
ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಸಹಕಾರದಲ್ಲಿ ಸ್ಥಾಪಿಸಲಾದ ಐಡಿಯಾ ಲ್ಯಾಬ್ನ ಉದ್ಘಾಟನಾ ಸಮಾರಂಭ ಮಿಜಾರಿನ ಕಾಲೇಜಿನ ಕ್ಯಾಂಪಸನಲ್ಲಿ ನಡೆಯಿತು. ಬಿಟಾ ಸಿಎಇ ಸಿಸ್ಟಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಮಾರಾಟ ವಿಭಾಗದ ನಿರ್ದೇಶಕ ಸ್ಟಾವ್ರೋಸ್ ಕ್ಲೈಡಾರಿಯಾಸ್ ಲ್ಯಾಬ್ನ್ನು ಉದ್ಘಾಟಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಉಪಸ್ಥಿತರಿದ್ದರು. ಐಡಿಯಾ ಲ್ಯಾಬ್ ಎಐಸಿಟಿಇಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇಂಜಿನಿಯರಿಂಗ್ ಶಿಕ್ಷಣವನ್ನು ಅನುಭವಾತ್ಮಕ ಶಿಕ್ಷಣ ಸಂಸ್ಕೃತಿಗೆ ಉತ್ತೇಜಿಸುವ ಕಾರ್ಯಕ್ರಮವಾಗಿದೆ. ಆಳ್ವಾಸ್ನಲ್ಲಿ ನಿರ್ಮಾಣಗೊಂಡಿರುವ ಲ್ಯಾಬ್ ಮೂಲಕ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ವಾಸ್ತವ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಪ್ರಯೋಗ, ವಿನ್ಯಾಸ ಮತ್ತು ಮಾದರಿ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಅಗತ್ಯವಾದ ಕೇಂದ್ರಿತ ಸೌಲಭ್ಯವನ್ನು ಇದು ಒದಗಿಸಲಿದೆ. ಈ ಲ್ಯಾಬ್ನ ಮೂಲಕ ವಿದ್ಯಾರ್ಥಿಗಳು ಪಠ್ಯಪುಸ್ತಕಗಳಾಚೆ, ಪ್ರೋಟೋಟೈಪ್ ನಿರ್ಮಾಣದ ಮೂಲಕ ನವೀನ ತಂತ್ರಜ್ಞಾನ ಅನುಭವ ಪಡೆಯಲು, ವಿಮರ್ಶಾತ್ಮಕ ಚಿಂತನೆ, ಸಹಕಾರ ಹಾಗೂ ಸಮಸ್ಯ ಪರಿಹಾರದ ಕೌಶಲ್ಯಗಳನ್ನು ಬೆಳೆಸುವುದು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಭವಾತ್ಮಕ ಹಾಗೂ ಬಹುವಿದ್ಯಾ ಕಲಿಕೆಗೆ ಬೆಂಬಲ ನೀಡುವುದಾಗಿದೆ. ಇದರಿಂದ ಉದ್ಯೋಗಸಿದ್ಧ ಪದವೀಧರರನ್ನು ರೂಪಿಸಲು ಸಹಕಾರಿಯಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಸಜ್ಜಿತ ಲ್ಯಾಬ್ ಆಳ್ವಾಸ್ ಐಡಿಯಾ ಲ್ಯಾಬ್ನಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳ ವ್ಯವಸ್ಥೆ ಮಾಡಲಾಗಿದೆ. ಸಿಒ2 ಲೇಸರ್ ಕಟಿಂಗ್ ಯಂತ್ರವನ್ನು ಅಕ್ರಿಲಿಕ್ ಫ್ಯಾಬ್ರಿಕೇಷನ್, ಪ್ರೋಟೋಟೈಪಿಂಗ್ ಹಾಗೂ 3ಡಿ ಲೆಟರ್ಸ್ ನಿರ್ಮಾಣಕ್ಕೆ ಬಳಸಲಾಗುತ್ತದೆ. ಸಿಎನ್ಸಿ ರೌಟರ್ ಯಂತ್ರವು ಮರದ ಎಂಗ್ರೇವಿಂಗ್, ಕಟಿಂಗ್, ಎಡ್ಜ್ ಫಿನಿಷ್ ಹಾಗೂ 3ಡಿ ಕಾರ್ವಿಂಗ್ಗೆ ಬಳಸಲಾಗುತ್ತದೆ. ಜೊತೆಗೆ 3ಡಿ ಪ್ರಿಂಟಿಂಗ್ ತಂತ್ರಜ್ಞಾನ, ಸಬ್ಲಿಮೇಷನ್ ಘಟಕ ಹಾಗೂ ಸರ್ಫೇಸ್ ಮೌಂಟ್ ಟೆಕ್ನಾಲಜಿ ಸೆಟಪ್ ಮೂಲಕ ಎಲ್ಇಡಿ ಲೈಟ್ಸ್, ಇಂಟಿಗ್ರೇಟೆಡ್ ಸರ್ಕಿಟ್ಸ್, ಕನೆಕ್ಟರ್ಸ್, ಸಿಸಿ ಕ್ಯಾಮೆರಾಗಳ ತಯಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅನುಭವಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಐಡಿಯಾ ಲ್ಯಾಬ್ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ, ವಿನ್ಯಾಸ ಚಿಂತನೆ ಹಾಗೂ ಉದ್ಯಮಶೀಲತೆಯನ್ನು ಬೆಳೆಸುವ ಪ್ರಮುಖ ವೇದಿಕೆಯಾಗಲಿದೆ. ಇಲ್ಲಿ ಹುಟ್ಟುವ ಆವಿಷ್ಕಾರಗಳು ಮುಂದಿನ ದಿನಗಳಲ್ಲಿ ಉದ್ಯಮಗಳಾಗಿ ರೂಪುಗೊಂಡು, ಸಮಾಜಕ್ಕೆ ಉಪಯುಕ್ತ ಪರಿಹಾರಗಳನ್ನು ನೀಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದು ಟ್ರಸ್ಟಿ ವಿವೇಕ್ ಆಳ್ವ ನುಡಿದರು. ಈ ಐಡಿಯಾ ಲ್ಯಾಬ್ಗೆ ಭಾಗಶಃ ಅನುದಾನವನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ಬಿಟಾ ಸಿಎಇ ಸಿಸ್ಟಮ್ಸ್ ನ ಸಿಎಸ್ಆರ್ ನಿಧಿ ಹಾಗೂ ಉಳಿದ ಹಣವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಒದಗಿಸಿದೆ. ಉದ್ಘಾಟನಾ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಇದ್ದರು.





















































































































