ಆರ್ಥಿಕ ಸಾಕ್ಷರತೆಯನ್ನು ಹೊಂದುವ ಮೂಲಕ ಸ್ವಾವಲಂಬಿಗಳಾಗಬೇಕು. ಉದ್ಯೋಗ ಮತ್ತು ಉದ್ದಿಮೆಗಳಿಂದ ಗಳಿಸಿದ ಹಣವನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವಿರಬೇಕು. ಆ ಮೂಲಕ ಹಣ ಬಳಸುವಲ್ಲಿ ಜಾಗೃತಿ ವಹಿಸುವುದರೊಂದಿಗೆ ಆರ್ಥಿಕ ಸುಧಾರಣೆ ಸಾಧ್ಯ ಎಂದು ಕೆನರಾ ಬ್ಯಾಂಕಿನ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಹರೀಶ್ ಹೇಳಿದರು. ಅವರು ಇಲ್ಲಿನ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಶ್ರಯದಲ್ಲಿ ಬ್ರಹ್ಮಾವರದ ರುಡ್ಸೆಟ್ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ ಬ್ಯಾಂಕು ಮತ್ತು ಹಣಕಾಸಿನ ಕುರಿತಾದ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜೊತೆಗೆ ಬ್ರಹ್ಮಾವರದ ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಎಮ್. ಹಾಗೂ ಕುಂದಾಪುರದ ಫೈನಾನ್ಸ್ ಕೌನ್ಸಿಲರ್ ಆಶಾಲತಾ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ರಕ್ಷಿತ್ ರಾವ್ ಗುಜ್ಜಾಡಿ, ಶ್ರೀಮತಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿಗಳಾದ ಶ್ರೀಕಾಂತ್ ಪ್ರಾರ್ಥಿಸಿ, ವರಲಕ್ಷ್ಮಿ ಸ್ವಾಗತಿಸಿ, ಸಿರಿ ವಂದಿಸಿ, ನಾಗರತ್ನ ನಿರೂಪಿಸಿದರು.

















































































































