

ಹಾವು ಕಡಿತಕ್ಕೊಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಡ ಮಹಿಳೆಗೆ ತುರ್ತಾಗಿ ರಕ್ತದ ವ್ಯವಸ್ಥೆ ಮಾಡುವ ಮೂಲಕ ಬಂಟ್ವಾಳದ ದಿನೇಶ್ ಶೆಟ್ಟಿ ದಂಬೆದಾರು ಹಾಗೂ ಅವರ ತಂಡವು ಮಾನವೀಯತೆ ಮೆರೆದಿದೆ. ಅನಂತಾಡಿ ಗ್ರಾಮದ ಗೋಳಿಕಟ್ಟೆ ನಿವಾಸಿ ಭವಾನಿ ಅವರಿಗೆ ವಿಷಕಾರಿ ಹಾವು ಕಚ್ಚಿದ್ದು, ಮೊದಲು ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಯಿತು. ಚಿಕಿತ್ಸೆ ಸಮಯದಲ್ಲಿ ಮಹಿಳೆಗೆ ತುರ್ತಾಗಿ ರಕ್ತದ ಅವಶ್ಯಕತೆ ಇತ್ತು. ಆದರೆ ಮಂಗಳೂರಿನ ಆಸ್ಪತ್ರೆಗಳಲ್ಲಿ ರಕ್ತದ ಅಭಾವವಿದ್ದ ಕಾರಣ ಕುಟುಂಬದವರು ಆತಂಕಕ್ಕೊಳಗಾಗಿದ್ದರು. ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ದಿನೇಶ್ ಶೆಟ್ಟಿ ದಂಬೆದಾರು ಅವರನ್ನು ಸಂಪರ್ಕಿಸಿ ಸಹಾಯ ಕೋರಲಾಯಿತು.




ವಿಷಯ ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ದಿನೇಶ್ ದಂಬೆದಾರು ಅವರು ತಾವೂ ಕೂಡ ಆಸ್ಪತ್ರೆಗೆ ಧಾವಿಸಿ ರಕ್ತದಾನಿ ಯುವಕರ ತಂಡವನ್ನು ಸಂಘಟಿಸಿದರು. ಮಹಿಳೆಯ ಜೀವ ಉಳಿಸಲು ಅಗತ್ಯವಿದ್ದ 5 ಯೂನಿಟ್ ರಕ್ತವನ್ನು ತಕ್ಷಣವೇ ಒದಗಿಸುವ ಮೂಲಕ ಮಾದರಿಯಾದರು. ಸಕಾಲದಲ್ಲಿ ಸ್ಪಂದಿಸಿ ರಕ್ತದಾನ ಮಾಡುವ ಮೂಲಕ ಬಡ ಮಹಿಳೆಯ ಜೀವ ಉಳಿಸಲು ಶ್ರಮಿಸಿದ ದಿನೇಶ್ ಶೆಟ್ಟಿ ದಂಬೆದಾರು, ಹರಿಪ್ರಸಾದ್, ರಂಜಿತ್ ರೈ ಆಲದಪದವು, ಸಾನ್ವಿತ್ ಶೆಟ್ಟಿ ವಾಮದಪದವು ಹಾಗೂ ವಿಘ್ನೇಶ್ ಭಂಡಾರಿ ಅವರಿಗೆ ಕುಟುಂಬದವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಈ ನಿಸ್ವಾರ್ಥ ಸೇವೆ ಎಲ್ಲರಿಗೂ ಪ್ರೇರಣೆಯಾಗಲಿ.

























































































































