
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಡಳಿತ ಮಂಡಳಿಗೆ ಅಧಿಕಾರೇತರ ಸದಸ್ಯರನ್ನಾಗಿ ಕೋಡಿಂಬಾಡಿ ಗ್ರಾಮದ ಜಗನ್ನಾಥ ಶೆಟ್ಟಿ ನಡುಮನೆ ಅವರನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಶಿಫಾರಸ್ಸಿನ ಮೇರೆಗೆ ರಾಜ್ಯ ಸರಕಾರ ನಾಮನಿರ್ದೇಶನ ಮಾಡಿ ಆದೇಶಿಸಿದೆ. ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28 ಎ ಉಪ ಪ್ರಕರಣ (4ಬಿ) (1)ರ ಮೇರೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರಕಾರ ಈ ಆದೇಶ ಹೊರಡಿಸಿದೆ. ನಾಮನಿರ್ದೇಶನವು ಕೂಡಲೇ ಜಾರಿಗೆ ಬರಲಿದ್ದು, ಸರಕಾರದ ಮುಂದಿನ ಆದೇಶದವರೆಗೆ ಮುಂದುವರೆಯಲಿದೆ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸಹಕಾರ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ- 3 ರಂಗನಾಥ ಜಿ ಅವರು ಮೇ 30ರಂದು ಅಧಿಸೂಚನೆ ಹೊರಡಿಸಿದ್ದಾರೆ.


ಜಗನ್ನಾಥ ಶೆಟ್ಟಿ ಅವರು ಎರಡು ಬಾರಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾಗಿ ಚುನಾಯಿತರಾಗಿದ್ದು, ಪ್ರಸ್ತುತ ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿದ್ದಾರೆ. ವಲಯ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿ, ಕೋಡಿಂಬಾಡಿ ಮಠಂತಬೆಟ್ಟು ಮಹಿಷ ಮರ್ದಿನಿ ದೇವಸ್ಥಾನದ ಉತ್ಸವ ಸಮಿತಿಯ ಸದಸ್ಯರಾಗಿ, ಕೋಡಿಂಬಾಡಿ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರಾಗಿ, ಕೋಡಿಂಬಾಡಿ ವಲಯ ನೀರು ನೈರ್ಮಲ್ಯ ಸಮಿತಿಯ ಸದಸ್ಯರಾಗಿ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜದ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿದ್ದಾರೆ.





























































































































