ದೈವರಾಧನೆ, ಆತ್ಮಗಳ ಆರಾಧನೆಗಳಿಗೆ ಸಂಬಂಧ ಪಟ್ಟ ಕುರುಹುಗಳನ್ನು ನಾವು ವೇದ ಪೂರ್ವ ಕಾಲದ ಸಿಂಧೂ ನಾಗರಿಕತೆಯಲ್ಲಿ ಕಾಣಬಹುದು. ಸಿಂಧು ಸಂಸ್ಕೃತಿಯ ಕಾಲ, ಸಿಂಧು ಸಂಸ್ಕೃತಿಗೆ ನಾಗರಿಕತೆ ಹರಡಿದ್ದು ದಕ್ಷಿಣದಿಂದ ಎಂಬ ಮಾತಿನ ಪ್ರಕಾರದಂತೆ ನೋಡುವಾಗ ದಕ್ಷಿಣದಿಂದ ಹರಡಿದ್ದ ಸಿಂಧು ಸಂಸ್ಕೃತಿಯು ದ್ರಾವಿಡ ಹಾಗು ಆರ್ಯ ಸಂಸ್ಕೃತಿಯಿಂದ ಪೂರ್ವದ್ದು. ಆನಂತರ ಭಾರತದಲ್ಲಿ ಹಲವಾರು ಬದಲಾವಣೆಗಳು ಆದವು. ಅವುಗಳಲ್ಲಿ ಧಾರ್ಮಿಕತೆಗೆ ಪ್ರಾಧಾನ್ಯತೆ ಉಳ್ಳ ಭಕ್ತಿ ಪಂಥಗಳು ಉದಯಿಸಿದವು. ಅದುವೆ “ಆಳುಪರ” ಕಾಲ, ಈ ಕಾಲದಲ್ಲಿ ರಾಜ ಕುಟುಂಬಗಳು ಧಾರ್ಮಿಕತೆಗೆ ಹಾಗೂ ದೈವಾರಾಧನ ಪದ್ಧತಿಗಳಿಗೆ ಒತ್ತು ನೀಡಿದ್ದವು. ಈ ಆಳುಪರು ತುಳುನಾಡನ್ನು ಕ್ರಿ.ಶ 2ನೆ ಶತಮಾನದಿಂದ ಕ್ರಿ.ಶ 7ನೆ ಶತಮಾನದವರೆಗೆ, ತುಳುನಾಡಿನ ಯಾವುದೇ ಆರಾಧನಾ ಪದ್ಧತಿಗಳಿಗೆ ಒಂದಿಷ್ಟು ಚ್ಯುತ್ತಿ ಬಾರದಂತೆ ಸ್ವತಂತ್ರವಾಗಿ ಆಳಿದರು. ನಂತರದ ಕ್ರಿ.ಶ 7 ರಿಂದ ಕ್ರಿ.ಶ 12 ನೇ ಶತಮಾನದ ತನಕ ಈ ಆಳುಪರು “ಕದಂಬರ” ಸಾಮಂತರಾಗಿ ತುಳುನಾಡನ್ನು ಆಳಿದರು. ಇವರೇ ತುಳುನಾಡಿನ ಬಂಗ, ಚೌಟ, ಅಜಿಲ, ಕಾಜವ, ಶೇನವ ಮುಂತಾದವರು.
ಮುಂದೆ ಇದೇ ಆಳುಪರ ಹಾಗೂ ಕದಂಬರ ಆಡಳಿತದಲ್ಲಿ ವೈಫಲ್ಯತೆ ಏರ್ಪಟ್ಟ ಸಂದರ್ಭದಲ್ಲಿ ತುಳುರಾಜ್ಯವನ್ನು “ಹೊಯ್ಸಳ”ರ ಮಡಿಲಿಗೆ ಇಟ್ಟು ಅವರ ಜೊತೆ ವೈವಾಹಿಕ, ಧಾರ್ಮಿಕ ಹಾಗೂ ಸಾಮಾಜಿಕ ಸಂಬಂಧ ಬೆಳೆಸಿ ಮುಂದೆ ತುಳುನಾಡನ್ನು “ಬಲ್ಲಾಳ”(ಬಳ್ಳಾಕ್ಲು) ಪಟ್ಟದ ಹೆಸರಿನ ಮುಖಾಂತರ ಹಾಗೂ ಕೆಲವು ಬಲ್ಲಾಳರು ತುಳುನಾಡಿನ ತುಂಡರಸರಾಗಿ ಗುತ್ತು, ಬೂಡು, ಬಾಳಿಕೆ, ಮಾಗಣೆಗಳಂತಹಾ ವಿಧಾನಗಳಿಂದ ಆಳಿಕೊಂಡು ಬಂದರು. (ಹೊಯ್ಸಳರು ಮೂಲದಲ್ಲಿ ತುಳುವ ಪೊಯ್ಸಳರ ಎಂದು ಪ್ರಸಿದ್ಧರಾಗುತ್ತಾರೆ, ಮೊದಲಿಗೆ ಚಿಕ್ಕಮಂಗಳೂರು, ತುಮಕೂರು ಹಾಗು ಮಲೆನಾಡಿನ ಕೆಲ ಪ್ರದೇಶದಲ್ಲಿ ಆಳ್ವಿಕೆ ಮಾಡುತಿದ್ದರು ನಂತರ ರಾಜ್ಯ ವಿಸ್ತರಣೆ ಮಾಡುತ್ತಾರೆ. ಇವರನ್ನು ಹೊಯ್ಸಳ ಎಂದು ಗುರುತಿಸಿದ ಮೂದಲ ಶಾಸನ ಕರ್ನಾಟಕದ ಚೋಳ ಪ್ರತಿನಿಧಿ ಆಪ್ರಮಯನ ಕ್ರಿ.ಶ 1006 ಮೈಸೂರು ಜಿಲ್ಲೆಯ ಕಲಿಯೂರಿನ ಜಯಸ್ಥಂಭ ಶಾಸನ ಹೊಯ್ಸಳ ಎಂದು ಕರೆದಿದೆ)
ಬಲ್ಲಾಳ ಎಂಬ ಪಟ್ಟದ ಹೆಸರು ಹೊಯ್ಸಳರಿಂದ ಬಂದ ಹೆಸರೆನ್ನಬಹುದು ಹಾಗೂ ಇಂದಿಗೂ ನಾವು ಕೆಲವು ಸಮುದಾಯಗಳಲ್ಲಿ ಬಲ್ಲಾಳ ಎಂಬ ಉಪನಾಮ ಗಳನ್ನು ಕಾಣಬಹುದು. ಈ ಬಲ್ಲಾಳರ ಮಂತ್ರಿ “ಬುದ್ಯಂತ”ರು (ನಟ್ಟೋಜಿ ಅಥವಾ ಸ್ಥಾನಿಕ ಬ್ರಾಹ್ಮಣರು), ಈ ಬಲ್ಲಾಳರ ಆಡಳಿತವು ವಿಜಯನಗರದ ಕಾಲದಲ್ಲೂ ಅತ್ಯಂತ ಉನ್ನತ ಮಟ್ಟದಲ್ಲಿ ಈ ದೈವಾರಾಧನೆ ಮತ್ತು ಅನ್ಯ ಧಾರ್ಮಿಕ ಕ್ಷೇತ್ರಗಳಲ್ಲಿ ವಿಜೃಂಭಿಸತೊಡಗಿತು. ಇವರ ಕಾಲದಿಂದ ತುಳುನಾಡಿನಲ್ಲಿ ದೈವಗಳ ಪಾಡ್ದನ,ಸಂದಿ ಹಾಗೂ ದೈವಗಳ ಐತಿಹ್ಯಗಳು ವೈದಿಕರ ಧಾರ್ಮಿಕ ನಂಬಿಕೆಗಳಿಗೆ ಸರಿ ಸಮಾನವಾಗಿದ್ದ ಕಾಲ.
