

ವಿದ್ಯಾರ್ಥಿಗಳು ಕಾಲೇಜು ಜೀವನದ ಖುಷಿಯನ್ನು ಅನುಭವಿಸಬೇಕು. ಹಾಗೆಂದು ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗಬಾರದು. ದುಶ್ಚಟಗಳಿಂದ ದೂರವಿದ್ದರೆ ಮಾತ್ರ ಪರಿಪೂರ್ಣ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಛೇರ್ಮನ್ ಸಿಎ ಶಾಂತರಾಮ ಶೆಟ್ಟಿ ಹೇಳಿದರು. ಎಸ್.ಡಿ.ಎಂ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಪಿಜಿ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮತ್ತು ರಿಸರ್ಚ್ ಹಾಗೂ ಇಂಡಿಯನ್ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಹಯೋಗದಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಎಸ್ಡಿಎಂ ಪಿಜಿ ಸೆಂಟರ್ ಸಭಾಂಗಣದಲ್ಲಿ ಆಹಾರ, ನೈರ್ಮಲ್ಯ ಮತ್ತು ಯುವ ಜನತೆಯ ಮಾನಸಿಕ ಆರೋಗ್ಯ ವಿಷಯದ ಬಗ್ಗೆ ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.


ಯೂತ್ ರೆಡ್ ಕ್ರಾಸ್ ನಿರ್ದೇಶಕಿ ಡಾ. ಸುಮನಾ ಬೋಳಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಾಗಾರಗಳು ಉಪಯುಕ್ತವಾಗಿವೆ ಎಂದರು. ಎಸ್.ಡಿ.ಎಂ ಪಿಜಿ ಸೆಂಟರ್ ನಿರ್ದೇಶಕಿ ಡಾ. ಸೀಮಾ ಎಸ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಡಿ ಅಡಿಕ್ಷನ್ ಸಮಾಲೋಚಕಿ ಡಾ. ಕುಸುಮ್ ತಂತ್ರಿ ಡೆಸ ದಿಕ್ಸೂಚಿ ಭಾಷಣ ಮಾಡಿದರು. ಜಿಲ್ಲಾ ಘಟಕದ ಖಜಾಂಚಿ ಗುರುದತ್ ನಾಯಕ್, ನಿರ್ದೇಶಕ ಪಿಬಿ ಹರೀಶ್ ರೈ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ ತಜ್ಞೆ ಡಾ. ಹೇಮಾ ಮಲ್ಯ ಹಾಗೂ ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿ ಸಲಹೆಗಾರ್ತಿ ಸಂಜನಾ ಎ ಶೆಣೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಎಸ್.ಡಿ.ಎಂ ಕಾಲೇಜಿನ ಯೂತ್ ರೆಡ್ ಕ್ರಾಸ್ ಯೋಜನಾಧಿಕಾರಿ ಡಾ. ರಮ್ಯಾ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ವರ್ಷ ವಂದಿಸಿದರು. ಚಿನ್ಮಯಿ ನಿರೂಪಿಸಿದರು.




























































































































