
ಕಳೆದ 28 ವರ್ಷಗಳ ಹಿಂದೆ ಅಂದೇರಿ ಪರಿಸರದ ಸಮಾನ ಮನಸ್ಕ ಬಂಟರು ದೂರದರ್ಶಿತ್ವದ ಯೋಚನೆ, ಯೋಜನೆಗಳೊಂದಿಗೆ ಸ್ಥಾಪಿಸಿದಂತಹ ಜವಾಬ್ ಸಂಸ್ಥೆಯನ್ನು ಇಷ್ಟರವರೆಗೆ ನಡೆಸಿಕೊಂಡು ಬಂದವರೆಲ್ಲರೂ ಸದಾ ಪ್ರಾತಸ್ಮರಣೀಯರು. ಜವಾಬ್ ನಮಗೆ ಒಂದು ಕುಟುಂಬ ಇದ್ದಂತೆ. ಕುಟುಂಬ ಬಾಂಧವರ ಪ್ರೀತಿ, ವಿಶ್ವಾಸ, ಕಾರ್ಯಕ್ಷಮತೆಯೊಂದಿಗೆ ಜವಾಬ್ ಎತ್ತರಕ್ಕೆ ಬೆಳೆಯುತ್ತಿದೆ ಎಂದರೆ ತಪ್ಪಾಗದು. ಇದಕ್ಕಾಗಿ ಸಮಾಜ ಬಾಂಧವರೆಲ್ಲರಿಗೂ ಅಭಿನಂದನೆಗಳು. ಕೊಡುಗೈ ದಾನಿಗಳೇ ಜವಾಬ್ ನ ಅಡಿಪಾಯ. ಜವಾಬ್ ನ ಸ್ಥಿರತೆಗೆ ಹಮ್ಮಿಕೊಂಡ ಯೋಜನೆಗೆ ಎಲ್ಲರ ಸಹಕಾರ ಇರಲಿ ಎಂದು ಜವಾಬ್ ನ ಅಧ್ಯಕ್ಷ ತಾಳಿಪಾಡಿ ಗುತ್ತು ವಿಶ್ವನಾಥ್ ಶೆಟ್ಟಿ ಅವರು ಅಭಿಪ್ರಾಯಪಟ್ಟರು. ಫೆಬ್ರವರಿ 28ರಂದು ಅಂಧೇರಿ ಪಶ್ಚಿಮ ಸಮರ್ಥನಗರ್ ಲೋಖಂಡವಾಲ ಕಾಂಪ್ಲೆಕ್ಸ್ ರೆಸಿಡೆಂಟ್ಸ್ ಅಸೋಸಿಯೇಷನ್ ಗ್ರೌಂಡ್ ನಲ್ಲಿ ಜರಗಿದ ಜವಾಬ್ ನ 28 ನೇಯ ವಾರ್ಷಿಕ ಸ್ನೇಹ ಸಮ್ಮಿಲನದ ಸಭಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಹಾಗೂ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನ ಮಾಜಿ ಕಾರ್ಯದರ್ಶಿ, ಉದ್ಯಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಪಿ.ವಿ ಶೆಟ್ಟಿ, ಶ್ವೇತ ಜ್ಯೋತಿ ಪ್ರಕಾಶ್ ಹೆಗ್ಡೆ, ಉದ್ಯಮಿ ವಿಜಯ ಎನ್ ಶೆಟ್ಟಿ ಮತ್ತು ಡಾ. ಶ್ರಾವ್ಯ ಗೌರವ್ ಶೆಟ್ಟಿ ಅವರನ್ನು ಜವಾಬ್ ನ ಪದಾಧಿಕಾರಿಗಳು ಸನ್ಮಾನಿಸಿದರು.

