ಬ್ರಹ್ಮಾವರದ ಜಿ.ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಕಿಂಡರ್ಗಾರ್ಟನ್ ವಿಭಾಗದ ವತಿಯಿಂದ ‘ಅಜ್ಜ-ಅಜ್ಜಿಯರ ದಿನಾಚರಣೆ’ಯನ್ನು ವೈವಿಧ್ಯಮಯವಾಗಿ ಆಯೋಜಿಸಲಾಗಿತ್ತು. ಕಿಂಡರ್ಗಾರ್ಟನ್ ವಿದ್ಯಾರ್ಥಿಗಳು ತಮ್ಮ ಅಜ್ಜ ಅಜ್ಜಿಯರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಂಡರು. ವಿವಿಧ ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಲ್ಮಾನ್ ಜನರಲ್ ಆಸ್ಪತ್ರೆ ಸೌದಿ ಅರೇಬಿಯಾದ ನಿವೃತ್ತ ಸಿಬ್ಬಂದಿ ನರ್ಸ್ ಶ್ರೀಮತಿ ಭಾರತಿ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಜ್ಜ ಅಜ್ಜಿಯರು ಮಕ್ಕಳಿಗೆ ‘ನಡೆದಾಡುವ ಗ್ರಂಥಾಲಯವಿದ್ದಂತೆ’ ಪುಸ್ತಕಗಳಲ್ಲಿ ಸಿಗುವ ಜ್ಞಾನಕ್ಕಿಂತಲೂ ಜೀವನದ ಅನುಭವದಿಂದ ದೊರೆಯುವ ಜ್ಞಾನ ಅಪಾರವಾದುದು. ಮೌಲ್ಯಗಳನ್ನು, ಸಂಸ್ಕಾರಗಳನ್ನು ಕಥೆಗಳ ಮೂಲಕ ಮಕ್ಕಳಿಗೆ ಹಂಚಿಕೊಳ್ಳುವ ಮೂಲಕ ಅಜ್ಜ ಅಜ್ಜಿಯರು ಮಕ್ಕಳಿಗೆ ಅಮೂಲ್ಯವಾದ ಜ್ಞಾನವನ್ನು ನೀಡುತ್ತಾರೆ. ಆದ್ದರಿಂದ ಮಕ್ಕಳು ಹೆಚ್ಚಿನ ಸಮಯವನ್ನು ತಮ್ಮ ಅಜ್ಜ ಅಜ್ಜಿಯವರೊಂದಿಗೆ ಕಳೆಯಬೇಕು ಮತ್ತು ಅವರ ಅನುಭವಗಳಿಂದ ಕಲಿಯಬೇಕೆಂದರು.




ಶಾಲಾ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಕಾರ್ಯಕ್ರಮದ ಕುರಿತಾಗಿ ಮಾತನಾಡಿ, ಅಜ್ಜ-ಅಜ್ಜಿಯರು ಕುಟುಂಬದ ಅಮೂಲ್ಯ ಆಸ್ತಿಯಾಗಿದ್ದು, ಮಕ್ಕಳ ಬೆಳವಣಿಗೆಯಲ್ಲಿ ಅವರ ಪ್ರೀತಿ ಮಾರ್ಗದರ್ಶನ ಮತ್ತು ಅನುಭವಕ್ಕೆ ವಿಶೇಷ ಸ್ಥಾನವಿದೆ ಮತ್ತು ಅಜ್ಜ ಅಜ್ಜಿಯವರೊಂದಿಗೆ ಮಕ್ಕಳು ಬೆರೆಯುವುದರಿಂದ ಕುಟುಂಬದ ಮೌಲ್ಯಗಳು ಮತ್ತು ಸಂಸ್ಕಾರಗಳು ಮಕ್ಕಳಲ್ಲಿ ಬೇರೂರುತ್ತವೆ ಎಂದರು. ಶಾಲೆಯ ಪ್ರಾಂಶುಪಾಲರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಅಜ್ಜ-ಅಜ್ಜಿಯರ ಪ್ರೀತಿ ಆರೈಕೆ ಮಕ್ಕಳ ಬಾಲ್ಯವನ್ನು ಇನ್ನಷ್ಟು ಸುಂದರಗೊಳಿಸುತ್ತದೆ ಎಂದರು ಮತ್ತು ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಹಿರಿಯರನ್ನು ಗೌರವಿಸುವುದು, ಅವರ ಅನುಭವಗಳಿಂದ ಕಲಿಯುವುದು ಹಾಗೂ ಕುಟುಂಬದ ಬಾಂಧವ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಜ್ಜ-ಅಜ್ಜಿಯರ ಮಹತ್ವವನ್ನು ಸಾರುವ ಈ ವಿಶೇಷ ಕಾರ್ಯಕ್ರಮದ ಸಾರ್ಥಕತೆಯನ್ನು ಪಡೆದುಕೊಂಡರು.














































































































