
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ವರ್ಷಾವಧಿ ಮಹೋತ್ಸವವು ಫೆಬ್ರವರಿ 13 ರಂದು ಧ್ವಜಾರೋಹಣಗೊಂಡು, ಫೆಬ್ರವರಿ 18 ರಂದು ಬ್ರಹ್ಮರಥೋತ್ಸವವು ಊರ ಪರ ಊರ ಭಕ್ತರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರಗಲಿದೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಫೆಬ್ರವರಿ 5 ಗುರುವಾರ ಉತ್ಸವ ಬಲಿ ಆರಂಭಗೊಂಡು ಫೆಬ್ರವರಿ 10 ಮಂಗಳವಾರ ಶ್ರೀ ಮಹಾಗಣಪತಿ ಪ್ರತಿಷ್ಠ ವರ್ಧಂತಿ, ಅಥರ್ವ ಶಿರ್ಷಗಣಯಾಗ, ನವಕ ಪ್ರಧಾನ, ಕಳಶಾಭಿಷೇಕ ಜರಗಲಿದೆ. ಫೆಬ್ರವರಿ 11 ಬುಧವಾರ ಬ್ರಹ್ಮಕಲಶ ವರ್ಧಂತಿ, ಮಹಾಚಂಡಿಕಾಯಾಗ, ಪಂಚ ವಿoಶತಿ ಕಲಶಾಭಿಷೇಕ, ರಾತ್ರಿ ಉತ್ಸವ ಬಲಿ ನಡೆಯಲಿದೆ. ಫೆಬ್ರವರಿ 13 ಶುಕ್ರವಾರ ಬೆಳಿಗ್ಗೆ ಅಂಕುರಾರ್ಪಣ ಪೂರ್ವಾಹ್ನ ಗಂಟೆ 11ಕ್ಕೆ ಧ್ವಜಾರೋಹಣಗೊಂಡು ಮಹಾಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ಜರಗುವುದಲ್ಲದೇ ರಾತ್ರಿ ಉತ್ಸವ ದರ್ಶನ ಬಲಿ ಜರಗುವುದು. ಫೆಬ್ರವರಿ 14 ಶನಿವಾರ ಬೆಳಗಿನ ಜಾವ ದೀಪಾರಾಧನಾ ಬಲಿ, ಬೆಳಿಗ್ಗೆ ನವಕ ಪ್ರಧಾನ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ರಾತ್ರಿ ರಜತ ಪಾಲಕಿ ಉತ್ಸವ ನಡೆದು, ಉತ್ಸವ ದರ್ಶನ ಬಲಿ ಜರಗುವುದು. ಫೆಬ್ರವರಿ 15 ರವಿವಾರ ಬೆಳಿಗ್ಗೆ ನವಕ ಪ್ರಧಾನ ಮಧ್ಯಾಹ್ನ 12ಕ್ಕೆ ಮಹಾಪೂಜೆ ರಾತ್ರಿ ಉತ್ಸವ ದರ್ಶನ ಬಲಿ ಚಂದ್ರಮಂಡಲೋತ್ಸವ ಜರಗುವುದು. ಫೆಬ್ರವರಿ 16 ಸೋಮವಾರ ಸಾಯಂಕಾಲ ಶ್ರೀದೇವರ ತೆಂಕುಪೇಟೆ ಸವಾರಿ, ಕಟ್ಟೆ ಪೂಜೆ, ರಾತ್ರಿ ಉತ್ಸವ ದರ್ಶನ ಬಲಿ ಜರಗುವುದು. ಫೆಬ್ರವರಿ 17 ಮಂಗಳವಾರ ಬೆಳಿಗ್ಗೆ ನವಗ್ರಹ ಯಾಗ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಾಯಂಕಾಲ ಬೇರಿತಾಡನ, ಸಂಜೆ ಶ್ರೀದೇವರ ಬಡಗುಪೇಟೆ ಸವಾರಿ, ಕಟ್ಟೆ ಪೂಜೆ, ದೇವಸ್ಥಾನದ ಹಿಂದುಗಡೆಯ ಕೆರೆ ದೀಪೋತ್ಸವ, ರಾತ್ರಿ ಉತ್ಸವ ದರ್ಶನ ಬಲಿ ಜರಗುವುದು. ಫೆಬ್ರವರಿ 18 ಬುಧವಾರ ಪೂರ್ವಾಹ್ನ ಗಂಟೆ 11ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 12ಕ್ಕೆ ದೇವಳದ ಮುಂಭಾಗ ದೇವರ ಬಲಿದರ್ಶನ ನಡೆದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ರಥಾರೋಹಣ ನಡೆಯುವುದು. ಗಂಟೆ 1 ರಿಂದ ಮಹಾ ಅನ್ನ ಸಂತರ್ಪಣೆ ಜರಗುವುದು. ರಾತ್ರಿ 7:30 ರಿಂದ ಬ್ರಹ್ಮರಥದಲ್ಲಿ ಅಸಂಖ್ಯಾತ ಹೂವಿನ ಪೂಜೆಗಳು ಜರಗಿ ರಾತ್ರಿ 11 ರಿಂದ ಬ್ರಹ್ಮರಥೋತ್ಸವ ಆರಂಭಗೊಂಡು ದೇವಳಕ್ಕೆ ಒಂದು ಸುತ್ತು ಪ್ರದಕ್ಷಿಣೆ ಬಂದು ಪಟಾಕಿ ಸುಡು ಮದ್ದುಗಳನ್ನು ಸುಡಲಾಗುವುದು. ತದನಂತರ ಬಲಿ ದರ್ಶನ ನಡೆದು ಶ್ರೀ ಭೂತಬಲಿ, ಕವಾಟ ಬಂಧನ ನಡೆಯುವುದು, ಫೆಬ್ರವರಿ 19 ಗುರುವಾರ ಬೆಳಿಗ್ಗೆ ಸೂರ್ಯೋದಯಕ್ಕೆ ಕವಾಟ ಉದ್ಘಾಟನೆ, ಚೂರ್ಣೋತ್ಸವ, ತುಲಾಭಾರ ಸೇವೆ, ರಾತ್ರಿ ಜಳಕ, ಅವಬ್ರತ, ಧ್ವಜ ಅವರೋಹಣ ನಡೆದು ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಜರಗುವುದು. ಫೆಬ್ರವರಿ 20 ಶುಕ್ರವಾರ ಮಹಾ ಸಂಪ್ರೋಕ್ಷಣೆ ಜರಗಿ ಪ್ರಸಾದ ವಿತರಣೆ ನಡೆಯುವುದು. ಶ್ರೀ ಕ್ಷೇತ್ರದಲ್ಲಿ ಧ್ವಜಾರೋಹಣಗೊಂಡ ನಂತರ ಧ್ವಜ ಅವರೋಹಣದ ತನಕ ಪ್ರತಿದಿನ ಸಭಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಜನೆ, ಕುಣಿತ ಭಜನೆ, ನಾಟಕ, ಆರ್ಕೆಸ್ಟ್ರ, ಯಕ್ಷಗಾನ, ಭರತನಾಟ್ಯ ಹಾಗೂ ವಿವಿಧ ನೃತ್ಯವೈವಿಧ್ಯ ಕಾರ್ಯಕ್ರಮಗಳು ದಿನಂಪ್ರತಿ ಜರಗುವುದು. ಇದಲ್ಲದೇ ಚೆಂಡು ತುಳಿತ ಪ್ರತಿದಿನ ನಡೆಯುವುದು. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಜರಗುವ ಮಹೋತ್ಸವಕ್ಕೆ ಊರ ಪರವೂರ ಭಕ್ತಾದಿಗಳೆಲ್ಲರೂ ಆಗಮಿಸಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಿ, ಶ್ರೀದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಸದಸ್ಯರು, ಕಾರ್ಯನಿರ್ವಹಣಾಧಿಕಾರಿ, ಪವಿತ್ರಪಾಣಿ, ಅರ್ಚಕ ವೃಂದ, ಹಾಗೂ ಇನ್ನ, ಮುಂಡ್ಕೂರು, ಮುಲ್ಲಡ್ಕ ಗ್ರಾಮಸ್ಥರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹೂವಿನ ಪೂಜೆ, ಅನ್ನದಾನ ಸೇವೆ, ಅಥವಾ ಇತರ ಸೇವೆಗಳನ್ನು ಮಾಡಲಿಚ್ಛಿಸುವವರು ದೇವಸ್ಥಾನದ ಮೊಬೈಲ್ ಕ್ರಮಾಂಕ 9731399121 ರಲ್ಲಿ ಸಂಪರ್ಕಿಸಿ, ಕೆನರಾ ಬ್ಯಾಂಕ್ ಮುಂಡ್ಕೂರು ಶಾಖೆಯಲ್ಲಿ ಖಾತೆ ನಂಬರ್ 01462200004946 ಐ.ಎಫ್.ಸಿ ಕೋಡ್ CNRB0010146 ರಲ್ಲಿ ಧನ ರಾಶಿ ಜಮೆ ಮಾಡಿ ತಮ್ಮ ಸೇವೆಗಳನ್ನು ನೀಡಬಹುದಾಗಿದೆ.


ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಐತಿಹ್ಯ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಟೀಲು ಕಿನ್ನಿಗೋಳಿ ಕಡೆಯಿಂದ ಬರುವವರು ಮೂರು ಕಾವೇರಿ ಎಂಬಲ್ಲಿ ಒಳಗೆ ಬರುವ ಮಾರ್ಗದಲ್ಲಿ ಬಂದರೆ ಧಾಮಸ್ ಕಟ್ಟೆ ಸಂಕಲ ಕರಿಯ ಜಾರಿಗೆಕಟ್ಟೆಯಾಗಿ ಮುಂಡ್ಕೂರಿಗೆ ಬರಬಹುದು. ಹಾಗೆ ಪಡುಬಿದ್ರಿ ಬೆಳ್ಮಣ್ಣು ಕಡೆಯಿಂದ ಬರುವವರು ಬೆಳ್ಮಣ್ಣು ಚರ್ಚಿನ ಹತ್ತಿರ ಮುಂಡ್ಕೂರಿಗೆ ಹೋಗುವ ಮಾರ್ಗದಲ್ಲಿ ಶ್ರೀ ದುರ್ಗಾಪರಮೇಶ್ವರಿ ದ್ವಾರವಿದೆ. ಅಲ್ಲಿಂದ ಒಳಗೆ ಬಂದರೆ ಮುಂಡ್ಕೂರು ತಲುಪಬಹುದು. ತುಳುನಾಡು ಕಾರ್ಕಳ ತಾಲೂಕಿನ ಬೆಟ್ಟ ಗುಡ್ಡಗಳ ನಡುವೆ ಪ್ರಶಾಂತವಾಗಿ ಪವಡಿಸಿದ ನಾಡು ಮುಂಡ್ಕೂರು. ಸುತ್ತಲೂ ಗಂಭೀರವಾದ ಬೆಟ್ಟ ಗುಡ್ಡಗಳು, ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣುವ ಬತ್ತದ ಪಚ್ಚೆ ಪೈರಿನ ಗದ್ದೆಗಳು, ಅದರ ನಡುವೆ ಬಳುಕುತ್ತಾ ಮೆಲ್ಲಡಿಯಿಡುತ್ತಾ ಉಲ್ಲಾಸದಿಂದ ಸಾಗುವ ಪುಣ್ಯನದಿ ಶಾಂಭವಿ. ಇದರ ತಟದಲ್ಲಿ ಮುನಿ ಪುಂಗವ ಭಾರ್ಗವ ಮಹರ್ಷಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಮಹಿಷಮರ್ದಿನಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದಿವ್ಯ ದೇಗುಲ. ಸಾಲಾಗಿ ನಿಂತ ತೆಂಗಿನ ಮರಗಳು ದುರ್ಗೆಗೆ ಚಾಮರ ಬೀಸುತ್ತಿದೆಯೋ ಎಂದು ಬಾಸವಾಗುತ್ತದೆ. ಫಲಭರಿತ ಹಣ್ಣುಗಳನ್ನು ಹೊತ್ತ ಮರಗಳನ್ನು ನೋಡುವಾಗ ಪರ್ವತರಾಜನು ಹಣ್ಣು ಹಂಪಲುಗಳೊಂದಿಗೆ ದುರ್ಗೆಯ ದರ್ಶನಕ್ಕೆ ಕಾದಿಹನೇ ಎಂದೆನಿಸುತ್ತದೆ. ಸುಮಾರು1200 