ಮಹಾರಾಷ್ಟ್ರದ ಪ್ರತಿಷ್ಠಿತ ಕಲಾ ಸಂಸ್ಥೆಯಾದ ರಂಗಭೂಮಿ ಫೈನ್ ಆರ್ಟ್ಸ್ ಇದರ ನೂತನ ಅಧ್ಯಕ್ಷರಾಗಿ ರಂಗ ಕಲಾವಿದ ಸಂಘಟಕ ಅದ್ಯಪಾಡಿ ಬಾಲಕೃಷ್ಣ ಜಯ ಶೆಟ್ಟಿ ಆಯ್ಕೆಯಾಗಿದ್ದಾರೆ. ನವಿಮುಂಬಯಿಯ ನೆರುಲ್ ಶ್ರೀ ಶನೀಶ್ವರ ಮಂದಿರದ ಕಿರು ಸಭಾಂಗಣದಲ್ಲಿ ರಂಗಭೂಮಿಯ ಅಧ್ಯಕ್ಷ ಅನಿಲ್ ಹೆಗ್ಡೆ ಪೆರ್ಡೂರು ಅವರ ಅಧ್ಯಕ್ಷತೆಯಲ್ಲಿ ಜರಗಿದ 35 ನೇ ವಾರ್ಷಿಕ ಮಹಾಸಭೆಯಲ್ಲಿ ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಮೂಲತಃ ಮಂಗಳೂರಿನ ಅದ್ಯಪಾಡಿಯವರಾದ ಬಾಲಕೃಷ್ಣ ಜೆ ಶೆಟ್ಟಿಯವರು ಎಕ್ಕಾರು ಬೆಳ್ಳಿಮಾರುಗುತ್ತು ಜಯರಾಮ್ ಟಿ ಶೆಟ್ಟಿ ಮತ್ತು ಕೌಡೂರು ಪುನ್ಕೆದಡಿ ಲೀಲಾ ಜೆ ಶೆಟ್ಟಿ ದಂಪತಿಯ ಪುತ್ರ. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿ ಕಾಲೇಜು ವಿದ್ಯಾಭ್ಯಾಸವನ್ನು ಮೋಡರ್ನ್ ಕಾಲೇಜ್ ವಾಶಿಯಲ್ಲಿ ಪೂರೈಸಿದರು.
ಬಾಲ್ಯದಲ್ಲಿಯೇ ನಾಟಕ ರಂಗದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅವರು, ಮುಂಬಯಿಯಲ್ಲಿ ಅನೇಕ ಸಂಘ ಸಂಸ್ಥೆಗಳ ಮೂಲಕ ವಿವಿಧ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪ್ರಸಿದ್ಧ ರಂಗ ನಿರ್ದೇಶಕ ವೆಂಕಟೇಶ ಉಡುಪ ಕಟೀಲು, ಜಯರಾಮ ಕೆ ಸುವರ್ಣ, ವಿ.ಕೆ ಸುವರ್ಣ ಪಡುಬಿದ್ರಿ, ಅನಿಲ್ ಹೆಗ್ಡೆ ಪೆರ್ಡೂರು, ಜಗದೀಶ ಶೆಟ್ಟಿ ಕೆಂಚನಕೆರೆ, ನಾಗರಾಜ್ ಗುರುಪುರ, ಕರುಣಾಕರ್ ಕೆ ಕಾಪು, ಮನೋಹರ್ ಶೆಟ್ಟಿ ನಂದಳಿಕೆ ಮುಂತಾದವರ ನಿರ್ದೇಶನದಲ್ಲಿ ಅಭಿನಯಿಸಿದ್ದಾರೆ. ಯಕ್ಷಗಾನ ತಾಳಮದ್ದಳೆ ಹಾಗೂ ಶನಿ ಗ್ರಂಥ ಪುರಾಣದಲ್ಲೂ ಅರ್ಥಧಾರಿಯಾಗಿ ‘ಸೈ’ ಎನಿಸಿಕೊಂಡಿದ್ದಾರೆ. ಸದಾ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವಿವಿಧ ಸಂಘ ಸಂಸ್ಥೆಗಳಲ್ಲಿ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕೆಲವೊಂದು ನಾಟಕಗಳಲ್ಲಿ ನಿರ್ದೇಶನವನ್ನು ನೀಡಿರುವ ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಉತ್ತಮ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದಾರೆ.





















































































































