



ಬಂಟರ ಸಂಘ (ರಿ) ಸುರತ್ಕಲ್ ಇದರ 26ನೇ ವಾರ್ಷಿಕ ಮಹಾಸಭೆ, ಅಭಿನಂದನೆ, ಸಹಾಯಹಸ್ತ, ವಿದ್ಯಾರ್ಥಿ ವೇತನ, ದತ್ತಿ ನಿಧಿ ಹಾಗೂ ಸಮೂಹ ನೃತ್ಯ ಸ್ಪರ್ಧೆ ಕಾರ್ಯಕ್ರಮವು ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ, ‘ಬಂಟ ಸಮಾಜ ಇಂದು ಬಹಳಷ್ಟು ಮುಂದುವರಿದಿದೆ. ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಇಂದು ಅದೇ ವಿದ್ಯೆ ನಮ್ಮ ಸಮಾಜಕ್ಕೆ ಶಾಪ ಆಗುತ್ತಿದೆಯಾ ಅನ್ನುವ ಸಂಶಯ ಕಾಡುತ್ತಿದೆ. ಯಾಕೆಂದರೆ ಮಕ್ಕಳು ವಿದ್ಯೆ ಪಡೆದು ವಿದೇಶ ಸೇರಿದರೆ ಮನೆ ನಿರ್ವಹಣೆ ಇಲ್ಲದೇ ಪಾಳು ಬೀಳುತ್ತಿದೆ. ಹೆತ್ತವರು ಒಂಟಿಯಾಗುತ್ತಿದ್ದಾರೆ. ಇದು ಸರಿಯಲ್ಲ. ನಮ್ಮ ಸಮಾಜ ಈ ಬಗ್ಗೆ ತುರ್ತು ಗಮನಿಸಬೇಕು. ಮಕ್ಕಳಿಗೆ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರವನ್ನು ನೀಡಬೇಕು. ಹುಟ್ಟಿ ಬೆಳೆದ ಮನೆ, ಹೆತ್ತವರು ಮತ್ತು ಊರನ್ನು ಮಕ್ಕಳು ಮರೆಯಬಾರದು. ತಾವು ದುಡಿದ ಒಂದಂಶವನ್ನು ಸಮಾಜಕ್ಕೆ ಮೀಸಲಿಡಬೇಕು. ಸುರತ್ಕಲ್ ಬಂಟರ ಸಂಘ ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಅಭಿನಂದನೆಗಳು’ ಎಂದರು.







ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, ‘ಸುರತ್ಕಲ್ ಬಂಟರ ಸಂಘದಲ್ಲಿ ಶೈಕ್ಷಣಿಕ ಸಾಧನೆ ಮಾಡಿರುವ ವಿದ್ಯಾರ್ಥಿಗಳು, ಭಿನ್ನ ಸಾಮರ್ಥ್ಯ ಹಾಗೂ ವಿಕಲಚೇತನರಿಗೆ ಸಹಾಯಹಸ್ತ ನೀಡಿರುವುದು ಖುಷಿಯ ವಿಚಾರ. ಇಂತಹ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿ ನಡೆಯುತ್ತಿರಲಿ’ ಎಂದರು. ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ‘ಬಂಟ ಸಮಾಜದ ಆಚಾರ ಮತ್ತು ವಿಚಾರವನ್ನು ಇಂದಿನ ಸಮಾಜಮುಖಿ ಕಾರ್ಯಕ್ರಮದ ಮೂಲಕ ಸುರತ್ಕಲ್ ಬಂಟರ ಸಂಘ ತೋರಿಸಿಕೊಟ್ಟಿದೆ. ಇಂದಿಲ್ಲಿ ಗೌರವಕ್ಕೆ ಪಾತ್ರರಾದ ವಿದ್ಯಾರ್ಥಿಗಳು ತಾವು ದುಡಿದು ಶ್ರೇಷ್ಠ ವ್ಯಕ್ತಿಗಳಾಗುವ ಜೊತೆಗೆ ಸಮಾಜದಲ್ಲಿನ ಅಶಕ್ತರು ಮತ್ತು ನೊಂದವರ ಕಣ್ಣೀರು ಒರೆಸಲು ಮುಂದಾಗಬೇಕು. ಈ ಮೂಲಕ ಸಮಾಜಪರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು’ ಎಂದರು. ನಿವೃತ್ತ ಸೇನಾಧಿಕಾರಿ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಮಾತನಾಡಿ, ‘ಮಕ್ಕಳೇ ಈ ದೇಶದ ನಿಜವಾದ ಆಸ್ತಿ. ಅವರಿಗೆ ಮುಂದಕ್ಕೆ ಆಡಳಿತದ ಚುಕ್ಕಾಣಿಯನ್ನು ನೀಡಬೇಕು. ಇದರಿಂದ ದೇಶ ಇನ್ನಷ್ಟು ಅಭಿವೃದ್ಧಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಸಮಾರಂಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಎಂ ದೇವಾನಂದ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಎಂ ಲೋಕಯ್ಯ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಜತೆ ಕಾರ್ಯದರ್ಶಿ ಮೀರಾವಾಣಿ ಎಂ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಕ್ರೀಡಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಮಧ್ಯ, ಮಹಿಳಾ ವೇದಿಕೆ ಅಧ್ಯಕ್ಷೆ ಸರೋಜ ಟಿ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಕಲ ಚೇತನರಿಗೆ ಸಹಾಯಧನ, ಎಲ್ಲಾ ಸಮಾಜದ ಮಕ್ಕಳಿಗೆ ವಿದ್ಯಾರ್ಥಿವೇತನ, ಶೈಕ್ಷಣಿಕ ಮತ್ತು ಇತರ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗೌರವಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ್ ಶೆಟ್ಟಿ ಕಟ್ಲ ಅತಿಥಿಗಳನ್ನು ಸ್ವಾಗತಿಸಿದರು. ಲಾವಣ್ಯ ಶೆಟ್ಟಿ ಚೇಳ್ಯಾರು ದೇವರನ್ನು ಸ್ತುತಿಸಿದರು. ಪ್ರವೀಣ್ ಶೆಟ್ಟಿ ವಂದಿಸಿದರು. ರಾಜೇಶ್ವರಿ ಡಿ ಶೆಟ್ಟಿ ಮತ್ತು ಡಾ| ಸುಧಾ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಸುರತ್ಕಲ್ ಬಂಟರ ಸಂಘದ ವಿಶೇಷ ಮಹಾಸಭೆ ಮತ್ತು ವಾರ್ಷಿಕ ಮಹಾಸಭೆ ನಡೆಯಿತು. ಮಧ್ಯಾಹ್ನ ಗ್ರಾಮವಾರು ಸಾಂಸ್ಕೃತಿಕ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಇಡ್ಯಾ ಗ್ರಾಮ, ದ್ವಿತೀಯ ಬಹುಮಾಮವನ್ನು ಕೃಷ್ಣಾಪುರ ಕಾಟಿಪಳ್ಳ ಗ್ರಾಮ, ತೃತೀಯ ಬಹುಮಾನವನ್ನು ಚೇಳ್ಯಾರು ಗ್ರಾಮ ಮತ್ತು ಕುಡುಂಬೂರು ಗ್ರಾಮ ಪಡೆದುಕೊಂಡಿತು. ತೀರ್ಪುಗಾರರಾಗಿ ಶ್ವೇತಾ ಅರೆಹೊಳೆ, ತ್ರಿಶಾ ಶೆಟ್ಟಿ, ವಿನಾಯಕ ಆಚಾರ್ಯ ಭಾಗವಹಿಸಿದ್ದರು. ಸಾಂಸ್ಕೃತಿಕ ಸ್ಪರ್ಧೆಯ ನಿರೂಪಣೆಯನ್ನು ನಿತೇಶ್ ಶೆಟ್ಟಿ ಎಕ್ಕಾರ್ ಮಾಡಿದರು.





























































































































