ಯುವ ಬಂಟರ ಸಂಘ ಮೂಡುಬಿದಿರೆ ಇದರ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯು ಆಗಸ್ಟ್ 23 ರಂದು ಮೂಡುಬಿದಿರೆಯ ಹೋಟೆಲ್ ಪಂಚರತ್ನದಲ್ಲಿ ನಡೆಯಿತು. ಬಂಟರ ಸಂಘದ ಅಧ್ಯಕ್ಷರಾದ ತಿಮ್ಮಯ್ಯ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಂಟ ಸಮಾಜದ ಪ್ರತಿಯೊಬ್ಬರೂ ಒಂದೇ ಮನಸ್ಸಿನಿಂದ ಒಗ್ಗಟ್ಟಾಗಿ ಸಂಘಟಿತರಾಗುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು. ಆಳ್ವಾಸ್ ಎಜುಕೇಶನ್ ಟ್ರಸ್ಟ್ನ ಟ್ರಸ್ಟಿ ಮತ್ತು ಯುವ ಬಂಟರ ಸಂಘದ ಗೌರವಾಧ್ಯಕ್ಷ ವಿವೇಕ್ ಆಳ್ವ ಅವರು ಮಾತನಾಡಿ, ಸದಸ್ಯತ್ವ ನೋಂದಾವಣೆಯ ಸಮಗ್ರ ಮಾಹಿತಿ, ಸಮಯ ಪಾಲನೆ ಹಾಗೂ ಯುವ ಸಂಘಟನೆಯ ಒಗ್ಗಟ್ಟಿನ ಮಹತ್ವದ ಕುರಿತು ವಿವರಿಸಿದರು. ಗೌರವಾಧ್ಯಕ್ಷ ಜಯಕುಮಾರ್ ಶೆಟ್ಟಿಯವರು ಯುವ ಬಂಟರ ಸಂಘವು ಈ ಹಿಂದೆ ಮಾಡಿದಂತಹ ಸಾಧನೆಗಳನ್ನು ಸ್ಮರಿಸಿ, ಯುವ ಸಂಘಟನೆಯು ಗ್ರಾಮ ಗ್ರಾಮಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಸಂಘಟನೆ ಮತ್ತಷ್ಟು ಬಲಿಷ್ಠವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಯುವ ಬಂಟರ ಸಂಘದ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಬೆಳುವಾಯಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯನ್ನು ಕರೆದ ಉದ್ದೇಶ ಹಾಗೂ ಸಂಘಟನೆಯನ್ನು ಇನ್ನಷ್ಟು ಕ್ರಿಯಾಶೀಲ ಮತ್ತು ಬಲಿಷ್ಠವಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು. ರವಿಪ್ರಸಾದ್ ಶೆಟ್ಟಿ ಅವರು ಸಂಘಟನೆಯಲ್ಲಿ ಯುವ ಶಕ್ತಿಯ ಪಾತ್ರದ ಕುರಿತು ಉಪನ್ಯಾಸ ನೀಡಿದರು.





ಸಭೆಯಲ್ಲಿ ಬಂಟರ ಸಂಘ (ರಿ) ಮೂಡುಬಿದಿರೆಯ ಕಾರ್ಯದರ್ಶಿ ಸುಚರಿತ ಶೆಟ್ಟಿ, ಕೋಶಾಧಿಕಾರಿ ಪುರುಷೋತ್ತಮ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶೋಭಾ ಹೆಗ್ಡೆ ಮತ್ತು ಯುವ ಬಂಟರ ಸಂಘದ ಕಾರ್ಯದರ್ಶಿ ರಮೇಶ್ ಶೆಟ್ಟಿ ಮಿಜಾರು, ಕೋಶಾಧಿಕಾರಿ ಭರತ್ ಶೆಟ್ಟಿ ಹಾಗೂ ಯುವ ಬಂಟರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಅನುಷಾ ಶೆಟ್ಟಿ ಅವರು ಸ್ವಾಗತಿಸಿದರು. ಶರತ್ ಶೆಟ್ಟಿ ಅವರು ಧನ್ಯವಾದ ಸಮರ್ಪಿಸಿದರು. ನಿಹಾರಿಕ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.















































































































