ಕತಾರ್ನಲ್ಲಿರುವ ಬಂಟ ಸಮುದಾಯದ ಪ್ರಮುಖ ಸಂಘಟನೆಯಾದ ಬಂಟ್ಸ್ ಕತಾರ್ (Bunts Qatar) ಅಕ್ಟೋಬರ್ 9, 2026 ರಂದು ದೋಹಾದ ಆಲ್ ವಕ್ರಾ (Al Wakrah) ದಲ್ಲಿರುವ ಡಿಪಿಎಸ್ ಆಡಿಟೋರಿಯಂನಲ್ಲಿ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮವಾದ “ತರಂಗ್ -2026” (Tarang -2026) ಅನ್ನು ಆಯೋಜಿಸಿದೆ. ಈ ಭವ್ಯ ವೇದಿಕೆಯಲ್ಲಿ ಉದ್ಯಮಿ ಹಾಗೂ ಸಮಾಜ ಸೇವಕರಾದ ಶಂಕರ್ ಎಲೆಕ್ಟ್ರಿಕಲ್ಸ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಎಂಡಿ ಶ್ರೀ ರಾಜೇಶ್ ಶೆಟ್ಟಿ ಅವರಿಗೆ ಬಂಟ್ಸ್ ಕತಾರ್ ವತಿಯಿಂದ ಗೌರವಪೂರ್ವಕ ಸನ್ಮಾನ ನೆರವೇರಲಿದೆ. ದೋಹಾ ಕತಾರ್ ನ ಭಾರತೀಯ ರಾಯಭಾರಿ ಕಚೇರಿಯ ಪ್ರಥಮ ಕಾರ್ಯದರ್ಶಿ ಅಶ್ವನಿ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಈ ಸಾಂಸ್ಕೃತಿಕ ಸಂಜೆಯಲ್ಲಿ ಖ್ಯಾತ ಗಾಯಕರಾದ ಅನುರಾಧಾ ಭಟ್ ಸೇರಿದಂತೆ ಹಲವು ತಾರೆಯರು ಮತ್ತು ‘ಸರಿಗಮಪ’ ಖ್ಯಾತಿಯ ಪ್ರಮುಖ ಸಂಗೀತಗಾರರು ಭಾಗವಹಿಸಲಿದ್ದಾರೆ.




ಬಂಟ್ಸ್ ಕತಾರ್ ಸಂಸ್ಥೆಯು ವಿದೇಶದಲ್ಲಿ ತುಳುನಾಡಿನ ಕಲೆ, ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದರ ಜೊತೆಗೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಈ ವೇದಿಕೆಯಲ್ಲಿ ಗೌರವಿಸುತ್ತಾ ಬಂದಿದೆ. ಕರಾವಳಿಯ ಆರ್.ಜೆ ನಯನಾ ಶೆಟ್ಟಿ ಅವರು ಈ ಇಡೀ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು (Emcee) ನಡೆಸಿಕೊಡಲಿದ್ದಾರೆ. ಬಂಟ್ಸ್ ಕತಾರ್ ಅಧ್ಯಕ್ಷರಾದ ಸುಖರಾಮ ಶೆಟ್ಟಿ ಸೌಕೂರು ಮತ್ತು ಆಡಳಿತ ಮಂಡಳಿ ಸದಸ್ಯರು ಕತಾರ್ನಲ್ಲಿರುವ ಎಲ್ಲಾ ಬಂಟ ಬಾಂಧವರು ಹಾಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














































































































