ಜೀವನದಲ್ಲಿ ಮಾಡುವ ಯಾವುದೇ ದೊಡ್ಡ ಕಾರ್ಯ ಅಥವಾ ಉದ್ಯಮವಾಗಿರಲಿ ಅದರಲ್ಲಿ ಮೊದಲಾಗಿ ನಂಬಿಕೆ ಆತ್ಮವಿಶ್ವಾಸ ತುಂಬಿಕೊಳ್ಳಬೇಕು. ಪ್ರತಿಭೆ ಕೌಶಲ್ಯತೆ, ಏಕತೆ, ಶ್ರದ್ದೆ, ನಿಷ್ಠೆ, ಪರಸ್ಪರ ಹೊಂದಾಣಿಕೆ, ಪ್ರಾಮಾಣಿಕತೆಯಿಂದ ಇದ್ದರೆ ಮಾಡುವ ಉದ್ಯಮ, ವೃತ್ತಿ ಕರ್ತವ್ಯದ ಮೇಲಿನ ಯಶಸ್ವಿಗೆ ಕಾರಣವಾಗುತ್ತದೆ ಮತ್ತು ಅಂದುಕೊಂಡ ಗುರಿಯನ್ನು ತಲುಪಬಹುದು. ಮಾಡುವ ಕಾಯಕದಲ್ಲಿ ಯಾವುದೇ ಹಿಂಜರಿಕೆ, ಭಯ ಅಥವಾ ಅನುಮಾನ ಪಡದೆ, ಸಾಧಿಸುವ ಛಲವಿದ್ದಲ್ಲಿ ಕಾರ್ಯ ಸಿದ್ದಿಯಾಗುತ್ತದೆ. ಬಂಟರಲ್ಲಿ ಯಶಸ್ಸು ಎಂಬುದು ರಕ್ತದಲ್ಲೇ ಕೂಡಿಕೊಂಡಿದೆ. ಸಮಾಜಸೇವೆ ಕೂಡಾ ನಮ್ಮ ಜನ್ಮಸಿದ್ದ ಹಕ್ಕು ಎಂಬಂತೆ ಸಮಾಜದಲ್ಲಿ ನಡೆಯುತ್ತಿದೆ. ಸಂಘಟನೆಯಲ್ಲಿ ಒಗ್ಗಟ್ಟು, ಸಮಾನತೆಯಿಂದ ಕೂಡಿಕೊಂಡು ಮಾಡುವ ಯಾವುದೇ ಸೇವೆಗೆ ಸಮಾಜದಲ್ಲಿ ಗೌರವ ಸಿಗುತ್ತದೆ. ಇಂದು ಪುಣೆ ಬಂಟರ ಸಂಘ ಸಮಾಜದ ಹಿರಿಯರ ಪರಿಶ್ರಮ ಆಶೀರ್ವಾದದಿಂದ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿಯವರ ಸಂಘಟನಾ ಸಾಮರ್ಥ್ಯ, ಛಲ, ಕಾರ್ಯವೈಖರಿಯಿಂದ ಹಾಗೂ ಅಧ್ಯಕ್ಷರಾದ ಅಜಿತ್ ಹೆಗ್ಡೆಯವರ ಚತುರತೆ, ನಿಷ್ಕಳಂಕ ಸೇವಾ ಮನೋಭಾವದಿಂದ ಅವರಿಗೆ ಸಮಾಜದಲ್ಲಿ ಗೌರವ ತಂದಿದೆ. ಸಮಾಜದ ವಿಧ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯ ಪೂರಕ ವಾತಾವರಣ ಸೃಷ್ಟಿಸುವ ಮೂಲಕ ಅವರ ಮನೋಬಲವನ್ನು ಬಲಪಡಿಸುವ ಕಾರ್ಯ ಕೂಡಾ ಹೆಚ್ಚಿಸಿದ್ದಾರೆ. ವಿಚಾರದಾರೆ ಸರಿಯಾಗಿದ್ದು ಒಂದೇ ದೃಢ ನಿರ್ಧಾರ, ಇಳಿದ ಕಾರ್ಯದಲ್ಲಿ ಸಾಧನೆ ಮಾಡಿ ಗುರಿ ಮುಟ್ಟಬೇಕು ಎಂಬ ಛಲ, ಕಠಿನ ಪರಿಶ್ರಮ ಎಲ್ಲಾ ವಿದ್ಯಾರ್ಥಿ ಹಾಗೂ ಸಮಾಜದ ಯುವಕರಲ್ಲಿ ಇರಲಿ. ನನಗೆ ನನ್ನ ತಂದೆ ತಾಯಿ ಕೂಡಾ ಇದೇ ರೀತಿಯ ಶಿಷ್ಟಾಚಾರವವನ್ನು ಕಳಿಸಿಕೊಟ್ಟಿದ್ದಾರೆ. ಸುಸಂಸ್ಕ್ರತ ಮಕ್ಕಳಿಂದ ಸದೃಡ ಪ್ರಜ್ಞಾವಂತ ಸಮಾಜ ನಿರ್ಮಾಣ ಸಾಧ್ಯ. ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡೋಣ. ನಮ್ಮ ಹಿರಿಯರ ಕಾಲದಿಂದಲೂ ಪ್ರಕೃತಿ ನಿಯಮಕ್ಕೆ ಅನುಗುಣವಾಗಿ ಆಟಿ ತಿಂಗಳಿಗೆ ಮಹತ್ವ ಇದೆ. ಇಂದು ಕೂಡಾ ನಮ್ಮ ಸಂಸ್ಕ್ರತಿ ಆಚರಣೆ ಬಗ್ಗೆ ತಿಳಿ ಹೇಳುವ ಆಚರಣೆ ಆಟಿಡ್ ಒಂಜಿ ದಿನ ಮಹತ್ವ ಪಡೆದಿದ್ದು ನಮಗೂ ತಿಳಿದುಕೊಳ್ಳುವಂತಾಯಿತು. ನನಗೆ ನನ್ನ ಸಂಘದ ಮೂಲಕ ಗುರು ಹಿರಿಯರ ಸಮ್ಮುಖದಲ್ಲಿ ನೀಡಿದ ಗೌರವ ಪುರಸ್ಕಾರಕ್ಕೆ ಚಿರಋಣಿ ಎಂದು ಪುಣೆಯ ಕೆ.ಎಸ್.ಎಚ್ ಇಂಟರ್ನ್ಯಾಷನಲ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ರಾಜೇಶ್ ಕುಶಲ್ ಹೆಗ್ಡೆ ತಿಳಿಸಿದರು.
ಪುಣೆ ಬಂಟರ ಸಂಘದ ಶಕುಂತಲಾ ಜಗನ್ನಾಥ ಶೆಟ್ಟಿ ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ಸಮಾಜದ ವಿಧ್ಯಾರ್ಥಿಗಳಿಗೆ ಅರ್ಥಿಕ ಸಹಾಯಧನ ವಿತರಣೆ, ಪ್ರತಿಭಾನ್ವಿತ ಮಕ್ಕಳ ಸತ್ಕಾರ, ಸಮಾಜದ ಆರ್ಥಿಕವಾಗಿ ಹಿಂದುಳಿದ ಮಕ್ಕಳ ದತ್ತು ಸ್ವೀಕಾರ, ಸಾಧಕರಿಗೆ ಕಲ್ಪವೃಕ್ಷ ಸೇವಾ ಸಾಧಕ ಪ್ರಶಸ್ತಿ ಸಮಾರಂಭ ಮತ್ತು ಮಹಿಳಾ ವಿಭಾಗದ ಆಯೋಜನೆಯಲ್ಲಿ ಅಟಿಡ್ ಒಂಜಿ ದಿನ ಕಾರ್ಯಕ್ರಮವು ಆಗಸ್ಟ್ 1 ಶನಿವಾರದಂದು ಪುಣೆ ಬಂಟರ ಸಂಘದ ಓಣಿ ಮಜಲು ಜಗನ್ನಾಥ ಶೆಟ್ಟಿ ಸಾಂಸ್ಕ್ರತಿಕ ಭವನದಲ್ಲಿ ಜರಗಿತು. ಪುಣೆ ಬಂಟರ ಸಂಘದ ಗೌರವಾಧ್ಯಕ್ಷರಾದ ಸಂತೊಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಗೌರವಾಧ್ಯಕ್ಷತೆಯಲ್ಲಿ, ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತುರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪುಣೆಯ ಕೆ.ಎಸ್.