ಮಂಗಳೂರಿನ ಕೆನರಾ ಕಾಲೇಜಿನಲ್ಲಿ ತುಳು ಸಂಘದ ಆಶ್ರಯದಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮವು ಸಡಗರ ಸಂಭ್ರಮದಿಂದ ನಡೆಯಿತು. ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಆಟಿ ತಿಂಗಳ ವೈಶಿಷ್ಟ್ಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ| ಪ್ರೇಮಲತಾ ವಿ ವಹಿಸಿದ್ದರು. ತುಳು ಭಾಷೆಯಲ್ಲೇ ಮಾತನಾಡಿದ ಅವರು, ಆಟಿ ತಿಂಗಳ ಮಹತ್ವ ಹಾಗೂ ತುಳುನಾಡಿನ ವಿಶಿಷ್ಟ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕಾದ ಅಗತ್ಯವನ್ನು ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ತುಳುವರ್ಲ್ಡ್ ಫೌಂಡೇಶನ್ ಕಟೀಲು ಇದರ ನಿರ್ದೇಶಕರಾದ ಡಾ| ರಾಜೇಶ್ ಕೃಷ್ಣ ಆಳ್ವ ಭಾಗವಹಿಸಿದ್ದರು. ‘ತುಳುನಾಡಿನ ಸಂಸ್ಕೃತಿ ಬೊಕ್ಕ ಆಚರಣೆಲು’ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಆಟಿಡೊಂಜಿ ದಿನದ ಹಿನ್ನೆಲೆ, ಆಟಿ ತಿಂಗಳ ಜೀವನ ಪದ್ಧತಿ ಹಾಗೂ ತುಳುನಾಡಿನ ಸಾಂಪ್ರದಾಯಿಕ ಜ್ಞಾನ ಪರಂಪರೆಯ ಕುರಿತು ವಿವರಿಸಿದರು. ತುಳು ಕೇವಲ ಒಂದು ಭಾಷೆಯಲ್ಲ; ಅದು ಒಂದು ವಿಶಾಲವಾದ ವಿದ್ಯಾ ಪರಂಪರೆ. ಪ್ರಪಂಚದ ಅತ್ಯಂತ ಪ್ರಾಚೀನ ಕಳರಿ ವಿದ್ಯೆಯಿಂದ ಹಿಡಿದು ನಾಡಿಶಾಸ್ತ್ರ, ಕಾಲಜ್ಞಾನ ಹಾಗೂ ಜೈವ ಭೌತ ವಿಜ್ಞಾನದಂತಹ ಜ್ಞಾನಪರಂಪರೆಗಳು ತುಳುನಾಡಿನ ನಾಗರಿಕತೆಯಲ್ಲಿ ಕಾಣಿಸಿಕೊಳ್ಳುತ್ತವೆ. ತುಳು ವಿದ್ಯೆಯನ್ನು ಕಲಿತ ವ್ಯಕ್ತಿ ಪ್ರಕೃತಿಯೊಂದಿಗಿನ ಸಂಬಂಧದ ಮೂಲಕ ಈ ಜಗತ್ತನ್ನು ಅರಿಯುವ ದೃಷ್ಟಿಯನ್ನು ಪಡೆಯುತ್ತಾನೆ ಎಂದು ಅವರು ಹೇಳಿದರು. ಇಂತಹ ಅನೇಕ ಅಮೂಲ್ಯವಾದ ಜನಪದ ಜ್ಞಾನ ಮತ್ತು ಪರಂಪರಾ ವಿದ್ಯೆಗಳು ಇಂದು ನಿಧಾನವಾಗಿ ಮರೆಯಾಗುತ್ತಿವೆ. ಅವುಗಳನ್ನು ವೈಜ್ಞಾನಿಕ ದೃಷ್ಟಿಯಿಂದ ದಾಖಲಿಸಿ, ಮರು ಅಧ್ಯಯನ ನಡೆಸಿ, ಮುಂದಿನ ಪೀಳಿಗೆಗೆ ಉಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಡಾ| ರಾಜೇಶ್ ಕೃಷ್ಣ ಆಳ್ವ ಅಭಿಪ್ರಾಯಪಟ್ಟರು.



ಕಾರ್ಯಕ್ರಮದ ಯಶಸ್ಸಿಗೆ ತುಳು ಸಂಘದ ಸಂಚಾಲಕರಾದ ಶ್ರೀಮತಿ ವಾಣಿ ಯು.ಎಸ್ ಮತ್ತು ಕು. ಅನುಷಾ ಡಿ ನೇತೃತ್ವ ವಹಿಸಿದ್ದರು. ತುಳು ಸಂಘದ ಕಾರ್ಯದರ್ಶಿ ಮನ್ವಿತ್ ಹಾಗೂ ಜಂಟಿ ಕಾರ್ಯದರ್ಶಿ ಪೂರ್ವಿ ಸಹಕರಿಸಿದರು. ತುಳುವರ್ಲ್ಡ್ ಫೌಂಡೇಶನ್ನ ಕಾರ್ಯದರ್ಶಿ ವಸಂತ್ ರೈ ಕುತ್ತೆತೂರು ಉಪಸ್ಥಿತರಿದ್ದರು. ಕಾಲೇಜಿನ ನೂರಾರು ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ತುಳುನಾಡಿನ ಸಾಂಪ್ರದಾಯಿಕ ಆಟಿ ತಿಂಗಳ ದೇಸೀ ಅಡುಗೆಗಳ ಸವಿಯೂಟ ಏರ್ಪಡಿಸಲಾಗಿತ್ತು. ಆಟಿ ತಿಂಗಳ ಆಹಾರ ಪದ್ಧತಿಯ ವೈಶಿಷ್ಟ್ಯವನ್ನು ಪರಿಚಯಿಸುವ ವಿವಿಧ ಸಾಂಪ್ರದಾಯಿಕ ಖಾದ್ಯಗಳನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸವಿದು ಸಂಭ್ರಮಿಸಿದರು. ಈ ಮೂಲಕ ‘ಆಟಿಡೊಂಜಿ ದಿನ’ವು ಕೇವಲ ಒಂದು ಸಾಂಸ್ಕೃತಿಕ ಆಚರಣೆಯಾಗದೆ, ವಿದ್ಯಾರ್ಥಿಗಳಿಗೆ ತುಳುನಾಡಿನ ಜೀವನ ಪದ್ಧತಿ, ಪ್ರಕೃತಿ ಸಂಬಂಧಿತ ಜ್ಞಾನ ಮತ್ತು ಪರಂಪರೆಯ ಅರಿವು ಮೂಡಿಸುವ ಶೈಕ್ಷಣಿಕ ಕಾರ್ಯಕ್ರಮವಾಗಿಯೂ ಗಮನ ಸೆಳೆಯಿತು.






















































































































