ಇಂದಿನ ಲಾಭಾರ್ಥಿ ವಿದ್ಯಾರ್ಥಿಗಳು ಮುಂದಿನ ದಾನಿಗಳಾಗಬೇಕಾದರೆ ಪೋಷಕರ ಸಲಹೆ ಅತ್ಯಗತ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗಲು ಸತತ ಪ್ರಯತ್ನವನ್ನು, ಉನ್ನತವಾದ ಗುರಿಯನ್ನು ಇಟ್ಟುಕೊಂಡು ಜೀವನವನ್ನು ರೂಪಿಸುವ ಆಶಾವಾದಿಗಳಾಗಬೇಕು. ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಕೋನದಿಂದ ಬಾಂಬೆ ಬಂಟ್ಸ್ ಅಸೋಸಿಯೇಶನ್ ಕಳೆದ ಹಲವಾರು ವರ್ಷಗಳಿಂದ ಶೈಕ್ಷಣಿಕ ಸಹಾಯವನ್ನು ನೀಡುತ್ತಾ ಬಂದಿದೆ. ಇದಕ್ಕೆ ಸಮಾಜದ ದಾನಿಗಳು ನೀಡುವ ಕೊಡುಗೆ ಬಹಳ ಇದೆ. ನಿಸ್ವಾರ್ಥ ಕೊಡುಗೈ ದಾನಿಗಳು ದತ್ತಿ ಸಂಸ್ಥೆಗಳಿಗೆ ದೇವಸ್ವರೂಪ ದಾನ ಗುಣವೇ ದೈವತ್ಯ ಎಂದು ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿ ಅವರು ನುಡಿದರು. ಅವರು ಆಗಸ್ಟ್ 23 ರಂದು ಆದಿತ್ಯವಾರ ಜೂಯಿ ನಗರದ ಬಂಟ್ಸ್ ಸೆಂಟರ್ ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ರಾಮಕೃಷ್ಣ ಗ್ರೂಪ್ ಆಫ್ ಹೋಟೆಲ್ಸ್ ಪ್ರಾಯೋಜಕತ್ವದ ದಿ. ಸುಬ್ಬಯ್ಯ ವಿ ಶೆಟ್ಟಿ ವೇದಿಕೆಯಲ್ಲಿ ಜರಗಿದ ಮುಂಬಯಿಯ ಪ್ರತಿಷ್ಠಿತ ಜಾತೀಯ ಸಂಸ್ಥೆಗಳಲ್ಲೊಂದಾಗಿರುವ ಬಾಂಬೆ ಬಂಟ್ಸ್ ಅಸೋಸಿಯೇಶನ್ ಪ್ರತಿ ವರ್ಷ ನೀಡುತ್ತಿರುವಂತಹ ಶೈಕ್ಷಣಿಕ ನೆರವು ವಿತರಣೆ ಹಾಗೂ ದತ್ತು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಕ್ಕಳು ತಮ್ಮ ತಂದೆ ತಾಯಿ ಗುರುಗಳಿಗೆ ಸದಾ ಋಣಿಯಾಗಿರಬೇಕು. ಅವರು ನಮ್ಮ ಜೀವನದ ಯಶಸ್ವಿಗೆ ಕಾರಣೀಭೂತರಾಗಿರುತ್ತಾರೆ. ಅವರ ಆಶೀರ್ವಾದವಿದ್ದರೆ ಎಲ್ಲವೂ ಯಶಸ್ವಿಯಾಗಲು ಸಾಧ್ಯವಿದೆ ಎಂದರು.







ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಎ.ಟಿ.ಎಸ್ ಕತಾರ್ ಇದರ ಆಡಳಿತ ನಿರ್ದೇಶಕ, ಕೊಡುಗೈ ದಾನಿ ಡಾ| ರವಿ ಶೆಟ್ಟಿಯವರು ಮಾತನಾಡಿ, ಸಮಾಜದ ಮಕ್ಕಳು ಶಿಕ್ಷಣದ ಮೂಲಕ ಜೀವನದಲ್ಲಿ ಮುಂದೆ ಬರಬೇಕು ಎಂಬ ಸದುದ್ದೇಶದಿಂದ ಮಾಡುವ ಈ ಕಾರ್ಯ ಅಭಿನಂದನೀಯ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನೈತಿಕ ಮೌಲ್ಯವನ್ನು ಉಳಿಸಿ ಬೆಳೆಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯನ್ನು ಮರೆಯದೆ ಮುಂದೆ ನಾವು ಇನ್ನೊಬ್ಬರಿಗೆ ಸಹಾಯ ನೀಡುವಂತೆ ಆಗಬೇಕು ಎಂದು ನುಡಿದರು. ಆಲ್ ಕಾರ್ಗೋ ಲಾಜೆಸ್ಟಿಕ್ ಲಿಮಿಟೆಡ್ ಇದರ ಸಿ.ಎಸ್.ಆರ್ ವಿಭಾಗದ ಹಿರಿಯ ಮಹಾ ಪ್ರಬಂಧಕರಾದ ಡಾ| ನೀಲರತನ್ ಸಿಂಧಿ ಅವರು ಮಾತನಾಡಿ, ಶಿಕ್ಷಣವು ನಮ್ಮ ಜೀವನದಲ್ಲಿ ಬಹು ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಇಂದಿನ ಮಕ್ಕಳೇ ಶಿಕ್ಷಣವನ್ನು ಪಡೆದು ಮುಂದೆ ದೇಶದ ಉತ್ತಮ ಪ್ರಜೆಗಳಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಾಕಾರವನ್ನು ನೀಡುತ್ತಾ ಬಂದಿದೆ. ಬಾಂಬೆ ಬಂಟ್ಸ್ ಅಸೋಷಿಯೇಶನ್ ನಿಂದ ಸಹಾಯವನ್ನು ಪಡೆದು ಮಕ್ಕಳು ಅವರ ಕನಸನ್ನು ನನಸು ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹಿರಿಯ ಉದ್ಯಮಿ, ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಬಿ. ವಿವೇಕ್ ಶೆಟ್ಟಿ ಅವರು ಮಾತನಾಡಿ, ಜೀವನದಲ್ಲಿ ನಮಗೆ ಶಿಕ್ಷಣ ಮುಖ್ಯ. ನಮ್ಮ ಬದುಕು ಉಜ್ವಲವಾಗಲು ಶಿಕ್ಷಣದಿಂದ ಸಾಧ್ಯ. ಅದರಂತೆ ಹೆತ್ತವರು ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತೇವೆ. ಆದರೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕಾದ ಅಗತ್ಯ ಬಹಳವಿದೆ. ಯುವ ಜನರು ನಮ್ಮ ದೇಶದ ಮುಂದಿನ ನಾಗರಿಕರು. ಅವರು ಸುಸಂಸ್ಕೃತ ಜೀವನ ನಡೆಸಬೇಕಾದ ಅಗತ್ಯವಿದೆ. ಇತ್ತೀಚೆಗೆ ಜಂತರ್ ಮಂತರ್ ನಲ್ಲಿ ನಡೆದಂತಹ ಘಟನೆ ಸಂದರ್ಭದಲ್ಲಿ ನಾವು ನೋಡಿರಬಹುದು ಕೆಲವು ಯುವ ಜನರು ನಮ್ಮ ಸಂಸ್ಕಾರವನ್ನು ಮರೆತು ವರ್ತಿಸುತ್ತಿದ್ದರು. ಇದು ದೌರ್ಭಾಗ್ಯಕರ. ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ನಾವು ಯಾವ ರೀತಿ ಪ್ರತಿಭಟನೆ ಮಾಡಬೇಕು ಎಂಬುದರ ಬಗ್ಗೆ ನಮಗೆ ಅರಿವು ಇರಬೇಕು ಎಂದರು.



ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ, ಉದ್ಘಾಟಿಸಿದ ಉದ್ಯಮಿ ಭವಾನಿ ಫೌಂಡೇಶನ್ ಕಾರ್ಯಾಧ್ಯಕ್ಷ ಕುಸುಮೋದರ ಡಿ. ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯಧನವನ್ನು ಪಡೆಯುವುದರಲ್ಲಿ ಯಾವುದೇ ಮುಜುಗರವನ್ನು ಇಟ್ಟುಕೊಳ್ಳಬಾರದು. ನಮ್ಮ ಕನಸನ್ನು ನನಸು ಮಾಡಲು ಸಂಘ ಸಂಸ್ಥೆಗಳು ಇಂಥಹ ಆರ್ಥಿಕ ಸಹಾಯವನ್ನು ನೀಡುತ್ತಾರೆ. ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಮುಂದೆ ನಾವು ಇನ್ನೊಬ್ಬರಿಗೆ ಸಹಾಯ ಹಸ್ತವನ್ನು ನೀಡುವಂತಾಗಬೇಕು. ಕಷ್ಟದ ಜೀವನವನ್ನು ನಾನು ಅನುಭವಿಸಿದ್ದೇನೆ. ನಾನು ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ವಿಯನ್ನು ಸಾಧಿಸಿದ್ದೇನೆ ಹಾಗೂ ಭವಾನಿ ಪೌಂಡೇಶನ್ ಮೂಲಕ ಅದೆಷ್ಟೋ ಜನರ ಕಣ್ಣೀರು ಒರೆಸುವ ಕೆಲಸವನ್ನು ಮಾಡುತ್ತಿದ್ದೇನೆ ಎನ್ನಲು ಸಂತೋಷವಾಗುತ್ತಿದೆ ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಬಂಟ್ಸ್ ಸೆಂಟರ್ ನ ವಿವಿಧ ವರ್ಧಿತ ಮೂಲ ಸೌಕರ್ಯಗಳ ಉದ್ಘಾಟನೆ ನೆರವೇರಿಸಿದ ಐಬಿಪಿಎಸ್ ನಿರ್ದೇಶಕ ಹರಿದೀಶ್ ಕುಮಾರ್ ಬಿ ಅವರು ಮಾತನಾಡಿ, ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಸಮಾಜ ಪರ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ವಿದ್ಯಾರ್ಥಿಗಳು ಸದಾ ಉತ್ತಮ ಶಿಕ್ಷಣವನ್ನು ಪಡೆದು ಯಶಸ್ವಿ ಜೀವನವನ್ನು ನಡೆಸುವ ಕಡೆಗೆ ತಮ್ಮ ಎಲ್ಲಾ ಪ್ರಯತ್ನವನ್ನು ಕೇಂದ್ರೀಕರಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಎಂ ಶ್ರೀಧರ್ ಶೆಟ್ಟಿ ಹಾಗೂ ಶಾಲಿನಿ ಶೆಟ್ಟಿ ದಂಪತಿಯನ್ನು ವಿಶೇಷ ರೀತಿಯಲ್ಲಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಶಾಲಿನಿ ಶೆಟ್ಟಿಯವರು ಬಾಂಬೆ ಬಂಟ್ಸ್ ಅಸೋಸಿಯೇಶನ್ ಸಮಾಜಕ್ಕಾಗಿ ಮಾಡುತ್ತಿರುವ ಕೆಲಸ ಮೆಚ್ಚುವಂಥದ್ದು. ಇದರ ಪದಾಧಿಕಾರಿಗಳು ಮಹಿಳಾ ವಿಭಾಗವು ನಿರಂತರ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜದ ಅಸಹಾಯಕರಿಗೆ ಸಹಾಯಕವನ್ನು ನೀಡುತ್ತಾ ಬಂದಿರುವುದು ಬಹಳ ಉತ್ತಮವಾದ ಕೆಲಸವಾಗಿದೆ. ಇಂದು ನಮಗೆ ನೀಡಿದ ಸನ್ಮಾನವು ಸಮಾಜಸೇವೆಗೆ ಪ್ರೇರಣೆಯಾಗಿದೆ ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿ ಗಣ್ಯರನ್ನು ಬಾಂಬೆ ಬಂಟ್ಸ್ ಅಸೋಸಿಯೇಶನ್ ವತಿಯಿಂದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಗೌರವಿಸಿದರು. ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಡಿ.ಕೆ ಶೆಟ್ಟಿ ಹಾಗೂ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ್ ಕೆ. ಶೆಟ್ಟಿ ದಂಪತಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಗೀತಾ ದಿವಾಕರ್ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಶಿಕ್ಷಣ ಸಮಿತಿಯ ಕಾರ್ಯದರ್ಶಿ ಶ್ರೀಧರ್ ಕೆ ಶೆಟ್ಟಿ ಅವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಬಾಂಬೆ ಬಂಟ್ಸ್ ಅಸೋಸಿಯೇಶನ್ ಕೋಶಾಧಿಕಾರಿ ಶೇಖರ್ ಶೆಟ್ಟಿ, ಪತ್ರಪುಷ್ಪದ ಸುನಿಲ್ ಶೆಟ್ಟಿ, ರಂಗ ನಿರ್ದೇಶಕ ನಂದಳಿಕೆ ನಾರಾಯಣ ಶೆಟ್ಟಿ, ಜೊತೆ ಕೋಶಾಧಿಕಾರಿ ಸಿಎ ದಿವಾಕರ್ ಕೆ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಉಷಾ ಆರ್ ಶೆಟ್ಟಿ, ಮಹಿಳಾ ವಿಭಾಗದ ಕೋಶಾಧಿಕಾರಿ ನಾಗವೇಣಿ ಶ್ರೀಧರ್ ಶೆಟ್ಟಿ ಅವರು ಅತಿಥಿಗಳ ಪರಿಚಯವನ್ನು ಮಾಡಿದರು. ಬಾಂಬೆ ಬಂಟ್ಸ್ ಅಸೋಸಿಯೇಶನ್ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅವರು ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಜೊತೆ ಕಾರ್ಯದರ್ಶಿ ಜಯರಾಜ್ ರೈ ಅವರು ವಂದಿಸಿದರು. ವೇದಿಕೆಯಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಕಿಶೋರ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಶೇಖರ್ ಆರ್ ಶೆಟ್ಟಿ, ಕೋಶಾಧಿಕಾರಿ ಸಿಎ ವಿಶ್ವನಾಥ್ ಎಸ್ ಶೆಟ್ಟಿ, ಶೈಕ್ಷಣಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ್ ಕೆ ಶೆಟ್ಟಿ, ಜೊತೆ ಕಾರ್ಯದರ್ಶಿ ಜಯರಾಜ್ ರೈ, ಜೊತೆ ಕೋಶಾಧಿಕಾರಿ ಸಿಎ ದಿವಾಕರ್ ಕೆ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತ ನಾರಾಯಣ ಶೆಟ್ಟಿ, ಯುವ ವಿಭಾಗದ ಪ್ರಭಾರ ಅಧ್ಯಕ್ಷ ಧನಂಜಯ ಶೆಟ್ಟಿ ಅವರು ಉಪಸ್ಥಿತರಿದ್ದರು. ಸಮಿತಿ ಸದಸ್ಯರು, ಟ್ರಸ್ಟಿಗಳು, ಮಾಜಿ ಅಧ್ಯಕ್ಷರುಗಳು, ಉಪ ಸಮಿತಿಯ ಕಾರ್ಯಾಧ್ಯಕ್ಷರುಗಳು, ಪದಾಧಿಕಾರಿಗಳು, ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಅಜೆಕಾರು ಬಾಲಕೃಷ್ಣ ಶೆಟ್ಟಿ ನಿರ್ದೇಶನದಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಶಿವಪ್ರಭಾ ಪರಿಣಯ ಎಂಬ ಯಕ್ಷಗಾನ ಬಯಲಾಟವನ್ನು ಪ್ರದರ್ಶಿಸಲಾಯಿತು.


















































































