ಎಚ್ ಇಂಟರ್ನ್ಯಾಷನಲ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ರಾಜೇಶ್ ಕುಶಲ್ ಹೆಗ್ಡೆ, ಗೌರವ ಅತಿಥಿಗಳಾದ ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಬೆಂಗಳೂರು ಇದರ ಛೇರ್ಮನ್ ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ, ಮಣಿಪಾಲ ಎಚ್.ಪಿ.ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಛೇರ್ಮನ್ ಹರಿಪ್ರಸಾದ್ ರೈ, ಕಲ್ಪವೃಕ್ಷ ಸೇವಾ ಸಾಧಕ ಪ್ರಶಸ್ತಿ ಪುರಸ್ಕ್ರತ ಪುಣೆಯ ಖ್ಯಾತ ಜಾಯಿಂಟ್ ರಿಪ್ಲೇಸ್ಮೆಂಟ್ ಆರ್ಥೋಪೆಡಿಕ್ ತಜ್ಞ ಡಾ. ಪ್ರತೀಕ್ ಹೆಗ್ಡೆ, ಮಂಗಳೂರು ಯಮುನಾ ಹೋಮ್ಸ್ ಮತ್ತು ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಎಂಡಿ ಪುರುಷೋತ್ತಮ ಶೆಟ್ಟಿ, ಪುಣೆ ಶ್ರೀ ಗುರುದೇವ ಸೇವಾ ಬಳಗದ ಉಪಾಧ್ಯಕ್ಷ, ಪುಣೆ ಬಂಟರ ಸಂಘದ ಸಮಿತಿಯ ಮಾಜಿ ಸದಸ್ಯ ಮತ್ತು ಖ್ಯಾತ ಸಮಾಜ ಸೇವಕ ಒಣಿಮಜಲು ರಂಜಿತ್ ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷರುಗಳಾದ ವಿಶ್ವನಾಥ ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣಂಜಾರು, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ನಿಟ್ಟೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆ, ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಗೀತಾ ಆರ್ ಶೆಟ್ಟಿ, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಸುಧಾಕರ್ ಸಿ ಶೆಟ್ಟಿ, ನಾರಾಯಣ ಹೆಗ್ಡೆ, ಸಂದೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆಯರುಗಳಾದ ವಿನೋದ ಎಸ್ ಶೆಟ್ಟಿ, ಶಾಲಿನಿ ಎಂ ಶೆಟ್ಟಿ, ನಯನ ಸಿ ಶೆಟ್ಟಿಯವರು ಉಪಸ್ಥಿತರಿದ್ದರು.






