ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಇದರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮೈಸೂರು ವಿಭಾಗದ ನಿರ್ದೇಶಕ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಸ್ಪರ್ಧಿಸಿ ಲಭ್ಯವಿದ್ದ 18 ಮತಗಳ ಪೈಕಿ 18 ಮತಗಳನ್ನೂ ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಹಕಾರ ರತ್ನ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಅವರ ಬೆಂಬಲದಿಂದ ಮೈಸೂರು ವಿಭಾಗದ 18ಕ್ಕೆ 18 ಮತಗಳು ಶಶಿಕುಮಾರ್ ರೈ ಅವರಿಗೆ ದೊರೆತು ಭರ್ಜರಿ ಗೆಲುವು ಪಡೆಯುವ ಮೂಲಕ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ 62 ವರ್ಷಗಳ ಇತಿಹಾಸದಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ದ.ಕ ಜಿಲ್ಲೆಯ ಮೊದಲ ಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶಶಿಕುಮಾರ್ ರೈ ಅವರು ಪುತ್ತೂರು ತಾಲೂಕು ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷರಾಗಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾಗಿ, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ, ಪುತ್ತೂರು ತಾಲೂಕಿನ ಇರ್ದೆ ಬೆಟ್ಟಂಪಾಡಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಹಾಗೂ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಡಾ| ಎಂ.ಎನ್ ರಾಜೇಂದ್ರ ಕುಮಾರ್ ಅವರ ಸಹಕಾರ ಕ್ಷೇತ್ರದಲ್ಲಿನ ಅಪೂರ್ವ ಅನುಭವ, ಸಂಘಟನಾ ಸಾಮರ್ಥ್ಯ ಹಾಗೂ ಸೇವೆಯಿಂದ ಶಶಿಕುಮಾರ್ ರೈ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ದ.ಕ ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಸ್ಥಾನಮಾನ ದೊರೆತಿದೆ.


















































































































