ಬ್ರಹ್ಮಾವರ ಜಿ.ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಉತ್ಸಾಹಭರಿತ ಜೀವನ ಕೌಶಲ್ಯ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ವಿವಿಧ ಆಸಕ್ತಿದಾಯಕ ಚಟುವಟಿಕೆಗಳ ಮೂಲಕ ಜೀವನಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಕಲಿಯಲು ಮತ್ತು ಅನ್ವೇಷಿಸಲು ವೇದಿಕೆಯನ್ನು ಒದಗಿಸಲಾಯಿತು. ಸೃಜನಶೀಲತೆ, ತಂಡದ ಕೆಲಸ ಮತ್ತು ಪ್ರಾಯೋಗಿಕ ಕಲಿಕೆಯ ಸಮ್ಮಿಲನವಾಗಿದ್ದ ಈ ಕಾರ್ಯಕ್ರಮವು ನೈಜ ಜೀವನದ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುವ ಸಮಗ್ರ ವ್ಯಕ್ತಿತ್ವದ ವಿದ್ಯಾರ್ಥಿಗಳನ್ನು ರೂಪಿಸುವ ಉದ್ದೇಶವನ್ನು ಹೊಂದಿತ್ತು. ಶಾಲಾ ಅಧ್ಯಕ್ಷರು ಕಾರ್ಯಕ್ರಮದ ಕುರಿತಾಗಿ ಮಾತನಾಡಿ, ವೈಯಕ್ತಿಕ, ವೃತ್ತಿಪರ ಬೆಳವಣಿಗೆಯಲ್ಲಿ ಜೀವನ ಕೌಶಲ್ಯಗಳ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಶಿಕ್ಷಣ ಕೇವಲ ಪರೀಕ್ಷೆಗಾಗಿ ಮಾತ್ರವಲ್ಲ, ಜೀವನಕ್ಕಾಗಿ ನಮ್ಮನ್ನು ಸಿದ್ಧಪಡಿಸಿದಾಗ ಮಾತ್ರ ಕಲಿಕೆ ಸಂಪೂರ್ಣವಾಗುತ್ತದೆ. ಜೀವನ ಕೌಶಲ್ಯ ದಿನಾಚರಣೆಯು ಜೀವನಕ್ಕೆ ಸಂಬಂಧಿಸಿದ ನಿಜವಾದ ಕಲಿಕೆಯ ಸುಂದರ ಪ್ರತಿಬಿಂಬವಾಗಿದೆ ಎಂದರು. ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್ ಕಾರ್ಯಕ್ರಮದ ಬಗ್ಗೆ ಮಾತನಾಡಿ, ಜೀವನ ಕೌಶಲ್ಯಗಳನ್ನು ಪಠ್ಯ ಪುಸ್ತಕಗಳಲ್ಲಿ ಕಲಿಸಲಾಗುವುದಿಲ್ಲ, ಅವುಗಳನ್ನು ಜೀವನದ ಅನುಭವಗಳ ಮೂಲಕ ಕಲಿಯಲಾಗುತ್ತದೆ. ಜೊತೆಗೆ ಜೀವನ ಕೌಶಲ್ಯಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ವೈಯಕ್ತಿಕ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಬೇಕೆಂದರು.




ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮನಮೋಹಕ ನೃತ್ಯಗಳು ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮ ಸ್ವಯಂ ಅರಿವು, ನಿರ್ಧಾರ ಕೈಗೊಳ್ಳುವಿಕೆ, ಸಹಾನುಭೂತಿ, ಕಾಳಜಿ, ಕರುಣೆ, ಭಾವನೆಗಳ ನಿರ್ವಹಣೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳ ಮಹತ್ವವನ್ನು ತಿಳಿಸಿಕೊಟ್ಟವು. ಕಾರ್ಯಕ್ರಮದಲ್ಲಿ ವಿವಿಧ ಪ್ರಾಯೋಗಿಕ ಚಟುವಟಿಕೆಗಳಾದ ಪ್ರಾಥಮಿಕ ಚಿಕಿತ್ಸೆಯ ಪ್ರಾತ್ಯಕ್ಷಿತೆ, ಬೆಂಕಿಯಿಲ್ಲದೆ ಅಡುಗೆ ತಯಾರಿ, ವಾಹನ ನಿರ್ವಹಣೆ, ನೇಯ್ಗೆ, ಪೊರಕೆ ತಯಾರಿ, ತ್ಯಾಜ್ಯ ವಸ್ತುಗಳಿಂದ ಉಪಯುಕ್ತ ವಸ್ತುಗಳ ತಯಾರಿಕೆ, ಕಲಾತ್ಮಕ ಆಭರಣ ತಯಾರಿಕೆ, ಮೂಲಭೂತ ಹೊಲಿಗೆ ಇತ್ಯಾದಿ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಈ ಎಲ್ಲಾ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ದೈನಂದಿನ ಜೀವನದ ಜವಾಬ್ದಾರಿಗಳನ್ನು ನಿಭಾಯಿಸುವ ಪ್ರಾಯೋಗಿಕ ಅನುಭವ ನೀಡಿದವು. ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.












































































































