

ವನಸುಮದೋಲ್ ಎನ್ನ ಜೀವನವು ವಿಕಸಿಸುವಂತೆ ಮನವನನು ಗೊಳಿಸು ಗುರುವೆ’ ಎಂಬ ಸದಾಶಯ ವಾಕ್ಯಕ್ಕೆ ಒಪ್ಪುವ ಜೀವನ ಶೈಲಿಯನ್ನು ಅನುಸರಿಸಿಕೊಂಡು ಕಾನನದ ಸುಮವೊಂದು ಮೌನದಿಂ ಬಿರಿದು ನಿಜ ಸೌರಭವ ಸೂಸಿ ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿಮಾನವನು ತೊರೆದು ಕೃತಕೃತ್ಯೆಯನು ಪಡೆವಂತೆ ಬಾಳನ್ನು ರೂಪಿಸಿಕೊಂಡ ಸಜ್ಜನ ಸಂಘಟಕ ಬಲು ಪ್ರತಿಷ್ಠಿತ ಚೇಳ್ಯಾರು ಗುತ್ತು ಮೂಲದ ದಿವಾಕರ ಸಾಮಾನಿ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಜನರ ಜೀವನಕ್ಕೆ ಹತ್ತಿರವಾಗುವ ಸಮಾಜಬಂಧು ಸಾಮಾನಿ ಯಾವುದೇ ಪ್ರತಿಫಲಾಪೇಕ್ಷೆ ಅಥವಾ ಕೀರ್ತಿಕಾಂಕ್ಷೆಯನ್ನು ಹೊಂದಿದವರಲ್ಲ. ಬಂಟ ಸಮುದಾಯದ ಮೂಲ ಸಂಘಟನೆಯಾದ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಮೂಲ ಘಟಕದ ಜೊತೆಗೆ ತನ್ನನ್ನು ತೊಡಗಿಸಿಕೊಂಡು ಹಲವು ಮಜಲುಗಳ ಮುಂದಾಳು ಎನಿಸಿ ಸಮುದಾಯಪರ ಚಟುವಟಿಕೆಗಳಿಂದ ಜನಪ್ರಿಯತೆ ಪಡೆದ ಸಾಮಾನಿ ಯಾವುದೆ ಅಧಿಕಾರ ಲಾಲಸೆಯಿಂದ ಕಾರ್ಯ ಎಸಗಿಕೊಂಡು ಬಂದಿಲ್ಲವಾದರೂ ಅವರ ಯೋಗ್ಯತೆಗೆ ಅರ್ಹವಾದ ಉತ್ತಮ ಜವಾಬ್ದಾರಿಯುತ ಸ್ಥಾನಮಾನಗಳು ಲಭ್ಯವಾಗಿವೆ.


ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಕಾರ್ಯಕಾರಿ ಸಮಿತಿ ಸಂಚಾಲಕರಾಗಿ ಮಹತ್ವದ ಕಾರ್ಯಭಾರ ವಹಿಸಿಕೊಂಡ ದಿವಾಕರ ಸಾಮಾನಿ ಈ ಸ್ಥಾನಕ್ಕೆ ಅರ್ಹ ಆಯ್ಕೆಯೂ ಹೌದು. ಸುರತ್ಕಲ್ ನಲ್ಲಿ ನಡೆದ ವಿಶ್ವ ಬಂಟರ ಸಾಂಸ್ಕೃತಿಕ ಉತ್ಸವದಲ್ಲಿ ತಮ್ಮ ಕಾರ್ಯ ಕೌಶಲತೆಯನ್ನು ಮೆರೆದ ಇವರು ಓರ್ವ ಉತ್ತಮ ಮಾತುಗಾರರೂ ಹೌದು. ಅನೇಕ ಕಡೆ ಅರ್ಥಪೂರ್ಣ ಕಾರ್ಯಕ್ರಮ ನಿರ್ವಹಣೆ ಮಾಡಿದ ಖ್ಯಾತಿಯೂ ಶ್ರೀಯುತರಿಗಿದೆ. ಹಿಡಿದ ಕೆಲಸಕ್ಕೆ ಉತ್ತಮ ಪರಿಣಾಮ ದೊರೆಯುವ ತನಕ ವಿರಮಿಸುವ ಜಾಯಮಾನ ಇವರದ್ದಲ್ಲ. ಇವರಿಗೆ ನೀಡಿದ ಜವಾಬ್ದಾರಿಯಲ್ಲಿ ತನ್ನನ್ನು ಪೂರ್ಣ ತೊಡಗಿಸಿಕೊಂಡು ಅದನ್ನು ಯಶಸ್ವಿಗೊಳಿಸಿ ಕೊಡುವ ಅರ್ಹತೆ ಇವರಿಗಿದೆ. ಮಂಗಳೂರು ಸೇರಿದಂತೆ ಜಿಲ್ಲೆಯ ಹಲವಾರು ಕಡೆಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಇವರು ಉತ್ತಮ ಜನಸಂಪರ್ಕ ಹೊಂದಿರುವುದರ ಜೊತೆಗೆ ಅವರ ಸ್ಥಾನಮಾನ ಸಾಮಾಜಿಕ ಪ್ರತಿಷ್ಠೆ ಕುರಿತಂತೆ ಎಚ್ಚರ ವಹಿಸುತ್ತಾರೆ.
‘ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕು ತಿಮ್ಮ’ ಎಂಬ ಕಗ್ಗದ ವಾಕ್ಯಗಳ ಜೀವನಾದರ್ಶವನ್ನಾಗಿ ರೂಪಿಸಿಕೊಂಡ ವ್ಯಕ್ತಿತ್ವದ ಸಾಮಾನಿ ಅವರಿಗೆ ಇನ್ನಷ್ಟು ಉತ್ತಮ ಸ್ಥಾನಮಾನ ಗೌರವಗಳು ದೊರೆಯಲೆಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.
ಬರಹ : ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು





























































































































