕೊಳ್ಳುವ ಎಂದು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಎಂ.ವಿ. ಹೇಳಿದರು.
ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಧಾನೇಶ ಮುಗಳಿ, ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶೆ ರೋಹಿಣಿ ಡಿ., 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶೆ ವಿದ್ಯಾ ಎ.ಎಸ್., ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ವಕೀಲರ ಸಂಘದ ಸದಸ್ಯರು, ಕ್ಲೀನ್ ಕುಂದಾಪುರದ ಭರತ್ ಬಂಗೇರ ಹಾಗೂ ತಂಡ, ಎಫ್ಎಸ್ಎಲ್ ಇಂಡಿಯಾದ ಸದಸ್ಯರು, ರೆಡ್ಕ್ರಾಸ್ನ ಶಿವರಾಮ ಶೆಟ್ಟಿ, ಲಯನ್ಸ್ ಕ್ಲಬ್ನ ಅಧ್ಯಕ್ಷೆ ಸರಸ್ವತಿ ಪುತ್ರನ್, ಸದಸ್ಯರು, ಕೋಡಿ ಚಕ್ರೇಶ್ವರಿ ದೇಗುಲದ ಗೋಪಾಲ್ ಪೂಜಾರಿ, ಹಿರಿಯರಾದ ಗೋಪಾಲ್ ಬಾಳಿಗ, ಭಾಸ್ಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಪ್ರಸ್ತಾವಿಸಿ, ಸ್ವಾಗತಿಸಿದರು. ಕ್ಲೀನ್ ಕುಂದಾಪುರದ ಗಣೇಶ್ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು.