
ಕಂಪ್ಯೂಟರ್ ಜ್ಞಾನ ಇಂದು ನಿತ್ಯ ಜೀವನಕ್ಕೆ ಅವಶ್ಯವಾಗಿದೆ. ಕಂಪ್ಯೂಟರ್ ಸಾಕ್ಷರರಿಗೆ ನಾನಾ ಕ್ಷೇತ್ರಗಳಲ್ಲಿ ವಿಪುಲ ಅವಕಾಶವಿದ್ದು, ಮಹಿಳಾ ಸಬಲೀಕರಣಕ್ಕೂ ಇದು ದಾರಿಯಾಗಿದೆ. ಆದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ನಿರಂತರ ಕಲಿಕೆ ಅಗತ್ಯವಿದ್ದು, ಆ ಬಗ್ಗೆ ವಿಶೇಷ ಮುತುವರ್ಜಿ ವಹಿಸಬೇಕು. ನಮ್ಮ ಕೌಶಲ್ಯವನ್ನು ಸಮಯಕ್ಕೆ ಸರಿಯಾಗಿ ಉನ್ನತೀಕರಿಸಿಕೊಳ್ಳಬೇಕು ಎಂದು ಬಹರೈನ್ ಔಮಾ ಮಿಡಲ್ ಈಸ್ಟ್ ಸಂಸ್ಥೆಯ ಆಡಳಿತ ನಿರ್ದೇಶಕ ನವೀನ್ ಶೆಟ್ಟಿ ಹೇಳಿದರು. ಕುಂತಳನಗರದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಮಂಗಳೂರು ಪ್ರಾಯೋಜಕತ್ವದಲ್ಲಿ ನಡೆಯುವ ಕಂಪ್ಯೂಟರ್ ಉಚಿತ ತರಬೇತಿ ಕಾರ್ಯಕ್ರಮದ 21ನೇ ಬ್ಯಾಚ್ ಉದ್ಘಾಟಿಸಿ ಮಾತನಾಡಿದರು. ದೆಂದೂರು ಕಟ್ಟೆ ಭಾರತಿ ಸಾಫ್ಟ್ ವೇರ್ ಆಡಳಿತ ನಿರ್ದೇಶಕ ಕಿರಣ್ ನಾಯಕ್ ಮಾತನಾಡಿ, ಕಂಪ್ಯೂಟರ್ ಬಳಿಕ ಬಂದಿರುವ ಕೃತಕ ಬುದ್ಧಿಮತ್ತೆ ಇಂದಿನ ಯುವ ಜನತೆಗೆ ಸವಲಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ವಿರುದ್ಧ ಹೋರಾಡುವ ಕ್ಷಮತೆ ಬೆಳೆಸಿಕೊಳ್ಳಬೇಕು. ಅಡ್ವಾನ್ಸ್ ತರಬೇತಿ ಪಡೆಯುವ ಮೂಲಕ ಅದು ಇನ್ನೂ ತಲುಪಲಾಗದ ಕಡೆಯಲ್ಲಿ ಪ್ರಾಬಲ್ಯ ಸಾಧಿಸಲು ಅಗಾಧ ಅವಕಾಶಗಳಿವೆ ಎಂದರು.





ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಸಂಘದ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಭಾಗದ ಪ್ರತಿಯೊಬ್ಬರೂ ಕಂಪ್ಯೂಟರ್ ಸಾಕ್ಷರತೆ ಹೊಂದಬೇಕೆಂಬ ಗುರಿಯೊಂದಿಗೆ ಉಚಿತ ಕಂಪ್ಯೂಟರ್ ತರಬೇತಿ ನಡೆಸಿಕೊಂಡು ಬರಲಾಗುತ್ತಿದ್ದು, ಈವರೆಗೆ 420 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಗಾರ, ಉದ್ಯೋಗ ಮೇಳ ಮುಂತಾದ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಣೆಗೆ ಒತ್ತು ನೀಡಿ ಟ್ರಸ್ಟ್ ಕೆಲಸ ಮಾಡುತ್ತಿದೆ ಎಂದರು. ಔಮಾ ಮಿಡಲ್ ಈಸ್ಟ್ ಸಂಸ್ಥೆಯ ಆಡಳಿತ ನಿರ್ದೇಶಕ ನವೀನ್ ಶೆಟ್ಟಿಯವರನ್ನು ಈ ಸಂಧರ್ಭ ಸನ್ಮಾನಿಸಿ ಗೌರವಿಸಲಾಯಿತು. ಉಡುಪಿ ಗ್ರಾಮೀಣ ಸಂಘದ ಅಧ್ಯಕ್ಷ ಡಾ. ಎಚ್.ಬಿ ಶೆಟ್ಟಿ, ಕಾರ್ಯಾಧ್ಯಕ್ಷ ಪದ್ಮನಾಭ ಹೆಗ್ಡೆ, ಕಾರ್ಯದರ್ಶಿ ವಿಜೀತ್ ಶೆಟ್ಟಿ, ಕೋಶಾಧಿಕಾರಿ ರಂಜಿನಿ ಹೆಗ್ಡೆ, ನಿರ್ದೇಶಕರಾದ ಗೋಪಾಲ ಶೆಟ್ಟಿ, ದಯಾನಂದ ಶೆಟ್ಟಿ ಕಲ್ಮಂಜೆ, ರಮೇಶ್ ಶೆಟ್ಟಿ ನಿಂಜೂರು, ಹರೀಶ್ ಶೆಟ್ಟಿ, ಹರೀಂದ್ರ ಹೆಗ್ಡೆ, ಮೈಸ್ ನ ಪ್ರಭಾರ ಪ್ರಿನ್ಸಿಪಾಲ್ ರವಿ ಕೋಟ್ಯಾನ್, ಪ್ರಮುಖರಾದ ಭಾಸ್ಕರ್ ಶೆಟ್ಟಿ, ಗಿರೀಶ್, ಯತಿರಾಜ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಮುಂಬಯಿ ಉಪಸ್ಥಿತರಿದ್ದರು. ಬಂಟರ ಸಂಘದ ಕೋಶಾಧಿಕಾರಿ ರಂಜಿನಿ ಹೆಗ್ಡೆ ವಂದಿಸಿದರು. ಕಾರ್ಯದರ್ಶಿ ವಿಜೀತ್ ಶೆಟ್ಟಿ ನಿರೂಪಿಸಿದರು.

























































































































