ಜಾಲಾಟದಿಂದ ಬಯಲಾಟದವರೆಗೆ ತುಳು ರಂಗಭೂಮಿಯ ವಿಕಾಸದ ಹಂತದಲ್ಲಿ ಹಲವು ಮಹತ್ವದ ಬೆಳವಣಿಗೆಗಳಾಗಿವೆ. ಯಕ್ಷಗಾನ ಅದರ ವಿಸ್ತೃತ ಸ್ವರೂಪ. ಗಾನ, ನಾಟ್ಯ, ಅಭಿನಯ, ವೇಷಭೂಷಣ ಮತ್ತು ಮಾತುಗಾರಿಕೆ ಹೀಗೆ ಸರ್ವಾಂಗಗಳಲ್ಲೂ ಅದೊಂದು ಪರಿಪೂರ್ಣ ಕಲೆ. ತುಳು ಭಾಷಿಗರೇ ಅದನ್ನು ಬೆಳೆಸಿದ್ದಾರೆ. ಈ ಹಿನ್ನೆಲೆಯಲ್ಲಿ ತುಳು ಯಕ್ಷಗಾನಕ್ಕೆ ದೀರ್ಘ ಪರಂಪರೆಯಿದೆ ಎಂದು ಸಾಹಿತಿ, ಸಂಶೋಧಕ, ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಮಂಗಳೂರಿನ ತುಳು ವರ್ಲ್ಡ್ ಫೌಂಡೇಶನ್ ಮತ್ತು ಬೆಂಗಳೂರು ತುಳುವರೆ ಚಾವಡಿ ತೆನ್ಕಾಯಿ ಸಂಘಟನೆಗಳು ಜಂಟಿಯಾಗಿ ಅಲಯನ್ಸ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ ಹಾಗೂ ಪರ್ಫಾರ್ಮಿಂಗ್ ಆಂಡ್ ಕ್ರಿಯೇಟಿವ್ ಆರ್ಟ್ಸ್ ಸಹಯೋಗದೊಂದಿಗೆ ಬೆಂಗಳೂರಿನ ಆನೇಕಲ್ ಅಲಯನ್ಸ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ಜುಲೈ 11 ರಂದು ಏರ್ಪಡಿಸಿದ್ದ ‘ತುಳುವೆರೆ ಜಾಲಾಟೊರ್ದು ಯಕ್ಷಗಾನ ಮುಟ್ಟ’ ಎಂಬ ತುಳು ಯಕ್ಷಗಾನ ಕಾರ್ಯಾಗಾರ, ವಿಚಾರಗೋಷ್ಠಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ‘ತುಳು ಯಕ್ಷಗಾನ ಪ್ರಸಂಗ ಮತ್ತು ಪ್ರಯೋಗ’ ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.
ಕಾಲಕ್ಕೆ ತಕ್ಕಂತೆ ತುಳು ಯಕ್ಷಗಾನ ಪ್ರಸಂಗಗಳನ್ನು ಪೌರಾಣಿಕ, ಜಾನಪದ, ಅರ್ಧ ಜಾನಪದ, ಆಧುನಿಕ ಮತ್ತು ಕಟ್ಟುಕತೆಗಳೆಂದು ವರ್ಗೀಕರಿಸಬಹುದು. ಆದರೆ ಅದರ ಪ್ರಯೋಗ ವಿಧಾನಗಳಲ್ಲಿ ಕಂಡು ಬರುವ ನಾಟಕೀಯತೆ ಹಾಗೂ ಸಿನಿಮೀಯ ಅಂಶಗಳನ್ನು ಕೈಬಿಟ್ಟು ಯಕ್ಷಗಾನದ ಸಾಂಪ್ರದಾಯಿಕ ಸ್ವರೂಪವನ್ನು ಉಳಿಸಿಕೊಳ್ಳಬೇಕಾಗಿದೆ. ಅಲ್ಲದೇ ತುಳು ಬಲ್ಲವರು ಯಕ್ಷಗಾನದಲ್ಲಿ ತುಳು ಮತ್ತು ತುಳುವಿನಲ್ಲಿ ಯಕ್ಷಗಾನ ಎಂಬ ವಿಷಯವಾಗಿ ಮುಂದೆ ದ್ವಿಮುಖ ಚಿಂತನೆ ನಡೆಸುವ ಮೂಲಕ ತುಳು ಭಾಷೆ ಮತ್ತು ಯಕ್ಷಗಾನದ ಅಸ್ಮಿತೆಯನ್ನು ಸಾರುವ ಅಗತ್ಯವಿದೆ ಎಂದು ಕುಕ್ಕುವಳ್ಳಿ ನುಡಿದರು.



