
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆಯುವ ಹೊರೆಕಾಣಿಕೆ ಮತ್ತು ಹೊರೆಕಾಣಿಕೆ ಮೆರವಣಿಗೆಯ ಕುರಿತು ಸುರತ್ಕಲ್ ಬಂಟರ ಸಂಘದಲ್ಲಿ ಸಭೆಯನ್ನು ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ ಇವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಾಳ ಜಗನ್ನಾಥ ಶೆಟ್ಟಿ ವಹಿಸಿದ್ದರು. ಸಭೆಯಲ್ಲಿ ಹೊರೆಕಾಣಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರಾದ ಚಂದ್ರಹಾಸ ಶೆಟ್ಟಿ ರಂಗೋಲಿ ಮಾತನಾಡಿ, ಎಂಆರ್ ಜಿ ಗ್ರೂಪ್ ನ ಅಧ್ಯಕ್ಷ ಡಾ| ಕೆ ಪ್ರಕಾಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪಡುಬಿದ್ರೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಅದರ ಪ್ರಯುಕ್ತ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸಹಿತ ಬೇರೆ ಜಿಲ್ಲೆಗಳಿಂದಲೂ ಪಡುಬಿದ್ರೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುವ ದೇವತಾ ಕಾರ್ಯಕ್ಕೆ ಹೊರೆಕಾಣಿಕೆಯನ್ನು ಕಳುಹಿಸಲು ಎಲ್ಲಾ ಬಂಟರ ಸಂಘಗಳಿಗೆ ಮನವಿ ಪತ್ರ ಬಂದಿರುತ್ತದೆ. ಈ ನಿಟ್ಟಿನಲ್ಲಿ ಸುರತ್ಕಲ್ ಬಂಟರ ಸಂಘ ಕೂಡಾ ಬಹಳಷ್ಟು ಮುತುವರ್ಜಿ ವಹಿಸಿ ಇಂದಿನ ಸಭೆಯನ್ನು ಆಯೋಜಿಸಿದ್ದೀರಿ. ಕೆ ಪ್ರಕಾಶ್ ಶೆಟ್ಟಿಯವರ ಮೇಲಿನ ಅಭಿಮಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿದ್ದು, ಎಲ್ಲರೂ ಎಪ್ರಿಲ್ 26 ರಂದು ಭಾನುವಾರ ಸಂಜೆ 3 ಗಂಟೆಗೆ ನಡೆಯುವ ಹೊರೆಕಾಣಿಕೆ ಮತ್ತು ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ವಿನಂತಿಸಿದರು.


ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿ ಹಾಗೂ ಪಡುಬಿದ್ರೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು ಮಾತನಾಡಿ, ಮಹಾ ಅನ್ನಸಂತರ್ಪಣೆಗೆ ಬೇಕಾಗುವ ಸಾಮಾಗ್ರಿಗಳ ಕುರಿತು ಮಾಹಿತಿ ನೀಡಿದರು. ಏಪ್ರಿಲ್ 26 ಭಾನುವಾರದಂದು ಪಡುಬಿದ್ರೆ ಪೇಟೆಯ ಗುಂಡ್ಲಾಡಿ ಕಟ್ಟೆಯಿಂದ ಸಂಜೆ 3 ಗಂಟೆಗೆ ಸರಿಯಾಗಿ ಶೋಭಾಯಾತ್ರೆ ಹೊರಡಲಿದೆ. ಈ ಕಾರ್ಯಕ್ರಮದಲ್ಲಿ ಸುರತ್ಕಲ್ ಬಂಟರ ಸಂಘದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು, ಮಹಿಳೆಯರು, ಯುವಕರು ಭಾಗವಹಿಸುವಂತೆ ವಿನಂತಿಸಿದರು. ಸಭೆಯಲ್ಲಿ ಗಿರೀಶ್ ಎಂ ಶೆಟ್ಟಿ ಕಟೀಲು, ಸರೋಜ ಟಿ ಶೆಟ್ಟಿ, ರಾಜೇಶ್ವರಿ ಡಿ ಶೆಟ್ಟಿ, ಕಿರಣ್ ಪ್ರಸಾದ್ ರೈ, ಪುಷ್ಪರಾಜ ಶೆಟ್ಟಿ ಕುಡುಂಬೂರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಲೋಕಯ್ಯ ಎಂ ಶೆಟ್ಟಿ ಮುಂಚೂರು, ಮಾಜಿ ಅಧ್ಯಕ್ಷರಾದ ಉಲ್ಲಾಸ್ ಆರ್ ಶೆಟ್ಟಿ, ಸುಧಾಕರ ಎಸ್ ಪೂಂಜ, ಸಂಘದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಉಪಸ್ಥಿತರಿದ್ದರು. ಉಲ್ಲಾಸ್ ಶೆಟ್ಟಿಯವರು ಸ್ವಾಗತಿಸಿ ಹಸಿರು ಹೊರೆಕಾಣಿಕೆ ಸಮರ್ಪಣೆಯಲ್ಲಿ ಸುರತ್ಕಲ್ ಬಂಟರ ಸಂಘದ ಎಲ್ಲಾ ಸದಸ್ಯರು ಕೈಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಸುವಂತೆ ವಿನಂತಿಸಿದರು. ಲೀಲಾಧರ ಶೆಟ್ಟಿ ಕಟ್ಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

























































































































