ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಜಾನಪದ ಪರಿಷತ್ (ಕ.ಜಾ.ಪ) ಕೇರಳ ಗಡಿನಾಡ ಘಟಕ ಇವುಗಳ ಜಂಟಿ ಆಶ್ರಯದಲ್ಲಿ ಕೊಚ್ಚಿ ನಗರದ ಕಲೂರ್ ಗೋಕುಲಂ ಪಾರ್ಕ್ ಕನ್ವೆನ್ಷನ್ ಸೆಂಟರ್ ನಲ್ಲಿ ಕೇರಳ ಕರ್ನಾಟಕ ಜಾನಪದ ಉತ್ಸವ ವೈಭವದಿಂದ ಜರಗಿತು. ಈ ಐತಿಹಾಸಿಕ ಸಮಾರಂಭದ ಅಂಗವಾಗಿ ಕ.ಜಾ.ಪ ಕೇರಳ ಗಡಿನಾಡ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ನೂತನ ಕೃತಿ ಬಿಡುಗಡೆ, ಬಹುಭಾಷಾ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ವಹಿಸಿದ್ದರು. ಎರ್ನಾಕುಳಂ ಶಾಸಕ ಟಿ.ಜೆ ವಿನೋದ್ ಕಾರ್ಯಕ್ರಮವನ್ನು ಡೋಲು ಬಾರಿಸಿ ವಿದ್ಯುಕ್ತವಾಗಿ ಉದ್ಘಾಟಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಪ್ರಾಸ್ತವಿಕವಾಗಿ ಮಾತನಾಡಿ, ಗಡಿನಾಡಿನಲ್ಲಿ ಕನ್ನಡ ಭಾಷೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಅಗತ್ಯತೆಯ ಕುರಿತು ಬೆಳಕು ಚೆಲ್ಲಿದರು. ಮುಖ್ಯ ಅತಿಥಿಯಾಗಿದ್ದ ಕೇರಳ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ವಿ.ಇ ಅಬ್ದುಲ್ ಗಪೂರ್ ಮಾತನಾಡಿ, ಕಲೆ, ಸಾಹಿತ್ಯ ಮತ್ತು ಜಾನಪದ ಸಾಂಸ್ಕೃತಿಗೆ ಭೌಗೋಳಿಕ ಗಡಿಗಳ ಹಂಗಿಲ್ಲ. ಕರ್ನಾಟಕ ಮತ್ತು ಕೇರಳ ರಾಜ್ಯಗಳು ಶತಮಾನಗಳಿಂದಲೂ ಅವಿನಾಭಾವ ಸಾಂಸ್ಕೃತಿಕ, ಸಾಮಾಜಿಕ ಮತ್ತು ಭಾವನಾತ್ಮಕ ಬಾಂಧವ್ಯವನ್ನು ಹಂಚಿಕೊಂಡು ಬಂದಿವೆ. ಭಾಷೆ ಮತ್ತು ಭೂಪ್ರದೇಶ ಬೇರೆಯಾಗಿದ್ದರೂ ಜನಪದ ಕಲೆಗಳು ಮಾನವೀಯ ಮೌಲ್ಯಗಳನ್ನು ಮತ್ತು ಪರಸ್ಪರ ಪ್ರೀತಿಯನ್ನು ಬೆಳೆಯುವ ಶಕ್ತಿ ಹೊಂದಿವೆ. ಗಡಿನಾಡಿನಲ್ಲಿ ಇಂತಹ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವುದರಿಂದ ಉಭಯ ರಾಜ್ಯಗಳ ಜನರ ನಡುವೆ ಭ್ರಾತೃತ್ವ ಹಾಗೂ ಸೌಹಾರ್ದತೆ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.




ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ಅಧ್ಯಕ್ಷ ಹಾಗೂ ವಿಶ್ರಾಂತ ಕುಲಪತಿ ಪ್ರೊ. ಹಿ.ಚಿ ಬೋರಲಿಂಗಯ್ಯ ಅವರು ಕ.ಜಾ.ಪ ಕೇರಳ ಘಟಕದ ನೂತನ ಸಾರಥಿಗಳ ಪದಗ್ರಹಣವನ್ನು ಅಧಿಕೃತವಾಗಿ ಘೋಷಿಸಿ ಶುಭ ಹಾರೈಸಿದರು. ಇದೇ ವೇದಿಕೆಯಲ್ಲಿ ಲೇಖಕಿ, ಪ್ರಾಧ್ಯಾಪಿಕೆ ಲಕ್ಷ್ಮಿ ಮಹೇಶ್ ರಾಜು ಅವರ ಇಲ್ಲಿ-ಇಂತು-ಹೀಗೆ ಕವನ ಸಂಕಲನವನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು ಕವಯತ್ರಿ ಲಕ್ಷ್ಮಿ ಕೆ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ಜರಗಿತು. ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಆಯೋಗದ ಸದಸ್ಯ ಟಿ.ಎಂ ಶಾಹಿದ್, ಕ.ಸಾ.ಪ ಕೇರಳ ಘಟಕದ ಅಧ್ಯಕ್ಷ ಡಾ| ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಕೆ ಉಳಿಯತ್ತಡ್ಕ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎ.ಆರ್ ಸುಬ್ಬಯ್ಯಕಟ್ಟೆ, ಶಿವ ರೆಡ್ಡಿ ಖ್ಯಾಡೇದ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸದಸ್ಯ ಎನ್ ಚನಿಯಪ್ಪ ನಾಯ್ಕ್, ಕೊಚ್ಚಿ ಚಂಗಪುಝ ಸಾಂಸ್ಕೃತಿಕ ವೇದಿಕೆ ಸದಸ್ಯ ಟಿ.ಜಿ ರವಿಕುಮಾರ್, ಕರ್ನಾಟಕ ಗಮಕ ಕಲಾ ಪರಿಷತ್ ನ ಗಡಿನಾಡ ಘಟಕದ ಅಧ್ಯಕ್ಷ ಟಿ. ಶಂಕರನಾರಾಯಣ ಭಟ್, ಸಮಾಜ ಸೇವಕ ಸಿದ್ದಿಕ್ ಪಚ್ಚoಬಳ ಉಪಸ್ಥಿತರಿದ್ದರು. ಕಜಾಪ ಕೇರಳ ಘಟಕಾಧ್ಯಕ್ಷ ಡಾ.ಮಲ್ಲಿಕಾರ್ಜುನ ಎಸ್ ನಾಸಿ ಸ್ವಾಗತಿಸಿದರು. ಕೇರಳ ಘಟಕದ ಪ್ರಧಾನ ಕಾರ್ಯದರ್ಶಿ ರವಿ ನಾಯ್ಕಪು ಕಾರ್ಯಕ್ರಮದ ನಂತರ ವಿವಿಧ ಕಲಾ ತಂಡಗಳಿಂದ ಪ್ರದರ್ಶನಗೊಂಡ ವೈವಿಧ್ಯಮಯ ಸಾಂಸ್ಕೃತಿಕ ಕಲಾ ಪ್ರಕಾರಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. ಇದೇ ಸಂದರ್ಭ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರಮುಖ ಸಾಧಕರಾದ ಡಾ| ಸಂದೀಪ್ ಪುರಂದರ ಶೆಟ್ಟಿ, ಡಾ| ಶಿವರಾಮ ಕೆ ಭಂಡಾರಿ, ಎಚ್ ಪ್ರಸನ್ನ ಕುಮಾರ್ ಮಂಗಳೂರು, ಎಸ್. ಜಗದೀಶ್ಚಂದ್ರ ಅಂಚನ್, ಶಾಫಿ ಎಂ ಬಂಡಸಾಲೆ, ರಾಘವ ಚೇರಾಲು ಅವರಿಗೆ ಸಾಧಕ ರತ್ನ ಪ್ರಶಸ್ತಿ ನೀಡಿ ಸಚಿವರು ಗೌರವಿಸಿದರು. ಜೊತೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾರಾಯಣ ಬೆಳೇರಿ ಅವರನ್ನು ಗೌರವಿಸಲಾಯಿತು.














































































