ಗೋಷ್ಠಿಯಲ್ಲಿ ‘ಯಕ್ಷಗಾನ ಸಾಹಿತ್ಯ ಮತ್ತು ಪ್ರಸಂಗ ರಚನೆ’ ಬಗ್ಗೆ ಮಾತನಾಡಿದ ಹಿರಿಯ ಯಕ್ಷಗಾನ ಕಲಾವಿದ ಮತ್ತು ಪ್ರಸಂಗಕರ್ತ ಡಾ| ತಾರಾನಾಥ ವರ್ಕಾಡಿ ಮಾತನಾಡಿ, ಯಕ್ಷಗಾನವು ಗಾನ ನೃತ್ಯ ಪ್ರಧಾನವಾದ ಕಲೆ. ಹಾಗಾಗಿ ಅದಕ್ಕೆ ಆಕರವಾಗಿರುವ ಪ್ರಸಂಗಗಳ ರಚನೆಯನ್ನು ಸುಲಭವೆಂದು ಭಾವಿಸಲಾಗದು. ಛಂದೋ ಬದ್ಧತೆಯೊಂದಿಗೆ ಉತ್ಕೃಷ್ಟ ಕಾವ್ಯ ಗುಣಗಳಿಂದ ಕೂಡಿದ ಪ್ರಸಂಗಗಳನ್ನು ತುಳು ಭಾಷೆಯಲ್ಲೂ ಬರೆಯಲು ಸಾಧ್ಯವೆಂಬುದನ್ನು ವಿದ್ವಾಂಸರು ತೋರಿಸಿಕೊಟ್ಟಿದ್ದಾರೆ. ಹೊಸಬರು ಆ ಮಾದರಿಯನ್ನು ಅನುಸರಿಸಬೇಕು ಎಂದರು. ‘ತುಳುವರ ಜಾಲಾಟ’ದ ಬಗ್ಗೆ ಮಾತನಾಡಿದ ಜಾನಪದ ವಿದ್ವಾಂಸ ದಾ.ನ. ಉಮ್ಮಣ್ಣ, ‘ಜನಪದೀಯ ನೆಲೆಯಲ್ಲಿ ಆರಾಧನಾ ಕಲೆಯಾಗಿ ಬೆಳೆದು ಬಂದ ಜಾಲಾಟ ಜನಸಾಮಾನ್ಯರ ನಡುವೆಯೇ ಇದ್ದು ಮುಂದೆ ಭೂತಾರಾಧನೆ ಮತ್ತು ಯಕ್ಷಗಾನದಂತಹ ಬಹುಮಾನ್ಯ ಕಲೆಗಳಿಗೆ ಪ್ರೇರಣೆಯಾಗಿರುವುದು ಸಂಶೋಧನೆಯಿಂದ ವ್ಯಕ್ತವಾಗಿದೆ’ ಎಂದರು.

