

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲೇ ಮುಳುಗಿರುವ ಮಕ್ಕಳಿಗೆ ತುಳುನಾಡಿನ ವೀರ ಕ್ರೀಡೆ ‘ಕಂಬಳ’ ಹಾಗೂ ಕೃಷಿ ಸಂಸ್ಕೃತಿಯನ್ನು ಪರಿಚಯಿಸುವ ಅಪೂರ್ವ ಪ್ರಯತ್ನವೊಂದು ಯಡಾಡಿ ಮತ್ಯಾಡಿಯಲ್ಲಿ ಜರುಗಿತು. ಇಲ್ಲಿನ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ‘ಮಂಥನ’ ಬೇಸಿಗೆ ಶಿಬಿರದ ಎರಡನೇ ದಿನದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಸಾಂಕೇತಿಕವಾಗಿ ಆಯೋಜಿಸಲಾಗಿದ್ದ ‘ಕಂಬಳ ಪ್ರದರ್ಶನ’ವು ಅತ್ಯಂತ ವೈಭವದಿಂದ ನಡೆಯಿತು. ಉಡುಪಿ ಜಿಲ್ಲಾ ಕಂಬಳ ಸಮಿತಿಯ ಸಂಚಾಲಕರಾದ ಶಾಂತರಾಮ ಶೆಟ್ಟಿ ಅವರು ಹೂವಿನ ಹೊಂಬಾಳೆಯನ್ನು ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳಿಗೆ ನಮ್ಮ ನೆಲದ ಕಲೆ, ಆಚಾರ ವಿಚಾರ ಹಾಗೂ ಸಂಪ್ರದಾಯಗಳ ಬಗ್ಗೆ ಅರಿವು ಕಡಿಮೆಯಾಗುತ್ತಿದೆ. ಕಂಬಳದಂತಹ ಕ್ರೀಡೆಯನ್ನು ಪರಿಚಯಿಸುವ ಮೂಲಕ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಮಕ್ಕಳಲ್ಲಿ ಮಣ್ಣಿನ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವ ಮಹತ್ತರ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.




ಕ್ಯಾಶ್ಯೂ ಉದ್ಯಮಿ ಸತೀಶ್ ಕೆದ್ಲಾಯಿ ಅವರ ಕೃಷಿ ಭೂಮಿಯಲ್ಲಿ ಈ ಕಂಬಳ ಪ್ರದರ್ಶನ ಆಯೋಜಿಸಲಾಗಿತ್ತು. ಕಂಬಳದ ಕೋಣಗಳು ಗದ್ದೆಗೆ ಇಳಿಯುತ್ತಿದ್ದಂತೆ ಮಕ್ಕಳಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಕೇವಲ ಪುಸ್ತಕಗಳಲ್ಲಿ ಅಥವಾ ಟಿವಿಗಳಲ್ಲಿ ಕಂಬಳ ನೋಡುತ್ತಿದ್ದ ಮಕ್ಕಳು, ಇಂದು ನೇರವಾಗಿ ಕೆಸರುಗದ್ದೆಯಲ್ಲಿ ಕಂಬಳದ ವೈಭವವನ್ನು ಕಣ್ಣಾರೆ ಕಂಡು ಆನಂದಿಸಿದರು. ಇದು ಕೇವಲ ಕ್ರೀಡೆಯಾಗಿರದೆ, ತುಳುನಾಡಿನ ಜನಪದ ಕಲೆ, ದೈವಾರಾಧನೆ ಮತ್ತು ಕೃಷಿ ಪದ್ಧತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಾರ್ಥಕ ವೇದಿಕೆಯಾಯಿತು. ಕೆಸರುಗದ್ದೆಯಲ್ಲಿ ಕೋಣಗಳ ಓಟವನ್ನು ಕಂಡು ಪುಳಕಿತರಾದ ವಿದ್ಯಾರ್ಥಿಗಳು ತಾವೂ ಮಣ್ಣಿನೊಂದಿಗೆ ಬೆರೆತು ಸಂಭ್ರಮಪಟ್ಟರು.
ವೇದಿಕೆಯಲ್ಲಿ ಕ್ಯಾಶ್ಯೂ ಉದ್ಯಮಿ ಸತೀಶ್ ಕೆದ್ಲಾಯಿ, ಸುಮಂತ್ ಗೌಡ, ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಕೋಶಾಧಿಕಾರಿ ಭರತ್ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯರಾದ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಭಾಗವಾಗಿ ಗಣ್ಯರನ್ನು ಶಾಲು ಹೊದಿಸಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

























































































































