
ಬಂಟ ಸಮಾಜಕ್ಕೆ ಎಲ್ಲಾ ರೀತಿಯಲ್ಲಿಯೂ ಸಕಲ ವಿದ್ಯೆ, ಬುದ್ದಿ, ಸಂಸ್ಕಾರ, ಧನ ಸಂಪತ್ತು ಸಿಕ್ಕಿದೆ. ಸಮಾಜ ಸೇವೆ ಮಾಡುವಂತಹ ಶಕ್ತಿ ಕೂಡಾ ದೇವರು ಕರುಣಿಸಿದ್ದಾರೆ. ಸಮಾಜದಲ್ಲಿ ಬೆಳೆದು ನೆಲೆ ನಿಂತು ಗಣ್ಯ ವ್ಯಕ್ತಿಯಾಗಿ ರೂಪಿಸುವಲ್ಲಿ ಸಹಾಯ ಮಾಡಿದ ವ್ಯಕ್ತಿ, ಸಂಘ ಅಥವಾ ಸಮಾಜದ ಋಣವನ್ನು ಸಂದಾಯ ಮಾಡುವ ಧರ್ಮಪಾಲನೆ ನಮ್ಮದು ಎಂದು ಅರಿಯಬೇಕು. ನಾವು ಮಾಡುವ ಸಮಾಜ ಸೇವೆಯಿಂದ ಸಮಾಜದಲ್ಲಿ ಸುಖ ಕಾಣುವ ಕುಟುಂಬಗಳ ಖುಷಿಯೇ ನಮಗೆ ಸಂತೃಪ್ತಿ ಎಂದರಿಯಬೇಕು. ನಾವು ಬಂಟರು ಎಲ್ಲರೂ ಕೂಡಾ ಒಬ್ಬರಿಗೊಬ್ಬರು ಸಂಬಂಧಿಕರು. ಒಂದಲ್ಲ ಒಂದು ರೀತಿಯಲ್ಲಿ ಕುಟುಂಬದ ಸಂಬಂಧಗಳನ್ನು ಹೊಂದಿರುವ ಅಥವಾ ಸೇವಾ ಕಾರ್ಯಗಳಲ್ಲಿ ಸಂಬಂಧ ಹೊಂದಿರುವ ನಾವು ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಆಗಿರಬಹುದು. ಸಂತೋಷ್ ಶೆಟ್ಟಿಯಾವರಂತಹ ಸಂಘಟಕ, ನಾಯಕತ್ವ, ದೂರಾಲೋಚನೆಯ ದೃಷ್ಟಿ ಇಟ್ಟುಕೊಂಡು ಸಮಾಜ ಸೇವೆ ಮಾಡುವ ನಮ್ಮ ಬಂಟ ಸಮಾಜದ ಬಂಧುಗಳು ಇದ್ದರೆ ಸಾಕು, ಆಗ ನಾವು ಮಾಡಿದ ಸಾಧನೆಗಿಂತ ಇನ್ನಷ್ಟು ಎತ್ತರಕ್ಕೆ ನಮ್ಮ ಸಮಾಜ ಏರುತ್ತದೆ. ದೇವರು ನಮಗೆ ನೀಡಿದ ಸರ್ವ ವಿಧದ ಶಕ್ತಿಯಲ್ಲಿ ಈ ಪುಣ್ಯ ಭೂಮಿಯಲ್ಲಿ ಸೇವೆ ಮಾಡುವ ಅರ್ಹತೆಯನ್ನು ಕೂಡಾ ಪ್ರತಿಯೊಬ್ಬರಿಗೂ ಕೊಟ್ಟಿದ್ದಾರೆ. ಸೇವೆ ಮಾಡುವ ಮನಸ್ಸು ಚಿಂತನೆ ನಮ್ಮ ಒಳ ಮನಸ್ಸಿನಿಂದ ಬರಬೇಕು. ಬೆಂಗಳೂರು ಬಂಟರ ಸಂಘ ನಮ್ಮ ಹಳ್ಳಿ ಹಳ್ಳಿಯಲ್ಲಿ ಅಲೆದು ಆಯ್ಕೆ ಮಾಡಿದ ಸಮಾಜದ ಬಡ ಕುಟುಂಬಗಳ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಬಹಳಷ್ಟು ಪ್ರಾಮುಖ್ಯತೆ ನೀಡುತ್ತಿದ್ದೇವೆ. ನಮ್ಮಲ್ಲಿ ಬಂಟ ಸಮಾಜದ ಯಾರೇ ಮಕ್ಕಳು ಇದರ ಪ್ರಯೋಜನ ಪಡೆಯಬಹುದು. ನಾವು ಎಳೆಯ ಜೀವನದಲ್ಲಿ ಕಷ್ಟ ಪಟ್ಟು ಮೇಲೆ ಬಂದವರು. ಹಿಂದೆ ನಡೆದು ಬಂದ ದಾರಿಯನ್ನು ಮರೆಯದೆ ತಮ್ಮಿಂದಾದಷ್ಟು ಸಮಾಜ ಸೇವೆಯನ್ನು ಸಮಾಜಕ್ಕಾಗಿ ಮಾಡೋಣ. ಸೇವೆಯಲ್ಲಿ ನಿಶ್ಚಿತ ಗುರಿ ಮತ್ತು ಪ್ರಯತ್ನ ಇರಲಿ. ಫಲ ಸಮಾಜಕ್ಕೆ ಅರ್ಪನೆಯಾದಾಗ ನೂರಕ್ಕೆ ನೂರರಷ್ಟು ಸಂತೃಪ್ತಿ ಸಿಗುತ್ತದೆ ಎಂದು ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಸಿ.ಎ ಅಶೋಕ್ ಶೆಟ್ಟಿಯವರು ನುಡಿದರು.

ಪುಣೆ ಬಂಟ್ಸ್ ಅಸೋಸಿಯೇಷನ್ ನ 14ನೇ ವಾರ್ಷಿಕೊತ್ಸವ ಸಮಾರಂಭವು ಫೆಬ್ರವರಿ 6 ರಂದು ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದಲ್ಲಿ ಜರಗಿತು. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅಶೋಕ್ ಶೆಟ್ಟಿಯವರು, ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ರೋಹಿತ್ ಶೆಟ್ಟಿ ಮತ್ತು ಸಂಘದ ಪದಾಧಿಕಾರಿಗಳು ಸಮಾಜದ ಅಭ್ಯುದಯಕ್ಕಾಗಿ ಹಾಕಿಕೊಂಡ ಯೋಜನೆಗಳು ಸಾಕಾರಗೊಳ್ಳಲಿ. ಸ್ಪಷ್ಟ ಗುರಿ, ಪರಿಶ್ರಮ, ಸತತ ಪ್ರಯತ್ನ, ಸಮಾಜಕ್ಕಾಗಿ ದುಡಿಯುವ ಹುಮ್ಮಸ್ಸು ಇದ್ದರೆ ಸಂಘದ ಪ್ರಗತಿ ಮತ್ತು ಕಾರ್ಯ ಯೋಜನೆಗಳು ಖಂಡಿತಾ ಸಪಲವಾಗುತ್ತವೆ. ಸಂಘದ ಮಾಜಿ ಅಧ್ಯಕ್ಷರುಗಳು ಸಮಾಜ ಬಾಂಧವರ ನಿರಂತರ ಬೆಂಬಲ ಬಲ ಸಂಘದ ಜೋತೆಯಿರಲಿ. ನಮಗೆ ದಕ್ಕಿದ ನಾಯಕತ್ವ ಗುಣದಿಂದ ಎಲ್ಲರನ್ನೂ ಸೇರಿಸಿಕೊಂಡು ಸಮಾಜವನ್ನು ಬೆಳೆಸುವ ಶಕ್ತಿ ನಮಗಿದೆ. ಸಮಾಜಮುಖಿಯಾದ ಸೇವೆಯೊಂದಿಗೆ ಮುಂದುವರಿಯೋಣ ಎಂದರು. ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತುರವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದ ವೇದಿಕೆಯಲ್ಲಿ ಗೌರವ ಅತಿಥಿಗಳಾದ ಮುಂಬಯಿ ಟೆಕ್ನೋ ಥರ್ಮಾ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ನಗ್ರಿಗುತ್ತು ವಿವೇಕ್ ಶೆಟ್ಟಿ, ಪುಣೆ ಬಂಟರ ಸಂಘದ ಅಧ್ಯಕ್ಷರಾದ ಕೆಂಜಾರು ಗುತ್ತು ಅಜಿತ್ ಹೆಗ್ಡೆ, ಬಂಟ್ಸ್ ಅಸೋಸಿಯೇಷನ್ ನ ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರು, ಉಪಾಧ್ಯಕ್ಷರುಗಳಾದ ಸತೀಶ್ ರೈ ಕಲ್ಲಂಗಳ ಗುತ್ತು, ಡಾ. ಸುಧಾಕರ್ ಶೆಟ್ಟಿ, ಪ್ರ. ಕಾರ್ಯದರ್ಶಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ, ಕೋಶಾಧಿಕಾರಿ ಸಿ.ಎ ಮನೋಹರ್ ಶೆಟ್ಟಿ, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇಷ್ಮಾ ಆರ್ ಶೆಟ್ಟಿ, ನಿಕಟಪೂರ್ವ ಕಾರ್ಯಾಧ್ಯಕ್ಷೆ ಉಷಾ ಯು ಶೆಟ್ಟಿ, ಕಾರ್ಯದರ್ಶಿ ಶರ್ಮಿಳಾ ಟಿ ರೈ, ಯುವ ವಿಭಾಗದ ಕಾರ್ಯಾಧ್ಯಕ್ಷ ಅದೀಪ್ ಶೆಟ್ಟಿಯವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಕಲ್ಪವೃಕ್ಷ ಹೂ ಅರಳಿಸಿ ವಾರ್ಷಿಕೋತ್ಸವ ಸಂಭ್ರಮದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಿನಿ ಎಂ ಶೆಟ್ಟಿ, ಲತಾ ಶೆಟ್ಟಿಯವರು ಪ್ರಾರ್ಥನೆಗೈದರು. ಅಸೋಸಿಯೇಷನ್ ನ ಉಪಾಧ್ಯಕ್ಷರಾದ ಸತೀಶ್ ರೈ ಕಲ್ಲಂಗಳ ಗುತ್ತು ಸ್ವಾಗತಿಸಿದರು. ಸಂಘದ ವಾರ್ಷಿಕ ಕಾರ್ಯಕ್ರಮಗಳ ವರದಿಯನ್ನು ಪ್ರ. ಕಾರ್ಯದರ್ಶಿದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ ಸಲ್ಲಿಸಿದರು. ಮುಖ್ಯ ಅತಿಥಿ ಸಿ.ಎ ಅಶೋಕ್ ಶೆಟ್ಟಿಯವರನ್ನು ಬಂಟ್ಸ್ ಅಸೋಸಿಯೇಷನ್ ವತಿಯಿಂದ ಶಾಲು ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ಗೌರವ ಅತಿಥಿಗಳಾದ ವಿವೇಕ್ ಶೆಟ್ಟಿ ನಗ್ರಿಗುತ್ತು, ಅಜಿತ್ ಹೆಗ್ಡೆಯವರನ್ನು ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅತಿಥಿಗಳನ್ನು ಕ್ರಮವಾಗಿ ಭವ್ಯರಾಣಿ ಎಸ್ ಶೆಟ್ಟಿ, ಮಹೇಶ್ ಹೆಗ್ಡೆ ಪೊಳಲಿ, ಪೂರ್ಣಿಮಾ ಎ ಶೆಟ್ಟಿಯವರು ಪರಿಚಯಿಸಿದರು ಹಾಗೂ ವಿಶೇಷವಾಗಿ ಬಂಟರ ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ದಂಪತಿಗಳನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರು, ಮಾಜಿ ಅಧ್ಯಕ್ಷರುಗಳಾದ ನಾರಾಯಣ ಶೆಟ್ಟಿ, ಆನಂದ್ ಶೆಟ್ಟಿ ಮಿಯ್ಯಾರು ಮತ್ತು ಮಾಜಿ ಕಾರ್ಯಾಧ್ಯಕ್ಷೆಯರುಗಳಾದ ಸುಜಾತಾ ಎಸ್ ಹೆಗ್ಡೆ, ಸರೋಜಿನಿ ಜೆ ಶೆಟ್ಟಿ, ಸುಧಾ ಎನ್ ಶೆಟ್ಟಿ, ಮಲ್ಲಿಕಾ ಎ ಶೆಟ್ಟಿ, ದೀಪಾ ಎ ರೈ, ಉಷಾ ಯು ಶೆಟ್ಟಿಯವರನ್ನು ಶಾಲು, ಪುಷ್ಪಗುಚ್ಛ, ಸ್ಮರಣಿಕೆ ನೀಡಿ ಗೌರವಪೂರ್ವಕವಾಗಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಕವಿ ಮಹೇಶ್ ಹೆಗ್ಡೆ ಪೊಳಲಿ ಬರೆದ ‘ಪೊಳಲಿ ಇತಿಹಾಸ ಸಂಸ್ಕ್ರತಿ ಪರಂಪರೆ’ ಎಂಬ ಪುಸ್ತಕವನ್ನು ಅತಿಥಿ ಗಣ್ಯರು ಬಿಡುಗಡೆಗೊಳಿಸಿದರು. ಮಹೇಶ್ ಹೆಗ್ಡೆಯವರನ್ನು ಗೌರವಿಸಲಾಯಿತು. ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಗಣ್ಯರನ್ನು ಅಸೋಸಿಯೇಷನ್ ವತಿಯಿಂದ ಗೌರವಿಸಲಾಯಿತು. ಬಂಟ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಕ್ರೀಡಾ ಕೂಟದಲ್ಲಿ ವಿಜೇತ ತಂಡಗಳಿಗೆ ಅತಿಥಿ ಗಣ್ಯರು ಟ್ರೋಫಿ ನೀಡಿ ಗೌರವಿಸಿದರು. ಅತಿಥಿ ಗಣ್ಯರು ಸಾಂದರ್ಭಿಕವಾಗಿ ಮಾತನಾಡಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಬಂಟ್ಸ್ ಅಸೋಸಿಯೇಷನ್ ನ ಸದಸ್ಯರು, ಮಹಿಳಾ ವಿಭಾಗ ಮತ್ತು ಯುವ ವಿಭಾಗದವರಿಂದ ವೈವಿದ್ಯಮಯ ನೃತ್ಯ ಕಾರ್ಯಕ್ರಮ ಮತ್ತು ಸಾಯಿಶಕ್ತಿ ಬಳಗ ಉರ್ವ ಮಂಗಳೂರು ಲಾವಣ್ಯ ವಿಶ್ವಾಸ್ ದಾಸ್ ಸಾರಥ್ಯ ಮತ್ತು ನಿರ್ದೇಶನದ ಅದ್ದೂರಿ ತುಳು ಸಿನಿ ನಾಟಕ ಜೋಡು ಜೀಟಿಗೆ ಪ್ರದರ್ಶನಗೊಂಡಿತು. ಅಕ್ಷತಾ ಸುಜಿತ್ ಶೆಟ್ಟಿ ಮತ್ತು ತಾರಾನಾಥ್ ಶೆಟ್ಟಿ ಮಡಂತ್ಯಾರ್ ರವರು ಕಾರ್ಯಕ್ರಮ ನಿರೂಪಿಸಿ, ಸಾಂಸ್ಕ್ರತಿಕ ಮಹಿಳಾ ಕಾರ್ಯಾಧ್ಯಕ್ಷೆ ಶಾಲಿನಿ ಎಂ ಶೆಟ್ಟಿ ಧನ್ಯವಾದಗೈದರು. ಅಸೋಸಿಯೇಷನ್ ನ ಸಮಿತಿಯ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಎಲ್ಲಾ ಸಮಿತಿ ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಚಿತ್ರ, ವರದಿ : ಹರೀಶ್ ಮೂಡಬಿದ್ರಿ, ಪುಣೆ





















































































































