ತುಳುನಾಡಿನ ಗುತ್ತು ಪ್ರಧಾನ ಪ್ರಧಾನ ಪರಂಪರೆಯನ್ನು ಆಧುನಿಕ ಸಂದರ್ಭದಲ್ಲಿ ನಿರ್ಲಕ್ಷಿಸಿ ಹೇಗೆ ಆಧುನಿಕ ತಲೆಮಾರು ಮುಂದುವರಿಯಲು ಬಯಸುತ್ತದೆ ಎಂಬುದನ್ನು ‘ಗುತ್ತೊಂಜಿ ಕಥೆ ಆಂಡ್’ ನಾಟಕದ ಪಾತ್ರಗಳು ಅನಾವರಣಗೊಳಿಸಿವೆ. ತುಳು ನಾಟಕ ಕೃತಿಯು ನಮ್ಮ ನೆಲದ ಪರಂಪರೆ, ಸಂಸ್ಕೃತಿಯನ್ನು ಸಂರಕ್ಷಿಸುವ ಸಂದೇಶವನ್ನು ನೀಡುತ್ತದೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ| ಚಿನ್ನಪ್ಪ ಗೌಡ ಹೇಳಿದ್ದಾರೆ. ಪತ್ರಕರ್ತ ರಾಜೇಶ್ ಶೆಟ್ಟಿ ದೋಟ ಅವರ ‘ಗುತ್ತೊಂಜಿ ಕಥೆ ಆಂಡ್’ ತುಳು ನಾಟಕ ಕೃತಿಯನ್ನು ನಗರದ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.




ಗುತ್ತಿನ ವಿವಿಧ ಆಯಾಮಗಳ ಕುರಿತಂತೆ ಹಲವು ನಾಟಕಗಳು ಬಂದಿವೆ.ಈ ನಾಟಕದಲ್ಲಿ ಎರಡು ಸಂಪೂರ್ಣ ವಿರುದ್ಧ ನೆಲೆಗಳ ನಡುವೆ ನಡೆಯುವ ಸಂಘರ್ಷವನ್ನು ಅತ್ಯಂತ ಪರಿಣಾಮಕಾರಿಯಾಗಿ ತೆರೆದಿಡುವ ಪ್ರಯತ್ನ ಮಾಡಲಾಗಿದೆ. ತುಳು ಪರಂಪರೆ ಒಂದಲ್ಲ ಒಂದು ರೀತಿಯಲ್ಲಿ ನಾಶವಾಗಿಯೂ ಉಳಿಯುತ್ತದೆ ಹಾಗೂ ಅದನ್ನು ಸಂರಕ್ಷಿಸಬೇಕು ಎಂಬ ಸಂದೇಶವನ್ನು ನಾಟಕದಲ್ಲಿ ನೀಡಲಾಗಿದ್ದು ಇದರ ರಂಗ ಪ್ರವೇಶ ಯಶಸ್ಸು ಕಾಣಲಿದೆ ಎಂದು ಅವರು ಹೇಳಿದರು. ನ್ಯಾಯವಾದಿ ರಂಗಕರ್ಮಿ ಶಶಿರಾಜ್ ಕಾವೂರು ಕೃತಿಯ ಪರಿಚಯ ನೀಡಿದರು. ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಬಿ.ಎನ್., ಕೃತಿ ಕರ್ತೃ ರಾಜೇಶ್ ಶೆಟ್ಟಿ ದೋಟ ಉಪಸ್ಥಿತರಿದ್ದರು.ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ ಸ್ವಾಗತಿಸಿ, ನಿರೂಪಿಸಿದರು














































































































