ಭವ್ಯ ವೇದಿಕೆಯಲ್ಲಿ ನೊಚ್ಚ ಪ್ರಕಾಶ್ ಶೆಟ್ಟಿ ಅವರಿಗೆ ನಡೆದಿರುವ ಅಭಿನಂದನಾ ಕಾರ್ಯಕ್ರಮ ಅವರ ಸೇವಾ ಸಾಧನೆಗೆ ಸಾಕ್ಷಿಯಾಗಿದೆ. ಅವರ ಸೇವಾ ಕಾರ್ಯ ರಾಜ್ಯದ ಎಲ್ಲಾ ಪಿಡಿಒಗಳಿಗೆ ಮಾದರಿಯಾಗಿದೆ ಎಂದು ವಿಧಾನಸಭೆ ಉಪ ಸಭಾಧ್ಯಕ್ಷರ ವಿಶೇಷ ಕರ್ತವ್ಯ ಅಧಿಕಾರಿ ಡಾ| ಕೆ.ಎನ್ ವಿಜಯಪ್ರಕಾಶ ಹೇಳಿದರು. ಉಜಿರೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನೊಚ್ಚ ಪ್ರಕಾಶ್ ಶೆಟ್ಟಿ ಅವರಿಗೆ ಉಜಿರೆ ನಾಗರಿಕರು ಹಾಗೂ ನೊಚ್ಚ ಪ್ರಕಾಶ್ ಶೆಟ್ಟಿ ಅಭಿನಂದನಾ ಸಮಿತಿ ವತಿಯಿಂದ ಉಜಿರೆಯಲ್ಲಿ ಆಯೋಜಿಸಿದ್ದ ‘ಪ್ರಕಾಶಾಭಿವಂದನಮ್’ ಕಾರ್ಯಕ್ರಮದಲ್ಲಿ ಅವರು ಪ್ರಕಾಶ ಪರ್ವ ಅಭಿನಂದನ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಅವರು ಸೇವೆ ಸಲ್ಲಿಸಿದ ಗ್ರಾಮಗಳಲ್ಲಿ ತ್ಯಾಜ್ಯ ವಿಲೇವಾರಿ, ಘನ ತ್ಯಾಜ್ಯ ಘಟಕ ಸಹಿತ ಹಲವು ಮಾದರಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಿದ್ದರು. ಇದರಿಂದಾಗಿ ಜಿಲ್ಲೆಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸುವಂತಾಯಿತು. ಗ್ರಾಮಕ್ಕೆ ರಾಷ್ಟ್ರ ಪ್ರಶಸ್ತಿ ದೊರಕಿಸಿದ ಕೀರ್ತಿ ಅವರದ್ದು ಎಂದರು. ಉಜಿರೆ ಶ್ರೀ ಧ.ಮo ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ಬಿ.ಎ ಕುಮಾರ ಹೆಗ್ಡೆ ಅಭಿನಂದನಾ ಭಾಷಣ ಮಾಡಿ, ಅವರ ಸಾಧನೆ ಯುವ ಜನತೆಗೆ ಸ್ಪೂರ್ತಿಯಾಗಿದ್ದು ಗ್ರಾಮದ ಜನ ಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.




ಸಮ್ಮಾನ ಸ್ವೀಕರಿಸಿ ಮಾತನಾಡಿದ ನೊಚ್ಚ ಪ್ರಕಾಶ್ ಶೆಟ್ಟಿ, ಸಾಧನೆಯ ಹಿಂದೆ ಹಿರಿಯರ ಆಶೀರ್ವಾದ, ಕುಟುಂಬದ ಸಹಕಾರ, ಹಿರಿಯ ಅಧಿಕಾರಿಗಳ ಬೆಂಬಲವಿದೆ. ಸಮ್ಮಾನವನ್ನು ತಮ್ಮೊಂದಿಗೆ ಕಾರ್ಯ ನಿರ್ವಹಿಸಿದ ಸಿಬ್ಬಂದಿಗಳಿಗೆ ಅರ್ಪಿಸುವುದಾಗಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ, ಪ್ರಕಾಶ್ ಶೆಟ್ಟಿ ಸ್ವಚ್ಛತೆ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡಿ ಉಜಿರೆಗೆ ಉತ್ತಮ ಹೆಸರು ತಂದು ಕೊಟ್ಟಿದ್ದಾರೆ. ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದರು ಎಂದರು. ನೊಚ್ಚ ಪ್ರಕಾಶ್ ಶೆಟ್ಟಿ ಹಾಗೂ ಪತ್ನಿ ಪ್ರವೀಣಾ ದಂಪತಿಯನ್ನು ಸಮ್ಮಾನಿಸಲಾಯಿತು. ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಪ್ರಕಾಶ್ ಶೆಟ್ಟಿ ಅವರ ಸೇವಾ ಬದುಕಿನ ಕುರಿತ ಸಾಕ್ಷ ಚಿತ್ರ ಪ್ರದರ್ಶಿಸಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪ್ ಸಿಂಹ ನಾಯಕ್, ತಾ.ಪಒ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಭವಾನಿ ಶಂಕರ್, ಉಜಿರೆ ಗ್ರಾ. ಪಂ ಆಡಳಿತಾಧಿಕಾರಿ ಮಹಾವೀರ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರದೀಪ್ ಬಿ.ಎಸ್ ಉಪಸ್ಥಿತರಿದ್ದರು. ಅಭಿನಂದನಾ ಸಮಿತಿ ಸಂಚಾಲಕ ರಘುರಾಮ ಶೆಟ್ಟಿ ಸ್ವಾಗತಿಸಿ, ಬಿ ರವೀಂದ್ರ ಶೆಟ್ಟಿ, ಸಮ್ಮಾನ ಪತ್ರ ವಾಚಿಸಿದರು. ಬಿ ಸೋಮಶೇಖರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.














































































