ಕಾರ್ಯಗಾರದಲ್ಲಿ ತುಳು ಪಂಚವಟಿ, ಕಿಟ್ಣ ರಾಜಿ ಪರ್ಸಂಗೊ, ಕಾಡಮಲ್ಲಿಗೆ, ಗರುಡ ಕೇಂಜವೆ, ಪರಕೆದ ಪಿಂಗಾರ ಮೊದಲಾದ ಪ್ರಾತಿನಿಧಿಕ ತುಳು ಪ್ರಸಂಗಗಳ ಆಯ್ದ ಹಾಡುಗಳನ್ನು ಪ್ರಸ್ತುತಪಡಿಸಲಾಯಿತು. ಪ್ರಶಾಂತ ರೈ ಪಂಜ ಅವರ ಭಾಗವತಿಕೆಯಲ್ಲಿ ವರುಣ್ ಹೆಬ್ಬಾರ್ ಮತ್ತು ರಂಜಿತ್ ಅವರ ಹಿಮ್ಮೇಳಕ್ಕೆ ಭುವನ್ ಶೆಟ್ಟಿ ಬೋಳಾರ ನೃತ್ಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕಾರ್ಯಾಗಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಡಾ| ಕೆ. ಚಿನ್ನಪ್ಪ ಗೌಡ ದಿಕ್ಸೂಚಿ ಭಾಷಣ ಮಾಡಿದರು. ಅಲಯನ್ಸ್ ವಿಶ್ವವಿದ್ಯಾಲಯದ ಡೀನ್ ಡಾ| ಲಿಜು ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದ COE -IKS ನಿರ್ದೇಶಕ ಡಾ| ಎ.ಎಂ ಶ್ರೀಧರನ್ ಸ್ವಾಗತಿಸಿದರು. ತುಳು ವರ್ಲ್ಡ್ ಫೌಂಡೇಶನ್ ನಿರ್ದೇಶಕರಾದ ಡಾ|ರಾಜೇಶ್ ಕೃಷ್ಣ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಆಶಯ ತಿಳಿಸಿದರು. ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ, ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಪರ್ಫಾರ್ಮಿಂಗ್, ವಿಸುವಲ್ ಅಂಡ್ ಕ್ರಿಯೇಟಿವ್ ಆರ್ಟ್ಸ್ ವಿಭಾಗ ಮುಖ್ಯಸ್ಥೆ ಡಾ| ಶ್ರುತಿ ಚಂದ್ರಶೇಖರ್, ತುಳುವೆರೆ ಚಾವಡಿ ತೆನ್ಕಾಯಿ ಸಂಘಟನೆಯ ಖಜಾಂಜಿ ವಿನೋದ್ ಕುಮಾರ್ ವೇದಿಕೆಯಲ್ಲಿದ್ದರು. ತುಳು ವರ್ಲ್ಡ್ ಕಾರ್ಯದರ್ಶಿ ವಸಂತ ಶೆಟ್ಟಿ ವಂದಿಸಿದರು. ಪ್ರಮುಖರಾದ ಅರವಿಂದ ಬೆಳ್ಚಡ, ಮಂದಾರ ರಾಜೇಶ್ ಭಟ್, ಪ್ರಮೋದ್ ಸಪ್ರೆ, ಸನತ್ ಶೇಣವ ಸಹಕರಿಸಿದರು

ಕಾರ್ಯಕ್ರಮದ ಅಂಗವಾಗಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ‘ಸಿರಿ ಕಿಷ್ಣೆ ಚಂದಪಾಲಿ’ ತುಳು ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು. ಪ್ರಶಾಂತ್ ರೈ ಪಂಜ (ಭಾಗವತರು), ವರುಣ್ ಹೆಬ್ಬಾರ್ ಹಾಗೂ ರಂಜಿತ್ ಬಲಿಪ ಹಿಮ್ಮೇಳದಲ್ಲಿ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಡಾ| ತಾರಾನಾಥ ವರ್ಕಾಡಿ, ಸುಂದರ ಬಂಗಾಡಿ, ಪ್ರಶಾಂತ್ ಸಿ.ಕೆ., ಅಕ್ಷಯ್ ಮಾರ್ನಾಡ್, ಭುವನ್ ಶೆಟ್ಟಿ ಹಾಗೂ ಶಶಿಧರ್ ಬಾಚಕೆರೆ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದು, ಜಿತೇಶ್ ಕುಡ್ಲ ವೇಷಭೂಷಣ ಒದಗಿಸಿದ್ದರು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಯಕ್ಷಗಾನ, ತುಳು ಭಾಷೆ, ಜನಪದ ಸಂಸ್ಕೃತಿ ಹಾಗೂ ಭಾರತೀಯ ಜ್ಞಾನ ಪರಂಪರೆಯ ಕುರಿತು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು, ಕಲಾವಿದರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.




















































































































