


ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯಡಿ ಕರ್ತವ್ಯ ನಿರತ ಯಕ್ಷಗಾನ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರವು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ ಇಲ್ಲಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಾಗಾರವನ್ನು ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ನಿರ್ದೇಶಕರಾದ ಪಟ್ಲ ಸತೀಶ್ ಶೆಟ್ಟಿ ಉದ್ಘಾಟಿಸಿ ಯಕ್ಷಗಾನ ಶಿಕ್ಷಕರ ಕಾರ್ಯಾಗಾರದ ಪ್ರಾಮುಖ್ಯತೆಯನ್ನು ವಿವರಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಯಕ್ಷಗಾನ ಶಿಕ್ಷಕರರ ತರಬೇತಿ ಕಾರ್ಯಾಗಾರವು ಪ್ರಾರಂಭವಾಯಿತು. ಪ್ರಸಕ್ತ ಕಾರ್ಯಾಗಾರದಲ್ಲಿ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ತೆಂಕುತಿಟ್ಟು ಯಕ್ಷಗಾನ ತಂತ್ರಜ್ಞಾನಾಧಾರಿತ ಪಠ್ಯಪುಸ್ತಕದ ಬಗ್ಗೆ ಪರಿಚಯಾತ್ಮಕ ತರಗತಿಯನ್ನು ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಸಂಯೋಜಕ ದೀವಿತ್ ಎಸ್ ಕೆ ಪೆರಾಡಿ ನಡೆಸಿದರು. ಈ ಪಠ್ಯ ಪುಸ್ತಕದಲ್ಲಿರುವ ಕ್ಯೂ ಆರ್ ಕೋಡನ್ನು ಬಳಸಿ ಅದರಲ್ಲಿರುವ ನಾಟ್ಯಗಳ ಹೆಜ್ಜೆಗಾರಿಕೆಯ ಬಗ್ಗೆ ಪ್ರಾಯೋಗಿಕ ತರಗತಿಯನ್ನು ನಡೆಸಲಾಯಿತು. ತಾಳ, ಕಾಲ, ತತ್ಕಾರ, ಬಿಡಿತ, ಮುಕ್ತಾಯ ಇವುಗಳ ಶಾಸ್ತ್ರೀಯ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಎಲ್ಲಾ ಯಕ್ಷಗಾನ ಶಿಕ್ಷಕರು ಪ್ರಾಯೋಗಿಕ ತರಗತಿಯಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡರು.



ಈ ಕಾರ್ಯಾಗಾರದಲ್ಲಿ ಸರಕಾರಿ ಪ್ರೌಢಶಾಲೆ ಅತ್ತಾವರ ಇಲ್ಲಿನ ಅಧ್ಯಾಪಕರಾದ ಹರಿಪ್ರಸಾದ್ ಶೆಟ್ಟಿ ಬಿ ಇವರು ಯಕ್ಷಗಾನ ಶಿಕ್ಷಕರಿಗೆ POCSO ಕಾಯಿದೆಯನ್ನು ಪರಿಚಯಿಸಿದರು. ಈ ಕಾಯಿದೆಯ ಪ್ರಾಥಮಿಕ ಜ್ಞಾನವನ್ನು ಯಕ್ಷಗಾನ ಶಿಕ್ಷಕರು ಪಡೆದರು. ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಯ ರೂಪುರೇಷೆ, ಪರೀಕ್ಷಾ ವಿಧಾನ, ತರಗತಿವಹಿ ನಿರ್ವಹಣೆಯ ಬಗ್ಗೆ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳರು ಮಾಹಿತಿ ನೀಡಿದರು. ಪ್ರಸಕ್ತ ಕಾರ್ಯಾಗಾರದಲ್ಲಿ ಹಿರಿಯ ಕಿರಿಯ ಒಟ್ಟು ನಲುವತ್ತು ಯಕ್ಷಗಾನ ಶಿಕ್ಷಕರು ಭಾಗವಹಿಸಿದ್ದರು.





























































































