ಸನ್ಮಾನಕ್ಕೆ ಉತ್ತರವಾಗಿ ಡಾ. ಪಿ.ವಿ ಶೆಟ್ಟಿ ಅವರು ಮಾತನಾಡಿ, ನಾನು ಮಾಡಿದ ಜನ ಉಪಯೋಗಿ ಕಾರ್ಯಗಳಿಗಾಗಿ ನನಗೆ ಕರ್ನಾಟಕ ಸರಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿತ್ತು. ಜವಾಬ್ ನನ್ನನ್ನು ಗುರುತಿಸಿ ಈ ಸನ್ಮಾನವನ್ನು ನೀಡಿದಕ್ಕಾಗಿ ನಾನು ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು. ಸನ್ಮಾನ ಸ್ವೀಕರಿಸಿದ ಶ್ವೇತಾ ಶೆಟ್ಟಿ ಅವರು ಮಾತನಾಡಿ, ಜವಾಬ್ ನಮಗೆಲ್ಲರಿಗೂ ಒಂದು ಕುಟುಂಬದಂತೆ. ನಮ್ಮವರು ನೀಡಿದ ಸನ್ಮಾನ ಬಹಳ ಖುಷಿ ನೀಡಿದೆ. ಜವಾಬ್ ನೊಂದಿಗೆ ನಾನು ಸದಾ ಇರುತ್ತೇನೆ ಎಂದರು. ಪ್ರತೀ ವರ್ಷದಂತೆ ಆರಂಭದಲ್ಲಿ ಜವಾಬ್ ನ ಪದಾಧಿಕಾರಿಗಳ ಕೂಡುವಿಕೆಯಲ್ಲಿ ಬಂಡಾರ ಇಳಿಯಿತು. ಜವಾಬ್ ಸಂಸ್ಥೆಯ ಹಿರಿಯರಾದ ಶಂಕರ್ ಶೆಟ್ಟಿ ಅವರು ನುಡಿ ಮಾತು ಹೇಳಿದರು. ಅತಿಥಿ ಗಣ್ಯರು ಹಾಗೂ ಪದಾಧಿಕಾರಿಗಳು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೀತಶ್ರೀ ಮತ್ತು ಪ್ರಮೀಳಾ ದಿವಾಕರ್ ಶೆಟ್ಟಿ ಪ್ರಾರ್ಥನೆ ಹಾಡಿದರು. ಜವಾಬ್ ನ ಉಪಾಧ್ಯಕ್ಷ ಅಡ್ವಕೇಟ್ ಗುಣಾಕರ ಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಶೈಲೇಶ್ ಶೆಟ್ಟಿ ವಾರ್ಷಿಕ ಚಟುವಟಿಕೆಗಳನ್ನು ತಿಳಿಸಿದರು. ರೇಖಾ ಗುಣಕರ ಶೆಟ್ಟಿ ಮಹಿಳಾ ವಿಭಾಗದ ಕಾರ್ಯ ವೈಖರಿಯನ್ನು ಪ್ರಸ್ತುತಪಡಿಸಿದರು. ಯುವ ವಿಭಾಗದ ಸಾಗರ್ ಶೆಟ್ಟಿ ಯುವ ವಿಭಾಗದ ಚಟುವಟಿಕೆಗಳನ್ನು ವಿವರಿಸಿದರು. ವೇದಿಕೆಯಲ್ಲಿ ಜೊತೆ ಕಾರ್ಯದರ್ಶಿ ವಿಕಾಸ್ ಬಿ ಶೆಟ್ಟಿ, ಜೊತೆ ಕೋಶಾಧಿಕಾರಿ ಯೋಗೇಶ್ ಹೆಚ್ ಶೆಟ್ಟಿ ಉಪಸ್ಥಿತರಿದ್ದರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಹಾಗೂ ಅತಿಥಿ ಗಣ್ಯರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಾಧ್ಯಕ್ಷೆ ರೇಣುಕಾ ಕೆ ಶೆಟ್ಟಿ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಘಟಕ, ನಾಟಕಕಾರ ನಂದಳಿಕೆ ನಾರಾಯಣ ಶೆಟ್ಟಿ ಅವರು ಬರೆದ ‘ಮದ್ಮೆದ ಕಾಕಜಿ’ ಎಂಬ ತುಳು ಸಾಮಾಜಿಕ ನಾಟಕ ಸಾಧರಗೊಂಡು ಸಭಿಕರ ಪ್ರಶಂಸೆಗೆ ಪಾತ್ರವಾಯಿತು. ಇದರೊಂದಿಗೆ ಹುಲಿವೇಷ, ಯಕ್ಷಗಾನ ಕುಣಿತ, ನೃತ್ಯ ವೈವಿಧ್ಯ ಕಾರ್ಯಕ್ರಮಗಳು ಜರಗಿದವು. ಕಾರ್ಯಕ್ರಮವನ್ನು ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ಉಪಾಧ್ಯಕ್ಷೆ ಕವಿತಾ ಐ.ಆರ್ ಶೆಟ್ಟಿ ಅವರು ಸವಿಸ್ತಾರವಾಗಿ ನಿರೂಪಿಸಿದರು. ಗೌರವ ಕೋಶಾಧಿಕಾರಿ ಸಂದೇಶ್ ಶೆಟ್ಟಿ ಧನ್ಯವಾದಗೈದರು. ಕೊನೆಯಲ್ಲಿ ಔತಣ ಕೂಟ ನಡೆಯಿತು.
ವರದಿ : ಗುರುದತ್ ಪೂಂಜಾ ಮುಂಡ್ಕೂರು





















































































































