
ಅತೀ ಗ್ರಾಮಿಣ ಭಾಗವಾದ ಉಡುಪಿ ಜಿಲ್ಲೆಯ ಬೆಳಪು ಗ್ರಾಮದ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ಇಡೀ ಬೆಳಪು ಗ್ರಾಮಕ್ಕೆ ಹೆಮ್ಮೆಯನ್ನು ತಂದಿದ್ದಾರೆ ಎಂದು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿಯವರು ತಿಳಿಸಿದ್ದಾರೆ. ಬೆಳಪು ಗ್ರಾಮವನ್ನು ಬೆಳಪು ಕಾಡು ಎಂದು ಕರೆಯುತ್ತಿದ್ದ ಸಂಧರ್ಭದಲ್ಲಿ ಬೆಳಪು ಗ್ರಾಮವನ್ನು ನಗರ ಪ್ರದೇಶದ ರೀತಿ ರೂಪಿಸಬೇಕು, ಅದರಲ್ಲಿಯೂ ಶೈಕ್ಷಣಿಕ ನಗರವನ್ನಾಗಿ ಕೆಜಿಯಿಂದ ಪಿಜಿಯ ತನಕ ಹಾಗೂ ಆಸುಪಾಸಿನ ಈ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಮೌಲ್ಯಧಾರಿತ ಶಿಕ್ಷಣವನ್ನು ಒದಗಿಸಿ ಕೊಡಬೇಕು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ನಿರ್ಗತಿಕ ವಿದ್ಯಾರ್ಥಿಗಳಿಗೆ, ಸಂಪೂರ್ಣ ಉಚಿತ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಬೇಕು, ಅವರಿಗೆ ಉನ್ನತ ಶಿಕ್ಷಣ ಮಾಡುವುದಕ್ಕಾಗಲಿ, ಪಿಎಚ್ಡಿ ಮಾಡುವುದಕ್ಕಾಗಲಿ, ಅಥವಾ ಎಂ.ಕಾಂ, ಟೀಚರ್ ಟ್ರೈನಿಂಗ್ ಎಲ್ಲವೂ ನಮ್ಮೂರಿನ ಶಿಕ್ಷಣ ಕೇಂದ್ರಗಳಲ್ಲಿ ಮಾಡಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ ಅಂತಿಮ ಹಂತದ ಕಾಮಗಾರಿ ಈಗಾಗಲೇ ನಡೆಯುತ್ತಲಿದೆ. ನಮ್ಮೂರಿನ ವಿದ್ಯಾರ್ಥಿಗಳು ತಾಂತ್ರಿಕ ವಿದ್ಯಾಬ್ಯಾಸಗಳನ್ನು ಪಡೆಯಬೇಕು ಎಂಬ ಉದ್ದೇಶದಿಂದ ಈಗಾಗಲೇ ಸರ್ಕಾರಿ ಪಾಲಿಟೆಕ್ನಿಕ್ ಕೂಡಾ ಅತ್ಯುತ್ತಮವಾಗಿ, ಮೌಲ್ಯಧಾರಿತ ಶಿಕ್ಷಣವನ್ನು ನೀಡುತ್ತಾ ಇದೆ. ಇದರಲ್ಲಿ ನಮ್ಮ ಗ್ರಾಮದ, ಜಿಲ್ಲೆಯ, ಹೊರರಾಜ್ಯದ, ವಿದ್ಯಾರ್ಥಿಗಳು ಕೂಡಾ ವ್ಯಾಸಂಗ ಮಾಡುತ್ತಿದ್ದಾರೆ. ಅದರೊಂದಿಗೆ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಮೌಲಾನ ಆಜಾದ್ ವಸತಿ ಶಾಲೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಅಲ್ಲಿಯೂ 10 ನೇ ತರಗತಿ ತನಕ ಉಚಿತ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.


ಅದರೊಂದಿಗೆ ನಮ್ಮ ಬೆಳಪು ಶಾಲೆಯ ಬಡ ಮಕ್ಕಳು ಶಿಕ್ಷಣದ ವಿಚಾರದಲ್ಲಿ ಯಾವುದೇ ರೀತಿ ತೊಂದರೆಗೆ ಒಳಗಾಗಬಾರದು ಎಂಬ ಉದ್ದೇಶದಿಂದ ಊರಿನವರು ಸೇರಿ ಸರ್ಕಾರದಿಂದ ಯಾವುದೇ ಸಹಾಯವನ್ನು ಪಡೆಯದೇ, ಎಲ್.ಕೆ.ಜಿ ಯು.ಕೆ.ಜಿ ಖಾಸಗಿ ಶಾಲೆಯ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಸವಲತ್ತು ಸಹಿತ 25 ರಷ್ಟು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ನಮ್ಮ ದೊಡ್ಡ ಸಂಕಲ್ಪ ಏನೆಂದರೆ, ನಮ್ಮ ಗ್ರಾಮದ ಮಕ್ಕಳು ಸುಶಿಕ್ಷಿತರಾಗಬೇಕು, ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು, ಅವರು ಉನ್ನತ ಶಿಕ್ಷಣವನ್ನು ನಮ್ಮಲ್ಲಿ ಪಡೆಯಬೇಕು, ಆ ಮೂಲಕ ನಮ್ಮ ಗ್ರಾಮ ಸಂಪೂರ್ಣ ಶಿಕ್ಷಣ ಗ್ರಾಮವಾಗಬೇಕು. ಇದಕ್ಕೆ ಪೂರಕವಾಗಿ ಇಂದು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಬೆಳಪು ಶಾಲೆಗೆ ನೂರಕ್ಕೆ ನೂರು ಫಲಿತಾಂಶ ದೊರಕಿಸುವ ಮೂಲಕ ಅಲ್ಲಿಯ ಅಧ್ಯಾಪಕರು, ಅಲ್ಲಿಯ ಮುಖ್ಯೊಪಾಧ್ಯಾಯರು, ಮಕ್ಕಳು, ಆರ್ಥಿಕವಾಗಿ ಹಿಂದುಳಿದ ಕಲಿಕೆಯಲ್ಲೂ ಹಿಂದುಳಿದಂತಹ ಮಕ್ಕಳನ್ನು ಈ ಮಟ್ಟಕ್ಕೆ ಬೆಳೆಸಿದ ಎಲ್ಲಾ ಅಧ್ಯಾಪಕರಿಗೂ ಮನದಾಳದ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ ಎಂದು ಡಾ| ದೇವಿಪ್ರಸಾದ್ ಶೆಟ್ಟಿಯವರು ತಿಳಿಸಿದ್ದಾರೆ.

























































































