ತುಳುನಾಡಿನ ಅನೇಕ ಸೀಮೆ ಪ್ರಾಂತ್ಯದ ದೈವಗಳ ಸಂದಿ ಪಾಡ್ದನ ಹಾಗೂ ಆಚಾರ ವಿಚಾರಗಳಲ್ಲಿ ಪ್ರಾದೇಶಿಕ ಭಿನ್ನತೆಯನ್ನು ಕಾಣಬಹುದು ಹಾಗೂ ಅನೇಕ ದೈವಗಳ ಉಗಮ ಮತ್ತು ಆರಾಧನೆಗಳಲ್ಲಿ ವ್ಯತ್ಯಾಸವನ್ನು ಇಂದಿಗೂ ನೋಡಬಹುದು. ಇಂತಹ ವಿಚಾರಗಳಲ್ಲಿ ಮೂಡಾಯಿ (ಪೂರ್ವದಿಕ್ಕು) ಘಟ್ಟ, ಪಡ್ಡಾಯಿ (ಪಶ್ಚಿಮ) ಕಡಲಬರಿ, ಬಡಕಾಯಿ (ಉತ್ತರ) ಬಾರ್ಕೂರ್, ತೆನ್ಕಾಯಿ(ದಕ್ಷಿಣ) ನೀಲೇಶ್ವರ ಎಂಬ ಪ್ರದೇಶಗಳನ್ನು ಆಯಾಯ ದಿಕ್ಕಿಗೆ ಗಡಿ ಪ್ರದೇಶವನ್ನಾಗಿ ಸೂಚಿಸಿ ದೈವಗಳು ನುಡಿಯುವ ನುಡಿಗಳಲ್ಲಿ ಹಾಗೂ ಸಂದಿ ಪಾಡ್ದನಗಳ ಮುಖೇನ ಕೇಳಬಹುದು. ತುಳುನಾಡಿನಲ್ಲಿ ಅದೆಷ್ಟೋ ದೈವಗಳು ಮಾನವ ಸ್ವರೂಪದಲ್ಲಿ ಅಥವಾ ದೈವೀ ಸ್ವರೂಪದಲ್ಲಿ ಪೂರ್ವ ದಿಕ್ಕಿನ ಘಟ್ಟ ಪ್ರದೇಶಗಳಿಂದ ಇಳಿದು ಬಂದು ತನ್ನ ಕಲೆ, ಕಾರ್ಣಿಕವನ್ನು ತೋರಿಸಿ ತುಳುವರ ಕುಲದೈವವಾಗಿ ನೆಲೆನಿಂತು, ಸೂರ್ಯ ಚಂದ್ರರು ಇರುವ ತನಕದ ಕಾಲದವರೆಗೆ ನಮ್ಮನ್ನು ಹರಸಿ ಆಶಿರ್ವಾದಿಸುತ್ತಾರೆ ಎಂಬ ನಂಬಿಕೆ ಹಾಗೂ ಭಕ್ತಿ ತುಳುವರರಲ್ಲಿ ಇರುವುದನ್ನು ಯಥೇಚ್ಛವಾಗಿ ಕಾಣಬಹುದು. ಹಾಗೆಯೇ ತುಳುನಾಡಿನ ಬಡಕೈ ಉತ್ತರ ಘಟ್ಟಗಳಿಂದ ಬಂದ ದೈವಗಳ ವಿಚಾರಗಳೂ ಕೂಡಾ ಒಂದು ದೊಡ್ಡ ಇತಿಹಾಸವೇ….
ಬಡೆಕ್ಕಾಯಿಯ “ವರ್ದ್ರ”ಘಟ್ಟ ಪ್ರದೇಶದಲ್ಲಿ ಹುಟ್ಟಿಕೊಂಡಂತಹಾ ಒಂದು ಕೆಂಪು ವರ್ಣದ ದೈವವು ಶಕ್ತಿ ದೈವವಾಗಿ ಬಡೆಕಾಯಿಯ “ರೇಖ್ಯಬೂಡು” ಎಂಬಲ್ಲಿನ ಬಲ್ಲಾಳರ ಬೀಡಿ ನ ಆಸ್ಥಾನಕ್ಕೆ ಬಂತು. ಅಲ್ಲಿನ ಬಲ್ಲಾಳರು ತನ್ನ ಕುಟುಂಬ ದೈವವಾಗಿ ಉದ್ರಾನ್ಡಿ, ಪಂಜುರ್ಲಿಯಂತಹ ಪ್ರಬಲ ದೈವ ಶಕ್ತಿಗಳನ್ನು ಧರ್ಮ ಚಾವಡಿಯಲ್ಲಿ ನೆಲೆಕೊಟ್ಟು ನಂಬಿಕೊಂಡು ಬಂದಿದ್ದರು. ಆದರೆ ಬಲ್ಲಾಳರಿಗೆ ಈ ವರ್ದ್ರ ಘಟ್ಟದಿಂದ ಬಂದ ದೈವದ ಬಗ್ಗೆ ಅರಿವಾಗುವುದಿಲ್ಲ. ಸಮಯ ಕಳೆಂದಂತೆ, ಪಂಜ ಸೀಮೆಯ ಎಡಮಂಗಲ ಗ್ರಾಮ ದ “ಮರ್ದೂರ ಬೂಡು” ಎಂಬಲ್ಲಿ ಬಲ್ಲಾಳರ ಆಳ್ವಿಕೆಯ ಸಮಯ. ಆಗ ಈ ಬಲ್ಲಾಳರು ಆಡಳಿತದಲ್ಲಿ ಬಾರಿ ಪ್ರಬಲರು .ಇವರ ಆಳ್ವಿಕೆಯ ಕಾಲದಲ್ಲಿ “ಮರ್ದೂರ ಬೂಡು, ಪೊಯ್ಯೆತ್ತುರ್ ಗುತ್ತು ಮತ್ತು ಮಾಲೆಂಗ್ರಿ ಬಾಳಿಕೆ ಎಂಬ ಇತಿಹಾಸ ಸಂಪನ್ನತೆ ಉಳ್ಳ ಮನೆತನಗಳ ಮುಖಾಂತರ ತನ್ನ ಆಡಳಿತ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮರ್ದೂರ ಬೀಡಿನ ಬಲ್ಲಾಳರಿಗೆ ಹೆಣ್ಣು ಹುಡುಕುವ ಸಂಧರ್ಭದಲ್ಲಿ ರೇಖ್ಯ ಬೀಡಿನ ವಿಚಾರ ತಿಳಿದುಬಂತು, ಹಿರಿಯರ ಅನುಮತಿಯ ಪ್ರಕಾರ ಮರ್ದೂರ ಬೂಡಿನ ಬಲ್ಲಾಳರ ಮನೆಯವರು ರೇಖ್ಯ ಬೀಡಿಗೆ ತೆರಳುತ್ತಾರೆ. ರೇಖ್ಯ ಬೀಡಿನ ಹೆಣ್ಣು ಮಗಳ ಜೊತೆ ಮರ್ದೂರ ಬೀಡಿನ ಬಲ್ಲಾಳರಿಗೆ ವಿವಾಹವಾಗಿ ಅಲ್ಲಿಂದ ಮರ್ದೂರ ಬೀಡಿಗೆ ದಂಪತಿಗಳು ಹೊರಡುವ ಸಂಧರ್ಭದಲ್ಲಿ ಆ ರೆಖ್ಯಾಬೀಡಿಗೆ ವರ್ದ್ರ ಘಟ್ಟದಿಂದ ಬಂದ ದೈವವು ಈ ದಂಪತಿಗಳ ಜೊತೆ ಹೊರಡುತ್ತದೆ. ಎಲ್ಲರೂ ಅಲ್ಲಿಂದ ಹೊರಟು ಮೇಲಿನ ಮರ್ದೂರ ಬೀಡಿಗೆ ತಲುಪುತ್ತಾರೆ. ಆದರೆ ಈ ದೈವವು ಬಲ್ಲಾಳರ ಸಂಸಾರವನ್ನ ತನ್ನ ಸಂಸಾರವೆಂದೇ ಪರಿಗಣಿಸಿ ಬೀಡಿಗೆ ಬಂದರೂ, ಮರ್ದೂರು ಬೀಡಿನಲ್ಲಿ ಹೊಸ ದೈವ ಬಂದ ವಿಚಾರ ಬಳ್ಳಾಲರಿಗೆ ತಿಳಿಯದೇ ಇದ್ದುದರಿಂದ ಈ ದೈವಕ್ಕೆ ಯಾವುದೇ ಸ್ಥಾನಮಾನ ಸಿಗುವುದಿಲ್ಲ. ಆದರೂ ಈ ದೈವವು ಆ ಹೆಣ್ಣಿನ ಬೆರಿಸಾಯವಾಗಿ ಬೀಡಿನಲ್ಲಿ ರಕ್ಷಕನಂತೆ ನಿಲ್ಲುತ್ತದೆ. ಸಮಯ ಕಳೆಂದಂತೆ ಬೀಡಿನ ಬಲ್ಲಾಲ್ದಿ ತುಂಬು ಗರ್ಭಿಣಿಯಾದ ಸಂಧರ್ಭದಲ್ಲಿ ಬೀಡಿನಲ್ಲಿ ಸೀಮಂತ ಮುಗಿಸಿ ರೇಖ್ಯ ಬೀಡಿಗೆ ತೆರಳಿದರು. ತೆರಳುವ ಸಂಧರ್ಭದಲ್ಲಿ ಈ ಕೆಂಪು ವರ್ಣದ ದೈವವು ಬಲ್ಲಾಲ್ದಿಯ ದಂಡಿಗೆಯಲ್ಲಿ ಹಿಂಬಾಲಿಸುತ್ತದೆ. ಬಲ್ಲಾಲ್ದಿಯು ಮಗುವನ್ನ ಹಡೆದ ನಂತರ, ರೇಖ್ಯ ಬೀಡಿನಿಂದ ಮರ್ದೂರ ಬೀಡಿಗೆ ಓಲೆ ಕಳಿಸಿ, ದಂಡಿಗೆಯನ್ನ ತರಿಸಿ ಮರ್ದೂರ ಬೀಡಿಗೆ ಪುನ್ಹ ಬಲ್ಲಾಲ್ದಿಯು ಬಾಲ ಶಿಶುವಿನ ಜೊತೆ ಪ್ರಯಾಣಿಸುವ ಸಮಯ. ತೊಟ್ಟಿಲಿನಲ್ಲಿ ಮಗು ಮಲಗಿದೆ. ರೇಖ್ಯ ಬೀಡಿನಿಂದ ತೆರಳುವ ಸಂಧರ್ಭದಲ್ಲಿ ಈ ದೈವವು ಕೂಡ ಸತ್ಯದ ಎದುರು ಬಲ್ಲಾಲ್ದಿಯ ಶಿಶುವಿನ ತೊಟ್ಟಿಲಿನ ಕೈದಂಡೆಯ ಮೇಲೆ ಕೈ ಕೊಟ್ಟು ತೊಟ್ಟಿಲಲ್ಲಿ ಮರ್ದೂರ ಬೀಡಿಗೆ ಪುನಃ ತೆರಳಿತು. ಬೀಡಿನಲ್ಲಿ ಚಾವಡಿಯ ಒಳಗೆ ಹೋಗಿ ಆ ಮಗುವನ್ನು ತನ್ನ ಸಂಸಾರವೆಂದೇ ಪರಿಗಣಿಸಿ ತೊಟ್ಟಿಲನ್ನು ತೂಗಿ ಅಲ್ಲಿಂದ ಹೊರ ಬಂತು. ಅಲ್ಲಿಂದ ದೈವವು ಬೀಡಿನಿಂದ ಹೊರಬಂದು ರಾತ್ರಿ ಯ ಸಮಯದಲ್ಲಿ ಅಲ್ಲಿಂದ ಪ್ರಯಾಣ ಹಿಡಿದು ಬಂಡಿತರ ಮಜಲು ಎಂಬಲ್ಲಿಗೆ ರಾತ್ರೋ ರಾತ್ರಿ ಬೆಂಕಿ ಪಂಜು (ಸೂಟೆ) ಹಿಡಿದು ಮೂಡಾಯಿಯಿಂದ ಪಡ್ಡಾಯಿ ಹಾಗೂ ಪಡ್ಡಾಯಿಯಿಂದ ಮೂಡಾಯಿ ದಿಕ್ಕಿಗೆ ವಲಸರಿ ಬಂದಾಗ ದೈವಕ್ಕೆ ಜ್ಞಾನೋದಯವಾಯಿತು. ತಾನು “ವರ್ದ್ರ ಘಟ್ಟದಲ್ಲಿ ಹುಟ್ಟಿ ನನಗೆ ಹೆಸರು ಇಲ್ಲದ ಹಾಗೆ ಆಯಿತೇ” ಎಂದು ತಕ್ಷಣ ಮೂಡಾಯಿ ದಿಕ್ಕಿಗೆ ಮುಖ ಮಾಡಿ ನೋಡಿದಾಗ ಎಡಮಂಗಲ ಪಂಚಲಿಂಗೇಶ್ವರ ದೇವರ ಸಾನಿಧ್ಯದಲ್ಲಿ ಉತ್ಸವದ ಸಮಯ ಹಾಗೂ ಮುಂಜಾನೆ ಸಮಯದಲ್ಲಿ ಧ್ವಜ ಏರಿದ ಹೊತ್ತು. ಈ ದೈವವು ದೇವರ ಸಾನಿಧ್ಯಕ್ಕೆ ತೆರಳಿ ತನ್ನ ಕಲೆ ಕಾರ್ಣಿಕವನ್ನು ನೀರಿನಲ್ಲಿ ದೀಪ ಹಚ್ಚುವ ಮುಖಾಂತರ ತೋರಿಸುತ್ತದೆ. ಪಂಚಲಿಂಗೇಶ್ವರ ದೇವರ ಅನುಗ್ರಹ ಪ್ರಕಾರ ದೈವವು ನಡೆದ ಘಟನೆಯನ್ನು ದೇವರ ಬಳಿ ತಿಳಿಸಿ ನಂತರದಲ್ಲಿ ಆ ಗ್ರಾಮ ದೇವರ ಸಾನಿಧ್ಯದಲ್ಲಿ ಅಸಾಧ್ಯವಾದ ಕಾರ್ಣಿಕವನ್ನ ತೋರಿಸಿಕೊಟ್ಟ ಕಾರಣದಿಂದಾಗಿ ದೈವವು ಪಂಚಲಿಂಗೇಶ್ವರ ದೇವರ ಬಲಗೈ ಪ್ರಧಾನಿ ಬಂಟನಾಗಿ ನೆಲೆಯೂರುತ್ತಾನೆ. ಅಲ್ಲಿಂದ ಪಯಣ ಹಿಡಿದ ದೈವವು ಬಲ್ಲಾಳರ ಆಸ್ಥಾನ ಮಾಲೆಂಗ್ರಿ ಬಾಳಿಕೆ ಯ ಪಿಲಿಕುಂಜ ಸ್ಥಾನದಲ್ಲಿ ನೆಲೆಗೊಂಡನು. ಅಂದಿನಿಂದ ಆ ದೈವವನ್ನು ಮಾಲೆಂಗ್ರಿದಾಯೆ “ಮಾಲೆಂಗ್ರಾಯೇ” ಎಂಬ ಹೆಸರಿನಿಂದ ಬಲ್ಲಾಳರ ಕುಲದೈವವಾಗಿ ಹಾಗೂ ಗ್ರಾಮ ದೈವವಾಗಿ ನೆಲೆ ಕಂಡನು.
