ಪ್ರದೀಪ್ ಕುಮಾರ್ ರೈ ಪಾಂಬಾರು ನೇತೃತ್ವದ ಕೊಳ್ತಿಗೆ ಸೌಹಾರ್ದ ಸಮಿತಿ ವತಿಯಿಂದ 11ನೇ ವರ್ಷದ ಸೌಹಾರ್ದ ಶ್ರೀ ಗಣೇಶೋತ್ಸವ ಸೆಪ್ಟೆಂಬರ್ 14 ರಿಂದ 15 ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸೌಹಾರ್ದ ಕಾರ್ಯಕ್ರಮಗಳೊಂದಿಗೆ ಮೊಗಪ್ಪೆಯ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಬಳಿ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಳ್ತಿಗೆ ಸೌಹಾರ್ದ ಸಮಿತಿಯ ಸ್ಥಾಪಕಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪಾಂಬಾರು, ಈ ಸೌಹಾರ್ದ ಸಮಿತಿಯನ್ನು ರಚಿಸಿರುವ ಮುಖ್ಯ ಉದ್ದೇಶವೇ ಜಾತಿವಾದ, ಕೋಮುವಾದ ಮತ್ತು ಆತಂಕವಾದವನ್ನು ಹಿಮ್ಮಿಟ್ಟಿಸಿ ಜನರಲ್ಲಿ ವಿಶೇಷವಾಗಿ ಯುವ ಜನಾಂಗದಲ್ಲಿ ಸೌಹಾರ್ದ ಮನೋಭಾವವನ್ನು ನಿರ್ಮಿಸುವುದಾಗಿದೆ. ಇದಕ್ಕಾಗಿ ಪ್ರತಿ ವರ್ಷವೂ ಸೌಹಾರ್ದ ಗಣೇಶೋತ್ಸವ, ಸೌಹಾರ್ದ ಇಫ್ತಾರ್ ಕೂಟ, ಸೌಹಾರ್ದ ಕ್ರಿಸ್ ಮಸ್ ಆಚರಿಸುತ್ತೇವೆ ಎಂದರು.
ವಿಶೇಷ ಅತಿಥಿ ಧಾರ್ಮಿಕ ವಿದ್ವಾಂಸ ಎಸ್.ಬಿ ಮುಹಮ್ಮದ್ ದಾರಿಮಿ, ಕೆಎಸ್ಸಾರ್ಟಿಸಿಯ ವಿಭಾಗೀಯ ಸಂಚಾರ ಅಧಿಕಾರಿ ಜೈ ಶಾಂತ ಕುಮಾರ್ ಎಂ.ಬಿ ಮಾತನಾಡಿದರು. ಈ ವೇಳೆ ಹಿರಿಯ ಸಮಾಜ ಸೇವಕ ಕೆ.ಎಂ.ಬಾಬುರಾಜೇಂದ್ರ ಗೌಡ ಮತ್ತು ನಿವೃತ್ತ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್ ಎಂ.ಎನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊಳ್ತಿಗೆ ಗ್ರಾಪಂನ ಮಾಜಿ ಅಧ್ಯಕ್ಷ ಪ್ರಮೋದ್ ಕೆ.ಎಸ್ ವೇದಿಕೆಯಲ್ಲಿದ್ದರು. ಈ ಸಂದರ್ಭ ಪುತ್ತೂರು ಉಪವಿಭಾಗದ ಡಿ.ವೈ.ಎಸ್.ಪಿ ಪ್ರಮೋದ್ ಕುಮಾರ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಸಂತೋಷ್ ಜಾಕೆ, ಬಾಯಂಬಾಡಿಯ ಶ್ರೀ ಷಣ್ಮುಖದೇವಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ವಸಂತ್ ಕುಮಾರ್ ರೈ ದುಗ್ಗಳ್ಳ, ಜಲದುರ್ಗಾ ಸಮಿತಿಯ ಅಧ್ಯಕ್ಷ ಲಯನ್ ಕುoಬ್ರ ದಯಾಕರ ಆಳ್ವ, ದ.ಕ ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಎಂ.ಎಸ್ ಮುಹಮ್ಮದ್, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಕಾವು ಹೇಮನಾಥ ಶೆಟ್ಟಿ, ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ಉದಯ್ ಕುಮಾರ್ ಉಪಸ್ಥಿತರಿದ್ದರು

















































































