ಶಕುಂತಲಾ ಜಗನ್ನಾಥ ಶೆಟ್ಟಿ ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮವನ್ನು ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತು ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿ ಗಣ್ಯರಾದ ರಾಜೇಶ್ ಹೆಗ್ಡೆ, ಆರ್ ಉಪೇಂದ್ರ ಶೆಟ್ಟಿ, ಹರಿಪ್ರಸಾದ್ ರೈ, ಡಾ. ಪ್ರತಿಕ್ ಹೆಗ್ಡೆ, ಪುರುಷೋತ್ತಮ ಶೆಟ್ಟಿ ಮತ್ತು ರಂಜಿತ್ ಶೆಟ್ಟಿಯವರಿಗೆ ಜೀವಮಾನ ಸಾಧನೆಗಾಗಿ ಶಾಲು, ಪುನೇರಿ ಪೇಟ ತೊಡಿಸಿ ಹಾರ, ಪಲಪುಷ್ಪ, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಕಲ್ಪವೃಕ್ಷ ಸೇವಾ ಸಾಧಕ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಸಾಧಕರ ಪರಿಚಯ ಮತ್ತು ಸಾಧನೆಯ ಬಗ್ಗೆ ಕಿಶೋರ್ ಹೆಗ್ಡೆಯವರು ವಾಚಿಸಿದರು. ಎಂ.ಆರ್.ಜಿ ಗ್ರೂಪ್ ನ ಸಿಎಂಡಿ ಡಾ| ಕೆ ಪ್ರಕಾಶ್ ಶೆಟ್ಟಿ ಪ್ರಾಯೋಜಿತ ವಿದ್ಯಾದಾತ, ಗಂಧರ್ವ ಗ್ರೂಪ್ ಆಫ್ ಹೋಟೆಲ್ಸ್ ನ ಸಿಎಂಡಿ ಜಯಂತ್ ಶೆಟ್ಟಿ ಪ್ರಾಯೋಜಿತ ಆರೋಗ್ಯದಾತ, ವಿಂಡ್ಸಾರ್ ರೆಫ್ರಾಕ್ಟೋರಿಸ್ ನ ಎಂ.ಡಿ ದಯಾಶಂಕರ್ ಶೆಟ್ಟಿ ಪ್ರಾಯೋಜಿತ ಅನ್ನದಾತ, ಬಯೋರಾಡ್ ಮೆಡಿಸಿಸ್ ಪ್ರೈ. ಲಿಮಿಟೆಡ್ ನ ಎಂಡಿ ಜಿತೇಂದ್ರ ಹೆಗ್ಡೆ ಪ್ರಾಯೋಜಿತ ಆಶ್ರಯದಾತ ಹಾಗೂ ಶಬರಿ ಇಂಡಸ್ತ್ರೀಯಲ್ ಕ್ಯಾಟರಿಂಗ್ ಪ್ರೈ. ಲಿಮಿಟೆಡ್ ನ ಸಿಎಂಡಿ ಕೆ.ಕೆ ಶೆಟ್ಟಿ ಪ್ರಾಯೋಜಿತ ಕ್ರೀಡಾದಾತ ಯೋಜನೆಗಳ ಅಡಿಯಲ್ಲಿ ಸುಮಾರು ಒಟ್ಟು ರೂಪಾಯಿ 25 ಲಕ್ಷದವರೆಗೆ ಸಮಾಜದ ಅಶಕ್ತ ವಿಧ್ಯಾರ್ಥಿಗಳಿಗೆ ಸಹಾಯಧನ, ಆರ್ಥಿಕವಾಗಿ ಹಿಂದುಳಿದ ಸಮಾಜದ ಮಕ್ಕಳ ದತ್ತು ಸ್ವೀಕಾರ, ಅಲ್ಲದೇ ಶೈಕ್ಷಣಿಕ ವರ್ಷದಲ್ಲಿ 10 ಮತ್ತು12 ನೇ ತರಗತಿಯಲ್ಲಿ ಶೇಕಡಾ 90% ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿಧ್ಯಾರ್ಥಿಗಳ ಸತ್ಕಾರ ನಡೆಯಿತು ಹಾಗೂ ವಿದ್ಯಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಸಮಾಜದ ಪ್ರತಿಭೆಗಳಿಗೆ ಗಣ್ಯರ ಸಮ್ಮುಖದಲ್ಲಿ ಸನ್ಮಾನ ನಡೆಯಿತು. ಇದರ ವರದಿಯನ್ನು ಅಕ್ಷತಾ ಎಸ್ ಶೆಟ್ಟಿ ಓದಿದರು. ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆಗೆ ಸ್ವಯಂ ಇಚ್ಚೆಯಂತೆ ದೊಡ್ಡ ಮಟ್ಟದ ಸಹಕಾರ ನೀಡಿದ ಸಮಾಜದ ದಾನಿಗಳಾದ ಇಂದಿರಾ ಸದಾನಂದ ಕೆ ಶೆಟ್ಟಿ (ಮಾಜಿ ಕಾರ್ಯಾಧ್ಯಕ್ಷೆ ಮತ್ತು ಅಧ್ಯಕ್ಷ), ಪುಷ್ಪ ಕುಶಲ್ ಹೆಗ್ಡೆ (ಮಾಜಿ ಕಾರ್ಯಾಧ್ಯಕ್ಷೆ ಮತ್ತು ಅಧ್ಯಕ್ಷ), ಶೋಭಾ ಕರುಣಾಕರ ಶೆಟ್ಟಿ (ಸಮುದ್ರ), ಶಶಿ ಬಾಲಕೃಷ್ಣ ಹೆಗ್ಡೆ (ಮಾಜಿ ಕಾರ್ಯಾಧ್ಯಕ್ಷೆ), ಉಷಾ ಅಪ್ಪಿ ಶಾಮ ಶೆಟ್ಟಿ, ಜಯಂತಿ ಜಯಾನಂದ ಶೆಟ್ಟಿ (ಮಾಜಿ ಕಾರ್ಯಾಧ್ಯಕ್ಷೆ) ಮತ್ತು ಮಹಿಳಾ ವಿಭಾಗದವರನ್ನು ಶಾಲು ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ಅತಿಥಿ ಗಣ್ಯರು ಸಮಾಜ ಕಲ್ಯಾಣ ಯೋಜನೆ ಮತ್ತು ಆಟಿ ವಿಶೇಷತೆಯ ಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದರು.