ಮೂಲತಃ ತುಳುನಾಡಿನಲ್ಲಿ ಈ ಪಂಚಲಿಂಗೇಶ್ವರ ಹಾಗೂ ದುರ್ಗಾಪರಮೇಶ್ವರಿಯು ಅನಾದಿಯ ಕಾಲದಲ್ಲಿ ತುಳುವರ “ಬೆರ್ಮೆರ್” ಹಾಗೂ “ಲೆಕ್ಕೆಸಿರಿ”ಯೆ ಆಗಿರುತ್ತದೆ. ವೈದಿಕರ ಆಗಮನದ ನಂತರ ತುಳುನಾಡು ಅದ್ವೈತ ಹಾಗೂ ದ್ವೈತ ಮತಗಳ ಕೇಂದ್ರಗಳಾದನಂತರ ಎಷ್ಟೋ ಬೆರ್ಮಸ್ಥಾನಗಳೂ, ಬಸದಿ ಇತ್ಯಾದಿಗಳೂ ದೇವಾಲಯವಾಗಿ ಪರಿವರ್ತನೆಗೊಳ್ಳುತ್ತದೆ. ಜೈನ ಧರ್ಮದ ಪ್ರಭಾವದಿಂದ ತುಳುವರ ಭೂತ ಬೆರ್ಮೆರ್ “ಭೂತ ನಾಥ”ನಾಗಿ ಪರಿವರ್ತನೆಗೊಳ್ಳುತ್ತದೆ. ನಾಥವೆಂಬುವುದು ಜೈನರ ಪಂಥನಾಮ. ನಂತರ ತುಳುನಾಡಿಗೆ ಆಗಮಿಸಿದ ಕೆಳದಿಯ ಶೈವ ಪಂಥದವರು (ವೈದಿಕರು) ಈ ಭೂತನಾಥ ಬಸದಿಯನ್ನು ಭೂತನಾಥೇಶ್ವರ ದೇವಾಲಯವಾಗಿ ಪರಿವರ್ತಿಸುತ್ತಾರೆ. ಜೈನರ ಆಳ್ವಿಕೆ ಇಲ್ಲದ ಪ್ರದೇಶದಲ್ಲಿ ತುಳುವರ ಬೆರ್ಮೆರ್ “ಮಹಾಲಿಂಗೇಶ್ವರ” ಹಾಗೂ “ಪಂಚಲಿಂಗೇಶ್ವರ”ನಾಗಿ ಮತ್ತು ಲೆಕ್ಕೆಸಿರಿಯು ಹಾಗೂ ಉಳ್ಳಾಲ್ದಿಯು “ದುರ್ಗಾಪರಮೇಶ್ವರಿಯಾಗಿ”, ನಂದಿಕೋಣನು (ಮೈಸಂಧಾಯ) ನಂದಿಕೇಶ್ವರನಾಗಿ ಹಾಗೂ ನಾಗ ಎಂಬ ದೈವವು ಮೂರ್ತಿಕಲ್ಪನೆಗೆ ಒಳಗಾಗಿ ವೈದಿಕ ಪದ್ಧತಿಯ ಪೂಜೆ ಪುರಸ್ಕಾರಗಳಿಗೆ ಒಳಗೊಳ್ಳುತ್ತದೆ. ಕೆಳದಿಯ ಅರಸರ ಕಾಲದಲ್ಲಿ ವೀರಶೈವ ಸನ್ಯಾಸಿಗಳೂ ತುಳುನಾಡಿನ ಸ್ಥಾನಿಕ ಬ್ರಾಹ್ಮಣರಿಗೆ ಶೈವ ದೀಕ್ಷೆಕೊಟ್ಟು ದೇವಾಲಯಗಳಲ್ಲಿ ಪೂಜೆ ಪುರಸ್ಕಾರ ಮಾಡಲು ನಿರ್ಧರಿಸಿ ತುಳುನಾಡಿನಲ್ಲಿ ಎಲ್ಲ ದೈವ ದೇವರುಗಳ ಕ್ರಮವಿಧಿಗಳನ್ನ ವೈದಿಕಮೋಕ್ತವಾಗಿ ಮಾಡಿಸಲು ಮುಂದಾದರು. (ಶೈವರಿಗೆ ಶಿವನೇ ದೇವರು, ತುಳುವರ ಬೆರ್ಮೆರ್ ಈಗ ಶಿವನ ರೂಪಕ್ಕೆ ರೂಪಾಂತರಗೊಂಡು ನಮ್ಮನ್ನು ಪೊರೆಯುತ್ತಿದ್ದಾರೆ. ಪಂಚಲಿಂಗ ದಲ್ಲಿ ಪಂಚ ಶಕ್ತಿಯ ಆರಾಧನೆಯ ಮೂಲದಲ್ಲಿ ಆ ಶಕ್ತಿಗಳೇ ತುಳುವರ ಲೆಕ್ಕೇಸಿರಿ, ಕ್ಷೇತ್ರಪಾಲ, ನಾಗ, ನಂದಿಗೊಣ ಎಂಬ ನಾಲ್ಕು ಶಕ್ತಿಗಳ ಒಡೆಯ ನೇ “ಬೆರ್ಮೆರ್”. ಹಾಗಾಗಿ ಆ ಪಂಚಶಕ್ತಿಗಳಲ್ಲಿನ ಒಡೆಯನೇ ಬೆರ್ಮೆರ್ ಇಂದು ಶಿವನ ರೂಪದಲ್ಲಿ ಇರುವುದು).
ಈ ಪಂಚಲಿಂಗೇಶ್ವರ ದೇವಾಲಯ ದ ಪ್ರಧಾನಿಯಾಗಿ ಮಾಲೆಂಗ್ರಿ ಬಾಳಿಕೆಯಲ್ಲಿ ನೆಲೆಗೊಂಡ ಮಾಲೆಂಗ್ರಾಯ ದೈವವು ನಂತರ ದೇವರ ಅಪ್ಪಣೆ ಪ್ರಕಾರ ನಾಲ್ಕು ಊರಿನಲ್ಲಿ ತನ್ನ ಕಲೆ ಕಾರ್ಣಿಕ ಮೆರೆಸುವ ಸಲುವಾಗಿ ದೈವವು ಹೊಸ ಮಜಲ ಕಟ್ಟೆಯಲ್ಲಿ ಕುಳಿತು ನಂತರ, ಡೆಕ್ಕಳ ಸಾರಿ ಮಂಟಮೆಯನ್ನು ಸವಾರಿಸಿ, ಬಂಡಿತರ ಮಜಲು ಕೆಇತಿಮಾರ್ ಜನಾಂದರ(ಬ್ರಾಹ್ಮಣರ)ಕೈ ಹಿಡಿದು ಆ ಭೂಮಿಯನ್ನು ಬಿಟ್ಟು, ಅಲ್ಲಿಂದ ಸೂರತರ ಕೈ ಹಿಡಿದು ಆ ಭೂಮಿಯನ್ನು ಬಿಟ್ಟು, ಅಲ್ಲಿಂದ ಕೊಳಂಬೆ ಬರಿ ಕೊಂತಾನ ಕೊರವರ ಕೈ ಹಿಡಿದು ಅವರನ್ನ ನಂಬಿಸಿ, ಅಲ್ಲಿಂದ ಮುಂದೆ ಪಯಾಣಿಸುವಾಗ ಈ ದೈವವು ಮುಂದೆ ಕತ್ತಿ ಸಾಧಗ, ದೊಣ್ಣೆ ಸಾಧಗ ಹಾಗೂ ಕೋವಿ ಸಾಧಗ ವಿದ್ಯೆ ಕಲಿತು ತಾನು ಮೊದಲು ಬಂದು ನಿಂತ ಮರ್ದೂರ ಬೀಡಿನ ಬಲ್ಲಾಳರ ಆಸ್ಥಾನಕ್ಕೆ ಬಂತು. ಬೀಡಿನ ಪ್ರದೇಶದಲ್ಲಿ ಬಲ್ಲಾಳರ ಗೋಚರಕ್ಕೆ ಬಾರದಂತೆ ಕಳ್ಳರು ಹದಿನಾರು ಕೈ ಇರುವ ಕೊಪ್ಪರಿಗೆ(ನಿಧಿ)ಗೆ ಕೈ ಹಾಕಿ ಕಳ್ಳತನ ಮಾಡುವ ಸಂಧರ್ಭದಲ್ಲಿ ಈ ದೈವವು ಬಂಟ ದುಂಬಿಯ ರೂಪದಲ್ಲಿ ಕಳ್ಳರನ್ನ ಒಡಿಸಿ ಬಳ್ಳಾಳರ ಕಣ್ಣಿಗೆ ಮರ್ಯಾದಿ ಉಳಿಸಿದ ಪುರಷೋತ್ತಮನ ಹಾಗೆ ಕಂಡಿತು. ಅವರು ಈ ದೈವವನ್ನ ಮರ್ದೂರ ಬೀಡಿನಲ್ಲೂ ನಂಬಿಕೊಂಡು ಬಂದರು. ನಂತರ ಈ ದೈವವು ಪಂಜಿಮುಂಡ ಪ್ರದೇಶಕ್ಕೆ ಪಯಾಣ ಬೆಳೆಸಿ, ತಿರ್ತ ಕೊಠಾರ ಮಿತ್ತ ಕೊಠಾರ ಪ್ರದೇಶಕ್ಕೆ ಪಯಾಣಿಸಿ, ಅಲ್ಲಿಂದ ಪೊಯ್ಯೆತ್ತುರ್ ಗುತ್ತಿನ ಮಣ್ಣಿಗೆ ಕಣ್ಣು ಹಾಕಿದ ಸಂಧರ್ಭ. ಬಲ್ಲಾಳರ ಪೊಯ್ಯೆತ್ತುರ್ ಗುತ್ತಿನಲ್ಲಿ ಈ ದೈವವು ಎರಡು ಕೈ ಕೊಪ್ಪರಿಗೆ ಮಧ್ಯದಲ್ಲಿ ಹದಿನಾರು ಹೆಡೆಯ ಸರ್ಪನ ರೂಪದಲ್ಲಿ ನೆಲೆಗೊಂಡು ಎನ್ಮೂರ ಬೀಡಿನ ಈರ್ವರು ಬೈದರುಗಳಿಂದ ನಂಬಿಸಿಕೊಂಡು ಅಲೆಂಗಾರ ಮಣ್ಣನ್ನು ಸುತ್ತಿ ಅಲ್ಲಿಂದ ಪೊಯ್ಯೆತ್ತುರ್ ಗುತ್ತಿನಲ್ಲಿ ನೆಲೆಗೊಂಡನು. ಇಂದಿಗೂ ಪೊಯ್ಯೆತ್ತುರ್ ಗುತ್ತಿನಲ್ಲಿ ಮಾಲೆಂಗ್ರಾಯ ದೈವದ ಮುಂಡಿಯೇ ಹಾಗೂ ಮಾಲೆಂಗ್ರಿ ಬಾಳಿಕೆಯಲ್ಲಿ ದೈವದ ಮನೆ ಮಂಚದ ನೆಲೆಯಲ್ಲಿ ಆರಾಧನೆಯನ್ನು ಕಾಣಬಹುದಾಗಿದೆ. ಬಲ್ಲಾಳರ ಆಸ್ಥಾನದಲ್ಲಿ ದೈವವು ನ್ಯಾಯ ತೀರ್ಮನ ನೀಡುವ ಪ್ರಾಬಲ್ಯವುಳ್ಳ ದೈವವಾಗಿ ಬೀಡು, ಗುತ್ತು ಹಾಗೂ ಬಾಳಿಕೆಯಲ್ಲಿ ಕಾಣಲ್ಪಟ್ಟಿತು.
ಮುಂದೆ ಇದೇ ಬಲ್ಲಾಳರ ಮರ್ದೂರ ಹಾಗು ರೇಖ್ಯ ಬೀಡಿನ ಸಂಬಂಧ ಗಟ್ಟಿ ಇರುವ ಕಾಲದಲ್ಲೇ ಒಂದು ದುರಂತ ಘಟನೆಯು ನಡೆಯಿತು. ಏನೆಂದರೆ ಬಲ್ಲಾಳರ ಹಾಗೂ ಬಲ್ಲಾಲ್ದಿಯ ನಡುವಿನ ಘೋರ ಜಗಳ ಬಲ್ಲಾಲ್ದಿಯನ್ನು ಬೀಡಿನಿಂದ ಹೊರಹೋಗುವಹಾಗೆ ಮಾಡಿತು. ಬಲ್ಲಾಲ್ದಿಯು ತನ್ನ ಗಂಡನ ಬೀಡನ್ನು ಬಿಟ್ಟು ತವರು ಮನೆಗೆ ಹೋದಳು, ಇಲ್ಲಿ ಮರ್ದೂರ ಬೀಡಿನಲ್ಲಿ ಬಲ್ಲಾಳರು ತನ್ನ ಹೆಂಡತಿ ಬಿಟ್ಟು ಹೋದ ಕೋಪ ತಾಳಲಾರದೆ ಈ ಮಾಲೆಂಗ್ರಾಯ ದೈವಕ್ಕೆ ಹರಕೆ ಹೇಳಿಕೊಂಡರು. ಹರಕೆ ಹೇಗೆಂದರೆ “ಅಲ್ ಗಡಿ ಕಡತ್ತುದ್ ಪೊಯಲ್ಡ ಅಲ್ನ ತರೆ ದೆಪ್ಪು. ಅಲ್ನ ತರೆ ದೆತ್ತಂಡ ನಿಕ್ ತರೆಕ್ ತರೆ ಒಪ್ಪಿಸಾವೆ”ಎಂದು ದೈವಕ್ಕೆ ಆಜ್ಞೆ ಇಟ್ಟರು. ಬಲ್ಲಾಳರ ಮಾತಿನ ಪ್ರಕಾರ ದೈವವು ಬಲ್ಲಾಲ್ದಿಯ ತಲೆಯನ್ನ ಕತ್ತರಿಸಿ ಮರ್ದೂರ ಬೀಡಿನ ಬಾವಿಯ ದಂಡೆಯ ಮೇಲೆ ಇಟ್ಟನು. ಬಲ್ಲಾಳರು ಮುಂಜಾನೆಯ ಜಾವದಲ್ಲಿ ಎದ್ದು ಮುಂದೆ ಬಾವಿಯ ದಂಡೆಯಲ್ಲಿ ಬಲ್ಲಾಲ್ದಿಯ ರಕ್ತಸಿಕ್ತ ರುಂಡವನ್ನು ಕಂಡು ಒಮ್ಮೆಲೇ ಬೆರಗಾಗಿ ಬೇಸರಗೊಂಡರು. ಕೊನೆಗೆ ದೈವಕ್ಕೆ ಕೊಟ್ಟ ಮಾತಿನಂತೆ ಬಲ್ಲಾಲ್ದಿಯ ಕಂಚಿನ ಬಿಂಬ(ಮುಗ)ದ ಪ್ರತಿಮೆಯನ್ನು ತಯಾರಿಸಿ ಮಾಲೆಂಗ್ರಿ ಬಾಳಿಕೆ ಮಾಲೆಂಗ್ರಾಯ ದೈವದ ಭಂಡಾರಕ್ಕೆ ಒಪ್ಪಿಸಿದರು. ಅಂದಿನಿಂದ ಅದೇ ಬಲ್ಲಾಲ್ದಿಯ ಬಿಂಬದ ಆರಾಧನೆಯನ್ನು “ಉಳ್ಳಾಲ್ದಿ” ಎಂದು ಊರಿನವರು ನಂಬಿಕೊಂಡು ಆರಾಧಿಸಿಕೊಂಡು ಬಂದರು. ಅಂದಿನಿಂದ ಬೀಡಿಗೆ ಸಂಬಂಧ ಪಟ್ಟ ಊರಿನಲ್ಲಿ ಅಂಗಳದ ಬಾವಿಯಲ್ಲಿ ದಂಡೆ ಎತ್ತಿ ನೀರು ಎಳೆಯುವುದನ್ನು ನಿಲ್ಲಿಸಲಾಯಿತು. ಅಂದಿಗೆ ರೇಖ್ಯ ಬೀಡಿಗು ಮತ್ತು ಮರ್ದೂರ್ ಬೀಡಿಗೂ ನಡೆದ ಘಟನೆಯಿಂದ ಸಂಬಂಧ ಕಡಿದು ಹೋಯಿತು. ಎರಡು ಬೀಡಿನ ಬಲ್ಲಾಳರು ಪ್ರತ್ಯೇಕವಾಗಿ ರಾಜ್ಯವನ್ನು ಆಳಿಕೊಂಡು ಬಂದರು.
ಸುಮಾರು ಕ್ರಿ.ಶ 14ನೆ ಶತಮಾನದ ನಂತರ ವಿಜಯನಗರದ ಆಡಳಿತದ ಕಾಲದ ಅವಧಿಯಲ್ಲಿ ತುಳುನಾಡಿನ ಉಸ್ತುವಾರಿಯನ್ನು ವಿಜಯನಗರದ ಅರಸರು ಕೆಳದಿ ಯ ಅರಸರಿಗೆ ಕೊಟ್ಟರು. ಇವರು ಮೂಲತಃ ವೀರಶೈವ ಪರಂಪರೆಯವರು.ಈ ಮಲ್ಲಪ್ಪ ಶೇಟ್ಟಿ ಮತ್ತು ಬಸವಪ್ಪ ಶೇಟ್ಟಿ ಕೇಲಾಡಿ(ಕೆಳದಿ) ಸಂಸ್ಥಾನದ ಸ್ಥಾಪಕರು. ಇದೆ ಸಂಸ್ಥಾನದ ಹಿರೇಮಲ್ಲ ಶೇಟ್ಟಿ ಹಾಗು ಕಿರೇಮಲ್ಲ ಶೇಟ್ಟಿ ಕಿತ್ತೂರು ಸಂಸ್ಥಾನದ ಸ್ಥಾಪಕರು. ಕೇಲಾಡಿ ಸಂಸ್ಥಾನದ ಶಿವಪ್ಪ ನಾಯಕನ ಕಾಲದಲ್ಲಿ ತುಳುನಾಡಿನ ಕೆಲವು ಪ್ರದೇಶಗಳಿಗೆ ಶಿವಪ್ಪ ನಾಯಕನ ಆಕ್ರಮಣವಾಗುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳು ಶಿರಿಯಾರ, ಸೂರಾಲು, ನಲವತ್ತ ನಾಡು, ಹೆಂಗವಳ್ಳಿ ಕಂಬದಕೊಣೆ, ಬಾರಕೂರು ಮುಂತಾದವುಗಳು. ಈತನ ಆಕ್ರಮಣದ ನಂತರ ಆಯಾ ರಾಜ್ಯಗಳ ಅರಮನೆ ಹಿಂದೆ ಕೊಪ್ಪ (ಕೂರ್ರ ಕೊಪ್ಪ) ನಿರ್ಮಾಣ ಹಾಗು ಅವರಿಗೆ ಆರಾಧನೆ ಮಾಡಲು ಕೆಪ್ಪ ನಾಗರ ಬಲ್ಲೆ ನಿರ್ಮಾಣ ಮಾಡುತ್ತಾನೆ. ಈ ಶಿವಪ್ಪ ನಾಯಕನ ನಂತರದ ಕೆಳದಿಯ ಉತ್ತರಾಧಿಕಾರಿಗಳೂ ಪಂಜ ಸೀಮೆಯ ಬೀಡಿನ ಪ್ರಾಂತ್ಯದ ಮಾಲೆಂಗ್ರಿ ಬಾಳಿಕೆಯನ್ನ ಮರ್ದೂರ ಬೀಡಿನ ಬಲ್ಲಾಳರ ಮುಖಾಂತರ ಆಳಿದರು. ಇವರು ಮೂಲದಲ್ಲಿ ತುಳುನಾಡಿನಲ್ಲಿ ಪರಿವಾರ ಬಂಟರು ಎಂದು ಕರೆಸಿಕೊಂಡರು. ಇವರ ವಂಶದಲ್ಲೇ ಜನಿಸಿದ ಇಬ್ಬರು ಮಹಾತ್ಮರು “ದಂಡಪ್ಪ ನಾಯ್ಗ” ಮತ್ತು “ಮಾಯಣ್ಣ ನಾಯ್ಗ” ಎಂಬವರು. ಇವರು ಬಲ್ಲಾಳರ ಆಜ್ಞೆ ಪ್ರಕಾರವೇ ಗ್ರಾಮದ ಗುತ್ತು, ಬೂಡು ಹಾಗೂ ಬಾಳಿಕೆ ಪ್ರದೇಶಗಳನ್ನ ಆಳಿದರು. ಈ ಕೆಳದಿಯ ಸಾಮಂತರು ತುಳುನಾಡಿನ ಧಾರ್ಮಿಕ, ಸಾಮಾಜಿಕ ಹಾಗೂ ಆರ್ಥಿಕ ವಿಚಾರಗಳನ್ನು ಕೆಳದಿ ಅರಸರಿಗೆ ತಲುಪಿಸಿ ಅಲ್ಲಿಂದ ವಿಜಯನಗರ ಸಾಮ್ರಾಟರಿಗೆ ತಲುಪುವಲ್ಲಿ ಯಶಸ್ವಿ ಎಂದೆನಿಸಿಕೊಂಡರು.
ಈ ನಾಯ್ಗರು ಶೈವರು ಹಾಗೂ ಮಹಾನ್ ದೈವ ಭಕ್ತರು. ಮಾಲೆಂಗ್ರಿ ಬಾಳಿಕೆಯಲ್ಲಿ ನೆಲೆಗೊಂಡ ಮಾಲೆಂಗ್ರಾಯ ದೈವ ಹಾಗೂ ಅವರು ನಂಬಿಕೊಂಡು ಬಂದ ಕೌಟುಂಬಿಕ ದೈವಗಳಿಗೆ ಬಲ್ಲಾಳರ ಅಸ್ತಿತ್ವದಲ್ಲಿ ಮಾಡ ಕಟ್ಟಿಸಿ ಧರ್ಮ ದೈವಗಳಿಗೆ ನೇಮ ನೆರಿ, ಕಾಲಾವಧಿ ಹಾಗೂ ವರ್ಷಾವಾದಿ ಪರ್ವ ಮತ್ತು ಹನ್ನೆರಡು ಸಂಕ್ರಾಂತಿ ಚೌತಿ ಪರ್ಬ ಕಾಲಾವಧಿಯ ಕಟ್ಲೆಯನ್ನು ಪ್ರಾರಂಭಿಸಿದರು. ಅದೇ ರೀತಿ ಮರ್ದೂರ ಬೀಡಿನಲ್ಲಿ ಹಾಗೂ ಪೊಯ್ಯೆತ್ತುರ್ ಗುತ್ತಿನಲ್ಲಿ ಕೂಡ ಬಲ್ಲಾಳರು ಆಯಾಯ ದೈವಗಳಿಗೆ ನೆಲೆ ಕಲ್ಪಿಸಿ ಮುಂಡಿಯೇ ಹಾಗೂ ಮಾಡ ಕಟ್ಟಿಸಿ ಕಾಲಾವಧಿಯ ಸರ್ವ ಪರ್ವ ಕಟ್ಲೆಗಳನ್ನ ಬಹಳ ವಿಜೃಂಭಣೆಯಿಂದ ಮಾಡುತ್ತಾ ಬಂದರು. ಜೈನ ಧರ್ಮದ ಪ್ರಭಾವದ ಸಂದರ್ಭದಲ್ಲಿ ಬಲ್ಲಾಳರು ಹಾಗೂ ಊರಿನ ಹತ್ತೂರ ಭಕ್ತರು ಗುತ್ತು, ಬೀಡು ಮತ್ತು ಬಾಳಿಕೆ ಮನೆತನದ ದೈವಗಳಿಗೆ ದೇವ ಕ್ರಿಯೆಯಲ್ಲಿ ತಂಬಿಲ ಸೇವೆ ಹಾಗೂ ನೇಮ ನೆರಿಗಳನ್ನು ಕೊಡುತ್ತ ನಂತರದ ಕಾಲದಲ್ಲಿ ತುಳುವರ ಮೂಲ ಆರಾಧನಾ ಪರಂಪರೆಯ ಅಸುರ ಕ್ರಿಯೆಯಲ್ಲೂ ಸಹ ಎಲ್ಲ ಧರ್ಮದೈವಗಳಿಗೆ ಸರ್ವ ಸೇವೆಗಳನ್ನು ಸಲ್ಲಿಸುತ್ತಿದ್ದರು. ಮುಂದೆ ವಿಜಯನಗರ ಸಂಸ್ಥಾನ ಕುಸಿದಮೇಲೆ 16ನೆ ಶತಮಾನದ ನಂತರ ಕೆಳದಿಯ ಅಧಿಕಾರವನ್ನು ಮೈಸೂರು ಪ್ರಾಂತ್ಯದ ಒಡೆಯರ ಸಂತತಿಯು ಹಾಗೂ ಹೈದಾರಾಲಿ ಯ ನೇತೃತ್ವದಲ್ಲಿ ಇಡೀ ತುಳುನಾಡನ್ನೇ ಕಬಳಿಸಿ ಮೈಸೂರ್ ರಾಜ್ಯಕ್ಕೆ ಸೇರ್ಪಡಿಸಿಕೊಂಡರು. ಆ ಕಾಲದಲ್ಲಿ ಮೈಸೂರ ಸಂಸ್ಥಾನದ ದಿವಾನರಾಗಿ ಕ್ರಿ.ಶ 1812 ತನಕ ಶಿವಳ್ಳಿಯ ಮಧ್ವ ಬ್ರಾಹ್ಮಣರು (ವೈಷ್ಣವ ಪಂಥ) ಇದ್ದರು. ಇವರ ಸಮಯದಲ್ಲೇ ಬಾಳಿಕೆಯ ಕೆಳದಿ ಮೂಲದ ನಾಯ್ಗರು ತನ್ನ ಆಳ್ವಿಕೆ ಕಳೆದುಕೊಂಡರು ಹಾಗೂ ಮರ್ದೂರ ಬೀಡು, ಪೋಯೆತ್ತುರ್ ಗುತ್ತಿನ ಬಲ್ಲಾಳರು ಮೈಸೂರು ಸಂಸ್ಥಾನದ ಸಾಮಂತರಾದರು. ಈ ಸಮಯದಲ್ಲೇ ತುಳುನಾಡಿನ ಎಲ್ಲ ದೇವಾಲಯಗಳು ಅದರಲ್ಲೂ ಪ್ರತ್ಯೇಕ ತುಳುವರ ಬೆರ್ಮಸ್ಥಾನವಾದ ಈಶ್ವರ ದೇವಾಲಯಗಳಿಗೆ ಸೋದೆ ಮಠದ ವಾದಿರಾಜ ಸ್ವಾಮಿಗಳ ನೇತೃತ್ವದಲ್ಲಿ ಪ್ರವೇಶಿಸಿ ತುಳುನಾಡಿನ ಎಲ್ಲಾ ಶೈವ ಸ್ಥಾನಿಕ ಬ್ರಾಹ್ಮಣರಿಗೆ ವೈಷ್ಣವ ದೀಕ್ಷೆಕೊಟ್ಟು ನಂತರದ ಸಮಯದಲ್ಲಿ ದೆವಾಲಯದ ಎಲ್ಲ ದೈವ ದೇವರುಗಳಿಗೆ ಶಿವಳ್ಳಿ ಬ್ರಾಹ್ಮಣರಿಂದ ಪೂಜೆ ಪುರಸ್ಕಾರಗಳು ನಡೆದುಬಂದಿರ ಬಹುದ್ದೆಂದು ಹೇಳಬಹುದು. ಈ ಮೈಸೂರು ಸಂಸ್ಥಾನದ ಆಳ್ವಿಕೆಯ ಬಲ್ಲಾಳರ ಕಾಲದಲ್ಲಿ ಈ ಮಾಲೆಂಗ್ರಿ ಬಾಳಿಕೆ ಯ ಆಡಳಿತ ಸ್ಥಾನ ಮಾನವು ಪಯಂದೂರ್ “ಬಂಗೇರಣ್ಣಯ” ಬಳಿಯ ಬಾರಗರ ವಂಶಸ್ಥರ ಅಧೀನವಾಗುತ್ತದೆ. ಮಾಲೆಂಗ್ರಾಯ ದೈವ ಸಂಸಾರವಾಗಿ ಬಾಳಿಕೆಯನ್ನು ಆಳುತ್ತಿದ್ದ ಇವರ ವಂಶ ಅಳಿದು ಹೋದ ಕಾರಣ ಅಲ್ಲಿಗೆ ಆದೂರು ಏಳ್ನಾಡ್ ಗುತ್ತಿನ ವೈವಾಹಿಕ ಸಂಬಂಧ ಮಾಲೆಂಗ್ರಿ ಬಾಳಿಕೆಯವರ ಜೊತೆ ನಡೆಯಿತು. ಹೀಗೆ ಏಳ್ನಾಡ ಗುತ್ತಿನ ಹೆಣ್ಣಿಗೆ ಜನಿಸಿದ ವಂಶಜರೇ “ಭೀರ್ಮಣ್ಣಯ”ಬಳಿಯವರು ಇಂದು ಮಾಲೆಂಗ್ರಿ ಬಾಳಿಕೆಯ ಮಾಲೆಂಗ್ರಾಯ ದೈವ ದ ಸಂಸಾರವಾಗಿ ಬಾಳಿಕೆಯನ್ನು ಆಳುತ್ತಿರುವವರು. ಇದೇ ಕಾಲಕ್ಕೆ ಬೆಳ್ಳಿಪ್ಪಾಡಿ ಗುತ್ತಿನ ಬಲ್ಲಾಳರ ಪ್ರಾದೇಶಿಕ ರಾಜಕೀಯವು ಅತ್ಯಂತ ಉನ್ನತ ಮಟ್ಟದಲ್ಲಿ ಇರುವ ಸಮಯಕ್ಕೆ ತನ್ನ ವಂಶದ ಆಡಳಿತವನ್ನು ವಿಸ್ತರಿಸುವ ಸಲುವಾಗಿ ಸೀಮೆ ಯ ರಾಜಾಜ್ಞೆಯ ಮುಖಾಂತರ ಬೆಳ್ಳಿಪ್ಪಾಡಿ ಗುತ್ತಿನ ಸಾಲಿಬಣ್ಣಾಯ ಬಳಿಯ ವಂಶಸ್ಥರು ಪಿಜಾವು ಎಂಬಲ್ಲಿಗೆ ಬಂದು ಅಲ್ಲಿಂದ ಪಂಜ ಸೀಮೆಗೆ ಆಗಮಿಸಿ ಅಲ್ಲಿಂದ ಪೊಯ್ಯೆತ್ತುರ್ ಗುತ್ತಿನ ಸರ್ವ ಅಧಿಕಾರವನ್ನ ತನ್ನದಾಗಿಸಿಕೊಳ್ಳುತ್ತಾರೆ. ಮರ್ದೂರ ಬೀಡು ಅನಾದಿಯ ಬಲ್ಲಾಳರ ವಶದಲ್ಲೇ ಉಳಿದುಕೊಳ್ಳುತ್ತದೆ ಹಾಗೂ ರೇಖ್ಯ ಬೀಡು ಮರ್ದೂರ ಬೀಡಿನ ಸಂಬಂಧವು ಮಿಂಗಲಾಗದೆ ಪ್ರತ್ಯೇಕವಾಗಿ ಅವರು ಬೂಡನ್ನು ಆಳಿಕೊಂಡು ಬರುತ್ತಾರೆ. ಮರ್ದೂರ ಬೀಡಿನ ವಂಶಜರು ಹಾಗೂ ರೇಖ್ಯ ಬೀಡಿನ ವಂಶಜರು “ಪೆರ್ಬ್ರನ್ನಾಯ”ಬಳಿಯವರಾಗಿ, ಬೀಡಿನ ಹಾಗೂ ಗುತ್ತು ಬಾರಿಕೆಗಳ ಧಾರ್ಮಿಕ ಚಟುವಟಿಕೆಗಳಲ್ಲಿ ಇಂದಿಗೂ ಪರಸ್ಪರ ಸಂಬಂಧದಿಂದ ಕೂಡಿಕೊಂಡು ದೈವದೇವರ ಕೃಪೆಗೆ ಪಾತ್ರರಾಗಿದ್ದಾರೆ. ಇಂದಿಗು ಈ ಮೂರು ಮನೆತನದವರು ಇದ್ದುಕೊಂಡು ಈ ಮಾಲೆಂಗ್ರಾಯ ದೈವದ ನೇಮವು ಪೊಯ್ಯೆತ್ತುರ್ ಗುತ್ತಿನಲ್ಲಿ ಹಾಗೂ ಮಾಲೆಂಗ್ರಿ ಬಾಳಿಕೆ ಪಿಲಿಕುಂಜ ಸ್ಥಾನದಲ್ಲಿ ಜರಗುತ್ತದೆ. ಮಾಲೆಂಗ್ರಾಯಾ ಹಾಗೂ ಧರ್ಮ ದೈವಗಳಾದ ಪಂಜುರ್ಲಿ, ಉದ್ರಾನ್ಡಿ, ಲೆಕ್ಕೇಸಿರಿ, ಉಳ್ಳಾಲ್ದಿ, ಉಳ್ಳಾಕುಲ್, ಪುರುಷುರಾಯ, ಬೇಡವ, ಗಿಳಿರಾಮ ಇತ್ಯಾದಿ ಸಾವಿರದ ಒಂದು ದೈವಗಳಿಗೆ ವರ್ಷಾವಧಿ ಹಾಗೂ ಕಾಲಾವಧಿ ಕಟ್ ಕಟ್ಲೆ ಪ್ರಕಾರ ನೇಮ ಪರ್ವಗಳು ಜರಗುತ್ತದೆ. ಈ ಮೂರು ಬೂಡು, ಗುತ್ತು ಹಾಗೂ ಬಾಳಿಕೆ ಮನೆತನಗಳು ಸೇರಿಕೊಂಡು ಗ್ರಾಮ ದೇವರು ಪಂಚಲಿಂಗೇಶ್ವರ ದೇವರ ಹಾಗೂ ಸೀಮೆ ದೇವರು ಪಂಜ ಸದಾಶಿವ ಪಂಚಲಿಂಗೇಶ್ವರ ದೇವರ ದಯೆಯಿಂದ ಮರ್ದೂರ ಬೀಡಿನ ಬಲ್ಲಾಳರು ಮಾಡಿದ ಕಟ್ಟು ಪಾಡುಗಳು ಹಾಗೂ ಮಾಲೆಂಗ್ರಿ ಬಾಳಿಕೆಯ ಪಿಲಿಕುಂಜ ಸ್ಥಾನದಲ್ಲಿ ದಂಡಪ್ಪ ನಾಯ್ಗ ಮಾಯಣ್ಣ ನಾಯ್ಗರು ಮಾಡಿದ ಕಟ್ಟ್ ಪಾಡುಗಳು (“ದಂಡಪ್ಪ ನಾಯ್ಗ ಮಾಯಣ್ಣ ನಾಯ್ಗ ಕಟ್ಟಾಯಿ ಕಲಿ ಮಾಡ ಏರಾಯಿ ಪೆರ್ನ ಮುಗುಳಿ, ಐನ ಕತ್ತೇರಿ ಮಾನಿ ಮುತ್ತೇರಿ ಸಿಂಘಾಸನಡ್ ನೆಲೆ ಆಯಿನ ದೈವ” ಎಂಬ ಮಾತು) ಹಾಗೂ ಪೊಯ್ಯೆತ್ತುರ್ ಗುತ್ತಿನಲ್ಲಿ ಯಜಮಾನರು ಮಾಡಿದ ಕಟ್ಟ್ ಎನ್ನುವಂತೆ ಪ್ರಾರ್ಥನೆ ಮಾಡಿ ಎಲ್ಲ ಗುರು ಹಿರಿಯರನ್ನು ನೆನೆಸಿಕೊಂಡು ಈ ದೈವಗಳಿಗೆ ವಾರ್ಷಿಕ ಹಾಗೂ ಕಾಲಾವಧಿಯ ಪರ್ವ ಸೇವೆಗಳನ್ನು ನಡೆಸಿಕೊಂಡು ಬರುತಿದ್ದಾರೆ.
ಮಾಲೆಂಗ್ರಾಯ ದೈವದ ಕಾರ್ಣಿಕವು ಮೂರು ಮನೆತನಗಳಲ್ಲಿ ಹಲವಾರು ನಿದರ್ಶನಗಳ ಮೂಲಕ ಕಂಡು ಬಂದಿದೆ. ಕೆಲವೊಮ್ಮೆ ಈ ದೈವವು ರಾತ್ರೋ ರಾತ್ರಿ ಬಾಳಿಕೆಯ, ಗುತ್ತಿನ ಅಥವಾ ಬೀಡಿನ ಯಜಮಾನರು ನ್ಯಾಯ ತೀರ್ಮಾನಗಳಿಗೆ ಹೋಗಿ ಬರುವ ಸಂದರ್ಭದಲ್ಲಿ ಅವರನ್ನು ಹಿಂಬಾಲಿಸಿ ಬೆಂಕಿಯ ಪಂಜು (ಸೂಟೆ) ಮೂಲಕ ದಾರಿ ತೋರಿಸಿದ್ದು ಉಂಟು.ಹಾಗೆಯೇ ಮುಂದೆ ಒಬ್ಬ ಮೀನು ವ್ಯಾಪಾರಸ್ಥ ಮುಸಲ್ಮಾನ ವ್ಯಕ್ತಿಯು ಮಧ್ಯಾಹ್ನದ ಹೊತ್ತಿಗೆ ನಮಾಜು ಮಾಡುವಾಗ ತನ್ನ ತಲೆಯಲ್ಲಿದ್ದ ಮೀನಿನ ಕಟ್ಟನ್ನು ದೈವದ ಕಲ್ಲಿನ ಮೇಲೆ ಇಟ್ಟಾಗ ಈ ಮಾಲೆನ್ಗ್ರಾಯ ದೈವವು ಕೋಪಿಸಿಕೊಂಡು ಆ ಮುಸಲ್ಮಾನನನ್ನು ಅಲ್ಲೇ ಮಾಯಾ ಮಾಡಿಸಿದನು ಎಂಬ ಕಥೆಯಿದೆ. ಆ ಮುಸಲ್ಮಾನ ವ್ಯಕ್ತಿಯ ಹೆಸರು ಮಾಪುಲೆ ಬ್ಯಾರಿ ಎಂದಾದ ಕಾರಣ ಆ ಜಾಗಕ್ಕೆ ವರ್ತಮಾನ ಕಾಲದಲ್ಲಿ “ಮಾಪುಲಡ್ಕ” ಎಂದು ಕರೆಯುತ್ತಾರೆ ಹಾಗೂ ಈ ಹೊತ್ತಿಗೆ ಮರ್ದೂರ ಬೀಡಿನಲ್ಲಿ ದೈವದ ಗಡಿ ಪ್ರಧಾನರಾಗಿ ಜಗನ್ನಾಥ ರೈಗಳು, ಪೊಯ್ಯೆತ್ತುರ್ ಗುತ್ತಿನಲ್ಲಿ ದೈವದ ಗಡಿ ಪ್ರಧಾನರಾಗಿ ರಾಧಾಕೃಷ್ಣ ರೈಗಳು ಹಾಗೂ ಮಾಲೆಂಗ್ರಿ ಬಾಳಿಕೆಯಲ್ಲಿ ರಾಮಕೃಷ್ಣ ರೈ ಗಳು ಆಡಳಿತದಲ್ಲಿರುತ್ತಾರೆ
ಬರಹ :- ಸಚಿನ್ ರೈ ಬೆಂಜನಮಾರ್ ಗುತ್ತು.