ವರ್ಷಗಳ ಹಿಂದೆ ಇಲ್ಲಿ ಇಂದ್ರಾದಿ ದೇವತೆಗಳಿಗೆ ಕಷ್ಟ ಕಾರ್ಪಣ್ಯಗಳನ್ನು ನೀಡುತ್ತಿದ್ದ ರಾಕ್ಷಸ ಮುಂಡಾಸುರನನ್ನು ವಧಿಸಲು ಇಂದ್ರಾದಿ ದೇವತೆಗಳು ಶ್ರೀ ದುರ್ಗೆಗೆ ಮೊರೆ ಹೋಗುತ್ತಾರೆ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿ, ನಂಬಿದವರಿಗೆ ಇಂಬು ನೀಡಲು ದುರ್ಗೆಯು ಕಾಳಿಯ ರೂಪತಾಳಿ ಮುಂಡಾಸುರನನ್ನು ವಧಿಸಿ ರುಂಡವನ್ನು ಚಂಡಾಡುತ್ತಾಳೆ. ಮುಂಡಾಸುರನನ್ನು ವಧಿಸಿದ ಈ ನಾಡು ಮುಂಡಕೂರು ಎಂದು ಕ್ರಮೇಣ ಮುಂಡ್ಕೂರು ಎಂದು ಹೆಸರಾಯಿತು. ದುರ್ಗೆಯ ವಾಣಿಯಂತೆ ಆದಿ ಕಾಲದಲ್ಲಿ ಅಷ್ಟಕುಲ ಬ್ರಾಹ್ಮಣರ ಓಕ್ಕೊರಲ ಪ್ರಾರ್ಥನೆಯನ್ನು ಮನ್ನಿಸಿ ಭಾರ್ಗವ ಮಹರ್ಷಿಗಳು ಮುಂಡಕೂರಿನಲ್ಲಿ ಶ್ರೀ ದುರ್ಗಾಪರಮೇಶ್ವರಿಯನ್ನು ಪ್ರತಿಷ್ಠಾಪಿಸಿದರು ಎಂಬುದು ಐತಿಹ್ಯ. ತುಳುನಾಡಿನ ದೈವ ಮತ್ತು ದೇವರುಗಳ ಗಂಧ ಪ್ರಸಾದವನ್ನು ಹೊರ ಊರುಗಳಿಗೆ ಕೊಂಡೋಗಿ ಉದ್ಯೋಗ ವ್ಯಾಪಾರ ವ್ಯವಹಾರ ಮಾಡಿದವರು ಪ್ರಗತಿಯನ್ನು ಸಾಧಿಸಿದ್ದಾರೆ ಎಂಬುವುದು ನಮ್ಮವರ ಅನುಭವದ ಮಾತು ಇದೆ. ಇಲ್ಲಿನ ದೇವರ ಮಹಿಮೆ ಅಪಾರವಿದೆ ಎಂಬಂತೆ ಇತಿಹಾಸಕಾರರಿoದ ತಿಳಿದುಬಂದಂತೆ ದೇವಸ್ಥಾನದ ಪಶ್ಚಿಮ ಭಾಗದ ಶಾಂಭವಿ ನದಿಯ ಆಚೆಯ ಕಡೆಯ ಗುಡ್ಡೆಸಾನ ಎಂಬಲ್ಲಿಯ ಕಾಂತಬಾರೆ- ಬೂದಬಾರೆ ಎಂಬ ಶ್ರೀ ದುರ್ಗೆಯ ಅನನ್ಯ ಭಕ್ತರಿಬ್ಬರು ಪ್ರತಿದಿನ ನದಿಯನ್ನು ದಾಟಿ ಶ್ರೀ ದುರ್ಗೆಯ ದರ್ಶನವನ್ನು ಮಾಡಿಕೊಂಡು ಹೋಗುತ್ತಿದ್ದರು. ಒಂದು ದಿನ ಮುಂಡಕೂರಿನ ಕುತಂತ್ರಿ ರಾಜನು ಬಾರೆಯರಿಗೆ ಈ ಕಡೆ ಬರಲು ದೋಣಿ ಬಿಡಬಾರದು ಎಂದು ಅಂಬಿಗನಿಗೆ ಆಜ್ಞೆ ಹೊರಡಿಸುತ್ತಾನೆ. ಪ್ರತಿ ದಿನದಂತೆ ದೇವಿಯ ದರ್ಶನಕ್ಕಾಗಿ ನದಿ ದಾಟಲು ದೋಣಿ ಇಲ್ಲದಾಗ ಬಾರೆಯರು ನಿಂತಲ್ಲಿಂದಲೇ ದೇವಿಯನ್ನು ನೆನೆಸಿ ತಮಗೆ ದರ್ಶನ ನೀಡಬೇಕೆಂದು ಪ್ರಾರ್ಥಿಸುತ್ತಾರೆ. ಆಶ್ಚರ್ಯವೆಂದರೆ ನೀರು ಇಬ್ಬಾಗವಾಗಿ ಕಾಂತಾಬಾರೆ ಬೂದಬಾರೆಯರು ನಡೆದುಕೊಂಡು ಬಂದು ದೇವರ ದರ್ಶನ ಮಾಡುತ್ತಾರೆ. ಇದೇ ಕಾಂತಬಾರೆ ಬೂದಬಾರೆಯರಿಗೆ ರಾಜನು ಕಬ್ಬಿನ ಬೃಹತ್ ಕಟ್ಟನ್ನು ಒಂದೇ ಪೆಟ್ಟಿನಿಂದ ತುಂಡರಿಸಬೇಕೆಂದು ಪಣಯಿಡುತ್ತಾನೆ. ಕುತಂತ್ರದಿಂದ ಅದರ ಒಳಗೆ ಕಬ್ಬಿಣದ ಸರಳನ್ನು ಇಟ್ಟು ಇದನ್ನು ಕಡಿದು ತೋರಿಸಬೇಕು ತೋರಿಸಿದರೆ ನಿಮಗೆ ಒಬ್ಬನ್ ತೋಟ ಎಂಬ ತೆಂಗಿನ ತೋಟವನ್ನು ಬಿಡುತ್ತೇನೆ ಎಂದಾಗ ಬಾರೆಯರು ದೇವಿಯನ್ನು ಮನಸ್ಸಾರೆ ಸುತ್ತಿಸಿ ಒಂದೇ ಪೆಟ್ಟಿನಿಂದ ಎರಡು ತುಂಡು ಮಾಡುತ್ತಾರೆ. ಆದರೆ ಹೇಳಿದ ಮಾತಿನಂತೆ ವೀರವರ್ಮ ಬಳ್ಳಾಳ ರಾಜನು ತೆಂಗಿನ ತೋಟ ಒಬ್ಬನ್ ತೋಟವನ್ನು ಕೊಡುವುದಿಲ್ಲ. ಆಗ ಬಾರೆಯರು ಒಬ್ಬನ್ ತೋಟಕ್ಕೆ ಹೋಗಿ ಅಲ್ಲಿ ಬಾವಿ ತೆಗೆದು ನೀರು ಕುಡಿದು ಒಬ್ಬನ್ ತೋಟವನ್ನು ವಶಕ್ಕೆ ತೆಗೆದುಕೊಂಡು ದೇವರಿಗೆ ನಂದಾದೀಪ ಹಾಕುವ ಸಲುವಾಗಿ ದೇವಸ್ಥಾನಕ್ಕೆ ಉಂಬಳಿಯಾಗಿ ನೀಡಿದ ಉಲ್ಲೇಖವಿದೆ. ಪುರಾಣೋಕ್ತಿಯ ದ್ಯೋತಕವಾಗಿ ಈಗಲೂ ಶ್ರೀ ದುರ್ಗಾಂಬಿಕೆಗೆ ಮಲ್ಲಿಕಾ (ಮಲ್ಲಿಗೆ) ಸುಮವೆಂದರೆ ತುಂಬಾ ಪ್ರೀತಿ. ಮದುವೆ ದಿಬ್ಬಣಗಳು ದೇವಳದ ಮುಂದೆ ಸಾಗುತ್ತಿದ್ದರೆ ಸ್ವಲ್ಪ ತಡೆದು ದೇವಿಯ ದರ್ಶನ ಮಾಡಿ ಮುಂದುವರಿಯೋದು ಪುರಾತನದಿಂದ ನಡೆದು ಬಂದ ಸಂಪ್ರದಾಯ. ದಿಬ್ಬಣದ ನಾರಿಯರು ಹೂ ಮುಡಿದುಕೊಂಡು ಹೋಗುವಾಗ ದೇವರಿಗೂ ಸ್ವಲ್ಪ ಹೂವನ್ನು ಸಲ್ಲಿಸಬೇಕು. ಹಿಂದೊಮ್ಮೆ ಅಲ್ಲಿಂದ ಸಾಗುತ್ತಿದ್ದ ದಿಬ್ಬಣಿಗರು ಅದನ್ನು ಮರೆತು ತಾವೇ ಮುಡಿದುಕೊಂಡು ದೇವಿಯ ದರ್ಶನ ಪಡೆಯದೆ ಮುಂದುವರಿದಾಗ ತಕ್ಷಣವೇ ಮದುಮಗಳು ಮೂರ್ಚೆಯಾಗಿ ಬಿದ್ದು ಬಿಟ್ಟಳಂತೆ. ಕಾರಣವರಿಯದೆ ಉಳಿದವರು ಮರುಗುತ್ತಿರಲು ಹಿರಿಯರೊಬ್ಬರು ಕಾರಣವನ್ನು ಊಹಿಸಿ ಕೂಡಲೇ ಎರಡು ಚೆಂಡು ಮಲ್ಲಿಗೆ ಶ್ರೀದೇವಿಗೆ ಅರ್ಪಿಸಿ ತಮ್ಮ ತಪ್ಪನ್ನು ಒಪ್ಪಿದಾಗ ಯಥಾಸ್ಥಿತಿ ಉಂಟಾಯಿತಂತೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ ಪ್ರತಿ ವರ್ಷವೂ ರಥೋತ್ಸವದ ಮರುದಿನ ಶಾಂಭವಿ ನದಿಯಲ್ಲಿ ದೇವಿಯ ಜಳಕವಾಗುತ್ತದೆ. ದೇವಿಯ ಸ್ನಾನ ಮುಗಿಯುವವರೆಗೂ ಆ ಪ್ರದೇಶದಲ್ಲಿ ಸಾಕಷ್ಟು ನೀರು ಇದ್ದು ಮರುದಿನ ನಾವು ನೋಡುತ್ತಿದ್ದಂತೆ ನೀರು ಕಡಿಮೆಯಾಗುವುದನ್ನು ಕಾಣಬಹುದು. ತನ್ನ ಅವಬ್ರತಕ್ಕಾಗಿ ನೀರನ್ನು ಉಳಿಸುವಂತೆ ಶಾಂಭವಿಗೆ ದೇವಿಯು ಆಜ್ಞೆ ಇತ್ತಂತೆ ಎಂದು ಹಿಂದಿನ ಹಿರಿಯರು ಹೇಳುತ್ತಾರೆ. ಹೀಗೆ ದೇವರ ಅನೇಕ ಕಾರಣಿಕದ ಘಟನೆಗಳು ಈಗಲೂ ಪುನರಾವರ್ತನೆಯಾಗುತ್ತಿದೆ. ಆದ್ದರಿಂದ ಎಲ್ಲರೂ ಮುಂಡ್ಕೂರು ಶ್ರೀ ದುರ್ಗಾ ಕ್ಷೇತ್ರಕ್ಕೆ ಕ್ಷೇತ್ರಕ್ಕೆ ಬರಲೇಬೇಕು. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮ ದೇವರು ಎಲ್ಲರಿಗೂ ಆಯುರಾರೋಗ್ಯ, ಸುಖ, ಸಂಪತ್ತು, ಸಕಲೈಶ್ವರ್ಯವನ್ನು ನೀಡಲಿ ಎಂಬುದೇ ನಮ್ಮ ಹಾರೈಕೆಗಳು.
ಲೇಖನ : ಗುರುದತ್ ಪೂಂಜಾ ಮುಂಡ್ಕೂರು





















































































