ಬೆಳಿಗ್ಗೆ ಭವನದ ಧರ್ಮ ಚಾವಡಿಯಲ್ಲಿರುವ ದೇವರ ಮಂಟಪದಲ್ಲಿ ಪೂಜೆ, ಪ್ರಾರ್ಥನೆಗೈದು ಕಾರ್ಯಕ್ರಮ ಪ್ರಾರಂಭಗೊಂಡಿತು. ಸಾಂಸ್ಕ್ರತಿಕ ಕಾರ್ಯಕ್ರಮದ ಪ್ರಥಮ ಅಂಗವಾಗಿ ಮೊದಲಿಗೆ ಅರೆಹೊಳೆ ತಂಡದವರಿಂದ ಗಣೇಶ ವೈಭವಂ, ನಂತರ ಸಾಂಪ್ರದಾಯಿಕ ಜಾನಪದ ನೃತ್ಯ ಕಾರ್ಯಕ್ರಮ, ಶ್ವೇತಾ ಅರೆಹೊಳೆ ನಿರ್ದೇಶನದಲ್ಲಿ ನಂದಗೋಕುಲ ಜಾನಪದ ನೃತ್ಯ ಕಲಾ ತಂಡ ಅರೆಹೊಳೆ ಪ್ರತಿಷ್ಟಾನ ಇವರು ಪ್ರಸ್ತುತ ಪಡಿಸಿದರು. ಜನಪದ ಆಚರಣೆ ಆಟಿಯ ವಿಶೇಷತೆಯ ಬಗ್ಗೆ ಪೂರ್ವ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶಾಲಿನಿ ಎಂ ಶೆಟ್ಟಿ ಉಪನ್ಯಾಸ ನೀಡಿದರು. ಆಟಿಯ ವಿಶೇಷತೆಯ ತುಳುನಾಡ ಶೈಲಿಯ ಅಹಾರ ಪದಾರ್ಥಗಳೊಂದಿಗೆ ಸಾಂಪ್ರದಾಯಿಕ ಊಟೋಪಚಾರ ನಡೆಯಿತು. ಪುಣೆ ಬಂಟರ ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳ ಸಹಕಾರದೊಂದಿಗೆ ನಡೆದ ಈ ಸಮಾರಂಭದಲ್ಲಿ ಬಹು ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಶೋಭೆ ತಂದರು. ಅಕ್ಷತಾ ಸುಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣಂಜಾರು ಧನ್ಯವಾದಗೈದರು.
ಚಿತ್ರ, ವರದಿ : ಹರೀಶ್ ಮೂಡುಬಿದ್ರಿ, ಪುಣೆ






















































































































