ತುರ್ತು ಸಂದರ್ಭದಲ್ಲಿ ಸರಿಯಾದ ರಕ್ತ ದೊರೆತರೆ ಜೀವ ಉಳಿಸಲು ಸಾಧ್ಯ. ರಕ್ತದಾನದಿಂದ ಜೀವ ಉಳಿಸುವುದೇ ನಿಜವಾದ ಮಾನವೀಯತೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲದ ಕಾರಣ ರಕ್ತದ ಲಭ್ಯತೆ ಸ್ವಯಂಪ್ರೇರಿತ ರಕ್ತದಾನಿಗಳನ್ನೇ ಅವಲಂಬಿಸಿದೆ. ಹಾಗಾಗಿ ರಕ್ತದಾರಿಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ ಜಿಲ್ಲಾ ಶಾಖೆ ಅಧ್ಯಕ್ಷ ಸಿಎ ಶಾಂತರಾಮ ಶೆಟ್ಟಿ ಹೇಳಿದರು. ಕೆನರಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್ ಹಾಗೂ ಯೂತ್ ರೆಡ್ ಕ್ರಾಸ್ ಘಟಕಗಳ ಸಹಯೋಗದಲ್ಲಿ ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಲೇಡಿಗೋಶನ್ ಆಸ್ಪತ್ರೆ ಹಾಗೂ ಪ್ರಣವ ಚಾರಿಟೆಬಲ್ ಟ್ರಸ್ಟ್ ಯೆಯ್ಯಾಡಿ ಸಹಕಾರದೊಂದಿಗೆ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.




ಜಿಲ್ಲಾ ರಕ್ತದಾನ ಸಂಯೋಜಕ ಎನ್.ಜೆ ನಾಗೇಶ್ ಕುಮಾರ್ ಮಾತನಾಡಿದರು. ಲಯನ್ಸ್ ಕ್ಲಬ್ ನ ಹೇಮಾ ರಾವ್, ಲಯನ್ಸ್ ಜಿಲ್ಲಾ ಮುಖ್ಯ ಸಂಯೋಜಕ ಜಿ ಪ್ರಶಾಂತ್ ಪೈ, ಪ್ರಣವ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಸೋಮಪ್ಪ ನಾಯಕ್, ಕೆನರಾ ಹೈ ಸ್ಕೂಲ್ ಅಸೋಸಿಯೇಶನ್ ನ ಆಡಳಿತ ಮಂಡಳಿ ಸದಸ್ಯೆ ಅಶ್ವಿನಿ ಕಾಮತ್ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲೆ ಡಾ| ಪ್ರೇಮಲತಾ ವಿ ಅವರು ವಿದ್ಯಾರ್ಥಿಗಳಿಗೆ ಸ್ವಯಂಪ್ರೇರಿತ ರಕ್ತದಾನದ ಕುರಿತು ಪ್ರತಿಜ್ಞೆ ಬೋಧಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಷ್ಮಾ ಸಿ ಮತ್ತು ಸ್ಮಿತಾ ಎಂ ಹಾಗೂ ಯೂತ್ ರೆಡ್ ಕ್ರಾಸ್ ಯೋಜನಾಧಿಕಾರಿ ಪೂಜಾ ಶೆಟ್ಟಿ ಶಿಬಿರ ಸಂಯೋಜಿಸಿದರು. ಶಿಬಿರದಲ್ಲಿ ಒಟ್ಟು 117 ಯುನಿಟ್ ಗಳಷ್ಟು ರಕ್ತ ಸಂಗ್ರಹಿಸಲಾಯಿತು. ಅಪೇಕ್ಷಾ ಸ್ವಾಗತಿಸಿ, ಪ್ರಗತಿ ವಂದಿಸಿ, ಸೀಮಾ ಪ್ರಸ್ತಾವಿಸಿ, ಸ್ವಯಂಸೇವಕ ಅನಿಲ್ ನಿರೂಪಿಸಿದರು.














































































































