

2002 ರಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿದ್ದ ಟ್ರಸ್ಟಿಗೆ 2024 ರಿಂದ ಗಣನಾಥ ಶೆಟ್ಟಿ ಎಕ್ಕಾರು ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಒಂಬತ್ತು ಕ್ರಿಯಾಶೀಲ ಸದಸ್ಯರನ್ನು ಕರ್ನಾಟಕ ಸರಕಾರವು ನೇಮಿಸಿತು. ಈ ಹಿಂದೆ ಒಂದೇ ಸ್ಥಳಕ್ಕೆ ಸೀಮಿತವಾಗಿದ್ದ ಟ್ರಸ್ಟ್ ಕಾರ್ಯಕ್ರಮಗಳು ಈಗ ರಾಜ್ಯಾದ್ಯಂತ ನಿರಂತರ ನಡೆಯುತ್ತಿರುವುದು ಗಮನಾರ್ಹ. ಕಳೆದ ಒಂದೂವರೆ ವರ್ಷದಲ್ಲಿ ಟ್ರಸ್ಟ್ 52 ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಅರಿವಿನ ಬೆಳಕು, ಪದವಿಪೂರ್ವ ಪ್ರೌಢಶಾಲೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರಂಗವಲ್ಲಿ ಮತ್ತು ಚಿತ್ರಕಲೆ ಮೂಲಕ ಕಾರಂತರು ರಂಗ ತಂಡಗಳ ಕಾರಂತರ ಕೃತಿಗಳ ನಾಟಕ ಪ್ರದರ್ಶನ ಕಥೆ ನಾಟಕ ಕಾದಂಬರಿಗಳ ಅಧ್ಯಯನ ಶಿಬಿರಗಳು, ಕನ್ನಡೇತರರಿಗೆ ಕನ್ನಡ ಕಲಿಕೆ, ರಾಜ್ಯ ಮತ್ತು ಜಿಲ್ಲಾಮಟ್ಟದ ಸ್ಪರ್ಧೆಗಳು ಪರಿಸರ ಕಾರ್ಯಕ್ರಮ ರಾಷ್ಟ್ರೀಯ ವಿಚಾರ ಸಂಕಿರಣಗಳು, ಕೃತಿ ಪರಿಚಯ ಕಾರ್ಯಕ್ರಮ, ಹಿರಿಯ ನಾಗರಿಕರಿಗೆ ಸ್ಪರ್ಧೆ ಮತ್ತು ಉಪನ್ಯಾಸ. ಕಾರಂತರ ಜನ್ಮ ದಿನೋತ್ಸವದ ಅಂಗವಾಗಿ ಲೇಖಕರ ಸಮ್ಮಿಲನ ಮತ್ತು ಕಾರಂತ ಸಾಹಿತ್ಯೋತ್ಸವವನ್ನು ಏರ್ಪಡಿಸಲಾಗಿದೆ. ಕಾರಂತರ ಸಿನಿಮಾ ಪ್ರದರ್ಶನ ಮತ್ತು ಚರ್ಚೆ, ನಾಡಿನ ಹಿರಿಯ ವಿದ್ವಾಂಸರಾದ ಪ್ರೊ. ಬಿ ವಿವೇಕ ರೈಯವರಿಗೆ ಕಾರಂತ ರಾಜ್ಯ ಪುರಸ್ಕಾರ ಹಾಗೂ ಮೂವರಿಗೆ ಕಾರಂತ ವಿಶೇಷ ಪುರಸ್ಕಾರ ನೀಡಲಾಗಿದೆ.


ಮಣಿಪಾಲ ರೇಡಿಯೋದಲ್ಲಿ ವಿದ್ವಾಂಸರ 19 ಕಂತುಗಳ ‘ಕಾರಂತಯಾನ’ ಉಪನ್ಯಾಸ ಪ್ರಸಾರವಾಗಿದೆ. ನಿರಂತರವಾಗಿ ಬುಲೆಟಿನ್ ಪ್ರಕಟಣೆ ಮತ್ತು ಕಾರಂತರ ಸಮಗ್ರ ಪರಿಚಯದ ಪುಟ್ಟ ಕೃತಿ ಪ್ರಕಟಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡವಲ್ಲದೇ ದೂರದ ಕೊಪ್ಪಳ, ಹಾವೇರಿ, ಬೆಂಗಳೂರುಗಳಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಕಾರಂತರನ್ನು ಕೇಂದ್ರವಾಗಿಟ್ಟುಕೊಂಡು ಯುವಜನರಲ್ಲಿ ಸಾಹಿತ್ಯ ಸಂಸ್ಕೃತಿಯ ಅಭಿರುಚಿ ಮೂಡಿಸುವುದು ಮತ್ತು ವೈಜ್ಞಾನಿಕ ವೈಚಾರಿಕ ಚಿಂತನೆ ಮೂಡಿಸುವುದು ಈ ಟ್ರಸ್ಟ್ ನ ಮುಖ್ಯ ಉದ್ದೇಶ. 2025 -26ನೇ ಸಾಲಿನಲ್ಲಿ 33 ಕಾರ್ಯಕ್ರಮಗಳನ್ನು ಕೇವಲ ಐದೂವರೆ ಲಕ್ಷ ರೂಪಾಯಿಗಳ ಖರ್ಚಿನಲ್ಲಿ ನಡೆಸಲಾಗಿದೆ.
2026-27ನೇ ಸಾಲಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ನಡೆಸಲು ಕ್ರಿಯಾ ಯೋಜನೆ ತಯಾರಿಸಲಾಗಿದೆ. ವಿಶೇಷವೆಂದರೆ 2026ರ ಅಕ್ಟೋಬರ್ ನಿಂದ ಕಾರಂತರ 125 ನೇ ಜನ್ಮದಿನಾಚರಣೆಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಮೇಲಿನ ಪುಟ್ಟ ಯಶಸ್ಸಿಗೆ ಕಾರಣರಾದವರು ನಮಗೆ ಮಾರ್ಗದರ್ಶನ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು, ಎಲ್ಲಾ ಜನಪ್ರತಿನಿಧಿಗಳು, ಉಡುಪಿ ಜಿಲ್ಲಾಧಿಕಾರಿಗಳು, ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳು, ನಿರ್ದೇಶಕರು, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮತ್ತು ಟ್ರಸ್ಟಿನ ಸದಸ್ಯೆ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ, ನಮ್ಮ ಎಲ್ಲಾ ಕ್ರಿಯಾಶೀಲ ಸದಸ್ಯರು, ನಾಡಿನ ವಿವಿಧ ಸಂಘ ಸಂಸ್ಥೆಗಳು, ಮಾದ್ಯಮ ಮಿತ್ರರು, ಸಾಹಿತ್ಯ ಸಂಸ್ಕೃತಿ ಪ್ರೋತ್ಸಾಹಕರು ಇವರೆಲ್ಲರ ಸಹಕಾರದಿಂದ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಯಿತು.





























































































































